ಮುಂಬೈ, ಸೆ. 30: ತಂದೆಯ ಮೇಲಿನ ಅತಿಯಾದ ಪ್ರೀತಿ ಮತ್ತು ಭಾವನಾತ್ಮಕ ಬೆಸುಗೆ ಹೊಂದಿದ್ದ ಮಗಳೊಬ್ಬಳ ಕಥೆ ಇದು. ಮೃತಪಟ್ಟ ತಂದೆಯ ಶವದೊಂದಿಗೆ ನಾಲ್ಕು ವರ್ಷಗಳ ಕಾಲ ಮಗಳು ವಾಸವಿದ್ದ ಅಚ್ಚರಿಯ ಘಟನೆ ಮಹಾರಾಷ್ಟ್ರದ ಮುಂಬೈಯಲ್ಲಿ ಬೆಳಕಿಗೆ ಬಂದಿದೆ. ಮುಂಬೈಯ ಬಾಂದ್ರಾ ಪ್ರದೇಶದ ಅಪಾರ್ಟ್‌ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ.
ಮೃತ ವ್ಯಕ್ತಿಯನ್ನು ಯಶವಂತ್ ಶಿಂದೆ (78) ಎಂದು ಗುರುತಿಸಲಾಗಿದೆ. ಇವರು ಸುಮಾರು 4 ವರ್ಷಗಳ ಹಿಂದೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಆದರೆ, ಅವರ 40 ವರ್ಷದ ಮಗಳು ಅನಿತಾ ಶಿಂದೆಗೆ ತಂದೆ ಎಂದರೆ ಅಪಾರ ಪ್ರೀತಿ ಮತ್ತು ಕಾಳಜಿ. ತಂದೆಯ ಸಾವಿನ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ಆಕೆಯ ಮನಸ್ಸು ಸಿದ್ಧವಿರಲಿಲ್ಲ. ತಂದೆ ತನ್ನ ಜತೆಯಲ್ಲಿಯೇ ಇರಬೇಕು ಎಂಬ ಹುಚ್ಚುತನದಿಂದ ಆಕೆ ಸಾವಿನ ವಿಷಯವನ್ನು ಯಾರಿಗೂ ತಿಳಿಸದೆ, ತಂದೆಯ ಮೃತದೇಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಳು.
ಅನಿತಾ ಮುಂಬೈಯಲ್ಲಿ ಸಣ್ಣ ಡೇ-ಕೇರ್ ಒಂದನ್ನು ನಡೆಸುತ್ತಿದ್ದು, ತಂದೆಯ ಮೃತದೇಹ ಕೊಳೆಯದಂತೆ ತಡೆಯಲು ದಿನನಿತ್ಯ ವಿವಿಧ ರೀತಿಯ ಪೌಡರ್‌ಗಳು, ರಾಸಾಯನಿಕಗಳು ಮತ್ತು ಸುಗಂಧಿತ ಎಣ್ಣೆಗಳನ್ನು ಹಚ್ಚುತ್ತಿದ್ದಳು. ಇದರಿಂದಾಗಿ ಮೃತದೇಹವು ಸಂಪೂರ್ಣವಾಗಿ 'ಮಮ್ಮಿ' ಮಾದರಿಯಲ್ಲಿ ಕಪ್ಪಗಾಗಿ ಒಣಗಿಹೋಗಿತ್ತು.
ದುಬಾರಿ ಮೊಬೈಲ್ ಫೋನ್ ಕೊಳ್ಳಲು ತನ್ನ ಒಂದು ತಿಂಗಳ ಮಗುವನ್ನು ಮಾರಾಟ ಮಾಡಿದ ʼಮಹಾತಾಯಿʼ
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ನಾಲ್ಕು ವರ್ಷಗಳಿಂದ ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದ ಅನಿತಾ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಆಕೆಯ ಮನೆಯಿಂದ ತೀವ್ರ ದುರ್ವಾಸನೆ ಬರಲು ಪ್ರಾರಂಭಿಸಿತು. ಮೊದಮೊದಲು ಯಾವುದೋ ಪ್ರಾಣಿ ಸತ್ತಿರಬಹುದು ಎಂದು ಭಾವಿಸಿದ್ದ ಸ್ಥಳೀಯರು, ಸೋಮವಾರ (ಸೆಪ್ಟೆಂಬರ್ 28) ವಾಸನೆ ಅತಿಯಾಗಿ ಬರಲು ಪ್ರಾರಂಬವಾಯಿತು. ಜತೆಗೆ ಮನೆ ಬಾಡಿಗೆ ನೀಡದಿರುವುದು ಹಾಗೂ ಆಕೆಯ ಅನುಮಾನಾಸ್ಪದ ನಡವಳಿಕೆಯಿಂದ ಆತಂಕಗೊಂಡ ಮನೆ ಮಾಲಕರು ತಕ್ಷಣ ಬಾಂದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಾಗಿಲು ಮುರಿದು ಒಳಪ್ರವೇಶಿಸಿದಾಗ ಕೊಠಡಿಯ ಮೂಲೆಯಲ್ಲಿ ಒಣಗಿದ ಸ್ಥಿತಿಯಲ್ಲಿದ್ದ ಯಶವಂತ್ ಅವರ ಮೃತದೇಹ ಪತ್ತೆಯಾಗಿದೆ.
ಪೊಲೀಸರು ತಕ್ಷಣವೇ ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಜಿ.ಜಿ. ಆಸ್ಪತ್ರೆಗೆ ರವಾನಿಸಿದ್ದಾರೆ. ತಂದೆಯದ್ದು ನೈಸರ್ಗಿಕ ಸಾವೇ ಅಥವಾ ಕೊಲೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.
ವಿಚಾರಣೆ ವೇಳೆ ಅನಿತಾ, ʼʼನನ್ನ ತಂದೆ ತೀರಿಕೊಂಡಿದ್ದಾರೆ ಎಂಬುದನ್ನು ನಂಬಲು ನನಗೆ ಸಾಧ್ಯವಾಗಲಿಲ್ಲ. ಅವರು ನನ್ನನ್ನು ಬಿಟ್ಟು ಎಲ್ಲೂ ಹೋಗಬಾರದು, ಯಾವಾಗಲೂ ನನ್ನ ಕಣ್ಣೆದುರೇ ಇರಬೇಕೆಂದು ನಾನು ಹೀಗೆ ಮಾಡಿದೆʼʼ ಎಂದು ಕಣ್ಣೀರಿಡುತ್ತಾ ಹೇಳಿದ್ದಾಳೆ. ಆಕೆ ತೀವ್ರ ಮಾನಸಿಕ ಖಿನ್ನತೆ ಮತ್ತು ಭ್ರಮೆಯಿಂದ ಬಳಲುತ್ತಿರಬಹುದು ಎಂದು ಶಂಕಿಸಿರುವ ಪೊಲೀಸರು, ಆಕೆಯನ್ನು ವೈದ್ಯಕೀಯ ಪರೀಕ್ಷೆ ಮತ್ತು ಮನೋವೈದ್ಯಕೀಯ ಕೌನ್ಸೆಲಿಂಗ್‌ಗೆ ಒಳಪಡಿಸಿದ್ದಾರೆ. ಪ್ರಸ್ತುತ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.