ದೆಹಲಿ, ಮೇ 26: ಸುಮಾರು ಎರಡು ವಾರಗಳಿಂದ ದೇಶದೆಲ್ಲೆಡೆ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ (BJP) ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹಾಸ್ಯ, ಮೀಮ್ಸ್ ಹಾಗೂ ವ್ಯಂಗ್ಯ ವಿಡಿಯೊಗಳ ಮೂಲಕ ಟೀಕೆ ಮಾಡಿಯೇ ಸಾಮಾಜಿಕ ಮಾಧ್ಯಮದಲ್ಲಿ ಸಿಜೆಪಿ ವೈರಲ್ ಆಗಿದೆ. ಇದೀಗ ಈ ಇಂಟರ್‌ನೆಟ್ ಸೆನ್ಸೇಷನ್ಗೆ ಪ್ರತಿಸ್ಪರ್ಧಿಯೊಂದು ಹುಟ್ಟಿಕೊಂಡಿದೆ. ನಿಜವಾದ ಜಿರಳೆ ನಾವು ಎಂದು ಪ್ರಮುಖ ರಾಜಕೀಯ ಪಕ್ಷವೊಂದು ಹೇಳಿದೆ. ಅದು ಬೇರಾವುದು ಅಲ್ಲ, ಕಾಂಗ್ರೆಸ್ ಯುವ ಘಟಕ-ಇಂಡಿಯನ್ ಯೂತ್ ಕಾಂಗ್ರೆಸ್ (IYC).
ಹೌದು, ಕಾಂಗ್ರೆಸ್ ಯುವ ಘಟಕ ಈ ಟ್ರೆಂಡ್‍ಗೆ ಸೇರ್ಪಡೆಯಾಗಿದೆ. ಹಾಡುಗಳು, ಮೀಮ್ಸ್‌ಗಳು ಹಾಗೂ ವಿಶೇಷ ವೆಬ್‌ಸೈಟ್‌ನೊಂದಿಗೆ ಯೂತ್ ಕಾಂಗ್ರೆಸ್ ಘಟಕವು ಇಂಡಿಯನ್ ಯೂತ್ ಕಾಕ್ರೋಚ್ ಎಂಬ ಹೊಸ ಅಭಿಯಾನ ಆರಂಭಿಸಿದೆ. ಇದಕ್ಕಾಗಿ ವಿಶೇಷ ಹಾಡುಗಳಿರುವ ವಿಡಿಯೊಗಳು, ಮೀಮ್ಸ್‌ಗಳು, ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದೆ. ಯುವಜನರ ಗಮನ ಸೆಳೆಯುವ ರೀತಿಯಲ್ಲಿ ರಾಜಕೀಯ ಸಂದೇಶವನ್ನು ತಲುಪಿಸುವುದು ತಮ್ಮ ಉದ್ದೇಶ ಎಂದು ಯುವ ಕಾಂಗ್ರೆಸ್ ಹೇಳುತ್ತಿದೆ.
ಇಲ್ಲಿದೆ ಯೂತ್ ಕಾಂಗ್ರೆಸ್ ಪೋಸ್ಟ್:
ತಾವು ನಿಜವಾದ ಜಿರಳೆಗಳು ಎಂದು ಯುವ ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಷ್ಟೇ ಸೀಮಿತವಾಗಿರುವ ಸಿಜೆಪಿಗಿಂತ ತಮ್ಮ ಪಕ್ಷ ಭಿನ್ನವಾಗಿದೆ. ತಾವು ಜನರ ನಡುವೆ ನೇರವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದೆ.
ʼʼನಿಜವಾದ ಜಿರಳೆ ಅಭಿಯಾನವು ಕೇವಲ ಸಾಮಾಜಿಕ ಮಾಧ್ಯಮ ಕ್ರಾಂತಿಯಲ್ಲ. ಅದು ಸಮಾಜದಲ್ಲೇ ಇದ್ದು, ವ್ಯವಸ್ಥೆಯನ್ನು ದಿಟ್ಟವಾಗಿ ಎದುರಿಸಬೇಕುʼʼ ಎಂದು ಯುವ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.
ಪಶ್ಚಿಮ ಬಂಗಾಳ ಚುನಾವಣೆಯ ಹೀನಾಯ ಸೋಲಿನ ಬಳಿಕ ಬದಲಾದ ಮಮತಾ ಬ್ಯಾನರ್ಜಿ ಸ್ಟ್ರಾಟಜಿ
ನಿಜವಾದ ಜಿರಳೆಗಳು ನಾವು ಎನ್ನುತ್ತಿರುವ ಯುವ ಕಾಂಗ್ರೆಸ್, ಹೋರಾಟ ಮತ್ತು ಸಾಮಾಜಿಕ ಚಟುವಟಿಕೆಗಳು ಕೇವಲ ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿರಬಾರದು ಎಂದು ವಾದಿಸಿದೆ. ನೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕೇಂದ್ರದ ವಿರುದ್ಧ ನಡೆದ ಪ್ರತಿಭಟನೆಯ ವಿಡಿಯೊವನ್ನು ಪೋಸ್ಟ್ ಮಾಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಯುಜಿಸಿ-ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರವನ್ನು ಟೀಕಿಸಿದ್ದಾರೆ. ನಿಜವಾದ ಜಿರಳೆ ಕೇವಲ ಸಾಮಾಜಿಕ ಮಾಧ್ಯಮದ ಕ್ರಾಂತಿಕಾರಿಯಲ್ಲ. ನೆಲದ ಮೇಲೆ ನಿಂತು ವ್ಯವಸ್ಥೆಯ ವಿರುದ್ಧ ಹೋರಾಡಬೇಕು ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ.
ಯುವ ಕಾಂಗ್ರೆಸ್ ‘ಜಿರಳೆ’ ಅಭಿಯಾನದ ಅಡಿಯಲ್ಲಿ ಹಂಚಿಕೊಂಡಿರುವ ವಿಡಿಯೊಗಳು ಯುಜಿಸಿ-ನೀಟ್ ಪತ್ರಿಕೆ ಸೋರಿಕೆ, ನಿರುದ್ಯೋಗ ಮತ್ತು ಭಾರತದಲ್ಲಿ ಇಂಧನ ಬೆಲೆ ಏರಿಕೆಯಂತಹ ವಿಷಯಗಳ ಕುರಿತು ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧದ ಪ್ರತಿಭಟನೆಗಳನ್ನು ಒಳಗೊಂಡಿವೆ.
ವಿಡಿಯೊಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಸರ್ಕಾರಿ ಕಚೇರಿಗಳ ಹೊರಗೆ ಪ್ರತಿಭಟನೆ ನಡೆಸಿರುವುದು ಮತ್ತು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗುವುದನ್ನು ತೋರಿಸಲಾಗಿದೆ.