- ಜ್ಯೋತಿ ಎಸ್
ನವದೆಹಲಿ: ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತವನ್ನು ಒಂದಾಗಿಸಿದ್ದ ಗೀತೆಯು, ಇಂದು ಸ್ವತಂತ್ರ ಭಾರತದಲ್ಲಿ ಹಲವು ವಿವಾದದಗಳ ಕೇಂದ್ರಬಿಂದುವಾಗಿದೆ. ಈ ಗೀತೆಯ ಗೌರವವನ್ನು ಎತ್ತಿಹಿಡಿಯುವ ಹೊಸ ಕಾನೂನನ್ನು ಕೆಲ ದಿನಗಳ ಹಿಂದೆಯಷ್ಟೇ ಜಾರಿಗೆ ತರಲಾಗಿತ್ತು. ಆದರೆ, ಈ ಗೀತೆಯು ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಳೆದ ಹಲವು ದಶಕಗಳಿಂದ ‘ವಂದೇ ಮಾತರಂ' ಗೀತೆಯು ಗೌರವ ಮತ್ತು ವಿವಾದಗಳ ನಡುವೆಯೇ ಉಳಿದುಕೊಂಡು ಬಂದಿದೆ.
ಸಂಸತ್ತಿನ ಕಳೆದ ಚಳಿಗಾಲದ ಅಧಿವೇಶನದಿಂದಲೂ ‘ವಂದೇ ಮಾತರಂ' ಕುರಿತ ಸಂಘರ್ಷವು ಹೊಗೆಯಾಡುತ್ತಿತ್ತು. 2025ರ ಜೂನ್ 7ರಂದು ಈ ಗೀತೆಯ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತೀವ್ರ ಸ್ವರೂಪದ ವಿವಾದ ಭುಗಿಲೆದ್ದಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು, ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ಒತ್ತಡಕ್ಕೆ ಮಣಿದು ಈ ಗೀತೆಯ ಕೆಲವು ಭಾಗಗಳನ್ನು ತೆಗೆದುಹಾಕಿದೆ ಎಂದು ಆರೋಪಿಸಿತ್ತು. ಇದರ ಬೆನ್ನಲ್ಲೇ, ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ‘ರಾಷ್ಟ್ರೀಯ ಗೌರವ ಅವಮಾನ ತಡೆ (ತಿದ್ದುಪಡಿ) ಕಾಯ್ದೆ, 2026" ಅನ್ನು ಅಂಗೀಕರಿಸಲಾಯಿತು. ಇದೇ ಮೊದಲ ಬಾರಿಗೆ, ಸರ್ಕಾರವು ಈ ಸಂಪೂರ್ಣ ಗೀತೆಯನ್ನು ಹಾಡುವ ಅಧಿಕೃತ ನಿಯಮಗಳನ್ನು ರೂಪಿಸಿದ್ದಲ್ಲದೆ, ಗೀತೆಗೆ ಅಡ್ಡಿಪಡಿಸುವುದು ಹಾಗೂ ಅಪಮಾನ ಮಾಡುವವರ ವಿರುದ್ಧ ಶಿಕ್ಷೆ ಹಾಗೂ ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರವನ್ನು ಮಾಡಿದೆ.
"ರಾಷ್ಟ್ರೀಯ ಗೌರವ ಅವಮಾನ ತಡೆ (ತಿದ್ದುಪಡಿ) ಕಾಯ್ದೆ, 2026 ವಿಧೇಯಕ ಅಂಗೀಕಾರವಾದಾಗ ಕಾಂಗ್ರೆಸ್ ಪಕ್ಷಕ್ಕೆ ಇದನ್ನು ತಡೆಯಲು ಸಾಧ್ಯವಾಗಲಿಲ್ಲ. ಸಂಸತ್ತಿನ ಹೊರಗೆ ಇದರ ವಿರುದ್ಧ ಯಾವುದೇ ಪ್ರತಿಭಟನೆಯನ್ನು ನಡೆಸಲಾಗಲಿಲ್ಲ. ಆದರೆ, ಆಗಸ್ಟ್ 15 ರಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ರಾಷ್ಟ್ರ ಧ್ವಜಾರೋಹಣ ಸಂದರ್ಭದಲ್ಲಿ ಚಿತ್ರೀಕರಿಸಿಲಾದ ವಿಡಿಯೋವಂದು ವೈರಲ್ ಆಗಿತ್ತು. ಇದರಲ್ಲಿ ಸೋನಿಯಾ ಗಾಂಧಿ ಹಾಗೂ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಂದೇ ಮಾತರಂ ಗೀತೆಗೆ ಅಗೌರವ ತೋರಿದ್ದಾರೆ, ಎಂಬ ಹೇಳಿಕೆಗಳು ಕೇಳಿ ಬಂದುವು ಇಲ್ಲಿ ಕಾಂಗ್ರೇಸ್ ಪಕ್ಷವು ವಂದೇ ಮಾತರಂ ಗೀತೆಯನ್ನು ‘ಬಲವಂತವಾಗಿ ಗೌರವಿಸುತ್ತಿದೆ’ ಎಂದು ಹೇಳಲಾಯಿತು.
ವಂದೇ ಮಾತರಂ' ಗೀತೆಯನ್ನು ಪ್ರಸಾರ ಮಾಡಿದಾಗ, ಅದರ ಪ್ರಥಮ ಎರಡು ಚರಣಗಳ ಅವಧಿಯಲ್ಲಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಇಬ್ಬರೂ ಗೀತೆಯನ್ನು ಜೊತೆಗೂಡಿ ಹಾಡಿದರು. ಆದರೆ, ತೃತೀಯ ಚರಣವು ಪ್ರಾರಂಭವಾದ ತಕ್ಷಣವೇ, ಖರ್ಗೆಯಾಗಲಿ ಅಥವಾ ಪಕ್ಷದ ನಾಯಕ ರಾಹುಲ್ ಗಾಂಧಿಯಾಗಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಪ್ರಥಮವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದವರು ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ. ಖರ್ಗೆಯವರತ್ತ ತಿರುಗಿ, ಯಾವುದೋ ವಿಷಯಕ್ಕೆ ಕೈಸನ್ನೆಗಳ ಮೂಲಕ ಸೂಚಿಸಿದರು. ಇದನ್ನು ನೋಡಿದ ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಅವರಿಗೆ ಪ್ರತಿಕ್ರಿಯೆ ನೀಡಿದರು. ನಂತರ ಈ ಘಟನೆಯು ಭಾರಿ ಚರ್ಚೆಗೆ ಕಾರಣವಾಯಿತು.
ನಂತರ ಸ್ಪಷ್ಟನೆ ನೀಡಿದ ಕಾಂಗ್ರೆಸ್ ಪಕ್ಷವು ‘ಸೋನಿಯಾ ಗಾಂಧಿಯವರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಸನದ ವ್ಯವಸ್ಥೆ ಮಾಡಲು ಬಯಸಿದ್ದರು ಅಷ್ಟೇ ಎಂದು ಸಮರ್ಥಿಸಿಕೊಂಡರು. ಆದರೆ, ಅಂದು ಇತಿಹಾಸ ನಿರ್ಮಾಣವಾಗಿತ್ತು. 1937 ರ ನಂತರ ಮೊದಲ ಬಾರಿಗೆ, ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ‘ವಂದೇ ಮಾತರಂ' ಗೀತೆಯ ಸಂಪೂರ್ಣ ಆವೃತ್ತಿಯನ್ನು ಪ್ರಸಾರ ಮಾಡಲಾಗಿತ್ತು. ನಂತರ ಈ ವಿವಾದ ಇಲ್ಲಿಗೆ ಮುಗಿಯಲಿಲ್ಲ. ಮುಂದಿನ ಬುಧವಾರದ ವೇಳೆಗೆ, ‘ಖರ್ಗೆಯವರಿಗಾಗಿ ಆಸನ’ ಎಂಬ ಸ್ಪಷ್ಟನೆಯ ಸಮರ್ಥನೆಗೆ ಯಾವುದೇ ಆಧಾರವಿಲ್ಲದಂತಾಯಿತು. ಭವಿಷ್ಯದಲ್ಲಿ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ' ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಅಥವಾ ಪ್ರಸಾರ ಮಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧರಿಸಿತು. ಈ ಮೂಲಕ ದೇಶದ ಕಾನೂನಿಗೆ ಸವಾಲೆಸೆಯಲಾಯಿತು. ಅಭಿಷೇಕ್ ಮನು ಸಿಂಘ್ವಿ ಅವರಂತಹ ಕಾಂಗ್ರೆಸ್ ನಾಯಕರು ಮತ್ತು ಕಾನೂನು ತಜ್ಞರು, ಈ ನೂತನ ಕಾನೂನನ್ನು ಉಲ್ಲೇಖಿಸಿ, ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಕ್ರಮಗಳ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಿದರು. ಆದರೆ ರಾಜಕೀಯ ಅಂತರಾಳದಲ್ಲಿ ಇದರ ಅರ್ಥವನ್ನು ಗ್ರಹಿಸುವುದು ಅತ್ಯಂತ ಮುಖ್ಯವಾಗುತ್ತದೆ.
ಭಾರತೀಯ ಜನತಾ ಪಾರ್ಟಿಯು ಕಳೆದ ಹಲವು ದಶಕಗಳಿಂದ ‘ವಂದೇ ಮಾತರಂ' ವಿಷಯದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿವಾದಕ್ಕೆ ಸಿಲುಕಿಸಲು ಯತ್ನಿಸುತ್ತಲೇ ಇತ್ತು. ಕಾಂಗ್ರೆಸ್ ಪಕ್ಷದ ಈ ಪ್ರತಿಕ್ರಿಯೆಯು ಬಿಜೆಪಿಯ ತಂತ್ರಫಲಿಸಿದೆ ಎಂಬುದನ್ನು ಸಾಬೀತುಪಡಿಸಿತು. ಈ ಬಾರಿ ಸಂಪೂರ್ಣ ಗೀತೆಯ ಗೌರವವನ್ನು ರಕ್ಷಿಸಲು ಕಾನೂನನ್ನು ಜಾರಿಗೆ ತರಲಾಗಿತ್ತು. ಸೋನಿಯಾ ಗಾಂಧಿಯವರು ಈ ವಿಚಾರದಲ್ಲಿ ಎಡವಿದರು. ‘ವಂದೇ ಮಾತರಂ'ನ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂಬ ಅಧಿಕೃತ ಸಿಡಬ್ಲ್ಯೂಸಿ ಆದೇಶವೂ ಹೊರಬಿದ್ದಿತ್ತು. ಹೀಗಾಗಿ, ಬಿಜೆಪಿಗೆ ರಾಜಕೀಯವಾಗಿ ಅತ್ಯಂತ ದೊಡ್ಡ ಲಾಭ ದೊರೆತಂತಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರದಂದು ಕಾಂಗ್ರೆಸ್ ಪಕ್ಷವು ತನ್ನ ‘ತೀವ್ರ ತುಷ್ಟೀಕರಣ ನೀತಿಯನ್ನು’ ಪುನರುಜ್ಜೀವನಗೊಳಿಸುತ್ತಿದೆ ಎಂದು ಆರೋಪಿಸಿದರು. ಈ ನಿರ್ಧಾರವು ಭಾರತದ ವಿಭಜನೆಗೆ ಕಾರಣವಾದ ಐತಿಹಾಸಿಕ ತಪ್ಪಿನ ಪುನರಾವರ್ತನೆಯಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.
‘ಕಾಂಗ್ರೆಸ್ ಬದಲಾಗಿಲ್ಲ’ ಎಂಬುದೇ ಈಗ ಬಿಜೆಪಿಯ ಪ್ರಮುಖ ವಾದವಾಗಿದೆ. ಮುಸ್ಲಿಂ ಮತಗಳಿಗಾಗಿ ಅದು 89 ವರ್ಷಗಳ ಹಿಂದೆ ‘ವಂದೇ ಮಾತರಂ' ಗೀತೆಯನ್ನು ಇಬ್ಬಾಗ ಮಾಡಿತ್ತು ಹಾಗೂ ಇಂದಿಗೂ ಅದನ್ನೇ ಮುಂದುವರಿಸುತ್ತಿದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಇತಿಹಾಸದ ಅಂಗಳದಲ್ಲಿದ್ದ ಈ ಸುದೀರ್ಘ ಚರ್ಚೆಯು, ಈಗ ವರ್ತಮಾನದಲ್ಲೂ ಮುನ್ನೆಲೆಗೆ ಬಂದು ಪ್ರತಿಧ್ವನಿಸುತ್ತಿದೆ.
ಮುಸ್ಲಿಂ ಲೆಕ್ಕಾಚಾರ
‘ವಂದೇ ಮಾತರಂ' ಈಗ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ವಿಭಜನೆಯ ಪ್ರಮುಖ ರಾಜಕೀಯ ಅಸ್ತ್ರವಾಗಿದೆ. ಕಾಂಗ್ರೆಸ್ ಪಕ್ಷದ ಕೆಲ ನಾಯಕರ ಪ್ರಕಾರ, ಈ ಸೂಕ್ಷ್ಮ ವಿಷಯವನ್ನು ಅತ್ಯಂತ ವಿವೇಚನೆಯಿಂದ ನಿರ್ವಹಿಸುವ ಅಗತ್ಯವಿತ್ತು. ಕಾಂಗ್ರೆಸ್ ಆಡಳಿತವಿರುವ ಮೂರು ರಾಜ್ಯಗಳಾದ ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣಗಳಲ್ಲಿ ಈ ಗೀತೆಯನ್ನು ಸಂಪೂರ್ಣವಾಗಿ ಹಾಡಲಾಗುತ್ತಿತ್ತು ಎಂದು ಅವರು ಪ್ರತಿಪಾದಿಸುತ್ತಾರೆ. ಆದರೆ ಇದರ ಹಿಂದೆ ನಿರ್ದಿಷ್ಟವಾದ ಒಂದು ಯೋಜಿತ ಕಾರ್ಯತಂತ್ರವಿದೆ ಎಂದು ಅನಿಸುತ್ತದೆ.
ಆಗಸ್ಟ್ 15 ಕ್ಕೂ ಬಹು ಮುಂಚಿತವಾಗಿಯೇ, ಮುಖ್ಯಮಂತ್ರಿ ವಿ. ಡಿ. ಸತೀಶನ್ ನೇತೃತ್ವದ ಕೇರಳ ಸರ್ಕಾರವು ತನ್ನ ಸ್ವಾತಂತ್ರ‍್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ' ಗೀತೆಯನ್ನು ಪ್ರಸಾರ ಮಾಡಬಾರದು ಎಂದು ಆದೇಶಿಸಿತ್ತು. ಅದೂ ಸಹ ಕಾಂಗ್ರೆಸ್ ಆಡಳಿತವಿರುವ ರಾಜ್ಯವೇ ಆಗಿದೆ. ಪ್ರಿಯಾಂಕಾ ಗಾಂಧಿ ಅವರು ವಯನಾಡಿನ ಸಂಸದೆಯಾಗಿದ್ದರೆ, ರಾಹುಲ್ ಗಾಂಧಿಯವರ ಅತ್ಯಂತ ಆಪ್ತ ಹಾಗೂ ಪ್ರಭಾವಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರೂ ಕೇರಳದವರೇ ಆಗಿದ್ದಾರೆ. ಹೀಗಿರುವಾಗ, ಕೇಂದ್ರ ಗೃಹ ಸಚಿವಾಲಯದ ನಿರ್ದೇಶನವನ್ನು ಉಲ್ಲಂಘಿಸುವ ನಿರ್ಧಾರವನ್ನು ಕೇರಳ ಸರ್ಕಾರವು ಕಾಂಗ್ರೆಸ್ ಹೈಕಮಾಂಡ್‌ನ ಸಮ್ಮತಿಯಿಲ್ಲದೆ ಸ್ವತಂತ್ರವಾಗಿ ತೆಗೆದುಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುವುದು ಸಹಜ.
1937ರ ಸಿಡಬ್ಯೂಸಿ ನಿರ್ಣಯ
ಹಿಂದೂ-ಮುಸ್ಲಿಂ ವಿಭಜನೆಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈಗ ನಡೆಯುತ್ತಿರುವ ಪೈಪೋಟಿಗೆ ಈ ಗೀತೆಯ ಇತಿಹಾಸವೇ ಮೂಲ ಕಾರಣವಾಗಿದೆ. ಸುಮಾರು 150 ವರ್ಷಗಳ ಹಿಂದೆ ಈ ಗೀತೆಯನ್ನು ಸ್ವೀಕರಿಸಿ ಪ್ರಚಾರ ಮಾಡಿದ್ದೇ ಸ್ವತಃ ಕಾಂಗ್ರೆಸ್ ಪಕ್ಷವಾಗಿತ್ತು. 1896 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಈ ಗೀತೆಗೆ ರಾಗ ಸಂಯೋಜಿಸಿ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡಿದ್ದರು. 1905ರಲ್ಲಿ ಲಾರ್ಡ್ ಕರ್ಜನ್ ಬೆಂಗಾಲ್ ವಿಭಜನೆ ಮಾಡಿದಾಗ, ‘ವಂದೇ ಮಾತರಂ' ಬೆಂಗಾಲ್ ಸ್ವದೇಶಿ ಚಳವಳಿಯ ಒಗ್ಗೂಡಿಸುವ ಜಯಘೋಷವಾಯಿತು. ಸಾಮೂಹಿಕವಾಗಿ ಭಾರತೀಯರು ಇದನ್ನು ಹಾಡಿದಾಗ, 1905 ರ ಸೆಪ್ಟೆಂಬರ್ 7ರಂದು ವಾರಾಣಸಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ತನ್ನ ಸಮಸ್ತ ಭಾರತೀಯ ಕಾರ್ಯಕ್ರಮಗಳಿಗೆ ಇದನ್ನು ಅಧಿಕೃತವಾಗಿ ಅಳವಡಿಸಿಕೊಂಡಿತು. 1906 ರಲ್ಲಿ ಬಾರಿಸಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 10,000ಕ್ಕೂ ಹೆಚ್ಚು ಹಿಂದೂಗಳು ಮತ್ತು ಮುಸ್ಲಿಮರು ‘ವಂದೇ ಮಾತರಂ' ಹಾಡುತ್ತಾ ಜೊತೆಯಾಗಿ ಪಥಸಂಚಲನ ನಡೆಸಿದ್ದರು.
ಲಾಲಾ ಲಜಪತ್ ರಾಯ್ ಅವರು ಲಾಹೋರನಿಂದ ‘ವಂದೇ ಮಾತರಂ' ಹೆಸರಿನಲ್ಲಿಯೇ ಉರ್ದು ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಬಿಪಿನ್ ಚಂದ್ರ ಪಾಲ್ ಅವರು 1906ರಲ್ಲಿ ‘ಬಂದೇ ಮಾತರಂ' ಎಂಬ ದಿನಪತ್ರಿಕೆಯನ್ನು ಸ್ಥಾಪಿಸಿದರು. ಮೇಡಂ ಭಿಕಾಜಿ ಕಾಮಾ ಅವರು ಲಂಡನ್‌ನಲ್ಲಿ ‘ವಂದೇ ಮಾತರಂ' ಎಂದು ಬರೆದಿದ್ದ ಧ್ವಜವನ್ನು ಹಾರಿಸಿದರು.
ಆದರೆ 1908 ರ ವೇಳೆಗೆ, ಮುಸ್ಲಿಂ ನಾಯಕರು ಈ ಗೀತೆಯ ವಿರುದ್ಧ ಧ್ವನಿ ಎತ್ತಲು ಪ್ರಾರಂಭಿಸಿದರು. 1908 ರ ಡಿಸೆಂಬರ್ ೩೦ರಂದು ಅಮೃತಸರದಲ್ಲಿ ನಡೆದ ಅಖಿಲ ಭಾರತ ಮುಸ್ಲಿಂ ಲೀಗ್‌ನ 2ನೇ ಅಧಿವೇಶನದಲ್ಲಿ ಸೈಯದ್ ಅಲಿ ಇಮಾಮ್, ‘ರಾಷ್ಟ್ರೀಯತೆಯತೆಯ ಮುಖವಾಡದಡಿಯಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರೀಯತೆಯತೆಯನ್ನು ಬೋಧಿಸಲಾಗುತ್ತಿದೆ’ ಎಂದು ಹೇಳಿದರು. ಅಂದಿನಿಂದ ‘ವಂದೇ ಮಾತರಂ' ಗೀತೆಯನ್ನು ಕೋಮುವಾದಿ ಘೋಷಣೆ ಎಂದು ಕರೆಯಲಾಯಿತು.
ಕಾಂಗ್ರೆಸ್ ವಿರೋಧದ ನಡುವೆಯೂ 'ವಂದೇ ಮಾತರಂ' ಕುರಿತು ನಿರ್ಣಯ ಅಂಗೀಕರಿಸಿದ ಬಿಜೆಪಿ
1915ರಲ್ಲಿ ಮದ್ರಾಸ್‌ನಲ್ಲಿ ನಡೆದ ಸಭೆಯಲ್ಲಿ ಮಹಾತ್ಮ ಗಾಂಧಿಯವರು ‘ವಂದೇ ಮಾತರಂ' ಗೀತೆಯ ಸಂಪೂರ್ಣ ಆವೃತ್ತಿಯ ಹಾಡಿದರು. ಲಕ್ನೋದಲ್ಲಿ ನಡೆದ ಮುಸ್ಲಿಂ ಲೀಗ್‌ನ ನೇ 25 ನೇ ಅಧಿವೇಶನದಲ್ಲಿ, ಮೊಹಮ್ಮದ್ ಅಲಿ ಜಿನ್ನಾ ಅವರ ಸಮ್ಮುಖದಲ್ಲೇ ‘ಬಂದೇ ಮಾತರಂ ಗೀತೆಯು ನಿಸ್ಸಂದೇಹವಾಗಿ ಇಸ್ಲಾಂ ವಿರೋಧಿಯಾಗಿದೆ ಹಾಗೂ ವಿಗ್ರಹಾರಾಧನೆಯ ಪ್ರಚೋದನೆಯನ್ನು ಹೊಂದಿದೆ’ ಎಂದು ಪ್ರತಿಪಾದಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು. 1937 ರ ಅಕ್ಟೋಬರ್ 17ರಂದು ಬೆಂಗಾಲ್‌ನ ಅಂದಿನ ಮುಖ್ಯಮಂತ್ರಿಯಾಗಿದ್ದ ಕೆ. ಫಜ್ಲುಲ್ ಹಕ್, ‘ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಹಿಂದೂ ರಾಜಪ್ರಭುತ್ವವನ್ನು ಸ್ಥಾಪಿಸಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು. ಕಾಂಗ್ರೆಸ್ ವಿರುದ್ಧ ಎದುರಾದ ಈ ಹಿಂದುತ್ವದ ಆರೋಪದಿಂದಾಗಿ, ಮುಸ್ಲಿಂ ಮತಗಳು ಮುಸ್ಲಿಂ ಲೀಗ್ ಪಾಲಾಗಬಹುದು ಎಂಬ ಆತಂಕ ಕಾಂಗ್ರೆಸ್ ಅನ್ನು ಕಾಡತೊಡಗಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಮರುಪರಿಶೀಲಿಸಲು ನಿರ್ಧರಿಸಿತು. 1937ರ ಅಕ್ಟೋಬರ್ ೨೦ರಂದು ಜವಾಹರಲಾಲ್ ನೆಹರೂ ಅವರು ಅಲಹಾಬಾದ್‌ನಿಂದ ಸುಭಾಷ್ ಚಂದ್ರ ಬೋಸ್ ಅವರಿಗೆ ಪತ್ರವೊಂದನ್ನು ಬರೆದರು.
ಸುಭಾಷ್ ಚಂದ್ರ ಬೋಸ್‌ಗೆ ಜವಾಹರಲಾಲ್ ನೆಹರೂ ಪತ್ರ
ಈ ಪತ್ರದಲ್ಲಿ ನೆಹರೂ ಅವರು, ‘ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಆನಂದಮಠ ಕಾದಂಬರಿಯನ್ನು ಓದಿದ ನಂತರವೇ ನನಗೆ ಈ ಗೀತೆಯ ಹಿನ್ನೆಲೆ ಅರ್ಥವಾಯಿತು’ ಎಂದು ಜವಾಹರಲಾಲ್ ನೆಹರೂ ಪ್ರತಿಪಾದಿಸಿದರು. ಅವರು ತಮ್ಮ ಪತ್ರದಲ್ಲಿ, "ಈ ಗೀತೆಯು ಮುಸ್ಲಿಮರನ್ನು ಕೆರಳಿಸುವ ಸಾಧ್ಯತೆಯಿದೆ ಎಂದೇ ತೋರುತ್ತದೆ. ಪ್ರಸ್ತುತ ‘ವಂದೇ ಮಾತರಂ' ವಿರುದ್ಧ ಎದ್ದಿರುವ ಆಕ್ರೋಶವು ಬಹುಮಟ್ಟಿಗೆ ಕೋಮುವಾದಿಗಳಿಂದ ಸೃಷ್ಟಿಸಲ್ಪಟ್ಟಿದ್ದರೂ ಸಹ, ಇದರಲ್ಲಿ ಒಂದಷ್ಟು ನಿಜಾಂಶವೂ ಇದೆ ಹಾಗೂ ಕೋಮುವಾದಿ ಮನಸ್ಥಿತಿಯುಳ್ಳವರ ಮೇಲೆ ಇದು ಪರಿಣಾಮ ಬೀರಿದೆ ಎಂಬಲ್ಲಿ ಯಾವುದೇ ಸಂಶಯವಿಲ್ಲ" ಎಂದು ಬರೆದರು. ನೆಹರೂ ಅವರು ಅದೇ ತಿಂಗಳ ಕೊನೆಯಲ್ಲಿ ‘ಕಲ್ಕತ್ತಾ'ದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರನ್ನು ಭೇಟಿಯಾದರು. ತದನಂತರ, ಡಿಸೆಂಬರ್ 1937 ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಒಂದು ನಿರ್ಣಯವನ್ನು ಅಂಗೀಕರಿಸಿತು. ಮಹಾತ್ಮ ಗಾಂಧಿಯವರು ಸಹ ಈ ವಿಷಯದಲ್ಲಿ ತಮ್ಮ ಒಮ್ಮತ ತಮ್ಮ ನಿಲುವನ್ನು ನೀಡಿದರು. ಗೀತೆಯ ಭಾವನಾತ್ಮಕ ಮಹತ್ವ ಮತ್ತು ಧಾರ್ಮಿಕ ಸೂಕ್ಷ್ಮತೆಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ, ಸಿಡಬ್ಲೂಸಿ ನಿರ್ಣಯವು ‘ವಂದೇ ಮಾತರಂ'ನ ರಾಷ್ಟ್ರೀಯತೆ ಬಳಕೆಯನ್ನು ಕೇವಲ ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಿತು.
ಸಂವಿಧಾನ ಸಭೆಯ ತೀರ್ಪು
10 ವರ್ಷಗಳ ನಂತರ, ‘ವಂದೇ ಮಾತರಂ’ ವಿಷಯವು ಸಂವಿಧಾನ ಸಭೆಯಲ್ಲಿ ಚರ್ಚೆಗೆ ಬಂದಿತು. 1947ರ ಜುಲೈ 31ರಂದು, ಐಸಿಎಸ್ ಅಧಿಕಾರಿಯಾಗಿ ನಂತರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹೆಚ್. ವಿ. ಕಾಮತ್ ಅವರು ಸಂವಿಧಾನ ಸಭೆಯ ಅಧಿಕೃತ ಕಾರ್ಯಸೂಚಿಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಸೇರಿಸಲು ಒತ್ತಾಯಿಸಿದರು.
1947ರ ಆಗಸ್ಟ್ 14 ರ ಮಧ್ಯರಾತ್ರಿ ಅಧಿಕಾರ ಹಸ್ತಾಂತರದ ಐತಿಹಾಸಿಕ ಸಂದರ್ಭದಲ್ಲಿ, ಸುಚೇತಾ ಕೃಪಲಾನಿ ಅವರು ಕಾರ್ಯಕ್ರಮದ ಆರಂಭದಲ್ಲಿ ‘ವಂದೇ ಮಾತರಂ’ನ ಪ್ರಥಮ ಚರಣವನ್ನು ಹಾಡಿದರು. ಕುತೂಹಲಕಾರಿ ಸಂಗತಿಯೆಂದರೆ, 1948ರ ಸಂಪುಟ ಟಿಪ್ಪಣಿಯೊಂದರಲ್ಲಿ ನೆಹರೂ ಅವರು, ‘ವಂದೇ ಮಾತರಂ ಗೀತೆಯು ತನ್ನೆಲ್ಲಾ ಸೌಂದರ್ಯ ಮತ್ತು ಇತಿಹಾಸದ ಹೊರತಾಗಿಯೂ, ಆರ್ಕೆಸ್ಟ್ರಾ ಅಥವಾ ಬ್ಯಾಂಡ್ ಸೆಟ್‌ನಲ್ಲಿ ನುಡಿಸಲು ಸುಲಭವಾದ ರಾಗವನ್ನು ಹೊಂದಿಲ್ಲ. ಇದು ಶೋಕಗೀತೆ, ದೈನ್ಯತೆಯಿಂದ ಕೂಡಿದೆ’ ಎಂದು ಬರೆದಿದ್ದರು ಎನ್ನಲಾಗಿದೆ. ಸಂವಿಧಾನ ಸಭೆಯ ಸದಸ್ಯರಾದ ಸೇಠ್ ಗೋವಿಂದ್ ದಾಸ್, ಬಿಶ್ವನಾಥ್ ದಾಸ್ ಮತ್ತು ಸತೀಶ್ ಚಂದ್ರ ಅವರು ಈ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಲು ಬೆಂಬಲಿಸಿದರು.
ವಿವಾದ ಎಂದಿಗೂ ಕೊನೆಗೊಳ್ಳುವುದಿಲ್ಲ
‘ವಂದೇ ಮಾತರಂ' ಗೀತೆಯ ಸುತ್ತಲಿನ ಭಿನ್ನಾಭಿಪ್ರಾಯಗಳು ದಶಕಗಳಿಂದ ಜೀವಂತವಾಗಿದ್ದು, ಬಿಜೆಪಿಯ ಹುಟ್ಟು ಮತ್ತು ‘ಹಿಂದೂ ಗುರುತಿನ ರಾಜಕೀಯ'ದೊಂದಿಗೆ ಮತ್ತಷ್ಟು ತೀವ್ರಗೊಂಡವು. ಉತ್ತರ ಪ್ರದೇಶದಂತಹ ರಾಜ್ಯಗಳ ಶಾಲಾ-ಕಾಲೇಜುಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಈ ಗೀತೆಯನ್ನು ಕಡ್ಡಾಯಗೊಳಿಸಿದ್ದು ಮತ್ತು ‘ಹಿಂದೂಸ್ತಾನ್ ಮೇ ರಹನಾ ಹೋಗಾ, ವಂದೇ ಮಾತರಂ ಕಹನಾ ಹೋಗಾ’ ಎಂಬ ರಾಜಕೀಯ ಘೋಷಣೆಗಳು ಧಾರ್ಮಿಕ ಧ್ರುವೀಕರಣಕ್ಕೆ ದಾರಿಮಾಡಿಕೊಟ್ಟವು.
ಈ ಬೆಳವಣಿಗೆಗಳ ನಡುವೆ, 2009ರಲ್ಲಿ ‘ದಾರುಲ್ ಉಲೂಮ್' ಸಂಸ್ಥೆಯು ಈ ಗೀತೆ ಹಾಡುವುದನ್ನು ಇಸ್ಲಾಂ ವಿರೋಧಿ ಎಂದು ಕರೆಯಿತು. ತದನಂತರ, 2009ರಲ್ಲಿ ‘ಜಮಾತ್-ಉಲೇಮಾ-ಎ-ಹಿಂದ್' ಸಂಘಟನೆಯು ದೇವಬಂದ್ ಅಧಿವೇಶನದಲ್ಲಿ ಮುಸ್ಲಿಮರು ರಾಷ್ಟ್ರೀಯ ಗೀತೆಯನ್ನು ಹಾಡಬಾರದೆಂಬ ನಿರ್ಣಯ ಅಂಗೀಕರಿಸಿತು. ಈ ನಿರ್ಣಯಗಳು ಧರ್ಮದ ಅನುಯಾಯಿಗಳಿಗಿಂತ ಹೆಚ್ಚಾಗಿ, ಮುಸ್ಲಿಂ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದ ರಾಜಕೀಯ ಪಕ್ಷಗಳಿಗೆ ಪ್ರಮುಖ ಅಸ್ತ್ರವಾದವು. ಇದರ ಪರಿಣಾಮವಾಗಿ, 2013ರಲ್ಲಿ ಲೋಕಸಭೆಯಲ್ಲಿ ‘ವಂದೇ ಮಾತರಂ' ಪ್ರಸಾರವಾಗುತ್ತಿದ್ದಾಗ ಬಿಎಸ್ಪಿ ಸಂಸದ ಶಫೀಕುರ್ ರೆಹಮಾನ್ ಬರ್ಕ್ ಅವರು ಅಧಿವೇಶನದಿಂದ ಹೊರನಡೆಯುವ ಮೂಲಕ ತಮ್ಮ ಸೈದ್ಧಾಂತಿಕ ವಿರೋಧವನ್ನು ವ್ಯಕ್ತಪಡಿಸಿದ್ದರು.
ಪ್ರಸ್ತುತ ಸ್ಥಿತಿಗತಿ
ಕಾಂಗ್ರೆಸ್ ಪಕ್ಷವು ತನ್ನ 1937 ರ ಚಾರಿತ್ರಿಕ ನಿರ್ಧಾರಕ್ಕೆ ಇಂದಿಗೂ ಬದ್ಧವಾಗಿರಲು ಸ್ಪಷ್ಟವಾದ ಕಾರಣಗಳಿವೆ. ಭಾರತದಾದ್ಯಂತ ಕುಸಿಯುತ್ತಿರುವ ಪಕ್ಷದ ಜನಪ್ರಿಯತೆಯು ಮುಸ್ಲಿಂ ಮತದಾರರಲ್ಲಿ ಉಂಟಾದ ಹಿನ್ನಡೆಗೆ ನೇರವಾಗಿ ಸಂಪರ್ಕ ಹೊಂದಿದೆ. ಕಾಂಗ್ರೆಸ್ ಪಕ್ಷವು ಸಾಲು ಸಾಲು ಪ್ರಮುಖ ವಿಧಾನಸಭಾ ಚುನಾವಣೆಗಳನ್ನು ಎದುರಿಸುತ್ತಿದ್ದು, ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮತಗಳಿಗಾಗಿ ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಾರ್ಟಿ ಗಳೊಂದಿಗೆ ಸ್ಪರ್ಧಿಸುತ್ತಿದೆ.
ಅಲ್ಪಸಂಖ್ಯಾತ ಮತದಾರರಲ್ಲಿ ತನ್ನ ಬೆಂಬಲವನ್ನು ಹೆಚ್ಚಿಸಿಕೊಳ್ಳುವುದು ಚುನಾವಣಾ ಮೈತ್ರಿಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್‌ಗೆ ಸಹಕಾರಿಯಾಗಲಿದೆ. ಮುಂಬರುವ ದಿನಗಳಲ್ಲಿ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದಂತಹ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದ್ದು, ಈ ಎಲ್ಲಾ ರಾಜ್ಯಗಳಲ್ಲೂ ಮುಸ್ಲಿಂ ಮತಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ‘ವಂದೇ ಮಾತರಂ' ವಿಷಯವನ್ನು ಮುನ್ನಲೆಗೆ ತಂದು ಅಲ್ಪಸಂಖ್ಯಾತ ಮತಗಳನ್ನು ಒಗ್ಗೂಡಿಸಲು ಯತ್ನಿಸಿದರೆ, ಅದು ಬಿಜೆಪಿಗೆ ತನ್ನ ಹಿಂದುತ್ವದ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಲು ರಾಜಕೀಯ ಅಸ್ತ್ರವಾಗಿ ಪರಿಣಮಿಸಲಿದೆ.