Lady Tarzan: ‘ಲೇಡಿ ಟಾರ್ಜನ್’ ಜಮುನಾ ತುಡು: ಕಾಡು ರಕ್ಷಣೆಯಿಂದ ರಾಷ್ಟ್ರಪತಿ ಭವನದ ಆಮಂತ್ರಣದವರೆಗೆ...
ಲೇಡಿ ಟಾರ್ಜನ್ ಎಂದೇ ಖ್ಯಾತಿ ಪಡೆದಿರುವ ಪದ್ಮಶ್ರೀ ಪುರಸ್ಕೃತೆ ಜಮುನಾ ತುಡು ಕಾಡುಗಳ ಕಗ್ಗೊಲೆ ವಿರುದ್ಧ ಧೀರ ಹೋರಾಟ ನಡೆಸಿ ಮತ್ತೆ ರಾಷ್ಟ್ರೀಯ ಗಮನ ಸೆಳೆದಿದ್ದಾರೆ. ಜಾರ್ಖಂಡ್‌ನ ಕಾಡುಗಳನ್ನು ರಕ್ಷಿಸಲು ಗ್ರಾಮಸ್ಥರನ್ನು ಒಗ್ಗೂಡಿಸಿ, ಮರಗಳ್ಳರನ್ನು ಎದುರಿಸಿದ ತುಡು, ಈಗ ರಾಷ್ಟ್ರಪತಿ ಭವನದ ಸ್ವಾತಂತ್ರ್ಯ ದಿನಾಚರಣೆಯ ಔತಣಕೂಟಕ್ಕೆ ಆಮಂತ್ರಣ ಪಡೆದಿದ್ದಾರೆ.

ಪದ್ಮಶ್ರೀ ಪುರಸ್ಕೃತೆ ಜಮುನಾ ತುಡು

ರಾಂಚಿ: ‘ಲೇಡಿ ಟಾರ್ಜನ್’ (Lady Tarzan) ಎಂದೇ ಖ್ಯಾತಿ ಪಡೆದಿರುವ ಪದ್ಮಶ್ರೀ ಪುರಸ್ಕೃತೆ ಜಮುನಾ ತುಡು (Jamuna Tudu), ಕಾಡುಗಳ ಕಗ್ಗೊಲೆ ವಿರುದ್ಧ ಧೀರ ಹೋರಾಟ ನಡೆಸಿ ರಾಷ್ಟ್ರೀಯ ಗಮನ ಸೆಳೆದಿದ್ದಾರೆ. ಜಾರ್ಖಂಡ್‌ನ (Jharkhand) ಕಾಡುಗಳನ್ನು ರಕ್ಷಿಸಲು ಗ್ರಾಮಸ್ಥರನ್ನು ಒಗ್ಗೂಡಿಸಿ, ಮರಗಳ್ಳರನ್ನು ಎದುರಿಸಿದ ತುಡು, ಈಗ ರಾಷ್ಟ್ರಪತಿ ಭವನದ (Rashtrapati Bhavan) ಸ್ವಾತಂತ್ರ್ಯ ದಿನಾಚರಣೆಯ ಔತಣಕೂಟಕ್ಕೆ (Independence Day Dinner) ಆಮಂತ್ರಣ ಪಡೆದಿದ್ದಾರೆ. ಈ ಗೌರವ ಆಕೆಯ ಹೋರಾಟಕ್ಕೆ ಸಂದ ಮನ್ನಣೆ ಎನಿಸಿಕೊಂಡಿದೆ.
ನವದೆಹಲಿಯಿಂದ ಅವರ ತವರು ಚಕುಲಿಯಾಕ್ಕೆ ವಿಶೇಷ ಅಂಚೆ ವ್ಯವಸ್ಥೆಯ ಮೂಲಕ ಬಂದ ಈ ಆಮಂತ್ರಣದಲ್ಲಿ ಆಗಸ್ಟ್ 15ರಂದು ಸಂಜೆ 6 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಔತಣಕೂಟಕ್ಕೆ ಅವರನ್ನು ಆಹ್ವಾನಿಸಲಾಗಿದೆ. ಒಂದು ಕಾಲದಲ್ಲಿ ದಿನಗೂಲಿಗಾಗಿ ಜೀವನ ನಡೆಸುತ್ತಿದ್ದ ಜಮುನಾ ತುಡು, ಈಗ ದೇಶದ ಅತ್ಯಂತ ಗೌರವಾನ್ವಿತ ಸ್ಥಳಕ್ಕೆ ಆಗಮಿಸುತ್ತಿರುವುದು ಅಸಾಧಾರಣ ಪಯಣವನ್ನು ವಿವರಿಸುತ್ತದೆ.
ಕಾಡಿನಲ್ಲಿ ಕೋಲು ಹಿಡಿದು ಒಂಟಿಯಾಗಿ ಗಸ್ತು ತಿರುಗುತ್ತಾ, ಮರಗಳ್ಳರನ್ನು ಎದುರಿಸಿ ಸ್ಥಳೀಯ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಿದ ಜಮುನಾ, ಕಾಡಿನ ರಕ್ಷಣೆಗಾಗಿ ಮಹಿಳೆಯರ ಗುಂಪನ್ನು ಒಗ್ಗೂಡಿಸಿದ ವೀರ ವನಿತೆ. ಈ ಗುಂಪು ಗ್ರಾಮೀಣ ಮಟ್ಟದ ಕಾಡು ರಕ್ಷಣೆಯ ಚಳವಳಿಯಾಗಿ ಬೆಳೆಯಿತು. ಕಾಡಿನ ಸಂಪತ್ತು ದೋಚುವ ಲಾಭಕೋರರಿಂದ ಹಲವು ಬಾರಿ ಜೀವಬೆದರಿಕೆ ಎದುರಾದರೂ ಆಕೆ ಎಂದಿಗೂ ಹಿಂದೆ ಸರಿಯಲಿಲ್ಲ. ಈ ಧೈರ್ಯವೇ ಆಕೆಗೆ ಲೇಡಿ ಟಾರ್ಜನ್ ಎಂಬ ಬಿರುದನ್ನು ತಂದಿತು.
ಈ ಸುದ್ದಿಯನ್ನುಓದಿ: Viral Video: ಇಳಿ ವಯಸ್ಸಿನಲ್ಲಿ ಡೆಲಿವರಿ ಬಾಯ್ ಕೆಲಸ! ಒಂದೇ ಒಂದು ಪೋಸ್ಟ್ ವೃದ್ಧನ ಬದುಕನ್ನೇ ಬದಲಿಸಿತು
ಆಮಂತ್ರಣ ಕುರಿತು ಮಾತನಾಡಿದ ಜಮುನಾ ತುಡು, “ರಾಷ್ಟ್ರಪತಿ ಭವನದಿಂದ ಬಂದ ಈ ಆಮಂತ್ರಣವು ನನಗೆ ಅಪಾರ ಸಂತೋಷ ಮತ್ತು ಗೌರವವನ್ನು ತಂದಿದೆ. ಇದು ನನ್ನ ಛಲವನ್ನು ಹೆಚ್ಚಿಸುವುದರ ಜತೆಗೆ, ಪರಿಸರ ರಕ್ಷಣೆಯ ಕ್ಷೇತ್ರದಲ್ಲಿ ಕೆಲಸ ಮಾಡುವ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಲಿದೆ. ಇದು ನನ್ನ ಹೋರಾಟ ಮತ್ತು ನಿಸ್ವಾರ್ಥ ಸೇವೆಗೆ ಸಾಕ್ಷಿ” ಎಂದಿದ್ದಾರೆ.
ಜಮುನಾ ತುಡು ಅವರ ಕಾರ್ಯವು ಪರಿಸರ ರಕ್ಷಣೆ ಮತ್ತು ಮಹಿಳಾ ಸಬಲೀಕರಣದ ಮಾದರಿ. ಆಕೆಯ ಸಮರ್ಪಣೆಯು ಜಾರ್ಖಂಡ್‌ನ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ, ದೇಶಾದ್ಯಂತ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದೆ. ಈ ಆಮಂತ್ರಣವು ಆಕೆಯ ಹೋರಾಟಕ್ಕೆ ರಾಷ್ಟ್ರೀಯ ಮನ್ನಣೆಯನ್ನು ತಂದಿದ್ದು, ಕಾಡು ರಕ್ಷಣೆಯ ಪ್ರಾಮುಖ್ಯತೆಯನ್ನು ಮತ್ತಷ್ಟು ಒತ್ತಿ ಹೇಳಿದೆ.