ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana: ಮುಂಬೈ ದಾಳಿಯಲ್ಲಿ ದುಬೈ ವ್ಯಕ್ತಿಯ ಕೈವಾಡ?

ಮುಂಬೈ ತಾಜ್ ಹೊಟೇಲ್ ಭಯೋತ್ಪಾದಕ ದಾಳಿ ನಡೆದು 15 ವರ್ಷಗಳ ಅನಂತರ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ತಹಾವ್ವುರ್‌ ರಾಣಾನನ್ನು ವಿಚಾರಣೆಗಾಗಿ ಅಮೆರಿಕದಿಂದ ಭಾರತಕ್ಕೆ ಕರೆ ತರಲಾಗಿದೆ. 26/11 ಮುಂಬೈ ಭಯೋತ್ಪಾದಕ ದಾಳಿಗೂ ಮೊದಲು ರಾಣಾ ದುಬೈನಲ್ಲಿ ಭೇಟಿಯಾಗಿದ್ದ ಎನ್ನಲಾದ ವ್ಯಕ್ತಿಯ ಹುಡುಕಾಟವನ್ನು ಈಗ ಭಯೋತ್ಪಾದನಾ ನಿಗ್ರಹ ಸಂಸ್ಥೆ (ಎನ್ಐಎ) ಈಗ ಆರಂಭಿಸಿದೆ. ರಾಣಾ ಭೇಟಿಯಾಗಿದ್ದ ದುಬೈ ವ್ಯಕ್ತಿಗೆ ಮುಂಬೈ ದಾಳಿ ಸಂಚಿನ ಕುರಿತು ಸಂಪೂರ್ಣ ಮಾಹಿತಿ ಇತ್ತು ಎನ್ನಲಾಗುತ್ತಿದೆ.

ಮುಂಬೈ ದಾಳಿ: ರಾಣಾ ವಿಚಾರಣೆಯಿಂದ ಪತ್ತೆಯಾಗುವನೇ ದುಬೈ ವ್ಯಕ್ತಿ?

ತಹಾವ್ವುರ್‌ ರಾಣಾ.

ನವದೆಹಲಿ: ಮುಂಬೈ ತಾಜ್ ಹೊಟೇಲ್ ಭಯೋತ್ಪಾದಕ ದಾಳಿ (Mumbai attack) ನಡೆದು 15 ವರ್ಷಗಳ ಅನಂತರ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ತಹಾವ್ವುರ್‌ ರಾಣಾನನ್ನು (Tahawwur Rana) ವಿಚಾರಣೆಗಾಗಿ ಅಮೆರಿಕದಿಂದ (America) ಭಾರತಕ್ಕೆ ಕರೆ ತರಲಾಗಿದೆ. 26/11 ಮುಂಬೈ ಭಯೋತ್ಪಾದಕ ದಾಳಿಗೂ ಮೊದಲು ರಾಣಾ ದುಬೈನಲ್ಲಿ (Dubai) ಭೇಟಿಯಾಗಿದ್ದ ಎನ್ನಲಾದ ವ್ಯಕ್ತಿಯ ಹುಡುಕಾಟವನ್ನು ಈಗ ಭಯೋತ್ಪಾದನಾ ನಿಗ್ರಹ ಸಂಸ್ಥೆ (NIA) ಈಗ ಆರಂಭಿಸಿದೆ. ರಾಣಾ ಭೇಟಿಯಾಗಿದ್ದ ದುಬೈ ವ್ಯಕ್ತಿಗೆ ಮುಂಬೈ ದಾಳಿ ಸಂಚಿನ ಕುರಿತು ಸಂಪೂರ್ಣ ಮಾಹಿತಿ ಇತ್ತು ಎನ್ನಲಾಗುತ್ತಿದೆ.

ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ಮತ್ತು 26/11 ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿಯ ಬಾಲ್ಯ ಸ್ನೇಹಿತನಾಗಿರುವ 64 ವರ್ಷದ ರಾಣಾ ವಿಚಾರಣೆಯಿಂದ ಭಾರತದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿರುವ ಮುಂಬೈ ದಾಳಿಗೆ ದುಬೈ ಸಂಪರ್ಕ ಸಿಗುವ ಸಾಧ್ಯತೆ ಇದೆ ಎನ್ನುವ ನಂಬಿಕೆ ಎನ್ಐಎ ಅಧಿಕಾರಿಗಳದ್ದು. ಪಾಕಿಸ್ತಾನದ ಮಿಲಿಟರಿ ಶಾಲೆಯಲ್ಲಿ ರಾಣಾ ಮತ್ತು ಹೆಡ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರು.

ದುಬೈನಲ್ಲಿರುವ ವ್ಯಕ್ತಿ ಯಾರು?

ಮುಂಬೈ ದಾಳಿಗೆ ಮೊದಲು ರಾಣಾ ದುಬೈನಲ್ಲಿ ಭೇಟಿಯಾದ ವ್ಯಕ್ತಿ ಯಾರು ಎಂಬುದು ತಿಳಿದು ಬಂದಿಲ್ಲ. ಅಮೆರಿಕ ತನಿಖಾ ಸಂಸ್ಥೆಗಳು ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಂಡ ದಾಖಲೆಗಳ ಪ್ರಕಾರ ದುಬೈ ವ್ಯಕ್ತಿಗೆ ಮುಂಬೈ ದಾಳಿಗೂ ಮುನ್ನವೇ ಈ ಬಗ್ಗೆ ಮಾಹಿತಿ ಇತ್ತು ಎನ್ನಲಾಗಿದೆ. ಈ ವ್ಯಕ್ತಿಯ ಗುರುತು ಮತ್ತು ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎನ್ಐಎ ದೃಢಪಡಿಸಿದೆ.

ದಾವೂದ್ ಗಿಲಾನಿ ಎಂಬ ಹೆಸರಿನಿಂದ ಕರೆಯಲ್ಪಡುವ ಹೆಡ್ಲಿ 2008ರಲ್ಲಿ ರಾಣಾಗೆ ಭಾರತಕ್ಕೆ ಪ್ರಯಾಣಿಸದಂತೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದನು. ಇದು ಸನ್ನಿಹಿತ ಭಯೋತ್ಪಾದಕ ಕಾರ್ಯಾಚರಣೆಗಳ ಬಗ್ಗೆ ಸುಳಿವು ನೀಡಿತ್ತು. ದಾಳಿ ಸಮಯ ಹತ್ತಿರವಾಗಿದೆ ಎಂಬುದನ್ನು ದೃಢಪಡಿಸಿದ ದುಬೈಯ ಸಹ-ಸಂಚುಕೋರನನ್ನು ಭೇಟಿಯಾಗಲು ರಾಣಾಗೆ ಹೆಡ್ಲಿಯೇ ವ್ಯವಸ್ಥೆ ಮಾಡಿಕೊಟ್ಟಿದ್ದ ಎನ್ನಲಾಗಿದೆ.

ಇದನ್ನೂ ಓದಿ: Tahawwur Rana: ಮುಂಬೈ ದಾಳಿ ಉಗ್ರರಿಗೆ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದನಂತೆ ರಾಣಾ

ಎನ್ಐಎ ಮೂಲಗಳ ಪ್ರಕಾರ, ದುಬೈ ವ್ಯಕ್ತಿಯು ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI), ಪಾಕಿಸ್ತಾನದ ಮಿಲಿಟರಿ ಗುಪ್ತಚರ ಸಂಸ್ಥೆ, ಪಾಕಿಸ್ತಾನಿ ಸೇನೆಯ ಹಿರಿಯ ವ್ಯಕ್ತಿ ಅಥವಾ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪಿನ ನಾಯಕರೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ.

ರಾಣಾ ಮುಂಬೈನಲ್ಲಿ ತೆರೆದಿದ್ದ ತನ್ನ ವಲಸೆ ಸಲಹಾ ಕಚೇರಿಯ ಗುತ್ತಿಗೆಯನ್ನು 2008ರಲ್ಲಿ ರಾಣಾ ಮತ್ತು ಹೆಡ್ಲಿ ನವೀಕರಿಸಿರಲಿಲ್ಲ. ಈ ಕಚೇರಿಯನ್ನು ನಗರದ ಮೇಲಿನ ದಾಳಿಗೆ ಸಂಚು ರೂಪಿಸಲು ಬಳಸಿಕೊಂಡಿದ್ದರು ಎನ್ನಲಾಗುತ್ತದೆ.

ಎನ್ಐಎ ತನಿಖೆಯ ಪ್ರಕಾರ, ಭಾರತಕ್ಕೆ ಲಷ್ಕರ್-ಎ-ತೈಬಾದ ಸದಸ್ಯರನ್ನು ಕಳುಹಿಸುವ ಯೋಜನೆಯ ಬಗ್ಗೆ ಹೆಡ್ಲಿಯು ರಾಣಾಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.

ನಗರಗಳ ಮೇಲೆ ದಾಳಿ ಪ್ರಯತ್ನ

ಎನ್ಐಎ ಮೂಲಗಳ ಪ್ರಕಾರ ಮುಂಬೈ ಮೇಲೆ ನಡೆಸಿದ ಭಯೋತ್ಪಾದಕ ದಾಳಿಯಂತೆಯೇ ಇತರ ಭಾರತೀಯ ನಗರಗಳಲ್ಲಿ ಇದೇ ರೀತಿ ದಾಳಿಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ರಾಣಾನ ಪ್ರಯಾಣ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.

2008ರ ನವೆಂಬರ್ 13 ಮತ್ತು 21ರ ನಡುವೆ ರಾಣಾ ತನ್ನ ಪತ್ನಿ ಸಮ್ರಾಜ್ ರಾಣಾ ಅಖ್ತರ್ ಜತೆಗೆ ಅನೇಕ ಭಾರತೀಯ ನಗರಗಳಿಗೆ ಭೇಟಿ ನೀಡಿದ್ದ. ಉತ್ತರ ಪ್ರದೇಶದ ಹಾಪುರ್, ಆಗ್ರಾ, ದೆಹಲಿ, ಕೊಚ್ಚಿ, ಅಹಮದಾಬಾದ್ ಮತ್ತು ಮುಂಬೈ ನಗರಗಳಲ್ಲಿ ಅವರು ಸುತ್ತಾಡಿದ್ದು, ಇದು ದಾಳಿಯ ಯೋಜನೆಯ ಭಾಗವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

ಎನ್ಐಎ ತನಿಖೆ ವೇಳೆ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಹಲವು ಮಂದಿಯ ಮೇಲೆ ಶಂಕೆ ವ್ಯಕ್ತವಾಗಿದೆ. ಇವರಲ್ಲಿ ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್, ಎಲ್‌ಇಟಿಯ ಕಾರ್ಯಾಚರಣಾ ಕಮಾಂಡರ್ ಝಾಕಿ-ಉರ್-ರೆಹಮಾನ್ ಲಖ್ವಿ, ಸಾಜಿದ್ ಮಜೀದ್, ಇಲಿಯಾಸ್ ಕಾಶ್ಮೀರಿ, ಮೇಜರ್ ಅಬ್ದುರ್ ರೆಹಮಾನ್ ಅಥವಾ ಪಾಷಾ ಎಂದೂ ಕರೆಯಲ್ಪಡುವ ಅಬ್ದುರ್ ರೆಹಮಾನ್ ಹಾಶಿಮ್ ಸೈಯದ್ ಸೇರಿದ್ದಾರೆ.

ಇವರಲ್ಲಿ ಮೇಜರ್ ಇಕ್ಬಾಲ್ ಅಲಿಯಾಸ್ ಮೇಜರ್ ಅಲಿ ಮತ್ತು ಮೇಜರ್ ಸಮೀರ್ ಅಲಿಯಾಸ್ ಮೇಜರ್ ಸಮೀರ್ ಎಂಬವರು ಐಎಸ್‌ಐ ಅಧಿಕಾರಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿದ್ದಾರೆ ಎಂದು ಎನ್ಐಎ ಆರೋಪಿಸಿದೆ. ಇವರೆಲ್ಲರೂ ಮುಂಬೈ ದಾಳಿಯ ಯೋಜನೆಗೆ ಹಣಕಾಸು ವ್ಯವಸ್ಥೆ ಮಾಡಲು ಸಹಕರಿಸಿದ್ದಾರೆ ಎಂದು ಶಂಕಿಸಲಾಗಿದೆ.

ಎನ್ಐಎನ ಪ್ರಸ್ತುತ ಮಹಾನಿರ್ದೇಶಕರಾಗಿರುವ ಸದಾನಂದ ವಸಂತ್ ದಾತೆ 2008ರ ಮುಂಬೈ ದಾಳಿಯ ಸಮಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದರು. ಘಟನೆಯಲ್ಲಿ ಅವರು ಗಾಯಗೊಂಡಿದ್ದರು.

ರಾಣಾಗೆ ಬಿಗಿ ಭದ್ರತೆ

ರಾಣಾನನ್ನು ದೆಹಲಿಯ ಸಿಜಿಒ ಸಂಕೀರ್ಣದಲ್ಲಿರುವ ಎನ್‌ಐಎ ಪ್ರಧಾನ ಕಚೇರಿಯಲ್ಲಿರುವ ಸೆಲ್‌ನಲ್ಲಿ ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಮತ್ತು ದೆಹಲಿ ಪೊಲೀಸ್ ಸಿಬ್ಬಂದಿ ಕಾವಲಿನಲ್ಲಿ ಇರಿಸಲಾಗಿದೆ. ದಿನದ 24 ಗಂಟೆಗಳ ಕಾಲ ಕಣ್ಗಾವಲು ಇಡಲಾಗಿದೆ. ಪ್ರತಿ 24 ಗಂಟೆಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ರಾಣಾಗೆ ತಮ್ಮ ಕಾನೂನು ಸಲಹೆಗಾರರನ್ನು ಭೇಟಿ ಮಾಡಲು ಅನುಮತಿ ನೀಡಲಾಗಿದೆ.