Viral Post: ಟೈರ್ ಪಂಕ್ಚರ್ ಸ್ಕ್ಯಾಮ್‌ನಿಂದ 8,000 ರೂ. ಕಳೆದುಕೊಂಡ ವ್ಯಕ್ತಿ; ಇಲ್ಲಿದೆ ವಂಚನೆಯ ಕಥೆ
ಹರಿಯಾಣದ ಗುರುಗ್ರಾಮದ ಪ್ರಣಯ್ ಕಪೂರ್ ಎಂಬ ವ್ಯಕ್ತಿ ಕಾರಿನ ಟೈರ್ ಫ್ಲಾಟ್ ಆದಾಗ ಪೆಟ್ರೋಲ್ ಪಂಪ್‌ನ ಟೈರ್ ಶಾಪ್‌ನಲ್ಲಿ ವಂಚನೆಗೆ ಒಳಗಾಗಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಶೇರ್ ಮಾಡಿ ತಿಳಿಸಿದ್ದಾರೆ. “ಪೆಟ್ರೋಲ್ ಪಂಪ್ ಟೈರ್ ಶಾಪ್‌ನಲ್ಲಿ ವಂಚಿತನಾದೆ” ಎಂಬ ಕ್ಯಾಪ್ಶನ್‌ನೊಂದಿಗೆ ಪೋಸ್ಟ್ ಮಾಡಿರುವ ಕಪೂರ್, ಸ್ಕ್ಯಾಮ್‌ನ ವಿವರವನ್ನು ವಿಡಿಯೊದಲ್ಲಿ ತಿಳಿಸಿದ್ದಾರೆ.

ಪ್ರಣಯ್ ಕಪೂರ್

ಚಂಡೀಗಢ: ಹರಿಯಾಣದ ಗುರುಗ್ರಾಮದ (Gurugram) ಪ್ರಣಯ್ ಕಪೂರ್ (Pranay Kapoor) ಎಂಬ ವ್ಯಕ್ತಿ ತಮ್ಮ ಕಾರಿನ ಟೈರ್ ಫ್ಲಾಟ್ ಆದಾಗ ಪೆಟ್ರೋಲ್ ಪಂಪ್‌ನ ಟೈರ್ ಶಾಪ್‌ನಲ್ಲಿ ವಂಚನೆಗೆ (Scam) ಒಳಗಾಗಿದ್ದೇನೆ ಎಂದು ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದಾರೆ. “ಪೆಟ್ರೋಲ್ ಪಂಪ್ ಟೈರ್ ಶಾಪ್‌ನಲ್ಲಿ ವಂಚಿತನಾದೆ” ಎಂಬ ಕ್ಯಾಪ್ಶನ್‌ನೊಂದಿಗೆ ಪೋಸ್ಟ್ ಮಾಡಿರುವ ಕಪೂರ್, ಪೆಟ್ರೋಲ್ ಪಂಪ್‌ಗಳ ಟೈರ್ ಶಾಪ್‌ಗಳಲ್ಲಿ ನಡೆಯುತ್ತಿರುವ ಸ್ಕ್ಯಾಮ್‌ನ ವಿವರವನ್ನು ವಿಡಿಯೊದಲ್ಲಿ ತಿಳಿಸಿದ್ದಾರೆ.
ಘಟನೆಯ ವಿವರ
ಕಾರು ಚಲಾಯಿಸುತ್ತಿದ್ದಾಗ ಟೈರ್ ಫ್ಲಾಟ್ ಆಗಿರುವ ಎಚ್ಚರಿಕೆ ದೀಪ ಮಿನುಗಿತು. ಕಪೂರ್ ಹತ್ತಿರದ ಪೆಟ್ರೋಲ್ ಪಂಪ್‌ಗೆ ತೆರಳಿದಾಗ, ಸಿಬ್ಬಂದಿಯೋರ್ವ ಟೈರ್ ಪರಿಶೀಲಿಸಿ ಫ್ಲಾಟ್ ಆಗಿರುವುದನ್ನು ದೃಢಪಡಿಸಿದರು. ಟೈರ್‌ನ ಸಂಪೂರ್ಣ ತಪಾಸಣೆ ನಡೆಸಬೇಕು ಅಂದು ಅವರು ತಿಳಿಸಿದ. ಕಾರನ್ನು ಜಾಕ್‌ನಿಂದ ಎತ್ತಿದ ನಂತರ, ಸಿಬ್ಬಂದಿ ಟೈರ್‌ಗೆ ಸೋಪಿನ ನೀರನ್ನು ಸಿಂಪಡಿಸಿ ಬ್ರಶ್‌ನಿಂದ ಒರೆಸಿದರು. ಒಂದು ಸ್ಕ್ರೂ ಗೋಚರಿಸಿತು, ಆದರೆ ಆತ ನಾಲ್ಕು ಪಂಕ್ಚರ್‌ಗಳಿವೆ ಎಂದು ಹೇಳಿ, ಪ್ರತಿ ಪಂಕ್ಚರ್‌ಗೆ 300 ರೂ. ದರದಂತೆ 1,200 ರೂ. ಬೇಡಿಕೆ ಇಟ್ಟ.
ಈ ಸುದ್ದಿಯನ್ನು ಓದಿ: Viral Video: ಇಳಿ ವಯಸ್ಸಿನಲ್ಲಿ ಡೆಲಿವರಿ ಬಾಯ್ ಕೆಲಸ! ಒಂದೇ ಒಂದು ಪೋಸ್ಟ್ ವೃದ್ಧನ ಬದುಕನ್ನೇ ಬದಲಿಸಿತು
ವಂಚನೆ ಬಯಲು
ಕಪೂರ್ ಆ ರಿಪೇರಿಗೆ ಒಪ್ಪದೆ, ವಿಶ್ವಾಸಾರ್ಹ ಟೈರ್ ಶಾಪ್‌ಗೆ ತೆರಳಿದರು. ಅಲ್ಲಿನ ತಂತ್ರಜ್ಞ ಒಂದೇ ಒಂದು ನಿಜವಾದ ಪಂಕ್ಚರ್ ಇದ್ದು, ಉಳಿದವು ಪೆಟ್ರೋಲ್ ಪಂಪ್ ಸಿಬ್ಬಂದಿಯಿಂದ ಉದ್ದೇಶಪೂರ್ವಕವಾಗಿ ಮಾಡಲ್ಪಟ್ಟಿರಬಹುದು ಎಂದು ತಿಳಿಸಿದ. ಆತ ಕಪೂರ್‌ಗೆ ಸ್ಕ್ಯಾಮರ್‌ಗಳು ಟೈರ್ ಪರಿಶೀಲನೆಯ ಸಮಯದಲ್ಲಿ ಫೇಕ್ ಪಂಕ್ಚರ್‌ಗಳನ್ನು ಸೃಷ್ಟಿಸಲು ಬಳಸುವ ಮುಳ್ಳಿನಂತಹ ಉಪಕರಣವನ್ನು ತೋರಿಸಿದ. ಕೊನೆಗೆ, ಟೈರ್‌ನ ಸ್ಥಿತಿಯಿಂದಾಗಿ ಕಪೂರ್ 8,000 ರೂ. ವೆಚ್ಚದಲ್ಲಿ ಟೈರ್ ಬದಲಾಯಿಸಬೇಕಾಯಿತು.
“ನಾನು ಮಾಡಿದ ದುಬಾರಿ ತಪ್ಪನ್ನು ನೀವು ಮಾಡಬೇಡಿ. ಈ ವಿಡಿಯೊವನ್ನು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಂಡು ಎಚ್ಚರಿಕೆಯಿಂದಿರಿ” ಎಂದು ಕಪೂರ್ ತಿಳಿಸಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಕಳೆದ 9 ತಿಂಗಳಲ್ಲಿ ನನಗೂ ಮೂರು ಬಾರಿ ಇದೇ ರೀತಿಯಾಗಿದೆ” ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ. “ನನ್ನ ದ್ವಿಚಕ್ರ ವಾಹನಕ್ಕೂ ಇದೇ ರೀತಿಯಾಗಿತ್ತು. ಶಾಪ್‌ಗೆ ಹೋದಾಗ ಟೈರ್ ಬದಲಾಯಿಸಬೇಕಾಯಿತು” ಎಂದು ಮತ್ತೊಬ್ಬ ವ್ಯಕ್ತಿ ತಿಳಿಸಿದ್ದಾರೆ.