TMC ತೊರೆದಿದ್ದ ಮಾಜಿ ಸಂಸದೆ ಕೋಯಲ್ ಮಲಿಕ್‌ಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಹುದ್ದೆ ಹಾಗೂ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೋಯಲ್ ಮಲ್ಲಿಕ್ ಅವರಿಗೆ ಬಿಜೆಪಿಯು ಪಶ್ಚಿಮ ಬಂಗಾಳದ ರಾಜ್ಯಸಭಾ ಉಪಚುನಾವಣೆ ಟಿಕೆಟ್ ಘೋಷಣೆ ಮಾಡಿದೆ. ನಟಿ ಕೋಯೆಲ್ ಮಲಿಕ್ ತಮ್ಮ ನಟನೆಗೆ ಹಲವು ಪುರಸ್ಕಾರ ಪಡೆದಿದ್ದಾರೆ.
ಸಂಗ್ರಹ ಚಿತ್ರ -
ಕೊಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಹುದ್ದೆ ಹಾಗೂ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೋಯಲ್ ಮಲ್ಲಿಕ್ (Koel Mallick) ಅವರಿಗೆ ಬಿಜೆಪಿಯು ಪಶ್ಚಿಮ ಬಂಗಾಳದ ರಾಜ್ಯಸಭಾ ಉಪಚುನಾವಣೆ ಟಿಕೆಟ್ ಘೋಷಣೆ ಮಾಡಿದೆ. ಇದರ ಜೊತೆಗೆ ಉತ್ತರಾಖಂಡದಿಂದ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ದಿನೇಶ್ ಆರ್ಯ ಅವರ ಹೆಸರನ್ನ ಇಂದು ಘೋಷಣೆ ಮಾಡಿದೆ.
ಕೊಯೆಲ್ ಬಂಗಾಳಿ ಚಿತ್ರರಂಗದ ಅತ್ಯಂತ ಪ್ರಸಿದ್ಧ ಕುಟುಂಬಗಳಲ್ಲಿ ಒಂದರಿಂದ ಬಂದವರು. ಅವರ ತಂದೆ, ಹಿರಿಯ ನಟ ರಂಜಿತ್ ಮಲ್ಲಿಕ್, ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಮನೆಮಾತಾಗಿದ್ದಾರೆ. ಕೊಯೆಲ್ ಬಂಗಾಳಿ ಪರದೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೋಯಲ್ ಮಲ್ಲಿಕ್ ಅವರು ಇದೇ ವರ್ಷದ ಏಪ್ರಿಲ್‌ನಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆದರೆ, ನಂತರ ಜುಲೈ 16, 2026 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ನಟಿ ಕೋಯೆಲ್ ಮಲಿಕ್ ತಮ್ಮ ನಟನೆಗೆ ಹಲವು ಪುರಸ್ಕಾರ ಪಡೆದಿದ್ದಾರೆ. ಬಂಗಾಳ ಫಿಲ್ಮ್ ಫೇರ್ ಅವಾರ್ಡ್, ಆನಂದಲೋಕ ಪುರಸ್ಕಾರ, ಪಶ್ಚಿಮ ಬಂಗಾಳ ಸರ್ಕಾರ ನೀಡುವ ಮಹಾನಾಯಕ ಸಮ್ಮಾನ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ದ್ವೈವಾರ್ಷಿಕ ಚುನಾವಣೆಗಳ ಜೊತೆಗೆ ಪಶ್ಚಿಮ ಬಂಗಾಳದ 1 ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ರುಕ್ಮಿಣಿ ಮಲ್ಲಿಕ್ (ಅಲಿಯಾಸ್ ಕೋಯಲ್ ಮಲ್ಲಿಕ್) ಅವರು ಟಿಎಂಸಿ ಯಿಂದ ರಾಜ್ಯಸಭಾ ಸಂಸದರಾಗಿದ್ದರು, 2032ರ ಏಪ್ರಿಲ್ 2ರ ವರೆಗೆ ಅವರ ಅಧಿಕಾರವಧಿ ಇತ್ತು. ಆದ್ರೆ 2026ರ ಜುಲೈ 16 ರಂದು ರಾಜ್ಯಸಭೆಗೆ ರಾಜೀನಾಮೆ ನೀಡಿದ ನಂತರ ಈ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.