Cyber Fraud: ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿ 9 ಕೋಟಿ ರೂ. ಹಣ ಕಳೆದುಕೊಂಡ 80ರ ವೃದ್ಧ
ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ನಂತರ 80 ವೃದ್ಧರೊಬ್ಬರು ಬರೋಬ್ಬರಿ 9 ಕೋಟಿ ರೂ. ಕಳೆದುಕೊಂಡ ಘಟನೆ ಮುಂಬೈಯಲ್ಲಿ ನಡೆದಿದೆ. ಸುಮಾರು ಎರಡು ವರ್ಷಗಳ ಕಾಲ ನಡೆದ ಈ ವಂಚನೆಯ ಹಗರಣದಲ್ಲಿ ವೃದ್ಧರು ಫೇಸ್‌ಬುಕ್‌ನಲ್ಲಿ ಮಹಿಳೆಯೊಬ್ಬಳ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ನಂತರ 734 ಬಾರಿ ಹಣ ವರ್ಗಾವಣೆ ಮಾಡಿ, 9 ಕೋಟಿ ರೂ. ಕಳೆದುಕೊಂಡಿದ್ದಾರೆ. 80 ವರ್ಷದ ವ್ಯಕ್ತಿಗೆ ಸಹಾನುಭೂತಿಯ ಹೆಸರಿನಲ್ಲಿ ಸುಮಾರು 9 ಕೋಟಿ ರೂ. ವಂಚಿಸಲಾಗಿದೆ.

ಸಾಂಧರ್ಬಿಕ ಚಿತ್ರ

ಮುಂಬೈ: ಮಹಾರಾಷ್ಟ್ರದ ಮುಂಬೈಯಲ್ಲಿ (Mumbai) 80 ವರ್ಷದ ವೃದ್ಧರೊಬ್ಬರು ಸುಮಾರು ಎರಡು ವರ್ಷಗಳ ಕಾಲ 734 ಬಾರಿ ಹಣ ವರ್ಗಾವಣೆ (Cyber Fraud) ಮಾಡುವ ಮೂಲಕ 8.7 ಕೋಟಿ ರೂ. ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ. ವೃದ್ಧರು ಫೇಸ್‌ಬುಕ್‌ನಲ್ಲಿ ಮಹಿಳೆಯೊಬ್ಬಳ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದಕ್ಕೆ ಈ ದುಷ್ಕೃತ್ಯಕ್ಕೆ ಕಾರಣವಾಗಿದ್ದು, ಸುಮಾರು ಎರಡು ವರ್ಷಗಳ ಕಾಲ ಸುಮಾರು ಎರಡು ವರ್ಷಗಳಲ್ಲಿ 734 ಬಾರಿ ಹಣ ವರ್ಗಾವಣೆ ಮಾಡಿ, 9 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಏನಿದು ಘಟನೆ?
ಸಂತ್ರಸ್ತ ವೃದ್ಧರು ಏಪ್ರಿಲ್ 2023ರಲ್ಲಿ ಶಾರ್ವಿ ಎಂಬ ಮಹಿಳೆಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಆದರೆ ಒಬ್ಬರಿಗೊಬ್ಬರು ಪರಸ್ಪರ ಪರಿಚಯವಿರಲಿಲ್ಲ. ಕಾರಣ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಲಿರಲಿಲ್ಲ. ಕೆಲವು ದಿನಗಳ ನಂತರ, ಆ ವೃದ್ಧನಿಗೆ ಅದೇ ಶಾರ್ವಿ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿದ್ದ ಆ ವೃದ್ದ ಕೊಟ್ಟಿಗಟ್ಟಲೆ ಹಣ ಕಳೆದುಕೊಂಡು ಅನಾರೋಗ್ಯಕ್ಕೂ ತುತ್ತಾಗಿದ್ದಾರೆ.
ಮೊದಲಿಗೆ ಫೇಸ್ ಬುಕ್ ಮೂಲಕ ಪ್ರಾರಂಭವಾದ ಇವರಿಬ್ಬರ ಗೆಳತನ ಮುಂದಿನ ದಿನಗಳಲ್ಲಿ ವಾಟ್ಸ್‌ಆ್ಯಪ್ ಸಂಖ್ಯೆ ಬದಲಾಗುವ ಹಂತಕ್ಕೆ ತಲುಪಿತು. ಚಾಟ್‌ಗಳು ಫೇಸ್‌ಬುಕ್‌ನಿಂದ ವಾಟ್ಸ್‌ಆ್ಯಪ್ ಮೂಲಕ ಆರಂಭವಾಯಿತು. ಅಲ್ಲದೇ ಇವರಿಬ್ಬರ ಮಧ್ಯೆ ಬಾಂಧವ್ಯ ಬೆಳೆದಿದ್ದು, ಶಾರ್ವಿ 80 ವರ್ಷದ ವೃದ್ಧನಿಗೆ ತಾನು ತನ್ನ ಗಂಡನಿಂದ ಬೇರ್ಪಟ್ಟಿದ್ದೇನೆ ಮತ್ತು ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ ಎಂದು ಹೇಳಿ ಕ್ರಮೇಣ ಹಣ ಕೇಳಲು ಪ್ರಾರಂಭಿಸಿದ್ದಾಳೆ. ತನ್ನ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ವೃದ್ಧನಿಗೆ ಹೇಳಿದ್ದು, ನಂತರದ ದಿನಗಳಲ್ಲಿ ಅವರ ಚಿಕಿತ್ಸೆಗೆಂದು ಆ ವೃದ್ಧನ ಬಳಿ ಆರ್ಥಿಕ ಸಹಾಯ ಕೇಳಿ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾರೆ.
ಕೆಲವು ದಿನಗಳ ನಂತರ, ಶಾರ್ವಿಯ ಸಂಬಂಧಿ ಎಂದು ವಾಟ್ಸ್‌ಆ್ಯಪ್‌ನಲ್ಲಿ ಆ ವೃದ್ದನನ್ನು ಕವಿತಾ ಎಂಬಾಕೆ ಸಂಪರ್ಕಿಸಿದ್ದು, ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮತ್ತೆ ಡಿಸೆಂಬರ್‌ನಲ್ಲಿ ಶಾರ್ವಿಯ ಸಹೋದರಿ ಎಂದು ಪರಿಚಯಿಸಿಕೊಂಡ ದಿನಾಜ್, ಶಾರ್ವಿ ಮೃತಪಟ್ಟಿದ್ದಾಳೆ ಎಂದು ಹೇಳಿ ಆಸ್ಪತ್ರೆಯ ಬಿಲ್‌ಗೆ ಹಣ ಕೇಳಿದ್ದಾಳೆ. ಶಾರ್ವಿಯೊಂದಿಗಿನ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ, ಹಣ ವಾಪಸ್ ಕೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರ ನಂತರ, ದಿನಾಜ್‌ನ ಸ್ನೇಹಿತೆ ಎಂದು ಪರಿಚಯಿಸಿಕೊಂಡ ಜಾಸ್ಮಿನ್ ಕೂಡ ಹಣಕ್ಕೆ ಬೇಡಿಕೆ ಇಡಲಾರಂಭಿಸಿದ್ದಾಳೆ. ಹೀಗೆ 2023ರ ಏಪ್ರಿಲ್‌ನಿಂದ 2025ರ ಜನವರಿವರೆಗೆ ವೃದ್ಧ 734 ಬಾರಿ ಹಣವನ್ನು ಹಾಕುವ ಮೂಲಕ 8.7 ಕೋಟಿ ರೂ. ಕಳೆದುಕೊಂಡಿದ್ದು, ತನ್ನ ಬಳಿ ಇದ್ದ ಹಣ ಮುಗಿದಾಗ, ಆತ ಸೊಸೆಯಿಂದ 2 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾನೆ. ಆದರೂ ನಿರಂತರವಾಗಿ ಆ ಕಡೆಯಿಂದ ಹಣಕ್ಕೆ ಬೇಡಿಕೆ ಬರುತ್ತಲ್ಲೇ ಇದ್ದು, ತನ್ನ ಮಗನಿಂದ 5 ಲಕ್ಷ ರೂ. ಕೇಳಿದಾಗ ಅನುಮಾನ ವ್ಯಕ್ತಪಡಿಸಿದ ಮಗನಿಗೆ ತಂದೆಗೆ ಆದ ಮೋಸದ ಬಗ್ಗೆ ತಿಳಿದಿದೆ.
ಇನ್ನು ಪ್ರೀತಿ ಮತ್ತು ಸಹಾನುಭೂತಿಯ (Sympathy) ಹೆಸರಿನಲ್ಲಿ ಆ ವೃದ್ಧನ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡಿದ್ದು, ಈ ಕೃತ್ಯವನ್ನು ನಾಲ್ವರು ಮಹಿಳೆಯರು ಅಥವಾ ಒಬ್ಬರೇ ವ್ಯಕ್ತಿ ವಂಚಿಸಿರಬಹುದು ಎಂದು ಶಂಕಿಸಲಾಗಿದೆ.
ಇನ್ನು ಘಟನೆಯಿಂದ ಶಾಕ್‌ಗೆ ಒಳಗಾದ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯಕೀಯ ತಪಾಸಣೆ ನಡೆಸಿದಾಗ ಬುದ್ಧಿಮಾಂದ್ಯತೆ ಇರುವುದಾಗಿ ತಿಳಿದುಬಂದಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೈಬರ್‌ಕ್ರೈಂ ದೂರು ದಾಖಲಾಗಿದ್ದು, ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.