ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳದಲ್ಲಿ ಸಚಿವ ಸಂಪುಟ ವಿಸ್ತರಣೆ; 35 ಬಿಜೆಪಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

West Bengal Cabinet Expansion: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ ಸ್ವಪನ್ ದಾಸ್‌ಗುಪ್ತಾ, ತಪಸ್ ರಾಯ್ ಮತ್ತು ಶಂಕರ್ ಘೋಷ್ ಸೇರಿ 35 ಬಿಜೆಪಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುವೇಂದು ಅಧಿಕಾರಿ ಮೇ 9ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ಸಚಿವ ಸಂಪುಟ ವಿಸ್ತರಣೆ

ಕೋಲ್ಕತ್ತಾ, ಜೂ. 1: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ (West Bengal CM Suvendu Adhikari) ನೇತೃತ್ವದ ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ ಸ್ವಪನ್ ದಾಸ್‌ಗುಪ್ತಾ, ತಪಸ್ ರಾಯ್ ಮತ್ತು ಶಂಕರ್ ಘೋಷ್ ಸೇರಿ 35 ಬಿಜೆಪಿ ಶಾಸಕರು (BJP MLAs) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್. ರವಿ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.

55 ವರ್ಷದ ಸುವೇಂದು ಅಧಿಕಾರಿ ಮೇ 9ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರು ವಾರಗಳ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಿತು. 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 208 ಸ್ಥಾನಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿ ಬಿಜೆಪಿ ಸರ್ಕಾರ ಸ್ಥಾಪಿಸಿತು. ಈ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು.

ಅಧಿಕಾರಿ ಜತೆ ಬಿಜೆಪಿ ಶಾಸಕರಾದ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ನಿಸಿತ್ ಪ್ರಾಮಾಣಿಕ್, ಅಶೋಕ್ ಕೀರ್ತಾನಿಯಾ ಮತ್ತು ಕ್ಷುದಿರಾಮ್ ತುಡು ಕೂಡ ಮೇ 9ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಮಮತಾ ಬ್ಯಾನರ್ಜಿ ಆಡಳಿತದಲ್ಲಿ ನಿರ್ಲಕ್ಷಿಸಲ್ಪಟ್ಟ ಮಹಿಳಾ ಪೊಲೀಸ್‌ ಅಧಿಕಾರಿಗೆ ಉನ್ನತ ಜವಾಬ್ದಾರಿ ನೀಡಿದ ಸುವೇಂದು ಅಧಿಕಾರಿ

ಸಚಿವ ಸಂಪುಟಕ್ಕೆ ಸದಸ್ಯರ ಸೇರ್ಪಡೆ ಕುರಿತು ಅಧಿಕಾರಿ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಕಳೆದ ವಾರ ನವದೆಹಲಿಯಲ್ಲಿ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಸಭೆ ನಡೆಸಿದ್ದರಿಂದ ಈ ವಾರ ಸಚಿವ ಸಂಪುಟ ವಿಸ್ತರಣೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು.

35 ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನಂತರ, ಸಂಪುಟದ ಬಲ ಈಗ 41 ಆಗಿದೆ. ಬಿಜೆಪಿ ಶಾಸಕರಾದ ಸ್ವಪನ್ ದಾಸ್‌ಗುಪ್ತ, ದೂದ್ ಕುಮಾರ್ ಮೊಂಡಲ್, ದೀಪಕ್ ಬರ್ಮನ್, ಮನೋಜ್ ಓರಾನ್, ಗೌರಿ ಶಂಕರ್ ಘೋಷ್, ಅರ್ಜುನ್ ಸಿಂಗ್, ತಪಸ್ ರಾಯ್, ಸರದ್ವತ್ ಮುಖರ್ಜಿ, ಜಗನ್ನಾಥ್ ಚಟ್ಟೋಪಾಧ್ಯಾಯ ಮತ್ತು ಶಂಕರ್ ಘೋಷ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪಕ್ಷದ ಶಾಸಕರಾದ ರಾಜೇಶ್ ಮಹಾತಾ, ಇಂದ್ರನೀಲ್ ಖಾನ್ ಮತ್ತು ಮಾಲತಿ ರಾವ ರಾಯ್ ಸ್ವತಂತ್ರ ಉಸ್ತುವಾರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಶಾಸಕರಾದ ಸಂತಾನು ಪ್ರಮಾಣಿಕ್, ಪೂರ್ಣಿಮಾ ಚಕ್ರವರ್ತಿ, ಉಮೇಶ್ ರೈ, ಜೋಯೆಲ್ ಮುರ್ಮು, ಅಶೋಕ್ ದಿಂಡಾ, ಆನಂದಮೋಯ್ ಬರ್ಮನ್, ಕೌಶಿಕ್ ಚೌಧರಿ, ಗಾರ್ಗಿ ದಾಸ್ ಘೋಷ್, ಭಾಸ್ಕರ್ ಭಟ್ಟಾಚಾರ್ಯ, ದಿಬಾಕರ್ ಘರಾಮಿ ಮತ್ತು ಸುಮನಾ ಸರ್ಕಾರ್ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.