ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಮಹಿಳೆಯರು ಹೆರಲು ಮಾತ್ರ ಅರ್ಹರು, ಅಡುಗೆ ಮನೆಯಲ್ಲಿರಬೇಕು”: ಹೈದರಾಬಾದ್ ವಿಶ್ವವಿದ್ಯಾಲಯ ಉಪಕುಲಪತಿಯಿಂದ ವಿವಾದಾತ್ಮಕ ಹೇಳಿಕೆ

Gender Discrimination: ಮಹಿಳೆಯರು ಹೆರಲು ಮಾತ್ರ ಅರ್ಹರು, ಅವರು ಅಡುಗೆಮನೆಯಲ್ಲಿರಬೇಕು ಎಂದು ಹೈದಾರಾಬಾದ್‌ ವಿವಿ ಉಪಕುಲಪತಿ ಟಿ. ಕಿಶನ್ ಕುಮಾರ್ ರೆಡ್ಡಿ ಹೇಳಿದ್ದಾಗಿ ಪ್ರಾಧ್ಯಾಪಕಿಯರು ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಮುಂದೆಯೇ ಆಹ್ವಾನ ಪತ್ರಿಕೆಯನ್ನು ಹರಿದು ಕಸದ ಬುಟ್ಟಿಗೆ ಎಸೆದಿದ್ದಾರೆ. ತಮ್ಮನ್ನು ಕಸದಂತೆ ಪರಿಗಣಿಸಿದ್ದಾರೆ ಎಂದೂ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಹೈದರಾಬಾದ್‌, ಅ. 8: ಇಎಂಜಿನಿಯರಿಂಗ್ ಕಾಲೇಜೊಂದರ ಪ್ರಾಂಶುಪಾಲೆ ಹಾಗೂ ಮಹಿಳಾ ಪ್ರಾಧ್ಯಾಪಕಿಯೊಬ್ಬರು ಹೈದರಾಬಾದ್‌ನ ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾನಿಲಯ (Hyderabad) ಉಪಕುಲಪತಿ ಟಿ. ಕಿಶನ್ ಕುಮಾರ್ ರೆಡ್ಡಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಉಪಕುಲಪತಿ ತಮ್ಮ ವಿರುದ್ಧ ಅವಹೇಳನಕಾರಿ, ಲಿಂಗ ತಾರತಮ್ಯ ಹಾಗೂ ಬೆದರಿಕೆ ಉಂಟುಮಾಡುವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವಿದ್ಯಾ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಜೆಐಟಿ) ಪ್ರಾಂಶುಪಾಲೆ ಎ. ಸೃಜನಾ ಮತ್ತು ಅದೇ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಿ. ಅರುಣಾ ಕುಮಾರಿ ಕುಕಟ್ಪಲ್ಲಿ ಹೌಸಿಂಗ್ ಬೋರ್ಡ್ (ಕೆಪಿಎಚ್‌ಬಿ) ಪೊಲೀಸರಿಗೆ ದೂರು ನೀಡಿದ್ದಾರೆ.

“ನಾವು ಮಹಿಳಾ ಪ್ರಾಧ್ಯಾಪಕರಿಂದ ದೂರು ಸ್ವೀಕರಿಸಿದ್ದೇವೆ. ಆದರೆ ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ದೂರಿನ ಸತ್ಯಾಸತ್ಯತೆಯ ಬಗ್ಗೆ ನಾವು ವಿಚಾರಣೆ ನಡೆಸುತ್ತಿದ್ದೇವೆ. ಆರೋಪಗಳು ಪ್ರಾಥಮಿಕವಾಗಿ ಸಾಬೀತಾದರೆ ನಾವು ಪ್ರಕರಣ ದಾಖಲಿಸುತ್ತೇವೆ” ಎಂದು ಕೆಪಿಎಚ್‌ಬಿ ಪೊಲೀಸ್ ಇನ್ಸ್‌ಪೆಕ್ಟರ್ ಜಿ. ವಿಜಯ್ ಕುಮಾರ್ ಹೇಳಿದ್ದಾರೆ.

ಹಿಂದೂ ಸಮುದಾಯದ ಆಕ್ರೋಶಕ್ಕೆ ಮಣಿದು ಕ್ಷಮೆಯಾಚಿಸಿದ ಹಾರ್ವರ್ಡ್ ವಿಶ್ವವಿದ್ಯಾನಿಲಯ

ದೂರಿನ ಪ್ರಕಾರ, ಅಕ್ಟೋಬರ್ 30ರಂದು ವಿಜೆಐಟಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲು, ಮುಂಚಿತವಾಗಿ ಸಮಯ ನಿಗದಿಪಡಿಸಿಕೊಂಡು ಪ್ರಾಧ್ಯಾಪಕಿಯರು ಮಂಗಳವಾರ (ಅ. 6) ಉಪಕುಲಪತಿ ಕಿಶನ್ ಕುಮಾರ್ ರೆಡ್ಡಿ ಅವರನ್ನು ಭೇಟಿಯಾಗಲು ತೆರಳಿದ್ದರು.

ಅವರು ತಮ್ಮ ಅಧಿಕೃತ ಕೆಲಸದ ಭಾಗವಾಗಿ ಉಪಕುಲಪತಿಯನ್ನು ಭೇಟಿಯಾಗಲು ಹೋಗಿದ್ದರು. ಸಾಮಾನ್ಯವಾಗಿ ನಡೆಯುವ ಶೈಕ್ಷಣಿಕ ಮಾತುಕತೆಯೇ ನಡೆಯುತ್ತದೆ ಎಂದು ಅವರು ಭಾವಿಸಿದ್ದರು. ಆದರೆ ರೆಡ್ಡಿ ತಮ್ಮೊಂದಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿದರು ಎಂದು ಅವರು ಆರೋಪಿಸಿದ್ದಾರೆ.

ವಿಜೆಐಟಿಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಉಪಕುಲಪತಿ ತಮ್ಮ ಮೇಲೆ ಜೋರಾಗಿ ಕೂಗಾಡಿದರು ಎಂದು ದೂರಿದ್ದಾರೆ. ಮಹಿಳೆಯರು ಹೆರಿಗೆಗೆ ಮಾತ್ರ ಅರ್ಹರು, ಅಡುಗೆಮನೆಯಲ್ಲಿರಬೇಕು ಎಂದು ಹೇಳಿದ್ದರು. ಅಲ್ಲದೆ, ತಮ್ಮ ಮುಂದೆಯೇ ಆಹ್ವಾನ ಪತ್ರಿಕೆಯನ್ನು ಹರಿದು ಕಸದ ಬುಟ್ಟಿಗೆ ಎಸೆದರು. ತಮ್ಮನ್ನು ಕಸದ ಬುಟ್ಟಿಯಲ್ಲಿರುವ ಕಸದಂತೆ ಪರಿಗಣಿಸಲು ಅರ್ಹರು ಎಂದು ಹೇಳಿದ್ದಾಗಿ ದೂರಿದ್ದಾರೆ.

ಸಂವಾದದ ಸಮಯದಲ್ಲಿ ಅನುರಾಗ್ ವಿಶ್ವವಿದ್ಯಾಲಯದ ಸಿಇಒ ನೀಲಿಮಾ ಅವರ ಬಗ್ಗೆಯೂ ಉಪಕುಲಪತಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಪ್ರೊ. ರೆಡ್ಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.