ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿದ್ಯಾರ್ಥಿ ನಾಯಕನಿಂದ ಬಾಲಿವುಡ್‌ ಅನ್ನೇ ನಡುಗಿಸುವ ಗ್ಯಾಂಗ್‌ಸ್ಟರ್‌ವರೆಗೆ: ಲಾರೆನ್ಸ್‌ ಬಿಷ್ಣೋಯ್‌ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದು ಹೇಗೆ? ಏನಿವನ ಹಿನ್ನೆಲೆ?

Who Is Lawrence Bishnoi? ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಮೇಲೆ ನಡೆದ ಗುಂಡಿನ ದಾಳಿ ಪ್ರಯತ್ನದಿಂದಾಗಿ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಯಾವುದೇ ಅಪರಾಧ ಹಿನ್ನೆಲೆ ಹೊಂದಿರದ ಆತ ಗ್ಯಾಂಗ್‌ಸ್ಟರ್‌ ಆಗಿದ್ದು ಹೇಗೆ? ಆತನಿಗೂ ಸಲ್ಮಾನ್‌ ಖಾನ್‌ ಇರುವ ದ್ವೇಷವೇನು? ಇಲ್ಲಿದೆ ವಿವರ.

ಲಾರೆನ್ಸ್‌ ಬಿಷ್ಣೋಯ್ ಮತ್ತು ಸಲ್ಮಾನ್‌ ಖಾನ್‌ (ಸಂಗ್ರಹ ಚಿತ್ರ)

ದೆಹಲಿ, ಅ. 19: ಆತ ಒಂದು ಕಾಲದಲ್ಲಿ ಕಾಲೇಜ್‌ ವಿದ್ಯಾರ್ಥಿ ನಾಯಕ. ತಂದೆ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ಬಳಿಕ ವೃತ್ತಿಪರ ಕೃಷಿಕರಾದವರು. ಯಾವ ಕಡೆಯಿಂದ ನೋಡಿದರೂ ಆತನಿಗೆ ಅಪರಾಧದ ಹಿನ್ನೆಲೆ ಇಲ್ಲ. ಆದರೂ ಈಗ ಆತ ದೇಶದ ಖತರ್ನಾಕ್‌ ಗ್ಯಾಂಗ್‌ಸ್ಟರ್‌ ಎನಿಸಿಕೊಂಡಿದ್ದಾನೆ. ಇಡೀ ಬಾಲಿವುಡ್‌ ಅನ್ನೇ ತನ್ನ ಬೆರಳ ತುದಿಯಲ್ಲಿ ಆಟವಾಡಿಸುತ್ತಿದ್ದಾನೆ. ಅದೂ ಜೈಲಿನಲ್ಲಿ ಕುಳಿತೇ. ಭಾರತ ಮಾತ್ರವಲ್ಲ ವಿದೇಶದಲ್ಲೂ ತನ್ನ ಜಾಲ ಹರಡಿಕೊಂಡಿರುವ ಆತನ ಕೃತ್ಯಗಳಿಗೆ ಬ್ರೇಕ್‌ ಹಾಕಲು ಸಾಧ್ಯವಾಗುತ್ತಿಲ್ಲ. ನಾವೀಗ ಯಾರ ಬಗ್ಗೆ ಹೇಳುತ್ತಿದ್ದೇವೆ ಎನ್ನುವುದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಹೌದು, ಅಪರಾಧ ಲೋಕದ ಅನಭಿಷಕ್ತ ದೊರೆಯಾಗಿ ಮೆರೆಯುತ್ತಿರುವ ಲಾರೆನ್ಸ್‌ ಬಿಷ್ಣೋಯ್‌ (Lawrence Bishnoi) ಎನ್ನುವ 33 ವರ್ಷದ ಕ್ರಿಮಿನಲ್‌ ಸದ್ಯ ಮತ್ತೊಮ್ಮೆ ಸುದ್ದಿಯಾಗಿದ್ದಾನೆ. ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ (Tiger Shroff) ಮೇಲೆ ಲಾರೆನ್ಸ್‌ನ ಬಿಷ್ಣೋಯ್‌ ಗ್ಯಾಂಗ್‌ ಸದಸ್ಯರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಟ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಸಲ್ಮಾನ್‌ ಖಾನ್‌ ಸಹವಾಸ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಟೈಗರ್‌ ಶ್ರಾಫ್‌ ಮೇಲೆ ಈ ದಾಳಿ ನಡೆದಿದೆ. ಮುಂಬೈಯಲ್ಲಿ ಅಕ್ಟೋಬರ್‌ 18ರಂದು ಬೈಕ್‌ನಲ್ಲಿ ಬಂದು ಬಿಷ್ಣೋಯ್‌ ಗ್ಯಾಂಗ್‌ನ ಮೂವರು ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಟೈಗರ್‌ ಶ್ರಾಫ್‌ ಸ್ವಲ್ಪದರಲ್ಲೇ ಪಾರಾಗಿದ್ದು, ಚಾಲಕ ಸೇರಿ ಇಬ್ಬರಿಗೆ ಗಾಯವಾಗಿದೆ. ಸಲ್ಮಾನ್‌ ಖಾನ್‌ ಜತೆ ನಂಟು ಹೊಂದಿರುವ ಎಲ್ಲರ ಮೇಲೂ ದಾಳಿ ಮಾಡುವುದಾಗಿ ಗ್ಯಾಂಗ್‌ ಬೆದರಿಕೆ ಒಡ್ಡಿದೆ.

ಬಾಲಿವುಡ್‌ ಮೇಲೆ ಬಿಷ್ಣೋಯ್ ಗ್ಯಾಂಗ್ ಕೆಂಗಣ್ಣು; ಯಾರೆಲ್ಲ ಇದ್ದಾರೆ ಇವರ ಹಿಟ್‌ ಲಿಸ್ಟ್‌ನಲ್ಲಿ?

ಸಲ್ಮಾನ್‌ ಖಾನ್‌ ಮೇಲೆ ಯಾಕಿಷ್ಟು ದ್ವೇಷ?

ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ಗೆ ಸಲ್ಮಾನ್‌ ಖಾನ್‌ ಮೇಲೆ ಯಾಕಿಷ್ಟು ದ್ವೇಷ ಎನ್ನುವುದನ್ನು ಮೊದಲು ನೋಡೋಣ. ಇವರ ಮಧ್ಯೆಯ ದ್ವೇಷಕ್ಕೆ ಸುಮಾರು 3 ದಶಕಗಳ ಹಿಂದಿನ ಘಟನೆಯೇ ಕಾರಣ. ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಡುವಿನ ಹಗೆತನಕ್ಕೆ ಕಾರಣವಾಗಿದ್ದು 1998ರ ಕೃಷ್ಣಮೃಗ ಬೇಟೆ ಪ್ರಕರಣ. ಅಂದು ರಾಜಸ್ಥಾನದ ಜೋಧ್‌ಪುರದಲ್ಲಿ ‘ಹಮ್ ಸಾಥ್ ಸಾಥ್ ಹೈ’ ಬಾಲಿವುಡ್‌ ಚಿತ್ರದ ಶೂಟಿಂಗ್‌ ನಡೆಯುತ್ತಿತ್ತು. ಈ ವೇಳೆ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ತಬು, ನೀಲಂ ಮತ್ತಿತರರು ಕಂಕಣಿ ಗ್ರಾಮದ ಬಳಿ ಸಂರಕ್ಷಿತ ವನ್ಯಜೀವಿಯಾದ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿ ಕೊಂದಿದ್ದರು ಎನ್ನಲಾಗಿದೆ. ಬಿಷ್ಣೋಯ್ ಸಮುದಾಯದ ಪಾಲಿಗೆ ಕೃಷ್ಣಮೃಗ ಅತ್ಯಂತ ಪವಿತ್ರ. ಅದರ ಸಂರಕ್ಷಣೆಯೇ ಅವರ ಮೊದಲ ಆದ್ಯತೆ.

ಈ ವಿಚಾರವಾಗಿ ಬಿಷ್ಣೋಯ್‌ ಗ್ಯಾಂಗ್‌ ಸಲ್ಮಾನ್‌ ಖಾನ್‌ ವಿರುದ್ಧ ಕಿಡಿ ಕಾರುತ್ತಲೇ ಇದೆ. ಕಾನೂನು ಸಮರವೂ ನಡೆಯುತ್ತಿದ್ದು, ಬೇಟೆ ಪ್ರಕರಣದಲ್ಲಿ 2018ರಲ್ಲಿ ಸಲ್ಮಾನ್‌ ಖಾನ್‌ಗೆ ಬಂಧನ ಭೀತಿ ಎದುರಾಗಿತ್ತು. ಆಗ ಅವರು ಜಾಮೀನು ಪಡೆ ಬಚಾವಾಗಿದ್ದರು.

ಬಹಿರಂಗ ಕೊಲೆ ಬೆದರಿಕೆ

2018ರಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಮೊದಲ ಬಾರಿ ಸಲ್ಮಾನ್‌ ಖಾನ್‌ಗೆ ಬಹಿರಂಗ ಕೊಲೆ ಬೆದರಿಕೆ ಹಾಕಿದ್ದ. 'ಎಕನಾಮಿಕ್ ಟೈಮ್ಸ್' ವರದಿಯ ಪ್ರಕಾರ, ಜೋಧಪುರ ನ್ಯಾಯಾಲಯಕ್ಕೆ ಕರೆತರುವಾಗ ಮಾಧ್ಯಮಗಳ ಮುಂದೆ, "ಸಲ್ಮಾನ್ ಖಾನ್‌ನನ್ನು ಇಲ್ಲೇ ಜೋಧ್‌ಪುರದಲ್ಲಿ ಕೊಲ್ಲಲಾಗುವುದು...ಆಗ ನಮ್ಮ ನಿಜವಾದ ಗುರುತು ಏನೆಂಬುದು ಅವನಿಗೆ ತಿಳಿಯುತ್ತದೆ" ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದ. 2022ರಲ್ಲಿ ಸಲ್ಮಾನ್‌ ಖಾನ್‌ನ ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರ ಅವರ ಮನೆಗೆ ಬಂದಿತ್ತು.

2023ರಲ್ಲಿ ಸಲ್ಮಾನ್‌ ಖಾನ್‌ ಮ್ಯಾನೇಜರ್‌ಗೆ ಬೆದರಿಕೆಯ ಇಮೇಲ್‌ ಬಂದಿತ್ತು. 2024ರಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್‌ ಖಾನ್‌ ಮನೆ ಹೊರಗೆ ಶೂಟೌಟ್‌ ನಡೆದಿತ್ತು. ಸಲ್ಮಾನ್‌ ಖಾನ್‌ ಕ್ಷಮೆ ಕೋರಬೇಕು ಎನ್ನುವುದು ಬಿಷ್ಣೋಯ್‌ ಗ್ಯಾಂಗ್‌ನ ಪ್ರಮುಖ ಬೇಡಿಕೆ. ಕ್ಷಮೆ ಕೋರದಿದ್ದರೆ ಅವರಿಗೆ ಸಂಬಂಧಿಸಿದ ಪ್ರತಿಯೊಬ್ಬರನ್ನೂ ಹತ್ಯೆ ಮಾಡುವುದಾಗಿ ಸವಾಲು ಹಾಕಿದೆ.

ಲಾರೆನ್ಸ್‌ ಬಿಷ್ಣೋಯ್‌ ಹಿನ್ನೆಲೆ

1993ರ ಫ್ರಬ್ರವರಿ 12ರಂದು ಪಂಜಾಬ್‌ನ ಫಾಝಿಲ್ಕ ಜಿಲ್ಲೆಯ ದುತ್ತರನ್‌ವಾಲಿ ಗ್ರಾಮದ ಬಿಷ್ಣೋಯ್‌ ಸಮುದಾಯವೊಂದರಲ್ಲಿ ಜನಿಸಿದ ಬಾಲ್ಕರಣ್‌ ಬ್ರಾರ್‌ ಮುಂದೆ ಶಾಲೆಯಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಎಂದು ಹೆಸರು ಬದಲಾಯಿಸಿಕೊಂಡ. ಇವರದ್ದು ಅತ್ಯಂತ ಶ್ರೀಮಂತ ಕುಟುಂಬ. ಇವರಿಗೆ ಊರಲ್ಲಿ ಸುಮಾರು 100 ಎಕ್ರೆ ಕೃಷಿ ಜಮೀನು ಕೂಡ ಇದೆ.

ಬೆಳ್ಳಿ ಚಮಚವನ್ನು ಬಾಯಲ್ಲಿ ಇಟ್ಟುಕೊಂಡೇ ಜನಿಸಿದ ಲಾರೆನ್ಸ್‌ ಆರಂಭಿಕ ಶಿಕ್ಷಣವನ್ನು ಅಬೋಹರ್‌ನಲ್ಲಿ ಮುಗಿಸಿ 2010ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಚಂಡೀಗಢದ ಡಿಎವಿ ಕಾಲೇಜಿಗೆ (DAV College) ಸೇರಿದ. ಅಲ್ಲಿ ಆತನ ಬದುಕಿಗೆ ಮಹತ್ತರ ತಿರುವು ಸಿಕ್ಕಿತು. ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗಿದ್ದ ಆತ ರಾಜಕೀಯದಲ್ಲಿ ಸಕ್ರಿಯನಾಗಿದ್ದ.

ಈ ವೇಳೆ ಆತನಿಗೆ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಪರಿಚಯವಾಯ್ತು. ಆತನಿಂದಾಗಿ ಲಾರೆನ್ಸ್ ಬಿಷ್ಣೋಯ್ ಕೂಡ ಅಪರಾಧ ಲೋಕಕ್ಕೆ ಕಾಲಿಟ್ಟ. ಮುಂದೆ ಪಂಜಾಬ್‌ ವಿಶ್ವವಿದ್ಯಾನಿಲಯದಲ್ಲಿ ಎಲ್‌ಎಲ್‌ಬಿ ಓದುವಾಗಲೂ ಲಾರೆನ್ಸ್‌ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಸದ್ಯ ಆತನ ಗ್ಯಾಂಗ್‌ ಕೆನಡಾ ಸೇರಿ ವಿದೇಶಕ್ಕೂ ಹಬ್ಬಿದೆ.

ಸಲ್ಮಾನ್‌ ಖಾನ್‌- ಟೈಗರ್‌ ಶ್ರಾಫ್‌ ಮೇಲೆ ಅಟ್ಯಾಕ್‌; ದಾಳಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಿಷ್ಣೋಯ್‌ ಗ್ಯಾಂಗ್‌ ಪೋಸ್ಟ್‌ ಹಾಕೋದೇಕೆ?

ಜೈಲಿನಲ್ಲಿದ್ದುಕೊಂಡೇ ಗ್ಯಾಂಗ್‌ ನಿಯಂತ್ರಣ

2015ರಿಂದ ಜೈಲಿನಲ್ಲೇ ಇರುವ ಬಿಷ್ಣೋಯ್, ಸುಮಾರು 700 ಜನರ ಬಲಾಢ್ಯ ತಂಡವನ್ನು ಕಟ್ಟಿಕೊಂಡಿದ್ದಾನೆ. ಅಲ್ಲಿದ್ದುಕೊಂಡೇ ಗ್ಯಾಂಗ್‌ ನಿಯಂತ್ರಿಸುತ್ತಿದ್ದಾನೆ. ಪಂಜಾಬಿ ಗಾಯಕ ಸಿಧು ಮೂಸೆವಾಲ, ಕೆನಡಾದ ಗ್ಯಾಂಗ್‌ಸ್ಟರ್‌ ಸುಖದೂಲ್ ಸಿಂಗ್ ಅಲಿಯಾಸ್‌ ಸುಖ ದುನೆಕೆ, ಸುಖದೇವ್‌ ಸಿಂಗ್‌ ಗೋಗಮೇದಿ, ಬಾಬಾ ಸಿದ್ದಿಕಿ ಮೊದಲಾದವರ ಹತ್ಯೆಯಲ್ಲೂ ಈ ಗ್ಯಾಂಗ್‌ನ ಹೆಸರು ಥಳುಕು ಹಾಕಿಕೊಂಡಿದೆ.

2026ರ ಪಂಜಾಬ್ ಪೊಲೀಸರ ದಾಖಲೆಯ ಪ್ರಕಾರ, ಸುಮಾರು 16 ವರ್ಷಗಳ ಅವಧಿಯಲ್ಲಿ ಪಂಜಾಬ್‌ನಲ್ಲಿ ಬಿಷ್ಣೋಯ್‌ ಗ್ಯಾಂಗ್‌ ವಿರುದ್ಧ 47 ಎಫ್‌ಐಆರ್‌ ದಾಖಲಾಗಿದೆ. ಈ ಪ್ರಕರಣಗಳ ಪೈಕಿ ನಾಲ್ಕರಲ್ಲಿ ದೋಷಿ ಎಂದು ಸಾಬೀತಾಗಿ ಶಿಕ್ಷೆಯಾಗಿದೆ. ಉಳಿದ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ, ಆರೋಪಗಳಿಂದ ಮುಕ್ತರಾಗಿದ್ದಾರೆ, ಪ್ರಕರಣಗಳು ರದ್ದುಗೊಂಡಿವೆ, ಅಥವಾ ಅವು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿವೆ ಇಲ್ಲವೇ ವಿಚಾರಣಾ ಹಂತದಲ್ಲಿವೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author