ʻಆಪರೇಷನ್ ಸಿಂಧೂರ್ʼ ಕುರಿತ ಸಿನಿಮಾ ಮಾಡಲಿದ್ದಾರೆ ʻಕಾಶ್ಮೀರ್ ಫೈಲ್ಸ್ʼ ವಿವೇಕ್ ಅಗ್ನಿಹೋತ್ರಿ; ಅದ್ರೆ, ಡೈರೆಕ್ಟರ್ ಬಗ್ಗೆ ನೆಟ್ಟಿಗರಿಗೆ ಬೇಸರವೇಕೆ?
Operation Sindoor Movie: ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ 'ಆಪರೇಷನ್ ಸಿಂಧೂರ್' ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. 2025ರಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ನಡೆಸಿದ ಗುಪ್ತ ಕಾರ್ಯಾಚರಣೆಯ ಕಥೆ ಇದಾಗಿದೆ. ಈ ಚಿತ್ರಕ್ಕೆ ಭೂಷಣ್ ಕುಮಾರ್ ನಿರ್ಮಾಪಕರು.
-
ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಚಿತ್ರವು ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ, ʻದಿ ಕಾಶ್ಮೀರ್ ಫೈಲ್ಸ್ʼ ಖ್ಯಾತಿಯ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ತಮ್ಮ ಮುಂದಿನ ಪ್ರಾಜೆಕ್ಟ್ ಘೋಷಿಸುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಭಾರತೀಯ ಸೇನೆಯ ಶೌರ್ಯ ಮತ್ತು ಸತ್ಯಗಳನ್ನು ಆಧರಿಸಿದ ಈ ಚಿತ್ರಕ್ಕೆ 'ಆಪರೇಷನ್ ಸಿಂಧೂರ್' (Operation Sindoor) ಎಂದು ಹೆಸರಿಡಲಾಗಿದೆ. ಟಿ-ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಇದರ ನಿರ್ಮಾಪಕರು.
ಕಳೆದ ವರ್ಷ ನಡೆದಿದ್ದ ಆಪರೇಷನ್ ಸಿಂಧೂರ್?
2025ರಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಅಮಾಯಕ ನಾಗರಿಕರು ಮತ್ತು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರವು ನಡೆಸಿದ ಗುಪ್ತ ಕಾರ್ಯಾಚರಣೆಯೇ 'ಆಪರೇಷನ್ ಸಿಂಧೂರ್'. ಪಾಕಿಸ್ತಾನ ಮತ್ತು ಪಿಒಕೆ (PoK) ಒಳಗಿರುವ ಭಯೋತ್ಪಾದಕ ಜಾಲಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಇದಾಗಿತ್ತು. ಈ ದಾಳಿಯ ಹಂತ-ಹಂತದ ವಿವರಗಳನ್ನು ನಿಖರವಾಗಿ ಈ ಸಿನಿಮಾ ತೆರೆದಿಡಲಿದೆಯಂತೆ.
ಲೆಫ್ಟಿನೆಂಟ್ ಜನರಲ್ ಕೆ. ಜೆ. ಎಸ್. ʻಟೈನಿʼ ಧಿಲ್ಲೋನ್ ಅವರು ಬರೆದ 'ಆಪರೇಷನ್ ಸಿಂಧೂರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟ್ರೈಕ್ಸ್ ಇನ್‌ಸೈಡ್ ಪಾಕಿಸ್ತಾನ್' ಎಂಬ ಪುಸ್ತಕವನ್ನು ಆಧರಿಸಿ 'ಆಪರೇಷನ್ ಸಿಂಧೂರ್ʼ ಸಿನಿಮಾ ಮಾಡಲಾಗುತ್ತಿದೆ. ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಗೆ ಭಾರತ ನೀಡಿದ ಪ್ರಬಲ ಪ್ರತ್ಯುತ್ತರ ಮತ್ತು ಸೇನೆಯ ಸಾಹಸಗಾಥೆಯನ್ನು ಈ ಸಿನಿಮಾವು ಅನಾವರಣಗೊಳಿಸಲಿದೆಯಂತೆ
ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ದೇಶವೊಂದು ಮತ್ತೊಂದು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ದೇಶದೊಳಗೆ ನುಗ್ಗಿ ಇಷ್ಟು ನಿಖರವಾದ ದಾಳಿ ನಡೆಸಿರುವುದು ವಿಶ್ವದ ಇತಿಹಾಸದಲ್ಲೇ ಇದು ಮೊದಲಾಗಿದೆ. ಈ ಕಾರ್ಯಾಚರಣೆಯ ಮೂಲಕ ಭಾರತವು ಭಯೋತ್ಪಾದನಾ ಶಿಬಿರಗಳನ್ನು ಧ್ವಂಸಗೊಳಿಸಿರುವುದಲ್ಲದೆ, ಆಧುನಿಕ ಯುದ್ಧತಂತ್ರದಲ್ಲಿ ತನ್ನ ತಾಕತ್ತು ಏನೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿತ್ತು.
ಏಷ್ಯಾ ಕಪ್ ಪಂದ್ಯದ ಸಂಭಾವನೆಯನ್ನು 'ಆಪರೇಷನ್ ಸಿಂಧೂರ್ ಸಂತ್ರಸ್ತರಿಗೆ' ನೀಡಿದ ಸಲ್ಮಾನ್ ಆಘಾ!
ಈ ಚಿತ್ರದ ಬಗ್ಗೆ ನಿರ್ದೇಶಕ ವಿವೇಕ್ ಏನಂತಾರೆ?
"ಇದು ಕೇವಲ ಒಂದು ಸಿನಿಮಾವಲ್ಲ, ಇದನ್ನು ಬಹಿರಂಗಪಡಿಸುವಿಕೆ ಎನ್ನಬಹುದು. 'ಆಪರೇಷನ್ ಸಿಂಧೂರ್' ಮೂಲಕ ಭಾರತವು ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡಿರುವುದಷ್ಟೇ ಅಲ್ಲದೆ, ಆಧುನಿಕ ಯುದ್ಧತಂತ್ರದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ನಾವು ಭಾರತೀಯ ಸಶಸ್ತ್ರ ಪಡೆಗಳ ವಿವಿಧ ವಿಭಾಗಗಳ ಸಹಯೋಗದೊಂದಿಗೆ ವ್ಯಾಪಕವಾದ ಸಂಶೋಧನೆ ನಡೆಸಿದ್ದೇವೆ" ಎಂದು ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.
ವಿವೇಕ್ ಅಗ್ನಹೋತ್ರಿ ಹಂಚಿಕೊಂಡ ಟ್ವೀಟ್
Bhushan Kumar and I have joined forces for #OperationSindoor— a story that redefined security in the subcontinent and exposed Pakistan’s nuclear bluff. The film is based on Lt Gen K.J.S. ‘Tiny’ Dhillon’s book Operation Sindoor: The Untold Story of India’s Deep Strikes Inside… pic.twitter.com/etequTSM6a
— Vivek Ranjan Agnihotri (@vivekagnihotri) March 26, 2026
ಕೇಳಿಬಂತು ಬೇಸರದ ಮಾತು
ಈ ಮಧ್ಯೆ ಅನೇಕರು ಈ ಚಿತ್ರಕ್ಕೆ ನಿರ್ದೇಶಕರನ್ನಾಗಿ ವಿವೇಕ್ ಅವರನ್ನು ಆಯ್ಕೆ ಮಾಡಿರುವುದನ್ನು ಟೀಕಿಸಿದ್ದಾರೆ. ಇಂತಹ ಗಂಭೀರ ಮತ್ತು ಸಾಮರ್ಥ್ಯವಿರುವ ಕಥೆಗೆ ಆದಿತ್ಯ ಧರ್ ಅವರಂತಹ ನಿರ್ದೇಶಕರು ಮಾತ್ರ ನ್ಯಾಯ ಸಲ್ಲಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ಮೂಲಕ ವಿವೇಕ್ ಹಿಟ್ ನೀಡಿದ್ದರೂ, ನಂತರದ 'ದಿ ವ್ಯಾಕ್ಸಿನ್ ವಾರ್' ಮತ್ತು 'ದಿ ಬೆಂಗಾಲ್ ಫೈಲ್ಸ್' ಬಾಕ್ಸ್ ಆಫೀಸ್‌ನಲ್ಲಿ ಸೋತಿವೆ. ಅಲ್ಲದೆ, ಆದಿತ್ಯ ಧರ್ ಅವರ 'ಧುರಂಧರ್' ಸಿನಿಮಾದ ಯಶಸ್ಸನ್ನು ವಿವೇಕ್ ಪ್ರಶಂಸಿಲ್ಲ. ಅದು ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.