ಸಂಸ್ಕೃತ ಕಾರ್ಯಕ್ರಮದ ಪೋಸ್ಟರ್ ವಿವಾದ: ಹಿಂದೂ ಸಮುದಾಯದ ಆಕ್ರೋಶಕ್ಕೆ ಮಣಿದು ಕ್ಷಮೆಯಾಚಿಸಿದ ಹಾರ್ವರ್ಡ್ ವಿಶ್ವವಿದ್ಯಾನಿಲಯ
ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗವು ಸಂಸ್ಕೃತ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಹಂಚಿಕೊಂಡಿದ್ದ ಅಸಂವೇದನಾಶೀಲ ಪೋಸ್ಟರ್ ಕುರಿತು ಅಧಿಕೃತವಾಗಿ ಕ್ಷಮೆಯಾಚಿಸಿದೆ. ಈ ಚಿತ್ರವು ಹಿಂದೂ ಧರ್ಮ ಮತ್ತು ಪವಿತ್ರ ಸಂಸ್ಕೃತ ಭಾಷೆಯನ್ನು ಅವಹೇಳನಕಾರಿಯಾಗಿ ಬಿಂಬಿಸಿದೆ ಎಂದು ಉತ್ತರ ಅಮೆರಿಕಾದ ಹಿಂದೂಗಳ ಒಕ್ಕೂಟ ಸೇರಿದಂತೆ ಹಲವಾರು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ವಿವಾದ ಹೆಚ್ಚಾದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಪೋಸ್ಟ್ ತೆಗೆದುಹಾಕಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಆಂತರಿಕ ಕ್ರಮಗಳನ್ನು ಬಲಪಡಿಸುವುದಾಗಿ ತಿಳಿಸಿದೆ.
ಸಾಂದರ್ಭಿಕ ಚಿತ್ರ. -
ವಾಷಿಂಗ್ಟನ್, ಫೆ. 28: ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದ (Harvard University) ದಕ್ಷಿಣ ಏಷ್ಯಾ ಅಧ್ಯಯನ ವಿಭಾಗವು (Department of South Asian Studies) ತನ್ನ ಸಂಸ್ಕೃತ ಕೋರ್ಸ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ 'ಅಸಂವೇದನಾಶೀಲ' ಚಿತ್ರದ ಬಗ್ಗೆ ಅಧಿಕೃತವಾಗಿ ಕ್ಷಮೆಯಾಚಿಸಿದೆ. ಈ ಪೋಸ್ಟರ್ ಹಿಂದೂ ಧರ್ಮ ಮತ್ತು ಪವಿತ್ರ ಸಂಸ್ಕೃತ ಭಾಷೆಯನ್ನು ಅವಹೇಳನಕಾರಿಯಾಗಿ ಬಿಂಬಿಸುತ್ತಿದೆ ಎಂದು ಜಾಗತಿಕ ಮಟ್ಟದಲ್ಲಿ ಹಿಂದೂ ಸಮುದಾಯದ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ವಿಶ್ವವಿದ್ಯಾಲಯದ ಪ್ರಾಥಮಿಕ ಸಂಸ್ಕೃತ ಕಲಿಕಾ ಕೋರ್ಸ್‌ನ ಪ್ರಚಾರಕ್ಕಾಗಿ ಇತ್ತೀಚೆಗೆ ಒಂದು ಕಲಾಕೃತಿಯನ್ನು ಬಳಸಿತ್ತು. ಈ ಚಿತ್ರವು ಸಂಸ್ಕೃತ ಮತ್ತು ಹಿಂದೂ ಧರ್ಮವನ್ನು ನಕಾರಾತ್ಮಕವಾಗಿ ಬಿಂಬಿಸುವಂತಿದೆ ಎಂದು ಉತ್ತರ ಅಮೆರಿಕಾದ ಹಿಂದೂಗಳ ಒಕ್ಕೂಟ (CoHNA) ಆಕ್ರೋಶ ಹೊರಹಾಕಿತ್ತು. ಈ ಕಲಾಕೃತಿಯನ್ನು 'ಹಿಂದೂಫೋಬಿಕ್' (ಹಿಂದೂ ವಿರೋಧಿ) ಎಂದು ಬಣ್ಣಿಸಿದ್ದ ಸಂಘಟನೆಯು, ಇಂತಹ ಚಿತ್ರಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ದೂರಿದ್ದವು. 'ಮಾಸ್ಟರ್ ಆಫ್ ಪಪೆಟ್ಸ್' ಎಂಬ ಹೆಸರಿನ ಈ ಕಲಾಕೃತಿಯು ಮಹಾಭಾರತ ಮತ್ತು ಕೃಷ್ಣನ ರಾಸಲೀಲೆಯ ವಿಷಯಗಳನ್ನು ಆಧರಿಸಿದ್ದು, ಅದನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು.
CoHNA ಎಕ್ಸ್ ಪೋಸ್ಟ್:
Great news to share! After worldwide community outrage, @Harvard has removed the image from their website! Thank you to all those who took action and expressed your concerns. 👏🏽👏🏽🙏🏽🙏🏽 https://t.co/O7iOpzsdRu pic.twitter.com/jkeTxJa8aw
— CoHNA (Coalition of Hindus of North America) (@CoHNAOfficial) February 27, 2026
ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಕ್ಷಮೆಯಾಚಿಸಿದ ವಿಶ್ವವಿದ್ಯಾನಿಲಯ
ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಹಾರ್ವರ್ಡ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗವು ಶುಕ್ರವಾರ ಪ್ರಕಟಣೆಯೊಂದನ್ನು ಹೊರಡಿಸಿದೆ. "ನಮ್ಮ ಸಂಸ್ಕೃತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಸಂವೇದನಾಶೀಲ ಚಿತ್ರವನ್ನು ಪೋಸ್ಟ್ ಮಾಡಿರುವುದಕ್ಕೆ ನಾವು ವಿಷಾದಿಸುತ್ತೇವೆ" ಎಂದು ಹೇಳಿದೆ. ಅಲ್ಲದೆ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಇಲಾಖೆಯ ಆಂತರಿಕ ಸಾಮಾಜಿಕ ಜಾಲತಾಣ ಪ್ರಕ್ರಿಯೆಗಳನ್ನು ಮರುಪರಿಶೀಲಿಸುವುದಾಗಿ ಭರವಸೆ ನೀಡಿದೆ. ಸಂಸ್ಕೃತ ಭಾಷೆಯ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ನಾವು ಬದ್ಧರಾಗಿದ್ದೇವೆ ಎಂದು ವಿಶ್ವವಿದ್ಯಾನಿಲಯ ತಿಳಿಸಿದೆ.
ಹಾರ್ವರ್ಡ್ ತನ್ನ ವೆಬ್‌ಸೈಟ್‌ನಲ್ಲಿ ಸಂಸ್ಕೃತವನ್ನು 'ದೇವಭಾಷೆ' ಎಂದು ಕರೆದಿದೆ ಮತ್ತು ಕಳೆದ ಮೂರು ಸಹಸ್ರಮಾನಗಳಿಂದ ದಕ್ಷಿಣ ಏಷ್ಯಾದ ಸಾಂಸ್ಕೃತಿಕ ಜೀವನವನ್ನು ಈ ಭಾಷೆ ರೂಪಿಸಿದೆ ಎಂದು ಶ್ಲಾಘಿಸಿದೆ. ಇಲ್ಲಿನ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗವು ಮಹಾಭಾರತ, ರಾಮಾಯಣ ಮತ್ತು ಭಗವದ್ಗೀತೆಯಂತಹ ಮಹಾನ್ ಗ್ರಂಥಗಳನ್ನು ಆಧರಿಸಿ ವಿವಿಧ ಹಂತದ ಸಂಸ್ಕೃತ ಕೋರ್ಸ್‌ಗಳನ್ನು ನೀಡುತ್ತದೆ. ವಿಶ್ವವಿದ್ಯಾಲಯವು ಔಪಚಾರಿಕವಾಗಿ ಕ್ಷಮೆಯಾಚಿಸಿರುವುದನ್ನು CoHNA ಸ್ವಾಗತಿಸಿದ್ದು, ಪುರಾತನ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಗೌರವ ತೋರಿದ್ದಕ್ಕೆ ಮೆಚ್ಚುಗೆ ಸೂಚಿಸಿದೆ.