‘ʼನಾವು ಒಂದೇ ದಿಕ್ಕಿನಲ್ಲಿ ಜತೆಗೆ ಸಾಗುತ್ತಿದ್ದೇವೆ’ʼ: ರಾಹುಲ್ ಗಾಂಧಿ ಭೇಟಿ ಬಳಿಕ ಶಶಿ ತರೂರ್ ಹೇಳಿಕೆ
Shashi Tharoor’s statement: ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರು, ಪಕ್ಷದೊಳಗಿನ ಸಂಬಂಧ ಮತ್ತು ಭವಿಷ್ಯದ ಬಗ್ಗೆ ಆತ್ಮವಿಶ್ವಾಸದ ಸಂದೇಶ ರವಾನಿಸಿದ್ದಾರೆ. ನಾವು ಒಂದೇ ದಿಕ್ಕಿನಲ್ಲಿ ಜತೆಗೆ ಸಾಗುತ್ತಿದ್ದೇವೆ ಎಂದು ಹೇಳಿದರು.
ಶಶಿ ತರೂರ್, ಕಾಂಗ್ರೆಸ್ ಮುಖಂಡ (ಸಂಗ್ರಹ ಚಿತ್ರ) -
ನವದೆಹಲಿ, ಜ. 29: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹೊಗಳಿದಂತೆ ಬರೆದಿದ್ದ ಸರಣಿ ಕಮೆಂಟ್‌ಗಳ ನಂತರ ಕಾಂಗ್ರೆಸ್ ಜತೆಗಿನ ಸಂಬಂಧ ಕ್ಷೀಣಿಸಿರುವ ಮತ್ತು ಆಘಾತಕಾರಿ ಬದಲಾವಣೆಯ ವದಂತಿಗಳನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ಶಶಿ ತರೂರ್ (Shashi Tharoor), ಗುರುವಾರ (ಜನವರಿ 29) ಬೆಳಗ್ಗೆ ಸಂಸತ್ ಭವನದಲ್ಲಿ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi) ಅವರೊಂದಿಗೆ 90 ನಿಮಿಷಗಳ ಕಾಲ ಚರ್ಚೆ ನಡೆಸಿದರು.
ನಾವು ತುಂಬಾ ಒಳ್ಳೆಯ, ರಚನಾತ್ಮಕ ಮತ್ತು ಸಕಾರಾತ್ಮಕ ಚರ್ಚೆ ನಡೆಸಿದೆವು. ಎಲ್ಲವೂ ಸರಿಯಾಗಿಯೇ ಇದೆ. ನಾವು ಒಂದೇ ದಿಕ್ಕಿನಲ್ಲಿ ಜತೆಗೆ ಸಾಗುತ್ತಿದ್ದೇವೆ ಎಂದು ಸಭೆಯ ನಂತರ ತರೂರ್ ಮಾಧ್ಯಮಗಳಿಗೆ ಹೇಳಿದರು. ತರೂರ್ ಹಲವು ಉನ್ನತ ಮಟ್ಟದ ಕಾಂಗ್ರೆಸ್ ಸಭೆಗಳಿಗೆ ಗೈರಾಗಿದ್ದರು. ಇದರಲ್ಲಿ ಈ ವರ್ಷದ ತಮ್ಮ ತವರು ರಾಜ್ಯವಾದ ಕೇರಳದಲ್ಲಿ ಚುನಾವಣೆಗೆ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ ಸಭೆಗಳೂ ಸೇರಿವೆ.
ತಮ್ಮ ಅಭಿಪ್ರಾಯಗಳು ಮತ್ತು ಕಳವಳಗಳನ್ನು ವ್ಯಕ್ತಪಡಿಸಲು ಖರ್ಗೆ ಮತ್ತು ಗಾಂಧಿ ಅವರನ್ನು ಭೇಟಿ ಮಾಡಲು ತರೂರ್ ಸಮಯ ಕೋರಿದ್ದಾರೆ ಮತ್ತು ಚುನಾವಣೆಗೆ ಮುನ್ನ ಆ ಕುಂದುಕೊರತೆಗಳನ್ನು ಪರಿಹರಿಸಲು ಪಕ್ಷವು ಪ್ರಯತ್ನಿಸುತ್ತದೆ ಎಂದು ಹೇಳಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಬಜೆಟ್ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಕರೆದ ಸಭೆಗೆ ಎರಡನೇ ಬಾರಿಗೂ ಸಂಸದ ಶಶಿ ತರೂರ್ ಗೈರು
ಕಳೆದ ವರ್ಷ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ತರೂರ್ ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಂತೆ ಕಾಣುತ್ತಿತ್ತು. ತಿರುವನಂತಪುರದಿಂದ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿರುವ ತರೂರ್, ಪ್ರಧಾನಿ ಬಿಕ್ಕಟ್ಟನ್ನು ನಿಭಾಯಿಸಿದ ರೀತಿಯನ್ನು ಪ್ರಶಂಸಿಸಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳು ಬಂದಿದ್ದವು. ಅವರಲ್ಲಿ ಹಲವರು ತರೂರ್ ಬಿಜೆಪಿ ಸೇರುವುದಕ್ಕಾಗಿ ಆಹ್ವಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದರು.
ಅಲ್ಲದೆ ಪ್ರಧಾನಿ ಮಾತನಾಡುತ್ತಿದ್ದ ಖಾಸಗಿ ಕಾರ್ಯಕ್ರಮದಲ್ಲಿ ತರೂರ್ ಭಾಗವಹಿಸಿದ್ದರು. ಇದಕ್ಕೆ ಕಾಂಗ್ರೆಸ್‌ನಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ನವೆಂಬರ್‌ನಲ್ಲಿ ತರೂರ್ ಭಾರತೀಯ ರಾಜಕೀಯವು ಒಂದು ಕುಟುಂಬ ವ್ಯವಹಾರ (Indian Politics Are a Family Business) ಎಂಬ ಶೀರ್ಷಿಕೆಯ ಲೇಖನ ಬರೆದಿದ್ದರು. ಇದರಲ್ಲಿ ಕಾಂಗ್ರೆಸ್ ಸೇರಿದಂತೆ ಕುಟುಂಬ ನಾಯಕತ್ವದ ಪಕ್ಷಗಳನ್ನು ಟೀಕಿಸಲಾಗಿತ್ತು. ಇದನ್ನು ಕೂಡ ಕಾಂಗ್ರೆಸ್ ವಿರೋಧಿಸಿತ್ತು. ಇದಕ್ಕೆ ಬಿಜೆಪಿಯು ಕಾಂಗ್ರೆಸ್‌ನ ಗಾಂಧಿ ಕುಟುಂಬದ ಬಗ್ಗೆ ಅಣಕವಾಡಿತ್ತು.
ಅಂದಹಾಗೆ, ಶಶಿ ತರೂರ್ ಮತ್ತು ಪಕ್ಷದ ನಡುವಿನ ಬಿರುಕು 2022ರ ಮಧ್ಯಭಾಗದಿಂದ ಸತತವಾಗಿ ಹೆಚ್ಚುತ್ತಿದೆ. 2019ರ ಕೇಂದ್ರ ಚುನಾವಣೆಯಲ್ಲಿನ ಸೋಲಿನೊಂದಿಗೆ ಪ್ರಾರಂಭಿಸಿ, ಸರಣಿ ಚುನಾವಣಾ ಸೋಲುಗಳ ನಂತರ ನಾಯಕತ್ವ ಬದಲಾವಣೆಯನ್ನು ಕೋರಿ ಆಗಿನ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ನಾಯಕರ ಗುಂಪಿನ ಭಾಗದಲ್ಲಿ ತರೂರ್ ಇದ್ದರು.