ರಾಯ್‌ಪುರ, ಮಾ.22: ರೋಪ್‌ವೇ ಟ್ರಾಲಿಯೊಂದು ಅಪಘಾತಕ್ಕೀಡಾದ ಪರಿಣಾಮ 28 ವರ್ಷದ ಮಹಿಳೆಯೊಬ್ಬರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ. ಛತ್ತೀಸ್‌ಗಢದ (Chhattisgarh) ಮಹಾಸಮುಂದ್ ಜಿಲ್ಲೆಯ ಬೆಟ್ಟದ ತುದಿಯಲ್ಲಿರುವ ದೇವಸ್ಥಾನದಿಂದ ರೋಪ್‌ವೇ ಟ್ರಾಲಿ ಮೂಲಕ ಇಳಿಯುತ್ತಿದ್ದಾಗ ಈ ದುರ್ಘಟನೆ (Ropeway Trolley Accident) ಸಂಭವಿಸಿದೆ.
ಭೀಮ್‌ಖೋಜ್ ಗ್ರಾಮದ ಖಲ್ಲಾರಿ ಬಳಿ ಬೆಳಗ್ಗೆ 10 ಗಂಟೆ ಸುಮಾರಿಗೆ ಟ್ರಾಲಿಯ ಕೇಬಲ್ ತುಂಡಾಗಿ ಈ ಅಪಘಾತ ಸಂಭವಿಸಿದೆ ಎಂದು ಬಾಗ್ಬಹ್ರಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ನಮಿತಾ ಮಾರ್ಕೋಲ್ ತಿಳಿಸಿದ್ದಾರೆ. ಖಲ್ಲಾರಿ ಮಾತಾ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರಾಲಿ ಸುಮಾರು 200-300 ಅಡಿ ಎತ್ತರದಿಂದ ಬಿದ್ದಿದೆ ಎಂದು ಅವರು ಹೇಳಿದರು.
ರೋಪ್‌ವೇ ಟ್ರಾಲಿ ಕುಸಿದು ಮಹಿಳೆ ಸಾವು:
ಮೃತರನ್ನು ರಾಯ್‌ಪುರದ ಆಯುಷಿ ಸತ್ಕರ್ (28) ಎಂದು ಗುರುತಿಸಲಾಗಿದೆ. ಅವರ ಪತಿ ರಿಷಭ್ ಧವ್ರೆ (29) ಮತ್ತು ಅಪ್ರಾಪ್ತ ಸಂಬಂಧಿ ಛಾಯಾಂಶ್ ಧವ್ರೆ (16), ಗೋವಿಂದ್ ಸ್ವಾಮಿ (47), ನಮಿತಾ ಸ್ವಾಮಿ (48) ಮತ್ತು ಇಬ್ಬರು ಅಪ್ರಾಪ್ತ ವಯಸ್ಕರಾದ ಕುಶ್ಮಿತಾ ಸ್ವಾಮಿ (10) ಮತ್ತು ಮನ್ಶ್ವಿ ಗೋದಾರಿಯಾ (12) ಗಾಯಗೊಂಡಿದ್ದಾರೆ.
ತಂಪು ಪಾನೀಯದ ಟ್ರಕ್ ಪಲ್ಟಿ: ಗಾಯಗೊಂಡ ಚಾಲಕನನ್ನು ನಿರ್ಲಕ್ಷಿಸಿ ವಸ್ತುಗಳನ್ನು ದೋಚಲು ಮುಂದಾದ ಜನ
ಗಾಯಗೊಂಡ ಆರು ಜನರನ್ನು ಆರಂಭದಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ಕರೆದೊಯ್ಯಲಾಯಿತು. ಸುಮಾರು 1,100 ಅಡಿ ಎತ್ತರದಲ್ಲಿರುವ ಖಲ್ಲಾರಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ರೋಪ್‌ವೇ ಸೇವೆಯನ್ನು ವ್ಯಾಪಕವಾಗಿ ಬಳಸುತ್ತಾರೆ. ಯಾತ್ರಿಕರು ಸುಮಾರು 900 ಮೆಟ್ಟಿಲುಗಳನ್ನು ಹತ್ತುವುದರ ಮೂಲಕವೂ ದೇವಾಲಯವನ್ನು ತಲುಪಬಹುದು.
ಘಟನೆಯ ನಂತರ, ಸುಮಾರು 10 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮತ್ತೊಂದು ಟ್ರಾಲಿಯನ್ನು ತಕ್ಷಣವೇ ಬೇಸ್‌ಗೆ ತರಲಾಯಿತು. ಆ ಟ್ರಾಲಿಯಲ್ಲಿದ್ದ ಪ್ರಯಾಣಿಕರಿಗೂ ಬೀಳುವ ರೀತಿಯ ಅನುಭವ ಆಗಿದ್ದು, ಯಾವುದೇ ದೊಡ್ಡ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ದುಃಖ ವ್ಯಕ್ತಪಡಿಸಿ, ವಿವರವಾದ ತನಿಖೆಗೆ ಆದೇಶಿಸಿದ್ದಾರೆ. ಅವರು ಅಪಘಾತವನ್ನು ಅತ್ಯಂತ ದುರಂತ ಮತ್ತು ನೋವಿನಿಂದ ಕೂಡಿದೆ ಎಂದು ಬಣ್ಣಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅಪಘಾತದ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಇದೇ ರೀತಿಯ ಘಟನೆಯಲ್ಲಿ, ರಾಜನಂದಗಾಂವ್ ಜಿಲ್ಲೆಯ ಬಮಲೇಶ್ವರಿ ದೇವಿ ಬೆಟ್ಟದ ದೇವಾಲಯದ ಬಳಿ ರೋಪ್‌ವೇ ಟ್ರಾಲಿಯೊಂದು ಕಡಿಮೆ ಎತ್ತರದಿಂದ ಡಿಕ್ಕಿ ಹೊಡೆದು ಬಿಜೆಪಿ ನಾಯಕರೊಬ್ಬರು ಗಾಯಗೊಂಡಿದ್ದರು.