Saudi-Pakistan: ಸೌದಿ- ಪಾಕಿಸ್ತಾನದ ಒಪ್ಪಂದ; ಭಾರತಕ್ಕಿದು ಎಚ್ಚರಿಕೆಯ ಗಂಟೆಯಾ?
ಪಾಕಿಸ್ತಾನ (Pakistan) ಮತ್ತು ಸೌದಿ ಅರೇಬಿಯಾ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿವೆ. ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಸೌದಿ ನಮ್ಮನ್ನು ರಕ್ಷಿಸಲಿದೆ ಎಂದು ಪಾಕಿಸ್ತಾನ ಈಗಾಗಲೇ ಹೇಳಿದೆ. ಈ ಮೂಲಕ ಉಭಯ ದೇಶಗಳು ಮಿಲಿಟರಿ ಒಪ್ಪಂದವನ್ನು ಮಾಡಿಕೊಂಡಿವೆ.

-

ನವದೆಹಲಿ: ಪಾಕಿಸ್ತಾನ (Saudi-Pakistan) ಮತ್ತು ಸೌದಿ ಅರೇಬಿಯಾ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿವೆ. ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಸೌದಿ ನಮ್ಮನ್ನು ರಕ್ಷಿಸಲಿದೆ ಎಂದು ಪಾಕಿಸ್ತಾನ ಈಗಾಗಲೇ ಹೇಳಿದೆ. ಈ ಮೂಲಕ ಉಭಯ ದೇಶಗಳು ಮಿಲಿಟರಿ ಒಪ್ಪಂದವನ್ನು ಮಾಡಿಕೊಂಡಿವೆ. ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಆಹ್ವಾನದ ಮೇರೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಸೌದಿ ರಾಜಧಾನಿ ರಿಯಾದ್‌ಗೆ ಭೇಟಿ ನೀಡಿದ್ದು, ಎರಡೂ ದೇಶಗಳ ನಾಯಕರು ಸೆ.18ರಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಉಭಯ ದೇಶಗಳ ಪೈಕಿ ಯಾವ ದೇಶದ ಮೇಲೆ ದಾಳಿ ನಡೆದರೂ, ಅದನ್ನು ಎರಡೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ನೂತನ ಒಪ್ಪಂದ ಘೋಷಿಸಿದೆ.
ಸೌದಿ ಮತ್ತು ಪಾಕಿಸ್ತಾನಗಳ ಸಂಬಂಧ ಬಹಳ ಹಿಂದಿನಿಂದಲೇ ಇದೆ. 1947ರಲ್ಲಿ ಪಾಕಿಸ್ತಾನವನ್ನು ನೂತನ ದೇಶವೆಂದು ಅಧಿಕೃತವಾಗಿ ಗುರುತಿಸಿದ ಆರಂಭಿಕ ದೇಶಗಳಲ್ಲಿ ಸೌದಿ ಅರೇಬಿಯಾ ಕೂಡ ಸೇರಿತ್ತು. 1951ರಲ್ಲಿ ಉಭಯ ದೇಶಗಳು ಸ್ನೇಹ ಒಪ್ಪಂದವನ್ನು ಮಾಡಿಕೊಂಡಿದ್ದವು. 1960ರ ಬಳಿಕ ಪಾಕಿಸ್ತಾನ ಸೌದಿ ಅರೇಬಿಯಾಗೆ ತನ್ನ ಸೇನಾ ಪಡೆಗಳನ್ನು ತರಬೇತಿಗೆಂದು ಕಳುಹಿಸಿತ್ತು. ಸೌದಿಯೂ ಹಲವು ಬಾರಿ ಪಾಕಿಸ್ತಾನಕ್ಕೆ ಆರ್ಥಿಕವಾಗಿ ನೆರವಾಗಿದೆ. ಇದೀಗ ಮತ್ತೆ ಎರಡೂ ರಾಷ್ಟ್ರಗಳು ಅಧಿಕೃತವಾಗಿ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕಿವೆ.
ಇತ್ತೀಚೆಗೆ ಸೆಪ್ಟೆಂಬರ್ 9 ರಂದು ಇಸ್ರೇಲ್ ಕತಾರ್‌ನ ರಾಜಧಾನಿ ದೋಹಾದ ಮೇಲೆ ದಾಳಿ ನಡೆಸಿತ್ತು. ಸ್ಥಳೀಯ ದೇಶಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಅರಬ್ ದೇಶಗಳನ್ನು ಚಿಂತೆಗೆ ದೂಡಿವೆ. ಅದರಲ್ಲಿಯೂ ಅಮೆರಿಕದಂತಹ ಬಲಿಷ್ಠ ರಾಷ್ಟ್ರ ಇಸ್ರೇಲ್ ಬೆನ್ನಿಗೆ ನಿಂತಿದೆ. ಸೌದಿ ಅರೇಬಿಯಾ ತೈಲ ಸಂಪನ್ನ ರಾಷ್ಟ್ರವಾಗಿರುವುದರಿಂದ ಆರ್ಥಿಕವಾಗಿ ಸಮೃದ್ಧಿ ಹೊಂದಿದೆ. ಆದರೆ, ಅದು ಈವರೆಗೆ ಪರಮಾಣು ಅಸ್ತ್ರಗಳನ್ನು ಹೊಂದಿಲ್ಲ. ಇದಕ್ಕೆ ಪ್ರಮುಖ ಕಾರಣ ಅಮೆರಿಕದೊಂದಿಗಿನ ಸ್ನೇಹ. ಸೌದಿ ಅಮೆರಿಕಕ್ಕೂ ಕಚ್ಚಾತೈಲ ಪೂರೈಸುತ್ತಿದ್ದು, ಅದರ ಬದಲಿಗೆ ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಸೇನಾ ತಂತ್ರಜ್ಞಾನದಲ್ಲಿಯೂ ಸೌದಿ ಅಮೆರಿಕದಿಂದ ನೆರವನ್ನು ಪಡೆಯುತ್ತಿತ್ತು. ಇದೀಗ ಸೆಪ್ಟೆಂಬರ್ 8ರಿಂದ 10ರವರೆಗಿನ 72 ಗಂಟೆಗಳಲ್ಲಿ ಇಸ್ರೇಲ್ ಆರು ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ದಾಳಿ ನಡೆಸಿತು. ಈ ದಾಳಿಗಳಲ್ಲಿ 200 ಜನರು ಪ್ರಾಣ ಕಳೆದುಕೊಂಡರೆ ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ದೋಹಾದ ಮೇಲಿನ ದಾಳಿ ಅರೇಬಿಕ್ ದೇಶಗಳನ್ನು ಬೆಚ್ಚಿಬೀಳಿಸಿದ್ದು, ಇಸ್ರೇಲ್‌ನ ಮುಂದಿನ ದಾಳಿ ಸೌದಿ, ಇರಾನ್ ಹಾಗೂ ಟರ್ಕಿ ಎಂದು ಹೇಳಲಾಗುತ್ತಿದೆ.
ದಾಳಿಯಿಂದ ರಕ್ಷಿಸಿಕೊಳ್ಳಲು ಸೌದಿ ಪಾಕಿಸ್ತಾನದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎನ್ನುತ್ತಾರೆ ರಕ್ಷಣಾ ವಿಶ್ಲೇಷಕರು. ಭವಿಷ್ಯದಲ್ಲಿ ಸೌದಿ ಅರೇಬಿಯಾ ಇಸ್ರೇಲ್ ಅಥವಾ ಇತರ ದೈತ್ಯ ರಾಷ್ಟ್ರದಿಂದ ದಾಳಿಗೆ ಒಳಗಾದರೆ, ಪಾಕ್‌ನ ಅಣ್ವಸ್ತ್ರಗಳನ್ನು ಬಳಸಬಹುದು. ಸೌದಿ ಅರೇಬಿಯಾ ತಾನು ಪರಮಾಣು ಶಸ್ತ್ರಾಸ್ತ್ರಗಳನ್ನು ಬಯಸುವುದಿಲ್ಲ ಎಂದು ಹಲವಾರು ಬಾರಿ ಸ್ಪಷ್ಟವಾಗಿ ಹೇಳಿದ್ದರೂ, ಪಾಕ್ ಮಾತ್ರ ಅಣ್ವಾಸ್ತ್ರದ ಕುರಿತು ಜಗತ್ತಿನೆದರು ಮಾತನಾಡುತ್ತಿದೆ.
ಭಾರತದೊಂದಿಗಿನ ಸಂಘರ್ಷದ ಬಳಿಕ ಪಾಕಿಸ್ತಾನದ ಮಿಲಿಟರಿ (ರಾವಲ್ಪಿಂಡಿ) ಸುದೀರ್ಘ ಸಮಯದಿಂದಲೂ ಇಸ್ಲಾಮಿಕ್ ನ್ಯಾಟೋ ರೀತಿಯಲ್ಲಿ ಇಸ್ಲಾಮಿಕ್ ಜಗತ್ತಿನ ನೇತೃತ್ವ ವಹಿಸಬೇಕೆಂದು ಪ್ರಯತ್ನಿಸುತ್ತಿದೆ. ಸೌದಿಯ ಜೊತೆಗಿನ ಒಪ್ಪಂದ ಪಾಕಿಸ್ತಾನ ತನ್ನ ಕನಸಿಗೆ ಮೊದಲು ಮೆಟ್ಟಿಲು ಎಂದು ತಿಳಿದುಕೊಂಡಿದೆ. ಆದರೆ ವಾಸ್ತವವಾಗಿ ಹಲವು ಅರಬ್ ರಾಷ್ಟ್ರಗಳು ಪಾಕಿಸ್ತಾನದಿಂದ ಅಂತರ ಕಾಯ್ದುಕೊಳ್ಳುತ್ತಿವೆ.
ಪಾಕ್‌ಗೇನು ಲಾಭ?
ಸೌದಿ ಅರೇಬಿಯಾದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಪಾಕಿಸ್ತಾನಕ್ಕೆ ಹೇರಳ ಸಾಲ ದೊರಕಬಹುದು. ಆಪರೇಷನ್ ಸಿಂದೂರದ ಸಮಯದಲ್ಲಿ ಯಾವುದೇ ಒಂದು ದೇಶವೂ ಪಾಕ್ ಪರ ನೇರವಾಗಿ ಸಹಾಯಕ್ಕೆ ನಿಂತಿರಲಿಲ್ಲ. ಈ ಒಪ್ಪಂದದಿಂದಾಗಿ ನೇರ ಮಿಲಿಟರಿ ಸಹಾಯ ಪಾಕಿಸ್ತಾನಕ್ಕೆ ದೊರೆಯಲಿದೆ. ಇನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದುಳಿದಿರುವ ಪಾಕಿಸ್ತಾನಕ್ಕೆ ಒಂದಿಷ್ಟು ನೆರವು ಸಿಗುತ್ತದೆ.
ಭಾರತದ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಏನು?
ಸೌದಿ ಅರೇಬಿಯಾದೊಂದಿಗೆ ರಾಜತಾಂತ್ರಿಕ ಹಾಗೂ ದ್ವಿಪಕ್ಷೀಯ ಸಂಬಂಧ ದೃಢಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಶ್ರಮವಹಿಸಿದ್ದರು. ಅವರು ಪ್ರಧಾನಿಯಾದ ಮೇಲೆ ಮೂರು ಬಾರಿ ರಿಯಾದ್‌ಗೆ ಪ್ರಯಾಣ ಬೆಳೆಸಿದ್ದರು. ಈ ಒಪ್ಪಂದದಿಂದ ಭಾರತಕ್ಕೆ ಕೊಂಚ ಹಿನ್ನೆಡೆಯಾದರೂ ಸಹ ಉಭಯ ದೇಶಗಳ ಸಂಬಂಧ ಹಾಳಾಗಿಲ್ಲ. ಭಾರತದ ಜೊತೆಗೆ ಸೌದಿ ಸಂಬಂಧಗಳು ದೃಢವಾಗಿ ಮುಂದುವರಿಯಲಿವೆ ಎಂದು ಸೌದಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಸೌದಿ ಮೇಲೆ ಒತ್ತಡ ಹೇರಲು ಭಾರತ ಯುಎಇ, ಒಮಾನ್ ನಂತಹ ಕೊಲ್ಲಿಯ ಮಿತ್ರ ರಾಷ್ಟ್ರಗಳೊಡನೆ ತನ್ನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಮುಂದಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅದೇನೆ ಇರಲಿ ಶತ್ರು ರಾಷ್ಟ್ರದೊಂದಿಗೆ ಸೌದಿ ಒಪ್ಪಂದದ ಬಳಿಕ ಭಾರತ ಎಚ್ಚರಿಕೆಯ ಹೆಜ್ಜೆಯನ್ನಂತು ಇಡಲೇಬೇಕು.