ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Amendment Bill: ವಕ್ಫ್‌ ತಿದ್ದುಪಡಿ ಮಸೂದೆ; ಏ. 2ರಂದು ಲೋಕಸಭೆಯಲ್ಲಿ ಮಂಡನೆ

ವಕ್ಫ್ ತಿದ್ದುಪಡಿ ಮಸೂದೆಯನ್ನು ಏ. 2ರಂದು ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2024ರ ಆಗಸ್ಟ್‌ನಲ್ಲಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾದ ತಿದ್ದುಪಡಿ ಮಾಡಿದ ವಕ್ಫ್ ಮಸೂದೆಯು ಮಂಡನೆಯಾಗಲಿದೆ. ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸುವ ಮೊದಲು ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದೆ.

ಏ. 2ರಂದು ವಕ್ಫ್‌ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

Profile Ramesh B Mar 31, 2025 10:57 PM

ಹೊಸದಿಲ್ಲಿ: ದೇಶಾದ್ಯಂತ ಭಾರಿ ಚರ್ಚೆ ಹುಟ್ಟು ಹಾಕಿದ, ವಾದ-ವಿವಾದಕ್ಕೆ ಕಾರಣವಾದ ವಕ್ಫ್ ತಿದ್ದುಪಡಿ ಮಸೂದೆಯನ್ನು (Waqf Amendment Bill) ಏ. 2ರಂದು ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯೊಂದು ತಿಳಿಸಿದೆ. 2024ರ ಆಗಸ್ಟ್‌ನಲ್ಲಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾದ ತಿದ್ದುಪಡಿ ಮಾಡಿದ ವಕ್ಫ್ ಮಸೂದೆಯು ಮಂಡನೆಯಾಗಲಿದೆ. ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸುವ ಮೊದಲು ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದೆ ಎಂದು ಮೂಲಗಳು ಸಿಎನ್ಎನ್-ನ್ಯೂಸ್ 18ಗೆ ತಿಳಿಸಿವೆ.

ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ಬಿಜೆಪಿ ಸಚಿವರು ವಿಪಕ್ಷ ʼಇಂಡಿಯಾʼ ಬ್ಲಾಕ್ ನಾಯಕರೊಂದಿಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಸರ್ಕಾರದ ಹಿರಿಯ ಸಚಿವರು ಎಲ್ಲ ಮೈತ್ರಿ ನಾಯಕರೊಂದಿಗೆ ಸಂಪರ್ಕಿಸಿ, ಮಸೂದೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಮಸೂದೆ ಅಂಗೀಕಾರದ ಸಮಯದಲ್ಲಿ ಸಂಸದರು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವಿಸುವಂತೆ ಮನವಿ ಮಾಡಿದ್ದಾರೆ.



ಈ ಸುದ್ದಿಯನ್ನೂ ಓದಿ: Waqf Amendment Bill: ವಕ್ಫ್‌ ತಿದ್ದುಪಡಿ ಮಸೂದೆ; ಇದು ಹೊಸ ಆರಂಭ ಎಂದ ಮುಸ್ಲಿಂ ಮಂಚ್‌

ಏ. 2ರಂದು ಲೋಕಸಭೆಯಲ್ಲಿ ಅನುಮೋದನೆ ದೊರೆತ ನಂತರ ಮಸೂದೆಯನ್ನು ಏ. 3ರಂದು ರಾಜ್ಯಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಬಜೆಟ್ ಅಧಿವೇಶನವು ಏ. 4ರಂದು ಕೊನೆಗೊಳ್ಳಲಿದ್ದು, ಮಸೂದೆಯನ್ನು ಕಾನೂನಾಗಿ ರೂಪಿಸಲು ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಬೇಕಾಗಿದೆ.

ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಸಮಾಜದಲ್ಲಿ ಅಶಾಂತಿಯನ್ನು ಪ್ರಚೋದಿಸಲು ಮತ್ತು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ ರಿಜಿಜು, ತಿದ್ದುಪಡಿ ಮಾಡಿದ ವಕ್ಫ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

"ಕೆಲವು ರಾಜಕೀಯ ಪಕ್ಷಗಳ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಮತ್ತು ಮಸೂದೆಯನ್ನು ಸರಿಯಾಗಿ ಓದಿ ಎಂದು ನಾನು ಅವರಿಗೆ ಸ್ಪಷ್ಟವಾಗಿ ಹೇಳತ್ತೇನೆ. ಭಾರತವು ಪ್ರಜಾಪ್ರಭುತ್ವ ದೇಶ, ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಆದರೆ ತಪ್ಪಾಗಿ ಮಾತನಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಬಾರದು" ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ.

ತೀವ್ರ ಚರ್ಚೆ

ತಿದ್ದುಪಡಿ ಮಾಡಲಾದ ವಕ್ಫ್ ಮಸೂದೆಯು ಭಾರಿ ರಾಜಕೀಯ ವಿವಾದವನ್ನು ಹುಟ್ಟು ಹಾಕಿದೆ. ವಿಪಕ್ಷಗಳು ಇದನ್ನು ಅಸಂವಿಧಾನಿಕ ಎಂದು ಕರೆದರೆ, ಆಡಳಿತ ಪಕ್ಷದ ನಾಯಕರು ಇದನ್ನು ವಕ್ಫ್ ಸ್ವತ್ತುಗಳನ್ನು ಅನುಚಿತ ಬಳಕೆಯಿಂದ ರಕ್ಷಿಸಲು ಅಗತ್ಯ ಕ್ರಮ ಎಂದು ಸಮರ್ಥಿಸಿಕೊಂಡಿದ್ದಾರೆ.

14 ಪ್ರಮುಖ ಬದಲಾವಣೆಗಳಿಗೆ ಅನುಮೋದನೆ

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ 14 ಪ್ರಮುಖ ಬದಲಾವಣೆಗಳಿಗೆ ಅನುಮೋದನೆ ನೀಡಿತ್ತು. ಜಂಟಿ ಸನದ ಸಮಿತಿ (JPC)ಯಲ್ಲಿ ವಿಪಕ್ಷ ನಾಯಕರು ಸೂಚಿಸಿದ್ದ ಒಟ್ಟು 23 ಬದಲಾವಣೆಗಳ ಪೈಕಿ,14 ಬದಲಾವಣೆಗಳಿಗೆ ಕೇಂದ್ರ ಸಚಿವ ಸಂಪುಟ ಅಸ್ತು ಎಂದಿತ್ತು. ಈ ಬೆಳವಣಿಗೆಯು ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ನಿಯಂತ್ರಿಸುವ ಕಾನೂನುಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿದೆ.