Waqf Act In Supreme Court: ಹಿಂದೂ ದತ್ತಿ ಮಂಡಳಿಗಳ ಭಾಗವಾಗಲು ಮುಸ್ಲಿಮರಿಗೆ ಅವಕಾಶ ನೀಡುತ್ತೀರಾ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
Supreme Court: ಇತ್ತೀಚೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ವಕ್ಫ್ (ತಿದ್ದುಪಡಿ) ಕಾಯಿದೆ 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಹಿಂದೂ ದತ್ತಿ ಮಂಡಳಿಗಳ ಭಾಗವಾಗಲು ಮುಸ್ಲಿಮರಿಗೆ ಅವಕಾಶ ನೀಡಲು ಸಿದ್ಧರಿದ್ದೀರಾ? ಎಂದು ಕೇಂದ್ರ ಸರ್ಕಾರವನ್ನು ಕೇಳಿದೆ.

ಸುಪ್ರೀಂ ಕೋರ್ಟ್.

ಹೊಸದಿಲ್ಲಿ: ಇತ್ತೀಚೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ವಕ್ಫ್ (ತಿದ್ದುಪಡಿ) ಕಾಯಿದೆ 2025 (Waqf (Amendment) Act, 2025)ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ (ಏ. 16) ಕೈಗೆತ್ತಿಕೊಂಡಿದೆ (Waqf Act In Supreme Court). ಕೇಂದ್ರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರನ್ನು ಸೇರಿಸುವ ನಿಬಂಧನೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ಹಿಂದೂ ದತ್ತಿ ಮಂಡಳಿಗಳ ಭಾಗವಾಗಲು ಮುಸ್ಲಿಮರಿಗೆ ಅವಕಾಶ ನೀಡಲು ಸಿದ್ಧರಿದ್ದೀರಾ? ಎಂದು ಕೇಂದ್ರ ಸರ್ಕಾರವನ್ನು ಕೇಳಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿ.ವಿ. ಸಂಜಯ್ ಕುಮಾರ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿಗಳ ವಿಚಾರಣೆ ನಡೆಸಿದೆ.
[Waqf Amendment Act] "Will you allow Muslims to be part of the Hindu endowment boards?"
— Bar and Bench (@barandbench) April 16, 2025
- Supreme Court to Central government
Read more here: https://t.co/TEs0lp9h71 pic.twitter.com/OnbxAGpAYK
ಈ ಸುದ್ದಿಯನ್ನೂ ಓದಿ: Supreme Court: ವಕ್ಫ್ ತಿದ್ದುಪಡಿ ಕಾಯ್ದೆ; ಸುಪ್ರೀಂ ಕೋರ್ಟ್ ನಲ್ಲಿ ಇಂದು ಅರ್ಜಿಗಳ ವಿಚಾರಣೆ
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಹಲವು ರಾಜಕಾರಣಿಗಳು ವಕ್ಫ್ (ತಿದ್ದುಪಡಿ) ಕಾಯಿದೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸಲು ಅವಕಾಶ ನೀಡುವ ನಿಬಂಧನೆ ಕಾನೂನಿನ ಅತ್ಯಂತ ವಿವಾದಾತ್ಮಕ ಬದಲಾವಣೆಗಳಲ್ಲಿ ಒಂದು ಎನಿಸಿಕೊಂಡಿದೆ. ಇದೇ ವೇಳೆ ವಕ್ಫ್ ತಿದ್ದುಪಡಿ ಕಾಯಿದೆ ಮೇಲಿನ ಹಿಂಸಾಚಾರದ ಬಗ್ಗೆಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗುರುವಾರವೂ ಮುಂದುವರಿಸಲಿದೆ.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಹೊಸ ಕಾನೂನಿನ ಅನೇಕ ನಿಬಂಧನೆಗಳು ಸಂವಿಧಾನದ 26ನೇ ವಿಧಿಯನ್ನು ಉಲ್ಲಂಘಿಸುತ್ತವೆ ಎಂದು ಹೇಳಿದರು. ಹೊಸ ಕಾನೂನು ಜಿಲ್ಲಾಧಿಕಾರಿಗೆ ನೀಡುವ ಅಧಿಕಾರಗಳನ್ನೂ ಅವರು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಸರ್ಕಾರದ ಭಾಗ ಮತ್ತು ಅವರು ನ್ಯಾಯಾಧೀಶರ ಪಾತ್ರ ನಿರ್ವಹಿಸಿದರೆ, ಅದು ಅಸಂವಿಧಾನಿಕವಾಗುತ್ತದೆ ಎಂದು ವಾದಿಸಿದರು. ʼʼಜಿಲ್ಲಾಧಿಕಾರಿ ನಿರ್ಧರಿಸುವವರೆಗೆ ಆಸ್ತಿ ವಕ್ಫ್ ಆಗಿರುವುದಿಲ್ಲ ಎಂದು ಕಾಯ್ದೆ ಹೇಳುತ್ತದೆ. ವಕ್ಫ್ ಆಸ್ತಿಯೇ, ಅಲ್ಲವೇ ಎಂದು ಕೋರ್ಟ್‌ಗಳು ಏಕೆ ನಿರ್ಧರಿಸಬಾರದು?ʼʼ ಎಂದು ಸಂಜೀವ್ ಖನ್ನಾ ಪ್ರಶ್ನಿಸಿದರು.
ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ʼʼಸಂಸತ್ತಿನಲ್ಲಿ ವಿವರವಾದ ಮತ್ತು ವಿಸ್ತೃತ ಚರ್ಚೆಗಳ ನಂತರ ಕಾನೂನನ್ನು ಅಂಗೀಕರಿಸಲಾಗಿದೆ. ಜಂಟಿ ಸಂಸದೀಯ ಸಮಿತಿಯು ಇದನ್ನು ಪರಿಶೀಲಿಸಿದೆ ಮತ್ತು ಅದನ್ನು ಮತ್ತೆ ಉಭಯ ಸದನಗಳು ಅಂಗೀಕರಿಸಿವೆʼʼ ಎಂದು ಹೇಳಿದರು.
ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್
ಹೊಸ ಕಾನೂನು ವಿಚಾರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಇದು ತುಂಬಾ ಆತಂಕಕಾರಿ ಎಂದು ಹೇಳಿದರು. ಇದಕ್ಕಾಕೆ ಸಿಬಲ್ನೂ ಅವರು ಕಾನೂನಿನ ಸಕಾರಾತ್ಮಕ ಅಂಶಗಳನ್ನು ಎತ್ತಿ ತೋರಿಸಬೇಕು ಎಂದು ಗಮನ ಸೆಳೆದರು.
ಅಸಾದುದ್ದೀನ್ ಓವೈಸಿ ಅರ್ಜಿ ಸಲ್ಲಿಸಿದ್ದೇಕೆ?
ವಕ್ಫ್ ತಿದ್ದುಪಡಿ ಕಾಯಿದೆಯಲ್ಲಿನ ಕೆಲವು ಅಂಶಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಓವೈಸಿ ಅರ್ಜಿ ಸಲ್ಲಿಸಿದ್ದರು. ತಿದ್ದುಪಡಿ ಕಾಯಿದೆಯು ವಕ್ಫ್ ಆಡಳಿತ ಸಂಸ್ಥೆಗಳಿಗೆ ಈ ಹಿಂದೆ ನೀಡಲಾಗಿದ್ದ ವಿವಿಧ ರಕ್ಷಣೆಗಳನ್ನು ತೆಗೆದುಹಾಕುತ್ತದೆ, ಹಿಂದೂ, ಜೈನ ಹಾಗೂ ಸಿಖ್ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಕೆಲವು ರಕ್ಷಣೆಗಳನ್ನು ವಕ್ಫ್‌ಗಳಿಂದ ಈ ತಿದ್ದುಪಡಿ ಕಾಯಿದೆಯ ಮೂಲಕ ಕಸಿದುಕೊಳ್ಳಲಾಗುತ್ತಿದೆ. ಇದು ಸಂವಿಧಾನದ 14ನೇ ವಿಧಿಯಡಿ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಅವರು ಹೇಳಿದ್ದರು.