ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದುಬಾರಿ ಮೊಬೈಲ್‌ ಫೋನ್‌ ಕೊಳ್ಳಲು ತನ್ನ ಒಂದು ತಿಂಗಳ ಮಗುವನ್ನು ಮಾರಾಟ ಮಾಡಿದ ʼಮಹಾತಾಯಿʼ

Child Trafficking: ಐಷಾರಾಮಿ ಜೀವನಕ್ಕಾಗಿ, ದುಬಾರಿ ಮೊಬೈಲ್‌ ಫೋನ್‌ ಕೊಳ್ಳಲು ತನ್ನ 1 ತಿಂಗಳ ಗಂಡು ಮಗುವನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ದಂಪತಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಮಗುವನ್ನು ಸುಮಾರು 550 ಕಿಲೋ ಮೀಟರ್‌ ದೂರ ಹೈದರಾಬಾದ್‌ನಲ್ಲಿ ಪತ್ತೆ ಹಚ್ಚಿ ರಕ್ಷಿಸಲಾಗಿದೆ.

1 ಲಕ್ಷ ರೂ.ಗೆ ಒಂದು ತಿಂಗಳ ಮಗುವನ್ನು ಮಾರಾಟ ಮಾಡಿದ ʼಮಹಾತಾಯಿʼ

ಮಗು ಮಾರಾಟ ಮಾಡಿದ ತಾಯಿ ಮತ್ತು ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Sep 29, 2026 10:31 PM

ಮುಂಬೈ, ಸೆ. 29: ತಾಯಿಯಾದವಳು ತನ್ನ ಆಸೆ-ಆಕಾಂಕ್ಷೆಗಳನ್ನೆಲ್ಲ ತ್ಯಾಗ ಮಾಡಿ ಮಕ್ಕಳನ್ನು ಸಾಕುತ್ತಾಳೆ. ಅವರಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾಗಿರುತ್ತಾಳೆ ಎನ್ನುವ ಮಾತಿದೆ. ಆದರೆ ಅದು ತಪ್ಪು, ತನ್ನ ಸ್ವಾರ್ಥಕ್ಕಾಗಿ ಮಗುವಿನ ಮಾರಾಟಕ್ಕೂ ತಾಯಿ ಹಿಂದೆ-ಮುಂದೆ ನೋಡುವುದಿಲ್ಲ ಎನ್ನುವುದನ್ನು ಸಾರುವ ಘಟನೆಯೊಂದು ನಡೆದಿದೆ. ಐಷಾರಾಮಿ ಜೀವನಕ್ಕಾಗಿ, ದುಬಾರಿ ಮೊಬೈಲ್‌ ಫೋನ್‌ ಕೊಳ್ಳಲು ತನ್ನ 1 ತಿಂಗಳ ಗಂಡು ಮಗುವನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಪಾಪಿ ತಾಯಿಯೊಬ್ಬಳ ಕಥೆ ಇದು. ಸದ್ಯ ಈಕೆಯನ್ನು ಪೊಲೀಸರು ಬಂಧಿಸಿ, ಮಗುವನ್ನು ಕಾಪಾಡಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ದಂಪತಿ ತಮ್ಮ 1 ತಿಂಗಳ ಮಗುವನ್ನು ಮಾರಾಟ ಮಾಡಿ ಸದ್ಯ ಸಿಕ್ಕಿ ಬಿದ್ದಿದ್ದಾರೆ. ಮಗುವನ್ನು ಸುಮಾರು 550 ಕಿಲೋ ಮೀಟರ್‌ ದೂರ ಹೈದರಾಬಾದ್‌ನಲ್ಲಿ ಪತ್ತೆ ಹಚ್ಚಿ ರಕ್ಷಿಸಲಾಗಿದೆ.

ಮಗು ಮಾರಾಟಕ್ಕೆ ಸಹಕರಿಸಿದ ಇತರರನ್ನೂ ಪೊಲೀಸರು ಬಂಧಿಸಿದ್ದಾರೆ. ಐಷಾರಾಮಿ ಜೀವನ ಸಾಗಿಸಲು, ಮೊಬೈಲ್‌ ಫೋನ್‌, ಚಿನ್ನ ಕೊಳ್ಳಲು ದಂಪತಿ ಶಿಶುವನ್ನು ಮಾರಾಟ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಯಸ್ಸಿನ ಬಾಲಕಿ; ವಿಟ್ಲ ಠಾಣೆಯಲ್ಲಿ ಕೇರಳದ ಬಾಲಕನ ವಿರುದ್ಧ ಪೋಕ್ಸೋ ಕೇಸ್‌!

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಶಿಶು ಮಾರಾಟ ಮಾಡಿದ ದಂಪತಿ ಮುಕುಂದ್ವಾಡಿ ಮೂಲದವರು. ಸೆಪ್ಟೆಂಬರ್‌ 20ರಂದು ಮಗುವಿನ ತಾಯಿ ಪೊಲೀಸ್‌ ಠಾಣೆಗೆ ಬಂದು, ತನ್ನ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಳು. ಈ ಪ್ರಕರಣದ ತನಿಖೆ ನಡೆಸಿದ ವೇಳೆ ಮಗುವನ್ನು ಮಾರಾಟ ಮಾಡಿದ ವಿಚಾರ ಬೆಳಕಿಗೆ ಬಂತು. ಅವರ ಮಗು ಹಲವು ಕೈಗಳನ್ನು ದಾಟಿ ಹೈದರಾಬಾದ್‌ಗೆ ತಲುಪಿರುವ ಶಾಕಿಂಗ್‌ ಸತ್ಯ ಪೊಲೀಸರಿಗೆ ಗೊತ್ತಾಯಿತು.

ಮೊದಲೇ ಹೇಳಿದಂತೆ ದಂಪತಿ ತಮ್ಮ ಐಷಾರಾಮಿ ಜೀವನಕ್ಕೆ ಒಂದು ತಿಂಗಳ ಮಗುವನ್ನು ಆರಂಭದಲ್ಲಿ ಸೀಮಾ ರೇಷ್ವಾಲ್‌ ಎನ್ನುವ ಮಧ್ಯವರ್ತಿಗೆ 1.2 ಲಕ್ಷ ರೂಪಾಯಿಗೆ ಮಾರಾಟ ಮಾಡಿದರು. ಬಳಿಕ ಸೀಮಾ ಪಡೇಗಾಂವ್‌ನ ಸಂಗೀತಾ ಅವ್ಹಾದ್‌ಗೆ ಇದೇ ಮಗುವನ್ನು 2.7 ಲಕ್ಷ ರೂಪಾಯಿಗೆ ಹಸ್ತಾಂತರಿಸಿದಳು. ಸಂಗೀತಾ ಮಗುವನ್ನು 3.5 ಲಕ್ಷ ರೂಪಾಯಿಗೆ ಸುರೇಶ್‌ ಗುಂಟುಕ ಎನ್ನುವ ನಕಲಿ ವೈದ್ಯನಿಗೆ ಮಾರಾಟ ಮಾಡಿದಳು. ಸುರೇಶ್‌ ಕೊನೆಗೆ ಅದೇ ಮೊತ್ತಕ್ಕೆ ಹೈದರಾಬಾದ್‌ನಲ್ಲಿರುವ ತನ್ನ ಸಂಬಂಧಿಕಳಾದ ಉಮಾಗೆ ಮಗುವನ್ನು ಹಸ್ತಾಂತರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೀಗೆ 1 ತಿಂಗಳ ಮಗು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ದಾಟುತ್ತ ಮಹಾರಾಷ್ಟ್ರದಿಂದ ದೂರದ ತೆಲಂಗಾಣಕ್ಕೆ ತಲುಪಿತು. ಸದ್ಯ ಪೊಲೀಸರು ಮಗುವನ್ನು ರಕ್ಷಿಸಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿದೆ.

ಅವಿವಾಹಿತೆಗೆ ಜನಿಸಿದ ಮಗು 60 ಸಾವಿರಕ್ಕೆ ಮಾರಾಟ; ಅಂಗನವಾಡಿ ಕಾರ್ಯಕರ್ತೆ ಸೇರಿ ಐವರ ಬಂಧನ

ಮುಕುಂದ್ವಾಡಿ ಠಾಣೆಯ ಇನ್‌ಪೆಕ್ಟರ್‌ ವಿವೇಕ್‌ ಸೋನವಾನೆ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಈ ಸಂಬಂಧ 7 ಮಂದಿಯನ್ನು ಬಂಧಿಸಲಾಗಿದೆ. ಮಗು ಮಾರಾಟ ಮಾಡಿ ಬಂದ ಹಣದಿಂದ ಖರೀದಿಸಿದ ಮೊಬೈಲ್‌ ಪೋನ್‌ ಮತ್ತು ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಹಿಂದೆಯೂ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರೆ ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.