ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

140 ಕಿಲೋ ಮೀಟರ್‌ ಅಂತರದ 2 ವಿಶ್ವ ವಿದ್ಯಾನಿಲಯಗಳು, ಗರ್ಲ್ಸ್‌ ಹಾಸ್ಟೆಲ್‌, ದೌರ್ಜನ್ಯ ವದಂತಿ, ಪ್ರತಿಭಟನೆ; ಪಂಜಾಬ್‌ನಲ್ಲಿ ಹಿಂಸೆ ಭುಗಿಲೆದ್ದಿದ್ದು ಹೇಗೆ?

LPU protest: ಪಂಜಾಬ್‌ನ 2 ಖಾಸಗಿ ವಿಶ್ವ ವಿದ್ಯಾನಿಲಯಗಳಲ್ಲಿ ಹರಡಿದ ವದಂತಿ ಪ್ರತಿಭಟನೆಗೆ ಕಾರಣವಾಗಿದೆ. ಚಿತ್ಕಾರ ವಿವಿ ಮತ್ತು ಲವ್ಲಿ ಪ್ರೊಫೆಷನಲ್‌ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರು ಹೋರಾಟ ನಡೆಸುತ್ತಿದ್ದಾರೆ. ಅಚ್ಚರಿ ಎಂದರೆ ಒಂದೇ ರೀತಿಯ ಘಟನೆಯಾದರೂ ಎರಡು ವಿವಿಗಳಿಗೆ ಪರಸ್ಪರ ಸಂಬಂಧ ಇಲ್ಲ.

ವದಂತಿ ಕಾರಣದಿಂದ ಪಂಜಾಬ್‌ನ 2 ವಿವಿಗಳಲ್ಲಿ ಭುಗಿಲೆದ್ದ ಪ್ರತಿಭಟನೆ

ಪಂಜಾಬ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ -

Ramesh Ballamoole
Ramesh Ballamoole Sep 28, 2026 6:26 PM

ಚಂಡೀಗಢ, ಸೆ. 28: ಅವು 140 ಕಿಲೋ ಮೀಟರ್‌ ಅಂತರದಲ್ಲಿರುವ ದೇಶದ 2 ಪ್ರತಿಷ್ಠಿತ ಖಾಸಗಿ ವಿಶ್ವ ವಿದ್ಯಾನಿಲಯಗಳು. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಇಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ವಿದ್ಯಾರ್ಥಿಗಳ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಅದಕ್ಕೆ ಕಾರಣವಾಗಿದ್ದು ದಟ್ಟವಾಗಿ ಹರಡಿದ ವದಂತಿ. ಅಚ್ಚರಿ ಎಂದರೆ ಎರಡೂ ವಿಶ್ವ ವಿದ್ಯಾನಿಲಯಗಳಲ್ಲಿ ನಡೆಯುವ ಹೋರಾಟಕ್ಕೆ ಪರಸ್ಪರ ಸಂಬಂಧವಿಲ್ಲ. ಎರಡೂ ಕಡೆ ಪ್ರತ್ಯೇಕ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿದೆ. ಹೌದು, ನಾವೀಗ ಹೇಳ ಹೊರಟಿರುವುದು ಪಂಜಾಬ್‌ನ ಚಿತ್ಕಾರ ವಿವಿ (Chitkara University) ಮತ್ತು ಲವ್ಲಿ ಪ್ರೊಫೆಷನಲ್‌ ಯೂನಿವರ್ಸಿಟಿ (LPU)ಯಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಾರ್ಥಿ ಹೋರಾಟದ ಬಗ್ಗೆ.

ಚಿತ್ಕಾರ ವಿವಿಯಲ್ಲಿ ಸೆಪ್ಟೆಂಬರ್‌ 25ರಂದು ಪ್ರತಿಭಟನೆ ನಡೆದರೆ, ಎಲ್‌ಪಿಯುವಿನಲ್ಲಿ ಸೆಪ್ಟೆಂಬರ್‌ 26 ಮತ್ತು 27ರಂದು ವಿದ್ಯಾರ್ಥಿಗಳು ನಡೆಸಿದ ಹೋರಾಟ ಹಿಂಸಾಚಾರಕ್ಕೆ ತಿರುಗಿತು. ಎರಡೂ ಕಡೆ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾದ ವದಂತಿ ಹರಡಿದ್ದೇ ಈ ಘಟನೆಗೆ ಕಾರಣ.

ಪಂಜಾಬ್‌ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದಲ್ಲಿ ಭುಗಿಲೆದ್ದ ಹಿಂಸಾಚಾರ: ಮಧ್ಯಂತರ ಪರೀಕ್ಷೆ ಮುಂದೂಡಿಕೆ

ಏನಿದು ವದಂತಿ?

ಚಿತ್ಕಾರ ವಿವಿ ಹಾಸ್ಟೆಲ್‌ನಲ್ಲಿ ದೆವ್ವ ಕಾಟವಿದೆ. ಇದರಿಂದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ಅಥವಾ ಮೃತಪಟ್ಟಿದ್ದಾರೆ ಎನ್ನುವ ಸುಳ್ಳು ಸುದ್ದಿ ಹರಡಿತ್ತು. ಇತ್ತ ಎಲ್‌ಪಿಯುವಿನಲ್ಲಿ ಹಾಸ್ಟೆಲ್‌ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎನ್ನುವ ವದಂತಿ ಹಬ್ಬಿತ್ತು. ಎರಡೂ ವಿವಿಗಳಲ್ಲಿನ ವಿದ್ಯಾರ್ಥಿನಿಗಳ ಸುರಕ್ಷತೆ ಬಗ್ಗೆ ಅನುಮಾನ ಮೂಡಿದ ಬಳಿಕ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಅಚ್ಚರಿ ಎಂದರೆ ಎರಡೂ ಕಡೆ ನಡೆದಿದೆ ಎನ್ನಲಾದ ದೌರ್ಜನ್ಯಕ್ಕೆ ಸಂಬಂಧಿಸಿ ಯಾವುದೇ ಪುರಾವೆ ಸಿಕ್ಕಿಲ್ಲ.

ʼʼ2 ಖಾಸಗಿ ವಿವಿಗಳಲ್ಲಿ ಒಂದೇ ರೀತಿಯ ಪ್ರತಿಭಟನೆ ನಡೆದರೂ ಎರಡಕ್ಕೂ ಯಾವುದೇ ಸಂಬಂಧವಿಲ್ಲʼʼ ಎಂದು ಸ್ಪೆಷಲ್‌ ಡಿಜಿಪಿ ಪ್ರವೀಣ್‌ ಸಿನ್ಹಾ ತಿಳಿಸಿದ್ದಾರೆ. ಚಿತ್ಕಾರ ವಿವಿಯ ಹಾಸ್ಟೆಲ್‌ನಲ್ಲಿ ದೆವ್ವದ ಕಾಟವಿದೆ ಎನ್ನುವ ವದಂತಿ ಸೆಪ್ಟೆಂಬರ್‌ 23ರಂದು ಆರಂಭವಾಯ್ತು. ಇದೇ ಕಾರಣ ಮುಂದಿಟ್ಟುಕೊಂಡು ಸೆಪ್ಟೆಂಬರ್‌ 25ರಂದು ನಡೆದ ಪ್ರತಿಭಟನೆ ಕ್ರಮೇಣ ಹಿಂಸೆಗೆ ತಿರುಗಿತು. ಇತ್ತ ಎಲ್‌ಪಿಯು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸೆಪ್ಟೆಂಬರ್‌ 26ರಂದು ನಡೆಸಿದ ಹೋರಾಟ ಹಿಂಸೆಗೆ ತಿರುಗಿತು. ಸೆಪ್ಟೆಂಬರ್‌ 27ರಂದು ರಾಷ್ಟ್ರೀಯ ಹೆದ್ದಾರಿ ತಡೆದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪಂಜಾಬ್‌ನ ಎಲ್‌ಪಿಯುವಿನಲ್ಲಿ ನಡೆದ ಪ್ರತಿಭಟನೆ:



ಸೋಷಿಯಲ್‌ ಮೀಡಿಯಾದಲ್ಲಿ ನಕಲಿ ಪೋಸ್ಟ್‌ಗಳದ್ದೇ ಹಾವಳಿ

ವದಂತಿ ದಟ್ಟವಾಗಿ ಹರಡಿದ ಹಿನ್ನೆಲೆಯಲ್ಲಿ, ಪ್ರತಿಭಟನೆ ಭುಗಿಲೆದ್ದ ಕಾರಣ ಸೋಷಿಯಲ್‌ ಮೀಡಿಯಾದಲ್ಲಿ ಎರಡೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷಿತ ವಾತಾವರಣ ಇಲ್ಲ ಎನ್ನುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪೊಲೀಸರು ಮತ್ತು ವಿವಿ ಅಧಿಕೃತರು ವದಂತಿ ನಂಬದಂತೆ ಮನವಿ ಮಾಡುತ್ತಲೇ ಬಂದಿದ್ದಾರೆ. ಸದ್ಯ ಎರಡೂ ಕಡೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೆಪ್ಟೆಂಬರ್‌ 28ರಂದು ಎಲ್‌ಪಿಯು ಕ್ಯಾಂಪಸ್‌ನಲ್ಲಿ ಸುರಕ್ಷತೆಗಾಗಿ ಸುಮಾರು 2,000 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಎಲ್ಲ ತರಗತಿಗಳನ್ನು 10 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಪರೀಕ್ಷೆಯನ್ನೂ ಮುಂದೂಡಲಾಗಿದೆ. ಇತ್ತ ಚಿತ್ಕಾರ ವಿವಿಯ ಶೈಕ್ಷಣಿಕ ಚಟುವಟಿಕೆಯನ್ನು ಅಕ್ಟೋಬರ್‌ 1ರ ತನಕ ತಡೆಹಿಡಿಯಲಾಗಿದೆ.

ಚಿತ್ಕಾರ ವಿವಿ ಹಾಸ್ಟೆಲ್‌ನಲ್ಲಿ ದೆವ್ವದ ಕಥೆ

ಚಿತ್ಕಾರ ವಿವಿ ಹಾಸ್ಟೆಲ್‌ನ ಕೆಲ ವಿದ್ಯಾರ್ಥಿನಿಯರು ತಮಗೆ ದೆವ್ವ ಕೂಗಿದ ಸದ್ದು ಕೇಳಿಸಿದೆ ಎಂದು ಸೆಪ್ಟೆಂಬರ್‌ 23ರಂದು ಆರೋಪಿಸುವುದರೊಂದಿಗೆ ಅಸಹಜ ಚಟುವಟಿಕೆ ಆರಂಭವಾಯ್ತು. 3 ವರ್ಷಗಳ ಹಿಂದೆ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯರ ಆತ್ಮ ಇಲ್ಲೇ ಸುತ್ತಾಡುತ್ತಿದೆ ಎಂದು ಕೆಲವರು ಅಭಿಪ್ರಾಯಪಡುವುದರೊಂದಿಗೆ ಭಯ ಇನ್ನಷ್ಟು ಹೆಚ್ಚಾಯ್ತು. ವಾರ್ಡನ್‌ ಹಾಸ್ಟೆಲ್‌ ರೂಂ ಪರಿಶೀಲಿಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಸೆಪ್ಟೆಂಬರ್‌ 24ರಂದು ಹಾಸ್ಟೆಲ್‌ಗೆ ಆಂಬುಲೆನ್ಸ್‌ ಆಗಮಿಸಿದ್ದು ಹಾಗೂ ಅರ್ಚಕರೊಬ್ಬರು ತಮ್ಮ ಮಗಳನ್ನು ಭೇಟಿಯಾಗಲು ಹಾಸ್ಟೆಲ್‌ಗೆ ಬಂದಿದ್ದು ವದಂತಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಿತು.

ಹಾಸ್ಟೆಲ್‌ನಲ್ಲಿ ಯಾವುದೇ ಸಾವು ಅಥವಾ ಆತ್ಮಹತ್ಯೆ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರೂ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಸೆಪ್ಟೆಂಬರ್‌ 25ರಂದು ನೂರಾರು ವಿದ್ಯಾರ್ಥಿಗಳು ಒಟ್ಟು ಸೇರಿ ಕೆಲವೊಂದು ಪ್ರಶ್ನೆಗೆ ಉತ್ತರಿಸುವಂತೆ ಬೇಡಿಕೆ ಇಟ್ಟರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸ್‌ ವಾಹನಗಳು ಜಖಂಗೊಂಡವು. ʼʼಯಾವುದೇ ವಿದ್ಯಾರ್ಥಿನಿ ನಾಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರೂ ಪ್ರತಿಭಟನಾಕಾರರು ನಂಬುವ ಸ್ಥಿತಿಯಲ್ಲಿರಲಿಲ್ಲ. ಹಾಗಂತ ನಾಪತ್ತೆಯಾದವರ ವಿವರ ಕೊಡಿ ಎಂದರೆ ಕೇಳಿದರೆ ಅವರ ಬಳಿ ಅದೂ ಇರಲಿಲ್ಲʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಇಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ; ವಿಶ್ವವಿದ್ಯಾಲಯ ಧ್ವಂಸಗೊಳಿಸಿದ ಉದ್ರಿಕ್ತ ವಿದ್ಯಾರ್ಥಿಗಳು

ಎಲ್‌ಪಿಯುನಲ್ಲಿ ಏನಾಯ್ತು?

ಎಲ್‌ಪಿಯು ಹಾಸ್ಟೆಲ್‌ನ ವಿದ್ಯಾರ್ಥಿನಿಗೆ ಗುತ್ತಿಗೆ ನೌಕರನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಚಂಡೀಗಢ ಮೂಲದ ಪತ್ರಿಕೆ ʼದಿ ಟ್ರಿಬ್ಯೂನ್ʼ ಇತ್ತೀಚೆಗೆ ವರದಿ ಪ್ರಕಟಿಸಿತು. ಆರೋಪಿ ಯಾರೆಂದು ಸ್ಪಷ್ಟವಾಗಿ ಹೇಳಿರಲಿಲ್ಲ. ಸಂತ್ರಸ್ತ ವಿದ್ಯಾರ್ಥಿನಿ ಮನೆಗೆ ಮರಳಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದೂ ಪ್ರತಿಭಟನಾಕಾರ ಪೈಕಿ ಕೆಲವರು ಹೇಳಿದ್ದಾರೆ ಎಂದು ಪತ್ರಿಕೆ ಹೇಳಿತು. ಆದರೆ ಈ ಹೇಳಿಕೆ ದೃಢಪಟ್ಟಿಲ್ಲ.

ʼದಿ ಟ್ರಿಬ್ಯೂನ್ʼ ವರದಿಯ ಪ್ರಕಾರ, ಹಾಸ್ಟೆಲ್ ವಿದ್ಯಾರ್ಥಿಗಳ ದೂರಿನ ಮೇರೆಗೆ ಕಪುರ್ತಲಾ ಪೊಲೀಸರು ಅಪರಿಚಿತ ವ್ಯಕ್ತಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದಕ್ಕಾಗಿ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿದೆ. ವಿದ್ಯಾರ್ಥಿ ಪ್ರತಿನಿಧಿಗಳನ್ನು ಒಳಗೊಂಡಂತೆ ತನಿಖಾಧಿಕಾರಿಗಳು ವಿಧಿವಿಜ್ಞಾನ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋನ್ ಡೇಟಾವನ್ನು ಪರಿಶೀಲಿಸಲಿದ್ದಾರೆ ಎಂದು ಡಿಐಜಿ ನವೀನ್ ಸಿಂಗ್ಲಾ 'ದಿ ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ. ವಿದ್ಯಾರ್ಥಿಗಳ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದರೂ, ಆರೋಪಿಸಲಾದ ಹಲ್ಲೆ ನಡೆದಿದೆಯೇ ಎಂಬುದು ಇನ್ನೂ ಖಚಿತಪಟ್ಟಿಲ್ಲ. ಸದ್ಯ ಇಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಎರಡೂ ವಿಶ್ವ ವಿದ್ಯಾನಿಲಯಗಳಲ್ಲಿ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಎರಡೂ ವಿವಿ ವಿದ್ಯಾರ್ಥಿಗಳು ಉತ್ತರವಿಲ್ಲದ ಪ್ರಶ್ನೆಗಳಿಂದಾಗಿ ಆತಂಕಗೊಂಡಿದ್ದರೆ, ಹಿಂಸಾಚಾರವು ಅವರ ಭಯವನ್ನು ಇನ್ನಷ್ಟು ಹೆಚ್ಚಿಸಿದೆ. ಮುಂದೇನಾಗಲಿದೆ ಎನ್ನುವ ಭಯವೂ ಮೂಡಿಸಿದೆ. ಒಟ್ಟಿನಲ್ಲಿ ವದಂತಿ ವಿದ್ಯಾರ್ಥಿಗಳ ಭವಿಷ್ಯವನ್ನೇ ಡೋಲಾಯಮಾನಗೊಳಿಸಿದ್ದಂತೂ ಸತ್ಯ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.