ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯಲ್ಲಿ ಭಾರತ ಮೇಲುಗೈ ಸಾಧಿಸಿದ್ದೇಗೆ? ಮಾಜಿ ಸಿಡಿಎಸ್‌ ಅನಿಲ್‌ ಚೌಹಾಣ್‌ ವಿವರಿಸಿದ್ರು ಕಾರಣ

Operation Sindoor: ಭಾರತದ ರಕ್ಷಣಾ ಸಿಬ್ಬಂದಿ ಮಾಜಿ ಮುಖ್ಯಸ್ಥ (CDS) ಜನರಲ್ ಅನಿಲ್ ಚೌಹಾಣ್ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಸಂಬಂಧಿಸಿದ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ. ಸಂಘರ್ಷದ ಹಂತಗಳಲ್ಲಿ ಗೆಲುವಿನ ಮುಕ್ತಾಯವು ಯಾವಾಗಲೂ ಭಾರತದ್ದೇ ಆಗಿರಬೇಕು ಎಂಬುದು ತಮ್ಮ ತತ್ವವಾಗಿತ್ತು ಎಂದು ಹೇಳಿದ್ದಾರೆ.

ಮಾಜಿ ಸಿಡಿಎಸ್‌ (CDS) ಜನರಲ್ ಅನಿಲ್ ಚೌಹಾಣ್ (ಸಂಗ್ರಹ ಚಿತ್ರ)

ನವದೆಹಲಿ, ಆ. 26: ಭಾರತದ ಮಾಜಿ ಸಿಡಿಎಸ್ (CDS) ಜನರಲ್ ಅನಿಲ್ ಚೌಹಾಣ್ (Anil Chauhan) ಆಪರೇಷನ್ ಸಿಂದೂರ್‌ (Operation Sindhoor) ಕಾರ್ಯಾಚರಣೆಗೆ ಸಂಬಂಧಿಸಿದ ಕಾರ್ಯತಂತ್ರದ ತಾಂತ್ರಿಕತೆ ಹಾಗೂ ತೆರೆಯ ಮರೆಯ ನಿರ್ಧಾರಗಳ ಕುರಿತು ಹೊಸ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷ 26 ಜನರನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದನಾ (Pahalgam terror attack) ದಾಳಿಗೆ ಪ್ರತಿಕಾರವಾಗಿ, ಭಾರತವು ಪಾಕಿಸ್ತಾನದ ವಿರುದ್ಧ ಮೇಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿತ್ತು.

ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ (PoK) ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಸಂಯೋಜಿತ ದಾಳಿಯನ್ನು ಸಂಘಟಿಸಿದ್ದವು. ಅಂತಿಮವಾಗಿ ಪಾಕಿಸ್ತಾನವು ಕದನ ವಿರಾಮಕ್ಕೆ ವಿನಂತಿಸಿತ್ತು.

ನವದೆಹಲಿಯ ವಿವೇಕಾನಂದ ಕೇಂದ್ರದಲ್ಲಿ ಮಾತನಾಡಿದ ಜನರಲ್ ಅನಿಲ್ ಚೌಹಾಣ್, ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಪ್ರಮುಖ ತತ್ವವೆಂದರೆ, ಉಭಯ ದೇಶಗಳ ನಡುವಿನ ಸಂಘರ್ಷ ಹೆಚ್ಚಾದಾಗ ಭಾರತವೇ ಅಂತಿಮ ದಾಳಿ ನಡೆಸಿರುವುದನ್ನು ಖಚಿತಪಡಿಸಿಕೊಳ್ಳುವುದಾಗಿತ್ತು ಎಂದು ತಿಳಿಸಿದರು. ಸಂಘರ್ಷದ ಹಂತಗಳಲ್ಲಿ ಅಂತಿಮ ದಾಳಿ ಅಥವಾ ಗೆಲುವಿನ ಮುಕ್ತಾಯವು ಯಾವಾಗಲೂ ಭಾರತದಿಂದಲೇ ಇರಬೇಕು, ಪಾಕಿಸ್ತಾನಿಗಳಿಂದಲ್ಲ ಎಂಬುದು ಪ್ರಮುಖ ತತ್ವವಾಗಿತ್ತು ಎಂದು ಅವರು ವಿವರಿಸಿದರು.

ಇಲ್ಲಿದೆ ವಿಡಿಯೊ:



ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಸಮಯದಲ್ಲಿ ಸಿಡಿಎಸ್ ಆಗಿದ್ದ ಜನರಲ್ ಅನಿಲ್ ಚೌಹಾಣ್, ಪಾಕಿಸ್ತಾನವು ಮಾತುಕತೆಗೆ ಸಿದ್ಧವಿರುವುದಾಗಿ ಸೂಚನೆ ನೀಡಿದ ನಂತರ, ಅಲ್ಲಿನ ಸರ್ಗೋಧಾ (Sargodha) ವಾಯುನೆಲೆಯ ಮೇಲೆ ದಾಳಿ ನಡೆಸಬೇಕೇ ಎಂದು ಭಾರತೀಯ ವಾಯುಸೇನೆಯ ಮುಖ್ಯಸ್ಥರು ತಮ್ಮನ್ನು ಕೇಳಿದ್ದರು ಎಂದು ತಿಳಿಸಿದ್ದಾರೆ.

ʻಆಪರೇಷನ್ ಸಿಂಧೂರ್‌ʼ ಕುರಿತ ಸಿನಿಮಾ ಮಾಡಲಿದ್ದಾರೆ ʻಕಾಶ್ಮೀರ್‌ ಫೈಲ್ಸ್‌ʼ ವಿವೇಕ್‌ ಅಗ್ನಿಹೋತ್ರಿ

ಸುಮಾರು 10 ಗಂಟೆಗೆ ಪಾಕಿಸ್ತಾನದವರು ಮಾತುಕತೆಗೆ ಇಚ್ಛೆ ವ್ಯಕ್ತಪಡಿಸಿದರೂ, ವಾಯುಸೇನಾ ಮುಖ್ಯಸ್ಥರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಸರ್ಗೋಧಾ ಮೇಲೆ ದಾಳಿ ನಡೆಸಲು ಚೌಹಾಣ್ ಸೂಚಿಸಿದ್ದರು. ವಾಯುಸೇನೆಯು ಎರಡು ಹೆಚ್ಚುವರಿ ಗುರಿಗಳನ್ನು ಗುರುತಿಸಬೇಕೆಂದು ಸೂಚಿಸಲಾಗಿತ್ತು, ಅದರಲ್ಲಿ ಒಂದಾಗಿದ್ದ 'ಸ್ಕರ್ದು' (Skardu) ಮೇಲಿನ ದಾಳಿಯನ್ನು ಪ್ರತಿಕೂಲ ಹವಾಮಾನದ ಕಾರಣದಿಂದ ಬದಲಾಯಿಸಬೇಕಾಯಿತು ಎಂದು ಅವರು ತಿಳಿಸಿದರು.

“ಭಾರತದ ಗೆಲುವಿಗೆ ಕೆಲವು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಬೇಕಾದರೆ, ನಾವು ಉತ್ತಮ ನೆಟ್‌ವರ್ಕ್ ಸಂಪರ್ಕವನ್ನು ಹೊಂದಿದ್ದರಿಂದ ನಮ್ಮಲ್ಲಿ ಉತ್ತಮ ಸನ್ನಿವೇಶದ ಅರಿವು ಮತ್ತು ಉತ್ತಮ ರಣರಂಗದ ಪಾರದರ್ಶಕತೆ ಇತ್ತು” ಎಂದು ಅವರು ಹೇಳಿದರು.

ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳಿಂದ ಲಭ್ಯವಾದ ಮಾಹಿತಿಗಳು ಒಂದು ಸಾಮಾನ್ಯ ಕಾರ್ಯಾಚರಣೆಯ ಚಿತ್ರಣದಲ್ಲಿ ಲಭ್ಯವಿದ್ದವು. ಇದು ಕಮಾಂಡರ್‌ಗಳಿಗೆ ರಣರಂಗದ ಬಗ್ಗೆ ಹೆಚ್ಚು ಸಮಗ್ರವಾದ ತಿಳುವಳಿಕೆಯೊಂದಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿತು. ಹೀಗಾಗಿ ನಾವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ಚೌಹಾಣ್ ಹೇಳಿದರು.