Uttarakhand Flash Flood: ಉತ್ತರಾಖಂಡದಲ್ಲಿ ಮೇಘಸ್ಫೋಟಕ್ಕೆ ಜನ ಜೀವನ ತತ್ತರ; ದೇವ ಭೂಮಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು ಹೇಗೆ?
Uttarkashi Tragedy: ಉತ್ತರಾಖಂಡದ ಉತ್ತರಕಾಶಿಯಲ್ಲಿ ಅವಳಿ ಮೇಘಸ್ಫೋಟ ಸಂಭವಿಸಿ ದಿಡೀರ್ ಪ್ರವಾಹ ಇಂಟಾಗಿ ಧರಾಲಿ ಗ್ರಾಮವೇ ಕೊಚ್ಚಿಕೊಂಡು ಹೋಗಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಸುಮಾರು 50 ಮಂದಿ ನಾಪತ್ತೆಯಾಗಿದ್ದಾರೆ. ಉತ್ತರಾಖಂಡಲ್ಲಿ ಪ್ರವಾಹ ಪರಿಸ್ಥಿತಿ ಪದೇ ಪದೇ ಸಂಭವಿಸುತ್ತದೆ. ಇದಕ್ಕೆ ಕಾರಣವೇನು? ತಜ್ಞರ ಅಭಿಪ್ರಾಯ ಇಲ್ಲಿದೆ.


ಡೆಹ್ರಾಡೂನ್: ದೇವ ಭೂಮಿ ಎಂದೇ ಕರೆಯಲ್ಪಡುವ ಉತ್ತರಾಖಂಡ ಪ್ರಕೃತಿಯ ರುದ್ರ ನರ್ತನಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ಉತ್ತರಕಾಶಿ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟ, ಅದರ ನಂತರ ಕಂಡುಬಂದ ದಿಢೀರ್ ಪ್ರವಾಹದಿಂದ ಹರ್ಸಿಲ್ ಸಮೀಪದ ಧರಾಲಿ ಗ್ರಾಮಕ್ಕೆ ಗ್ರಾಮವೇ ಕೊಚ್ಚಿ ಹೋಗಿದೆ (Uttarakhand Flash Flood). ಮನೆ, ಹೊಟೇಲ್, ಅಂಗಡಿಗಳು ಕೆಸರಿನಲ್ಲಿ ಹೂತಿದ್ದು, ರಸ್ತೆಗಳ ಸಂಪರ್ಕ ಕಡಿತಕೊಂಡಿದೆ. ಇದುವರೆಗೆ 5 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸೈನಿಕರು, ಪ್ರವಾಸಿಗರು ಸೇರಿ ಹಲವರು ನಾಪತ್ತೆಯಾಗಿದ್ದಾರೆ (Uttarkashi Tragedy). ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೊಗಳು ದುರಂತದ ಭೀಕರತೆಯನ್ನು ಸಾರಿ ಹೇಳುತ್ತಿವೆ. ಇತ್ತ ಎಡೆಬಿಡದೆ ಸುರಿಯುತ್ತಿರುವ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹಾಗಾದರೆ ದಿಢೀರ್ ಪ್ರವಾಹಕ್ಕೆ ಕಾರಣವೇನು? ಈ ದುರಂತ ಹೇಗಾಯ್ತು? ಮುಂತಾದ ಪ್ರಶ್ನೆಗಳಿಗೆ ತಜ್ಞರು ಉತ್ತರ ನೀಡಿದ್ದಾರೆ.
ಮೂರು ದಿನಗಳಿಂದ ಉತ್ತರಕಾಶಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮಂಗಳವಾರ (ಆಗಸ್ಟ್ 5) ಮೇಘಸ್ಫೋಟ ಸಂಭವಿಸಿ ಖೀರ್ ಗಂಗಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ, ಅದರ ದಡದಲ್ಲಿರುವ ಧರಾಲಿ ಗ್ರಾಮಕ್ಕೆ ಅಪ್ಪಳಿಸಿ, ದೊಡ್ಡ ಪ್ರಮಾಣದ ನಾಶನಷ್ಟಕ್ಕೆ ಕಾರಣವಾಗಿದೆ. ಉತ್ತರಾಖಂಡದಲ್ಲಿ ಪದೇ ಪದೆ ಸಂಭವಿಸುತ್ತಿರುವ ಪ್ರಾಕೃತಿಕ ದುರಂತ ಗಂಭೀರ ಚರ್ಚೆ ಹುಟ್ಟು ಹಾಕಿದೆ.
ಈ ಸುದ್ದಿಯನ್ನೂ ಓದಿ: Uttarkashi Tragedy: ದೇವ ಭೂಮಿ ಉತ್ತರಾಖಂಡದಲ್ಲಿ ಅವಳಿ ಮೇಘಸ್ಫೋಟ; ನೋಡನೋಡುತ್ತಿದ್ದಂತೆ ಕೊಚ್ಚಿಹೋಯ್ತು ಇಡೀ ಗ್ರಾಮ
Yesterday, while Uttarkashi faced the biggest disaster of the decade, a bus in Kinnaur, Himachal narrowly escaped a similar fate , it crossed just seconds before a flash flood hit. Just a matter of moments… it could’ve been a major tragedy. pic.twitter.com/0L6PXfOxUX
— Nikhil saini (@iNikhilsaini) August 6, 2025
ಏನಿದು ದಿಢೀರ್ ಪ್ರವಾಹ?
ಇದ್ದಕ್ಕಿದ್ಧಂತೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ತನ್ನ ಎಲ್ಲೆ ಮೀರಿ ಹರಿಯುವುದನ್ನು ದಿಢೀರ್ ಪ್ರವಾಹ ಎಂದು ಕರೆಯಲಾಗುತ್ತದೆ. ಇದು ಕಣ್ಮುಚ್ಚಿ ತೆರೆಯುವುದರೊಳಗೆ ಸಂಭವಿಸುತ್ತದೆ. ಸುಮಾರು 6 ಗಂಟೆಗಳ ಕಾಲ ನಿರಂತರ ಮಳೆ ಸುರಿದರೆ, ಅಣೆಕಟ್ಟು ಅಥವಾ ಹಿಮ ಸರೋವರ ಒಡೆದರೆ ದಿಢೀರ್ ಪ್ರವಾಹ ಉಂಟಾಗುತ್ತದೆ. ಸಾಮಾನ್ಯ ಪ್ರವಾಹ ಉಂಟಾಗಲು ಕೆಲವು ಸಮಯ ತೆಗೆದುಕೊಂಡರೆ ದಿಢೀರ್ ಪ್ರವಾಹ ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಈ ಪ್ರವಾಹ ಕೆಳ ಭಾಗಕ್ಕೆ ರಭಸದಿಂದ ಹರಿಯುವುದಲ್ಲದೆ ಎದುರಿಗೆ ಸಿಕ್ಕ ಎಲ್ಲವನ್ನೂ ನಾಶ ಮಾಡುತ್ತ ಸಾಗುತ್ತದೆ. ಅತೀ ಕಡಿಮೆ ಪ್ರದೇಶದಲ್ಲಿ (ಸುಮಾರು 20–30 ಚದರ ಕಿ.ಮೀ.) 1 ಗಂಟೆಯ ಕಾಲ ನಿರಂತರವಾಗಿ 100 ಮಿ.ಮೀ. ಮಳೆ ಸುರಿದರೆ ದಿಢೀರ್ ಪ್ರವಾಹ ಉಂಟಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಿಢೀರ್ ಪ್ರವಾಹಕ್ಕೆ ಕಾರಣವೇನು?
ಹಠಾತ್ ಪ್ರವಾಹ ನೈಸರ್ಗಿಕವಾಗಿ ಮತ್ತು ಮಾನವ ಹಸ್ತಕ್ಷೇಪ ಕಾರಣದಿಂದ ಸಂಭವಿಸುತ್ತದೆ. ತಜ್ಞರು ಈ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
ಧಾರಾಕಾರ ಮಳೆ ಮತ್ತು ಮೇಘಸ್ಫೋಟ: ನಿರಂತರವಾಗಿ ಸುರಿಯುವ ಮಳೆ ಮತ್ತು ಮೇಘಸ್ಫೋಟ ಹಠಾತ್ ಪ್ರವಾಹಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಹವಾಮಾನ ವ್ಯವಸ್ಥೆಯಲ್ಲಿನ ತಾಪಮಾನ ವ್ಯತ್ಯಾಸದಿಂದ ಭಾರಿ ಮೋಡಗಳ ಘನೀಕರಣದಿಂದ ಮೇಘಸ್ಫೋಟ ಉಂಟಾಗುತ್ತದೆ. ಅತಿ ದೊಡ್ಡ ಗಾತ್ರದ ನೀರಿನ ಮೋಡಗಳು ವಾತಾವರಣದಲ್ಲಿ ಶೇಖರಣೆಯಾಗಿ ಅದು ಒಮ್ಮಿಂದೊಮ್ಮೆಲೆ ಭೂಮಿಯ ಮೇಲೆ ಸುರಿಯುವುದನ್ನು ಮೇಘಸ್ಫೋಟ ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ರೀತಿಯ ಮಳೆ ಬೀಳುವುದು ಕೆಲವೇ ನಿಮಿಷಗಳು ಮಾತ್ರ. ಆದರೆ ಇದರ ಪರಿಣಾಮ ಭೀಕರ. ಕೆಲವೇ ನಿಮಿಷ ಒಂದು ನಿರ್ದಿಷ್ಟ ಸ್ಥಳದಲ್ಲಿ ಒಂದೇ ಸಮನೆ ಸುರಿಯುವ ಇದು ಭಾರೀ ಪ್ರವಾಹ ಉಂಟು ಮಾಡಬಲ್ಲುದು. ಉತ್ತರಕಾಶಿಯಲ್ಲಿ ಅಗಿದ್ದು ಇದೇ.
ಕಡಿದಾದ ಭೂಪ್ರದೇಶ: ಗುಡ್ಡಗಾಡು ಅಥವಾ ಪರ್ವತ ಪ್ರದೇಶಗಳಲ್ಲಿ ಮಳೆನೀರು ಬಹಳ ವೇಗವಾಗಿ ಕೆಳಮುಖವಾಗಿ ಹರಿಯುತ್ತದೆ. ಇದು ಪ್ರವಾಹದ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತದೆ. ಕಿರಿದಾದ ಕಣಿವೆಗಳು ಮತ್ತು ಕಡಿದಾದ ಇಳಿಜಾರಿನಲ್ಲಿ ಇದರ ಪರಿಣಾಮ ಹೆಚ್ಚು.
ಹಿಮ ಕರಗುವಿಕೆ: ಹೆಚ್ಚುತ್ತಿರುವ ತಾಪಮಾನವು ಬೃಹತ್ ಪ್ರಮಾಣದಲ್ಲಿ ಹಿಮ ಕರಗಲು ಅಥವಾ ಹಿಮನದಿ ಸರೋವರದ ನೀರು ಒಮ್ಮಿಂದೊಮ್ಮೆಲೇ ಹೊರಬೀಳಲು ಕಾರಣವಾಗಬಹುದು. 2021ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಚಮೋಲಿ ದುರಂತ ಹಿಮಪಾತದಿಂದ ಉಂಟಾಗಿತ್ತು.
ನಗರೀಕರಣ ಮತ್ತು ಹದಗೆಟ್ಟ ಚರಂಡಿ: ನಗರ ಪ್ರದೇಶದಲ್ಲಿನ ಹದಗೆಟ್ಟ ಚರಂಡಿ ವ್ಯವಸ್ಥೆ ಕೂಡ ಧಿಡೀರ್ ಪ್ರವಾಹಕ್ಕೆ ಮುಖ್ಯ ಕಾರಣ ಎನಿಸಿಕೊಂಡಿದೆ. ಇನ್ನು ಕಾಂಕ್ರೀಟ್ ಮೇಲ್ಮೈಗಳು ನೀರು ನೆಲಕ್ಕೆ ಇಂಗದಂತೆ ತಡೆಯುತ್ತವೆ. ಇದು ವೇಗವಾಗಿ ನೀರು ಹರಿಯಲು ಕಾರಣವಾಗುತ್ತದೆ.
ಅರಣ್ಯ ನಾಶ ಮತ್ತು ಅತಿಯಾದ ನಿರ್ಮಾಣ ಕಾಮಗಾರಿ: ಅವೈಜ್ಞಾನಿಕ ರೀತಿಯಲ್ಲಿ ಮರಗಳನ್ನು ಕಡಿಯುವುದು, ಅರಣ್ಯ ನಾಶ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿ ಮಣ್ಣನ್ನು ಸಡಿಲಗೊಳಿಸುತ್ತದೆ. ಇದು ಕೂಡ ಭೂಕುಸಿತಕ್ಕೆ ಕಾರಣವಾಗುತ್ತದೆ. ಜತೆಗೆ ನದಿಯ ಸರಾಗ ಹರಿವಿಗೆ ತಡೆ ಒಡ್ಡಿಮ ನೀರು ಅಡ್ಡಾದಿಡ್ಡಿ ಚಲಿಸಲು ಕಾರಣವಾಗುತ್ತದೆ.
ಹವಾಮಾನ ಬದಲಾವಣೆ: ಹವಾಮಾನದಲ್ಲಿ ಉಂಟಾಗುವ ಬದಲಾವಣೆ ಕೂಡ ಹಠಾತ್ ಪ್ರವಾಹಕ್ಕೆ ಕಾರಣವಾಗುತ್ತದೆ. ವಾತಾವರಣದ ಉಷ್ಣಾಂಶ ಹೆಚ್ಚಳ ತೀವ್ರ ಮಳೆ ಮತ್ತು ವೇಗವಾಗಿ ಹಿಮನದಿ ಕರಗುವಿಕೆಗೆ ಕಾರಣವಾಗುತ್ತದೆ.
Devastating flash flood in Uttarkashi’s Khir Ganga River yesterday. The monsoon’s fury washed away villages in seconds, showing the raw power of nature. This tragedy highlights the growing complexity of mountain disasters amid the climate crisis. #UttarkashiDisaster #Monsoon2025 pic.twitter.com/G2UmCbBelz
— Dr Santosh Nepal (@SantoshNepal_) August 6, 2025
ದಿಢೀರ್ ಪ್ರವಾಹ ಯಾಕೆ ಅಪಾಯಕಾರಿ?
ದಿಢೀರ್ ಪ್ರವಾಹ ಅತ್ಯಂತ ಮಾರಕ ನೈಸರ್ಗಿಕ ವಿಕೋಪಗಳಲ್ಲಿ ಒಂದು. ಯಾಕೆಂದರೆ ಇದು ಚೇತರಿಸಿಕೊಳ್ಳಲೂ ಸಮಯಾವಕಾಶ ನೀಡದೆ ಇದ್ದಕ್ಕಿದ್ದಂತೆ ಸಂಭವಿಸುತ್ತವೆ. ಈ ಕಾರಣಕ್ಕೆ ದೊಡ್ಡ ಪ್ರಮಾಣದ ಹಾನಿಯನ್ನುಂಟು ಮಾಡುತ್ತವೆ. ದಿಢೀರ್ ಪ್ರವಾಹ ಕೆಲವೇ ನಿಮಿಷಗಳಲ್ಲಿ ಅಪ್ಪಳಿಸಬಹುದು. ಇದರಿಂದಾಗಿ ಜನರಿಗೆ ಎಚ್ಚರಿಕೆ ನೀಡಲು ಅಥವಾ ಸ್ಥಳಾಂತರಿಸಲು ಅವಕಾಶವೇ ಸಿಗುವುದಿಲ್ಲ ಎನ್ನುತ್ತಾರೆ ತಜ್ಞರು.
ಬಲವಾಗಿ ಹರಿಯುವ ನೀರು: ರಭಸದಿಂದ ಹರಿಯುವ ನೀರು ತನ್ನೊಂದಿಗೆ ಮಣ್ಣು, ಕಲ್ಲುಗಳು, ಎದುರಿಗೆ ಸಿಕ್ಕ ಎಲ್ಲವನ್ನೂ ಕೊಚ್ಚಿಕೊಂಡು ಸಾಗುತ್ತದೆ. ಇದು ಮನೆಗಳು, ಕಟ್ಟಡಗಳು, ರಸ್ತೆಗಳು ಮತ್ತು ವಾಹನಗಳನ್ನು ಸುಲಭವಾಗಿ ನಾಶಪಡಿಸುತ್ತದೆ. ಉತ್ತರಕಾಶಿಯ ಹಠಾತ್ ಪ್ರವಾಹದಲ್ಲಿ, ಧರಾಲಿ ಗ್ರಾಮದ ಹೊಟೇಲ್‌ಗಳು ಮತ್ತು ಮನೆಗಳು ಕೆಲವೇ ನಿಮಿಷಗಳಲ್ಲಿ ನಾಶವಾದವು.
ಹೆಚ್ಚಿನ ಸಾವಿನ ಸಂಖ್ಯೆ ಮತ್ತು ಆಸ್ತಿಗಳಿಗೆ ಹಾನಿ: ಹಠಾತ್ ಪ್ರವಾಹ ಹೆಚ್ಚಿನ ಸಂಖ್ಯೆಯ ಜನರ ಸಾವಿಗೆ ಕಾರಣವಾಗುತ್ತದೆ. 2013ರ ಉತ್ತರಾಖಂಡ ಪ್ರವಾಹವು 5,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು ಮತ್ತು 2,000ಕ್ಕೂ ಹೆಚ್ಚು ಮನೆಗಳನ್ನು ಹಾನಿಗೊಳಿಸಿತ್ತು. 2021ರಲ್ಲಿ ಚಮೋಲಿ ಪ್ರವಾಹದಿಂದ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ರಕ್ಷಣಾ ಕಾರ್ಯಾಚರಣೆಗೆ ಅಡಚಣೆ: ಪ್ರವಾಹವು ರಸ್ತೆಗಳು ಮತ್ತು ಸೇತುವೆಗಳನ್ನು ನಾಶಪಡಿಸುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಬಹುದು. ಹಠಾತ್ ಪ್ರವಾಹಗಳು ಭೂಕುಸಿತಗಳಿಗೆ ಕಾರಣವಾಗಬಹುದು. ಜತೆಗೆ ಕುಡಿಯುವ ನೀರನ್ನು ಕಲುಷಿತಗೊಳಿಸುತ್ತದೆ.

ಉತ್ತರಾಖಂಡದಲ್ಲೇ ಯಾಕೆ ಪದೇ ಪದೆ ಸಂಭವಿಸುತ್ತದೆ?
ಹಿಮಾಲಯ ಪರ್ವತದ ತಪ್ಪಲಿನಲ್ಲಿರುವ ಉತ್ತರಾಖಂಡ ತನ್ನ ವಿಶಿಷ್ಟ ಭೂರಚನೆ ಮತ್ತು ಅತಿಯಾದ ಮಾನವ ಚಟುವಟಿಕೆಯಿಂದ ಪದೇ ಪದೆ ಡಿಢೀರ್ ಪ್ರವಾಹದಂತಹ ಅಪಾಯವನ್ನು ಎದುರಿಸುತ್ತಿದೆ.
ಭೌಗೋಳಿಕತೆ: ಈ ಪ್ರದೇಶವು ದಕ್ಷಿಣ ಹಿಮಾಲಯದ ಇಳಿಜಾರಿನಲ್ಲಿದೆ. ಕಡಿದಾದ ಇಳಿಜಾರು ಮತ್ತು ಹೆಚ್ಚಿನ ಪ್ರಮಾಣದಲ್ಲಿರುವ ನದಿ ಜಾಲವು ನೀರು ಬೇಗನೆ ಹರಿಯಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಭೂಕುಸಿತ ಮತ್ತು ಪ್ರವಾಹ ಉಂಟಾಗುತ್ತದೆ.
ಹವಾಮಾನ ವೈಪರೀತ್ಯ: ಮಾನ್ಸೂನ್ ಸಮಯದಲ್ಲಿ ಉತ್ತರಾಖಂಡದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಮೇಘಸ್ಫೋಟದಿಂದ ಗಂಟೆಗೆ 100 ಮಿ.ಮೀ.ಗಿಂತ ಹೆಚ್ಚು ಮಳೆ ಬೀಳಬಹುದು. ಉತ್ತರಕಾಶಿ ವಿಪತ್ತು ಅಂತಹ ಒಂದು ಉದಾಹರಣೆಯಾಗಿದೆ. ಇಂತಹ ತೀವ್ರ ಮಳೆಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸುತ್ತಲೇ ಇದೆ.
ಅವೈಜ್ಞಾನಿಕ ಕಾಮಗಾರಿ: ರಸ್ತೆಗಳು, ಕಟ್ಟಡಗಳು ಮತ್ತು ಜಲ ವಿದ್ಯುತ್ ಯೋಜನೆಗಳ ನಿರ್ಮಾಣವು ನೈಸರ್ಗಿಕ ಭೌಗೋಳಿಕ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಇದರಿಂದ ನೀರಿನ ಹರಿವಿಗೆ ತಡೆಯಾಗುತ್ತಿದೆ. 70ಕ್ಕೂ ಹೆಚ್ಚು ಜಲವಿದ್ಯುತ್ ಯೋಜನೆಗಳು ಮತ್ತು ಹಲವು ರಸ್ತೆ ಕಾಮಗಾರಿ ಮಣ್ಣನ್ನು ಸಡಿಲಗೊಳಿಸಿದೆ.
ಪ್ರವಾಸೋದ್ಯಮದ ಒತ್ತಡ: ಉತ್ತರಾಖಂಡದ ಪ್ರವಾಸೋದ್ಯಮ ವಿಶೇಷವಾಗಿ ಕೇದಾರನಾಥ ಮತ್ತು ಗಂಗೋತ್ರಿಯ ತೀರ್ಥಯಾತ್ರೆಗಳು ಅಪಾಯಕಾರಿ ಪ್ರವಾಹ ಪೀಡಿತ ವಲಯಗಳಲ್ಲಿ ಹೆಚ್ಚಿನ ಪ್ರಮಾಣದ ನಿರ್ಮಾಣ ಕಾರ್ಯಕ್ಕೆ ಕಾರಣವಾಗುತ್ತವೆ. ತೀವ್ರವಾಗಿ ಬಾಧಿತವಾಗಿರುವ ಧರಾಲಿ ಗ್ರಾಮವು ಪ್ರಮುಖ ಯಾತ್ರಾ ಮಾರ್ಗದಲ್ಲಿದೆ.
ಅಪಾಯದ ವಲಯಗಳಲ್ಲಿ ಹೆಚ್ಚಿನ ಜನಸಂಖ್ಯೆ: ಉತ್ತರಾಖಂಡದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಭೂಕುಸಿತ ಮತ್ತು ಪ್ರವಾಹಕ್ಕೆ ಗುರಿಯಾಗುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದು ಕೂಡ ಅಪಾಯವನ್ನು ಹೆಚ್ಚಿಸುತ್ತದೆ.