ಡಿಸೆಂಬರ್ 16ರೊಳಗೆ ಬಾಂಗ್ಲಾದೇಶ ವಶಪಡಿಸಿಕೊಳ್ಳುತ್ತೇವೆ'! ಹಿಂದೂಗಳ ಹತ್ಯೆಗೆ ಪ್ರತೀಕಾರದ ಎಚ್ಚರಿಕೆ ನೀಡಿದ ಅರ್ಜುನ್ ಸಿಂಗ್
Bengal minister Arjun Singh: ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಆರೋಪಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಡಿಸೆಂಬರ್ 16ರೊಳಗೆ ಬಾಂಗ್ಲಾದೇಶವನ್ನು ವಶಪಡಿಸಿಕೊಳ್ಳುತ್ತೇವೆ ಹಾಗೂ ಹಿಂದೂಗಳ ಹತ್ಯೆಗೆ ಪ್ರತೀಕಾರ ತೀರಿಸುತ್ತೇವೆ ಎಂದು ಪಶ್ಚಿಮ ಬಂಗಾಳ ಸಚಿವ ಅರ್ಜುನ್ ಸಿಂಗ್ ನೀಡಿರುವ ವಿವಾದಾತ್ಮಕ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ಇದೇ ವೇಳೆ, ಡಿಸೆಂಬರ್ 16ರಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮರಳುವ ವಿಚಾರದಲ್ಲೂ ಹಲವು ಕಠಿಣ ನಿಲುವುಗಳು ಎದುರಾಗಿವೆ.
ಪಶ್ಚಿಮ ಬಂಗಾಳ ಕಾರ್ಮಿಕ ಮತ್ತು ಸಾರಿಗೆ ಸಚಿವ ಅರ್ಜುನ್ ಸಿಂಗ್ -
ಕೋಲ್ಕತ್ತಾ, ನ.25: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಹಾಗೂ ಹತ್ಯೆಗಳ (Hindu killings in Bangladesh) ಆರೋಪಗಳ ನಡುವೆ ಉಭಯ ದೇಶಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ. ಇದರ ನಡುವೆಯೇ ಮಂಗಳವಾರ ಭಟ್ಪಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳ ಕಾರ್ಮಿಕ ಮತ್ತು ಸಾರಿಗೆ ಸಚಿವ ಅರ್ಜುನ್ ಸಿಂಗ್, (Arjun Singh) ಡಿಸೆಂಬರ್ 16ರೊಳಗೆ ಬಾಂಗ್ಲಾದೇಶವನ್ನು ವಶಪಡಿಸಿಕೊಳ್ಳುವುದಾಗಿ ಹಾಗೂ ಹಿಂದೂಗಳ ಹತ್ಯೆಗೆ ಪ್ರತೀಕಾರ ತೀರಿಸುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮತ್ತೊಂದೆಡೆ, ಬಾಂಗ್ಲಾದೇಶದ ವಿಜಯೋತ್ಸವ ದಿನವಾದ ಡಿಸೆಂಬರ್ 16ರಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ದೆಹಲಿಯಿಂದ ಢಾಕಾಕ್ಕೆ ಮರಳುವುದನ್ನು ವ್ಯಕ್ತಪಡಿಸಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹಸ್ತಾಂತರ ಪ್ರಕ್ರಿಯೆ ಹೊರತುಪಡಿಸಿ ಆಕೆಯನ್ನು ದೇಶದೊಳಗೆ ಬಿಡುವುದಿಲ್ಲ ಎಂದು ಬಾಂಗ್ಲಾದೇಶ ಸರ್ಕಾರ ಖಡಕ್ ನಿಲುವು ತಳೆದಿದೆ.
ಸಚಿವ ಅರ್ಜುನ್ ಸಿಂಗ್ ಹೇಳಿಕೆ ನೀಡಿರುವ ವಿಡಿಯೊ ನೋಡಿ:
#WATCH | Bhatpara, West Bengal: State Minister Arjun Singh says, "By December 16, we will take over Bangladesh. The way Hindus have been killed in Bangladesh, we will definitely avenge that; there is no doubt about it." (24.11) https://t.co/ufKmZVT8LG
— ANI (@ANI) November 25, 2026
ಭಟ್ಪಾರಾದಲ್ಲಿ ಮಾತನಾಡಿದ ಸಚಿವ ಅರ್ಜುನ್ ಸಿಂಗ್, "ನಾವು ಡಿಸೆಂಬರ್ 16ರೊಳಗೆ ಬಾಂಗ್ಲಾದೇಶವನ್ನು ವಶಪಡಿಸಿಕೊಳ್ಳುತ್ತೇವೆ. ಸಾಕು, ಇನ್ನು ಬಾಂಗ್ಲಾದೇಶದ ಬಗ್ಗೆ ಯಾವುದೇ ನೆಪಗಳಿಲ್ಲ. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಹತ್ಯೆ ಮಾಡಿದ ರೀತಿಗೆ ನಾವು ಖಂಡಿತವಾಗಿಯೂ ಪ್ರತೀಕಾರ ತೀರಿಸುತ್ತೇವೆ, ಇದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಗುಡುಗಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಸುರಕ್ಷತೆಯ ವಿಚಾರವನ್ನು ಮುಂದಿಟ್ಟುಕೊಂಡು ಅವರು ನೀಡಿರುವ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಬಂಧನಕ್ಕೂ ಹೆದರಲ್ಲ, ಶೇಖ್ ಹಸೀನಾ ದೃಢ ನಿರ್ಧಾರ
ಶೇಖ್ ಹಸೀನಾ ಮರಳುವಿಕೆಗೆ ಢಾಕಾ ಕಠಿಣ ನಿಲುವು
ಡಿಸೆಂಬರ್ 16ರಂದು ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ಮೂಲಕ ದೆಹಲಿಯಿಂದ ಢಾಕಾಕ್ಕೆ ಮರಳಲು ಶೇಖ್ ಹಸೀನಾ ಉದ್ದೇಶಿಸಿದ್ದಾರೆ ಎಂದು ಅವರ ವಕ್ತಾರ ಸೈಯದ್ ಮೊಜಮ್ಮೆಲ್ ಅಲಿ ತಿಳಿಸಿದ್ದರು ಹಾಗೂ ಸರ್ಕಾರದಿಂದ ವಿಮಾನ ವ್ಯವಸ್ಥೆ ಕೋರಿದ್ದರು. ಆದರೆ, ಇದನ್ನು ತಳ್ಳಿಹಾಕಿರುವ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್, "ಬಯಕೆ ಮತ್ತು ವಾಸ್ತವ ಬೇರೆ ಬೇರೆ. ಹಸ್ತಾಂತರ ಪ್ರಕ್ರಿಯೆಯ ಹೊರತಾಗಿ ಆಕೆಯನ್ನು ಒಳಗೆ ಬಿಡುವುದಿಲ್ಲ; ಕೇವಲ ಕೈಕೋಳ ಮತ್ತು ಕಟ್ಟುನಿಟ್ಟಿನ ನಿಗಾದಲ್ಲಿ ಮಾತ್ರ ಕರೆತರಲು ಸಾಧ್ಯ" ಎಂದು ಹೇಳಿದ್ದಾರೆ. ಇನ್ನು ಈ ಬೇಡಿಕೆಯನ್ನು ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ಅಮಿನುಲ್ ಇಸ್ಲಾಂ "ಹುಚ್ಚಾಟ" ಎಂದು ಬಣ್ಣಿಸಿದ್ದು, ವಾಪಸಾದರೆ ತಕ್ಷಣ ಬಂಧನ ಮತ್ತು ಜೈಲು ಶಿಕ್ಷೆ ಖಚಿತ ಎಂದು ಬಾಂಗ್ಲಾ ಸಚಿವರೊಬ್ಬರು ಸ್ಪಷ್ಟಪಡಿಸಿದ್ದಾರೆ.