ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬದಲಾವಣೆ ಪಥದಲ್ಲಿರುವ ಕೇರಳದಲ್ಲಿ ಯಾರಿಗೆಷ್ಟು ಪಾಲು

‘ಎಲ್‌ಡಿಎಫ್’ ಒಕ್ಕೂಟದ ಸತತ 10 ವರ್ಷಗಳ ಆಡಳಿತದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಾಯಕತ್ವ ಈಗ ಪಕ್ಷಕ್ಕಿಂತ, ಒಕ್ಕೂಟಕ್ಕಿಂತಲೂ ದೊಡ್ಡದಾಗಿ ಬೆಳೆದು‌ ಬಿಟ್ಟಿದೆ. ಅದರ ಪರಿಣಾಮವೇನೋ ಎನ್ನುವಂತೆ ಅವರ ಸರಕಾರದ ಆಡಳಿತ ವೈಖರಿಯಲ್ಲಿ, ಆರ್ಥಿಕ ನೀತಿಯಲ್ಲಿ, ರಾಜಕೀಯ ಮಾರ್ಗದಲ್ಲಿ ಸಾಂಪ್ರದಾಯಿಕ ‘ಕೆಂಪು ಹಾದಿ’ಯಿಂದ ಆಚೆ ಸರಿದಂತಾ ಗಿದೆ ಎಂಬ ಮಾತುಗಳಿವೆ.

ಸಿ.ಎಲ್.ಮನೋಜ್

ಆಡಳಿತಾರೂಢ ಎಲ್‌ಡಿಎಫ್, ಪ್ರತಿಪಕ್ಷ ಯುಡಿಎಫ್, ತೃತೀಯ ಶಕ್ತಿಯಾಗಿ ಬಿಜೆಪಿ‌

ಏಪ್ರಿಲ್‌ಗೆ ಬರಲಿರುವ ಚುನಾವಣೆ ಕೇರಳದಲ್ಲಿ ಮತ್ತೆ ಅಪರೂಪದ ವಿದ್ಯಾಮಾನಗಳಿಗೆ ಅವಕಾಶ ಮಾಡಿಕೊಡಲಿದೆಯೇ? ಹೊಸತೇ ಅದ ರಾಜಕೀಯ ಒಕ್ಕೂಟ ರಚನೆಗೇನಾದರೂ ದಾರಿ ಮಾಡಿಕೊಡಲಿದೆಯೇ? ಅಥವಾ ಎಲ್‌ಡಿಎಫ್‌ ಒಕ್ಕೂಟವೇನಾದರೂ ಐತಿಹಾಸಿಕ ‘ಹ್ಯಾಟ್ರಿಕ್ ಗೆಲುವು’ ಸಾಧಿಸುತ್ತದೆಯೇ? ಅಥವಾ ಇಡೀ ದೇಶದಲ್ಲಿ ‘ಏಕಮೇವ ಎಡಪಕ್ಷ ಸರಕಾರ’ದ ಅಂತ್ಯಕ್ಕೆ ಕಾರಣವಾಗಲಿದೆಯೇ? ಈ ಕುತೂಹಲ ತಣಿಯಲು ಕಾದು ನೋಡ ಬೇಕಿದೆ.

ಕೇರಳದಲ್ಲಿ ವಿಧಾನಸಭೆ ಚುನಾವಣೆ ಏಪ್ರಿಲ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಸದ್ಯ ಆಡಳಿತಾ ರೂಢ ಸಿಪಿಐ-ಎಂ ನೇತೃತ್ವದ ‘ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್’(ಎಲ್ಡಿಎಫ್) ಮತ್ತು ಪ್ರತಿಪಕ್ಷವಾಗಿರುವ ಕಾಂಗ್ರೆಸ್ ನೇತೃತ್ವದ ‘ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್’(ಯುಡಿಎಫ್) ಹಾಗೂ ಅಧಿಕಾರಕ್ಕೇರುವ ಆಶಯ ಹೊಂದಿರುವ ‘ಬಿಜೆಪಿ’ ಸದ್ಯದಲ್ಲೇ ಎದುರಾಗಲಿರುವ ಚುನಾವಣೆಗೆ ಸಜ್ಜಾಗುತ್ತಿವೆ.

ಈ ಚುನಾವಣೆಯ ಫಲಿತಾಂಶ ಎಡಪಕ್ಷಗಳ ಭವಿಷ್ಯ ಹಾಗೂ ಕಾಂಗ್ರೆಸ್‌ನ ಸ್ಥಿರತೆ ಹಾಗೂ ಬಿಜೆಪಿಯ ಆಶಾವಾದದ ಮೇಲೆ ಪರಿಣಾಮ ಬೀರುವುದು ನಿಶ್ಚಿತ.

ಅಲ್ಲದೇ, ರಾಜ್ಯದಲ್ಲಿ ದಶಕಗಳಿಂದ ಮುಂದುವರಿದುಕೊಂಡು ಬಂದಿರುವ ಕೆಲವು ಪಕ್ಷಗಳ ಭಿನ್ನ ‘ಒಕ್ಕೂಟ’ ವ್ಯವಸ್ಥೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ‘ಎಲ್‌ಡಿಎ-’ ಒಕ್ಕೂಟ 2021ರ ಚುನಾವಣೆಯಲ್ಲಿ 2ನೇ ಅವಧಿಗೂ ಗೆಲುವು ಸಾಧಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದೆ. ಕೇರಳ ಚುನಾವಣಾ ಇತಿಹಾಸದಲ್ಲಿ ಆಡಳಿತ ವಿರೋಧಿ ಅಲೆಯನ್ನೂ ಮೀರಿ ಪಕ್ಷ/ಒಕ್ಕೂಟ ವೊಂದು ಸತತ 2ನೇ ಅವಧಿಗೆ ಗೆಲುವು ಕಂಡಿರುವುದು ಇದೇ ಮೊದಲು.

‘ಎಲ್‌ಡಿಎಫ್’ ಒಕ್ಕೂಟದ ಸತತ 10 ವರ್ಷಗಳ ಆಡಳಿತದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಾಯಕತ್ವ ಈಗ ಪಕ್ಷಕ್ಕಿಂತ, ಒಕ್ಕೂಟಕ್ಕಿಂತಲೂ ದೊಡ್ಡದಾಗಿ ಬೆಳೆದು‌ ಬಿಟ್ಟಿದೆ. ಅದರ ಪರಿಣಾಮವೇನೋ ಎನ್ನುವಂತೆ ಅವರ ಸರಕಾರದ ಆಡಳಿತ ವೈಖರಿಯಲ್ಲಿ, ಆರ್ಥಿಕ ನೀತಿಯಲ್ಲಿ, ರಾಜಕೀಯ ಮಾರ್ಗದಲ್ಲಿ ಸಾಂಪ್ರದಾಯಿಕ ‘ಕೆಂಪು ಹಾದಿ’ಯಿಂದ ಆಚೆ ಸರಿದಂತಾ ಗಿದೆ ಎಂಬ ಮಾತುಗಳಿವೆ.

ಇದನ್ನೂ ಓದಿ: Karnataka MLC elections: ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಇದರಿಂದಾಗಿ ಪಕ್ಷದೊಳಗೆ, ಸರಕಾರದ ಸಚಿವ ಸಹೋದ್ಯೋಗಿಗಳ ಮಧ್ಯೆ ಹೊಂದಾಣಿಕೆ ಇಲ್ಲವಾಗಿದೆ. ಅಪ್ಪಟ ಕಮ್ಯುನಿಸ್ಟ್ ಸಿದ್ಧಾಂತದವರೂ ಅಸಮಾಧಾನಗೊಂಡಿದ್ದಾರೆ. ಇದು ಪ್ರತಿಪಕ್ಷ ‘ಯುಡಿಎಫ್’ಗೆ ರಾಜಕೀಯ ಟೀಕೆ, ವಾಗ್ದಾಳಿಗೆ ಅವಕಾಶ ಮಾಡಿಕೊಟ್ಟಿದೆ.

ಇಷ್ಟೆಲ್ಲದರ ಮಧ್ಯೆ, ಸದ್ಯ 80ನೇ ವರ್ಷದಲ್ಲಿರುವ ಪಿಣರಾಯಿ, ಸಿಪಿಐ-ಎಂ ಪಕ್ಷ ಮತ್ತು ಎಲ್‌ಡಿಎಫ್ ಒಕ್ಕೂಟದ ಪರಮೋಚ್ಛ ನಾಯಕರಾಗಿದ್ದಾರೆ. ಆದರೆ, ಅವರು ಈ ವಯಸ್ಸಿನಲ್ಲಿ 2026ರ ವಿಧಾನ ಸಭೆ ಚುನಾವಣೆಯಲ್ಲಿ ಒಕ್ಕೂಟವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬ ಕುತೂಹಲವೂ ಇದೆ.

ಕಳೆದ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘ಎಲ್‌ಡಿಎಫ್’ಗೆ ಹಿನ್ನಡೆಯಾಗಿದೆ. ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವೇನೂ ಪರಿಣಾಮ ಬೀರುವುದಿಲ್ಲ. ಅಲ್ಲದೇ ಈ ಅಳತೆಗೋಲಿನಿಂದಲೇ ಉಳಿದ ಚುನಾವಣೆ ಮೇಲಾಗುವ ಪ್ರಭಾವವನ್ನು ಅಳೆಯಲಾಗುವುದಿಲ್ಲ ಎಂಬುದೇನೋ ಈವರೆಗಿನ ಚುನಾವಣೆಗಳಿಂದ ದೃಢಪಟ್ಟಿದೆ.

ಇದೇ ವೇಳೆ, ಶಬರಿಮಲೆ ದೇಗುಲದಲ್ಲಿ ನಡೆದಿರುವ ಚಿನ್ನ ಕಳವು ಪ್ರಕರಣ ಸಾಮಾಜಿಕವಾಗಿ ಎಡಪಕ್ಷ ಸರಕಾರದ ಪರಿಣಾಮ ಬೀರಿದೆ. ಜನರ ಮನದಲ್ಲಿ ದೇಗುಲ ಆಡಳಿತ, ಸರಕಾರದ ಬಗ್ಗೆ ಅಸಮಾಧಾನ, ಆಕ್ರೋಶ ಉಂಟಾಗಿದೆ. ಇದರಿಂದಾಗಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್‌ಡಿಎಫ್‌ʼಗೆ ಹಿನ್ನಡೆಯಾಗಿದೆ ಎಂದೇ ಅರ್ಥೈಸಲಾಗಿದೆ.

ಅಲ್ಲದೇ, ಹಿಂದೂಗಳ ನಂಬಿಕೆಯ ಕ್ಷೇತ್ರವಾಗಿರುವ ಶಬರಿಮಲೆ ದೇಗುಲಕ್ಕೆ ಯುವತಿಯೊಬ್ಬರ ಪ್ರವೇಶಕ್ಕೆ ರಾಜ್ಯ ಸರಕಾರ ಬೆಂಬಲ ನೀಡಿದ್ದರಿಂದಲೇ 2019ರ ಲೋಕಸಭೆ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಇದೆಲ್ಲದರ ಪರಿಣಾಮವೇನೋ ಎನ್ನುವಂತೆ, ಪ್ರಬಲ ನಿರೀಶ್ವರವಾದಿಯಾದ ‘ಎಲ್‌ಡಿಎಫ್’ ಸರಕಾರ, ಇತ್ತೀಚೆಗೆ ‘ಜಾಗತಿಕ ಅಯ್ಯಪ್ಪ ಸಂಗಮಂ’ ಸಮಾರಂಭವನ್ನು ಆಯೋಜಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಆ ಮೂಲಕ ಎಲ್ಲಾ ಪಕ್ಷಗಳಲ್ಲಿರುವ ಅಯ್ಯಪ್ಪ ಸ್ವಾಮಿ ಭಕ್ತರನ್ನು ಸಮಾಧಾನ ಪಡಿಸುವ ಪ್ರಯತ್ನವಾಗಿದೆ.‌

ಹಿಂದಿನ ಕಹಿ ಘಟನೆಗಳನ್ನು ಮರೆಸುವ ಯತ್ನವೇನೋ ಆಗಿತ್ತು. ಆದರೆ, ಪ್ರಯತ್ನದ ಫಲವನ್ನು ಅಯ್ಯಪ್ಪ ದೇಗುಲದಲ್ಲಿನ ಚಿನ್ನ ಕಳವು ಪ್ರಕರಣ ನುಂಗಿ ಹಾಕಿದೆ. ಸದ್ಯ ನ್ಯಾಯಾಲಯದ ನಿಗಾ ದಲ್ಲಿ ನಡೆದಿರುವ ಈ ದೇಗುಲ ಚಿನ್ನ ಕಳವು ಪ್ರಕರಣದ ತನಿಖೆಯು ಎಲ್‌ಡಿಎಫ್ ಒಕ್ಕೂಟ ಕಳೆದು ಕೊಂಡಿರುವ ಜನರ ವಿಶ್ವಾಸವನ್ನು ಮರಳಿ ತಂದುಕೊಡಲಿದೆ, ಉಂಟಾಗಿರುವ ನಷ್ಟವನ್ನು ತುಂಬಿ ಕೊಡಲಿದೆ ಎಂದು ಹೇಳಲಾಗದು.‌

ರಾಜ್ಯಸರಕಾರ ಚುನಾವಣೆ ಪೂರ್ವ ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೋ ಎಂಬ ಬಗ್ಗೆ ಎಲ್‌ಡಿಎಫ್ ಒಕ್ಕೂಟದೊಳಗೇ ಹಾಗೂ ಪ್ರತಿಪಕ್ಷದೊಳಗೂ ಕುತೂಹಲವಿದೆ. ಪಿಣರಾಯಿ ವಿಜಯನ್ ಇಡೀ ದೇಶದಲ್ಲಿ ಒಂದೇ ರಾಜ್ಯದಲ್ಲಿ ಉಳಿದುಕೊಂಡಿರುವ ಎಡಪಕ್ಷ ಸರಕಾರವನ್ನು ಹೇಗೆ ಮರಳಿ ಅಧಿಕಾರಕ್ಕೆ ತರಲಿದ್ದಾರೆ ಎಂಬ ಪ್ರಶ್ನೆಯೂ ಇದೆ.

ಯುಡಿಎಫ್ಗೆ ಅಳಿವು-ಉಳಿವಿನ ಹೋರಾಟ‌

ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ ಒಕ್ಕೂಟಕ್ಕೆ ಈ ಬಾರಿಯ ಚುನಾವಣೆ ಅಕ್ಷರಶಃ ಅಳಿವು-ಉಳಿವಿನ ಹೋರಾಟವಾಗಿದೆ. 2021ರ ಚುನಾವಣೆಯ ಸೋಲಿನ ಆಘಾತದಿಂದ ಕಳೆದ ಐದು ವರ್ಷಗಳಲ್ಲಿ ಅದೆಷ್ಟರ ಮಟ್ಟಿಗೆ ಚೇತರಿಸಿಕೊಂಡಿದೆ, ಶಕ್ತಿ ಕೂಡಿಸಿಕೊಂಡಿದೆ ಎಂಬುದು ಏಪ್ರಿಲ್ ಚುನಾವಣೆಯಿಂದ ಗೊತ್ತಾಗಲಿದೆ.

ಕಾಂಗ್ರೆಸ್ ಪಕ್ಷದ ಕೇರಳ ಘಟಕ, ಇತರೆ ರಾಜ್ಯಗಳಲ್ಲಿನ ಕಾಂಗ್ರೆಸ್ ಘಟಕಗಳಿಗೆ ಹೋಲಿಸಿದರೆ ಕಳೆದ 3 ಲೋಕಸಭಾ ಚುನಾವಣೆಯಲ್ಲಿ ಅತ್ಯುತ್ತಮ ಫಲಿತಾಂಶ ಕೊಟ್ಟಿದೆ, ಪಕ್ಷಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದೆ. ಅಲ್ಲದೇ, ಕಾಂಗ್ರೆಸ್‌ನ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಸೋದರಿ ಪ್ರಿಯಾಂಕಾ ವಾದ್ರಾ ಅವರಿಗೂ ರಾಜಕೀಯ ಆಶ್ರಯ ಕಲ್ಪಿಸಿಕೊಟ್ಟಿದೆ.

ಇಷ್ಟೆಲ್ಲಾ ಸಕಾರಾತ್ಮಕ ಅಂಶಗಳಿದ್ದೂ ಕೂಡಾ ಕಾಂಗ್ರೆಸ್ ಪಕ್ಷ ಕಳೆದೊಂದು ದಶಕದಿಂದಲೂ ಅಧಿಕಾರ ರಾಜಕಾರಣ ವಿಚಾರದಲ್ಲಿ ರಸ್ತೆಯ ತಿರುವಿನ ಕೊನೆಯಲ್ಲೇ ನಿಲ್ಲುವಂತಾಗಿದೆ. ಮರಳಿ ಅಧಿಕಾರ ಪಡೆಯುವ ಈ ಪ್ರಯತ್ನದಲ್ಲಿ ಕಾಂಗ್ರೆಸ್‌ನ ಬಹುಕಾಲದ ನಂಬಿಕೆಯ ಮತ ಬ್ಯಾಂಕ್ ಕೂಡಾ ಪಕ್ಷವನ್ನು ಪರೀಕ್ಷೆಗೊಡ್ಡಿದೆ.

ಏಕೆಂದರೆ, ದಶಕಗಳಿಂದ ಕಾಂಗ್ರೆಸ್‌ನ ಪರವಾಗಿಯೇ ಇದ್ದ ಹಿಂದೂ ಸಮಾಜ ಮತ್ತು ಕ್ರಿಶ್ಚಿಯನ್ ಸಮುದಾಯದ ಕೆಲವು ಭಾಗ ಈಗ ಬಿಜೆಪಿಯತ್ತ ವಾಲುತ್ತಿದೆ. ಇನ್ನೊಂದೆಡೆ, ಯುಡಿಎಫ್ ಜತೆಗೇ ಈವರೆಗೂ ಇದ್ದ, ಸಾಂಪ್ರದಾಯಿಕ ಮಿತ್ರ ಪಕ್ಷವಾಗಿದ್ದ ಕೇರಳ ಕಾಂಗ್ರೆಸ್(ಮಣಿ) ಕೇರಳದ ಕೇಂದ್ರ ಭಾಗದಲ್ಲಿನ ಕ್ರೈಸ್ತ ಸಮುದಾಯದ ಮೇಲೆ ಪ್ರಭಾವ ಹೊಂದಿದೆ. ಆ ಪಕ್ಷವೀಗ ‘ಎಲ್‌ಡಿಎಫ್’ಗೆ ಬದಲಾಗಿದೆ. ‌

ಇನ್ನೊಂದೆಡೆ ಯುಡಿಎಫ್‌ʼನಲ್ಲಿ ಸಂಘಟನಾ ಕೌಶಲದ ಕೊರತೆ, ಆಂತರಿಕ ಕಲಹ, ನಾಯಕತ್ವ ವಿವಾದ ಒಕ್ಕೂಟವನ್ನು ಶಕ್ತಿಹೀನವಾಗಿಸುತ್ತಿದೆ. ಅದರಲ್ಲೂ ಕಾಂಗ್ರೆಸ್‌ನ ಕೇರಳ ಘಟಕದೊಳಗಿನ ಅಸಹನೆ ಎಲ್‌ಡಿಎಫ್ ಒಕ್ಕೂಟವನ್ನು ಮರಳಿ ಅಧಿಕಾರದ ಗದ್ದುಗೆ ಏರುವಂತೆ ಮಾಡುವುದಕ್ಕೆ ತೊಡರುಗಾಲಾಗಿದೆ.

ಏನೇ ಆದರೂ ಈ ಬಾರಿ ದಶಕದ ಅಧಿಕಾರ ದುರ್ಲಬತೆಯನ್ನು ಕೊನೆಗಾಣಿಸಬೇಕಿದೆ ಹಾಗೂ ‘ಯುಡಿಎಫ್’ ಅನ್ನು ಮೊದಲಿನಂತೆಯೇ ‘ಒಕ್ಕೂಟ’ವಾಗಿ ಕಾಪಾಡಿಕೊಳ್ಳಬೇಕಾದ ಸವಾಲೂ ಎದುರಾಗಿದೆ.‌ ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘ಯುಡಿಎಫ್’ಗೆ ಸಿಕ್ಕ ಬಲವಾದ ಗೆಲುವು, ‌ಜತೆಗೆ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳಲ್ಲಿನ ಗೆಲುವು ‘ಯುಡಿಎಫ್’ಗೆ ಏಪ್ರಿಲ್ ಚುನಾವಣೆಗೂ ಮುಂಚಿನ ಟಾನಿಕ್ ರೀತಿ ಕೆಲಸ ಮಾಡಿ ಉತ್ಸಾಹ ತುಂಬಿದೆ.

ಜತೆಗೆ ‘ಎಲ್ಡಿಎಫ್’ ವಿರುದ್ಧ 10 ವರ್ಷಗಳ ಆಡಳಿತದಿಂದ ಸೃಷ್ಟಿಯಾಗಿರುವ ಆಡಳಿತ ವಿರೋಧಿ ಅಲೆಯ ಬಲವನ್ನೂ ಪಡೆದುಕೊಂಡು ಮರಳಿ ಅಧಿಕಾರಕ್ಕೇರುವ ಅವಕಾಶ ಯುಡಿಎಫ್ಗಿದೆ. ಈ ಅಂಶವೇ ಯುಡಿಎಫ್ ನಾಯಕರಿಗೆ ಆಶಾವಾದ ಹುಟ್ಟು ಹಾಕಿದೆ. ಆದರೆ, ಪ್ರಸ್ತುತ ಯುಡಿಎಫ್‌ʼನ ಸಮಸ್ಯೆ ಏನೆಂದರೆ, ಕಾಂಗ್ರೆಸ್ ಘಟಕದಲ್ಲಿ ಸಮರ್ಥ ನಾಯಕತ್ವದ ಕೊರತೆ ಹಾಗೂ ಹಿರಿತನ, ಅನುಭವ ರಾಹಿತ್ಯ ಅಂಶಗಳೇ ತೊಡಕಾಗಿವೆ.

ಇದು ಯುಡಿಎಫ್‌ ಒಕ್ಕೂಟವನ್ನು ಸಮರ್ಥವಾಗಿ ಮುನ್ನಡೆಸುವುದಕ್ಕೆ ಹಾಗೂ ಪಿಣರಾಯಿ ಅವರಿಗೆ ಪ್ರಬಲ ಎದುರಾಳಿಯಾಗಿ ಮುನ್ನುಗ್ಗುವುದಕ್ಕೆ ಅಡ್ಡಿಯಾಗಿವೆ. ಈ ಅಂಶಗಳೇ ರಾಜ್ಯ ಕಾಂಗ್ರೆಸ್ ಘಟಕ ಮತ್ತು ಯುಡಿಎಫ್‌ ಗೆ ಒಟ್ಟಾಗಿ ಕೆಲಸ ಮಾಡುವುದಕ್ಕೆ, ಒಗ್ಗಟ್ಟು ಕಾಯ್ದು ಕೊಳ್ಳುವುದಕ್ಕೆ ತೊಡರುಗಾಲಾಗಿವೆ.

ಈ ಮಧ್ಯೆ, ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್, ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಚೆನ್ನಿತ್ತಾಲ ಮತ್ತು ಶಶಿ ತರೂರ್ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿದ್ದಾರೆ. ಈ ಆಕಾಂಕ್ಷಿಗಳಲ್ಲಿ ಸಹಮತ ಮೂಡಿಸುವುದು ಹಾಗೂ ಚುನಾವಣೆ ಪೂರ್ವದಲ್ಲಿ ಪಕ್ಷ ಮತ್ತು ಒಕ್ಕೂಟದಲ್ಲಿ ಆಂತರಿಕ ಸೌಹಾ ರ್ದತೆ ಕಾಯ್ದುಕೊಳ್ಳುವುದು ಸವಾಲಿನ ಕೆಲಸವಾಗಿದೆ.

ಹಾಗಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಗೂ ಮುನ್ನವೇ ಘೋಷಿಸದೇ, ಸಾಮೂಹಿಕ ನಾಯಕತದಲ್ಲಿ ಚುನಾವಣೆ ಎದುರಿಸಬೇಕಾಗಿದೆ. ಇತ್ತೀಚೆಗೆ ವಯನಾಡಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ 2 ದಿನಗಳ ಚುನಾವಣಾ ಪೂರ್ವ ಶಿಬಿರ ನಡೆದಿದ್ದು, ರಾಜ್ಯಾದ್ಯಂತ ಯುಡಿಎಫ್‌ ‘ಜಾಥಾ’ ಹಮ್ಮಿಕೊಳ್ಳಲಾಗುತ್ತಿದೆ.

ಜತೆಗೆ ‘ಎಲ್‌ಡಿಎಫ್’ನಲ್ಲಿರುವ ಕೆಲವು ಹಳೆಯ ಮಿತ್ರಪಕ್ಷಗಳನ್ನು ಸೆಳೆದುಕೊಳ್ಳುವ ಪ್ರಯತ್ನವೂ ನಡೆದಿದೆ. ಆ ಮೂಲಕ ಚುನಾವಣೆಗೆ ಅಗತ್ಯವಾದ ಶಕ್ತಿ ಒಗ್ಗೂಡಿಸುವ ಪ್ರಯತ್ನವನ್ನೂ ಯುಡಿಎಫ್ ಮಾಡುತ್ತಿದೆ.‌

ತೃತೀಯ ಶಕ್ತಿಯಾಗಿ ಬಿಜೆಪಿ ಕೇರಳದಲ್ಲಿ ಬಿಜೆಪಿಗೆ ಚುನಾವಣಾ ರಂಗಭೂಮಿ ಎನ್ನುವುದೇ ಈವರೆಗೂ ಇರಲಿಲ್ಲ. ಹೊಸದಾಗಿ ರೂಪಿಸಿಕೊಳ್ಳಬೇಕಿದೆ. 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ ರಚನೆ ಆದನಂತರ ಕೇರಳದಲ್ಲಿನ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣಲಾರಂಭಿಸಿದೆ. ಮೋದಿ ಆಡಳಿತದ ಸತತ 3 ಅವಧಿಯಲ್ಲಿ ಬಿಜೆಪಿ ವಿದ್ಯಪರ್ವತ ದಾಚೆಗೂ ಪಸರಿಸಲಾರಂಭಿಸಿದೆ.

ಕೇರಳದಲ್ಲಿಯೂ ಅದರ ಬೇರುಗಳು ನೆಲೆಯೂರಲಾರಂಭಿಸಿವೆ. ಅದರ ಫಲ 2024ರ ಲೋಕಸಭಾ ಚುನಾವಣೆಯಲ್ಲಿ ಕಾಣಿಸಿದೆ. ಬಿಜೆಪಿಗೆ ಮೊದಲ ಗೆಲುವು ಸಿಕ್ಕಿದೆ. ಅದಲ್ಲದೇ, ಡಿಸೆಂಬರ್‌ನಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ವನ್ನೂ ಗಳಿಸಿದೆ.

ಇದು ಬಿಜೆಪಿ ಪಾಲಿಗೆ ಕೇರಳದಲ್ಲಿನ ರಾಜಕೀಯದಲ್ಲಿ ಹೊಸ ಮೈಲುಗಲ್ಲು ಎನಿಸಿದೆ. ಈ ಎರಡು ಗೆಲುವುಗಳೇ ಬಿಜೆಪಿಯನ್ನು ಕೇರಳದ ಚುನಾವಣಾ ರಾಜಕೀಯದಲ್ಲಿ ತೃತೀಯ ಶಕ್ತಿಯಾಗಿಸುವ ಸಾಧ್ಯತೆಯನ್ನು ತೋರಿಸಿಕೊಟ್ಟಿವೆ.

2024ರ ಲೋಕಸಭಾ ಚುನಾವಣೆಯಲ್ಲಿ ಕಿರಿಯ ಮಿತ್ರಪಕ್ಷವಾದ ‘ಬಿಡಿಜೆಎಸ್’ ಜತೆಗೂಡಿ ತ್ರಿಶೂರು ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತು. ಅಷ್ಟೇ ಅಲ್ಲದೇ, ಆ ಚುನಾವಣೆಯಲ್ಲಿ ಚಲಾ ವಣೆ ಆದ ಮತಗಳಲ್ಲಿ ಶೇ.20ರಷ್ಟು ಮತಗಳನ್ನೂ ಗಳಿಸಿತು. ಅಲ್ಲದೇ, ಅದೇ ಚುನಾವಣೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದ್ದರೆ, ಉಳಿದ 9 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ 2ನೇ ಸ್ಥಾನದಲ್ಲಿದ್ದರು.

ಇದು ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ದೊಡ್ಡ ಸಾಕ್ಷಿಯಾಗಿದೆ. ರಾಜ್ಯದಲ್ಲಿನ ಬಿಜೆಪಿಯ ಈ ಪ್ರಗತಿ ಎಲ್‌ಡಿಎಫ್ ಮತ್ತು ಯುಡಿಎಫ್ ಒಕ್ಕೂಟಗಳನ್ನು ಜಾಗೃತಗೊಳಿಸಿದೆ. ಎಲ್‌ಡಿಎಫ್ ಸದ್ಯದ ಪರಿಸ್ಥಿತಿ ಕಠಿಣವಾಗಿದೆ. ‌

ಒಂದೆಡೆ ಇಸ್ಲಾಮಿಕ್ ಕಠಿಣ ಮೂಲಭೂತವಾದದ ಎದುರು ತಳೆಯಬೇಕಾದ ನಿಲುವು, ಇನ್ನೊಂದೆಡೆ ಜಮಾತ್ ಎ ಇಸ್ಲಾಮಿ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಹಾಗೂ ಹಿಂದೂ ಸಂಘಟನೆ ಗಳಾದ ಎಸ್‌ಎನ್‌ಡಿಪಿ ಮತ್ತು ಎನ್‌ಎಸ್‌ಎಸ್ ಮೂಲಕ ಎಡಪಕ್ಷಗಳ ಪರವಾದ ಹಿಂದೂ ಮತಗಳು ಬಿಜೆಪಿಯತ್ತ ಹೋಗುವುದನ್ನು ತಡೆಯುವುದು ಎಲ್ಲವೂ ದೊಡ್ಡ ಸವಾಲಾಗಿದೆ.

ಇದೇ ಬಗೆಯಲ್ಲಿ ಕಾಂಗ್ರೆಸ್ ಕೂಡಾ ಸವಾಲು ಎದುರಿಸುತ್ತಿದೆ. ಹಿಂದೂ ಮತ್ತು ಕ್ರೈಸ್ತ ಸಮುದಾ ಯದ ಮತಗಳು ಬಿಜೆಪಿಗೆ ವರ್ಗಾವಣೆ ಆಗುವುದನ್ನು ತಡೆಯಬೇಕಾದ ಕಠಿಣ ಸವಾಲು ಕಾಂಗ್ರೆಸ್ ಪಕ್ಷದ್ದಾಗಿದೆ. ಬಿಜೆಪಿಯ ಕೇಂದ್ರದಲ್ಲಿನ ನಾಯಕತ್ವ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರ ಶೇಖರ್ ಮೂಲಕ ಕೇರಳ ಬಿಜೆಪಿ ಘಟಕದಲ್ಲಿ ಹೊಸ ನಾಯಕತ್ವವನ್ನು ಹುಟ್ಟು ಹಾಕುತ್ತಿದೆ.

ಆ ಮೂಲಕ ಹಳೆಯ ಬಿಜೆಪಿ ಘಟಕದಲ್ಲಿ ಹುಳುಕುಗಳನ್ನು ನಿವಾರಿಸಿಕೊಳ್ಳಲೆತ್ನಿಸುತ್ತಿದೆ. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಕ್ರೈಸ್ತರ ಆಚರಣೆಗಳ ಮೇಲೆ ಕೆಲವು ಹಿಂದೂ ಸಂಘಟನೆಗಳು ದಾಳಿ ನಡೆಸಿರುವುದು ಬಿಜೆಪಿಗೆ ಸಹಾಯಕವಾಗಿಯೇನೂ ಇಲ್ಲ. ಆದಷ್ಟೂ ಬೇಗ ಇಂಥ ಕುಕೃತ್ಯಗಳಿಗೆ ಬಿಜೆಪಿ ರಾಜ್ಯ ಘಟಕದ ನಾಯಕತ್ವ ತಡೆ ಹಾಕಿ ಪಕ್ಷದ ಮತಬ್ಯಾಂಕ್‌ಗೆ ನಷ್ಟ ಹೆಚ್ಚುವುದನ್ನು ತಪ್ಪಿಸಬೇಕಿದೆ.

ಏಪ್ರಿಲ್‌ನ ಚುನಾವಣೆ ವೇಳೆಗೆ ಬಿಜೆಪಿ ಗರಿಷ್ಠ ಪ್ರಮಾಣದಲ್ಲಿ ಚುನಾವಣಾ ತಂತ್ರಗಳನ್ನು ರೂಪಿಸಿ ಕೊಳ್ಳಲಿದೆ ಎಂಬ ನಿರೀಕ್ಷೆ ಇದೆ. ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ದೊಡ್ಡ ನಾಯಕರೇ ಚುನಾವಣಾ ಕಣಕ್ಕಿಳಿಯಲಿದ್ದಾರೆ.