World Cancer Day: ವಿಶ್ವ ಕ್ಯಾನ್ಸರ್ ದಿನ- ಆರಂಭಿಕ ಪತ್ತೆಯೇ ಆರೋಗ್ಯದ ಮೂಲ
ಹಲವಾರು ರೀತಿಯ ಕ್ಯಾನ್ಸರ್‌ಗಳು ನಿಧಾನಕ್ಕೆ ಬೆಳೆಯುವಂಥವು. ನಿಯಮಿತ ತಪಾಸಣೆಗಳಿಗೆ ಒಳಗಾದರೆ ಆರಂಭದಲ್ಲಿಯೇ ಇವುಗಳನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಿ, ಗುಣಪಡಿಸಬಹುದು. ಈ ರೋಗದ ಬಗ್ಗೆ ಸರಿಯಾದ ಅರಿವು ಮೂಡಿಸಿ, ರೋಗ ತಡೆ, ಪತ್ತೆ, ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿ ತಿಂಗಳ 4ನೇ ದಿನವನ್ನು ವಿಶ್ವ ಕ್ಯಾನ್ಸರ್ ದಿನ ಎಂದು ಜಗತ್ತಿನೆಲ್ಲೆಡೆ ಗುರುತಿಸಲಾಗಿದೆ.
ನವದೆಹಲಿ: ಇಡೀ ವಿಶ್ವದಲ್ಲಿ ಸಂಭವಿಸುತ್ತಿರುವ ಸಾವುಗಳಲ್ಲಿ, ಅತಿ ಹೆಚ್ಚಿನ ಮೃತ್ಯುಗಳಾಗುತ್ತಿರುವ ಕಾರಣಗಳಲ್ಲಿ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಆದರೆ ನಮ್ಮ ಜೀವನಶೈಲಿಯ ಬಗ್ಗೆ ನಾವು ಜಾಗೃತರಾಗಿದ್ದರೆ, ಬಹುಪಾಲು ಕ್ಯಾನ್ಸರ್‌ಗಳನ್ನು ತಡೆಯಬಹುದು ಎನ್ನುತ್ತದೆ ವೈದ್ಯವಿಜ್ಞಾನ. ಹಲವಾರು ರೀತಿಯ ಕ್ಯಾನ್ಸರ್‌ಗಳು ನಿಧಾನಕ್ಕೆ ಬೆಳೆಯುವಂಥವು. ನಿಯಮಿತ ತಪಾಸಣೆಗಳಿಗೆ ಒಳಗಾದರೆ ಆರಂಭದಲ್ಲಿಯೇ ಇವುಗಳನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಿ, ಗುಣಪಡಿಸಬಹುದು. ಈ ರೋಗದ ಬಗ್ಗೆ ಸರಿಯಾದ ಅರಿವು ಮೂಡಿಸಿ, ರೋಗ ತಡೆ, ಪತ್ತೆ, ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿ ತಿಂಗಳ 4ನೇ ದಿನವನ್ನು ವಿಶ್ವ ಕ್ಯಾನ್ಸರ್ ದಿನ(World Cancer Day) ಎಂದು ಜಗತ್ತಿನೆಲ್ಲೆಡೆ ಗುರುತಿಸಲಾಗಿದೆ.
ಈ ರೋಗದ ಹೆಸರು ಕೇಳಿದಾಕ್ಷಣ ಯಾತನೆ ಮತ್ತು ಸಾವನ್ನು ಮಾತ್ರವೇ ಕಲ್ಪಿಸಿಕೊಳ್ಳುವುದು ಇನ್ನೊಂದು ದೊಡ್ಡ ಹೊಡೆತ. ಮಾತ್ರವಲ್ಲ, ಆರ್ಥಿಕ, ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕವಾಗಿಯೂ ಈ ರೋಗ ಬಹಳಷ್ಟು ಕಷ್ಟ-ನಷ್ಟಗಳನ್ನು ಉಂಟುಮಾಡುತ್ತದೆ. ಹಾಗಾಗಿ ಬಾಯಿಂದ ಬಾಯಿಗೆ ಕೇವಲ ಕಷ್ಟ-ನಷ್ಟಗಳ ಕಥೆಗಳೇ ಪ್ರಸಾರವಾಗುತ್ತದೆ. ಇದಿಷ್ಟೇ ಅಲ್ಲ, ರೋಗ ಪತ್ತೆಯಾದ ಮೇಲೂ ಚಿಕಿತ್ಸೆ, ಮುತುವರ್ಜಿಗಳೆಲ್ಲ ದೊರೆಯುವುದು ಬಹಳಷ್ಟು ಜನರಿಗೆ ಕಷ್ಟವೇ ಆಗಿರುತ್ತದೆ. ವಾಸ್ತವವಾಗಿ, ಆರಂಭದಲ್ಲಿ ಪತ್ತೆಯಾಗಿ, ಸೂಕ್ತ ಚಿಕಿತ್ಸೆ ದೊರೆತರೆ ಶೇ ೪೦ರಷ್ಟು ಕ್ಯಾನ್ಸರ್‌ಗಳು ಗುಣವಾಗಬಲ್ಲಂಥವು. ಹಾಗಾಗಿಯೇ ಈ ಬಾರಿಯ ಕ್ಯಾನ್ಸರ್ ದಿನ ಘೋಷವಾಕ್ಯ- ʻಅನನ್ಯವಾಗಿ ಒಗ್ಗೂಡೋಣʼ
ಮುನ್ಸೂಚನೆ ಇದೆಯೇ?
ಹಲವಾರು ರೀತಿಯ ಕ್ಯಾನ್ಸರ್‌ಗಳು ಮುನ್ಸೂಚನೆ ತೋರಿಸುತ್ತವೆ. ಈ ಕುರಿತು ಜಾಗೃತಿ ಇರಬೇಕಷ್ಟೆ. ಬಾಯಿ, ಗರ್ಭಕೋಶ, ಗರ್ಭಕಂಠ, ಸ್ತನ ಮುಂತಾದೆಡೆಗಳಲ್ಲಿ ನಿಯಮಿತ ತಪಾಸಣೆಯಿಂದ ಈ ರೋಗವನ್ನು ಆರಂಭದಲ್ಲೇ ಪತ್ತೆ ಮಾಡಲು ಸಾಧ್ಯವಿದೆ. ರಾತ್ರಿ ಬೆಳಗಾಗುವಷ್ಟರಲ್ಲಿ ಬೆಳೆಯುವ ರೋಗವಲ್ಲವಿದು. ಮುಂದಿನ ಒಂದೆರಡು ವರ್ಷಗಳಲ್ಲಿ ಕ್ಯಾನ್ಸರ್ ಅಮರಿಕೊಳ್ಳುವ ಸಾಧ್ಯತೆಯನ್ನು ಇಂದೇ ಗರ್ಭಕೋಶದ ಅಂಗಾಂಶಗಳ ಬದಲಾವಣೆಗಳ ತಪಾಸಣೆಯಿಂದ ಕಂಡುಹಿಡಿಯಬಹುದು. ಸ್ತನಗಳಲ್ಲಿ ಕಂಡುಬರುವ ಸಣ್ಣ ಬದಲಾವಣೆಗಳನ್ನು ಗಮನಿಸಿದರೆ, ಮುಂದಾಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಹಾಗಾಗಿ ನಿಯಮಿತ ತಪಾಸಣೆಗಳ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳುತ್ತಾರೆ ತಜ್ಞರು.
ಎಚ್ಚರ ವಹಿಸಿ:
ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಳು ನಿಯಮಿತ ತಪಾಸಣೆಯಲ್ಲಿ ಪತ್ತೆಯಾಗುತ್ತವೆ. ಜೊತೆಗೆ, ಈ ಭಾಗಗಳಲ್ಲಿ ಯಾವುದೇ ರೀತಿಯ ಅಸಹಜತೆಯಿದ್ದರೆ ನಿರ್ಲಕ್ಷಿಸಬೇಡಿ. ಇದಲ್ಲದೆ, ಶಾರೀರಿಕವಾಗಿಯೂ ಕೆಲವು ಲಕ್ಷಣಗಳ ಬಗ್ಗೆ ಜಾಗೃತರಾಗಿ ಇದ್ದರೆ, ಮುಂದಾಗುವ ಅನಾಹುತವನ್ನು ತಡೆಯಲು ಸಾಧ್ಯವಿದೆ. ದೇಹದ ವಿಸರ್ಜನಾ ಪ್ರಕ್ರಿಯೆಯಲ್ಲಿ ಯಾವುದಾದರೂ ವಿಲಕ್ಷಣ ವ್ಯತ್ಯಾಸಗಳಾದರೆ, ಗಾಯಗಳು ಗುಣವಾಗದೇ ಇದ್ದರೆ, ಎಲ್ಲದರೂ ಗಂಟುಗಳು ಕಾಣಿಸಿಕೊಂಡರೆ, ಪದೇಪದೇ ಅಜೀರ್ಣ ಅಥವಾ ನುಂಗುವುದಕ್ಕೆ ಕಷ್ಟವಾದರೆ, ಗುಣವಾಗದ ಕೆಮ್ಮು ಅಥವಾ ಧ್ವನಿಯಲ್ಲಿ ಬದಲಾವಣೆಯಾದರೆ, ದೇಹದ ಮೇಲಿನ ಮಚ್ಚೆಗಳಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಗಳಾದರೆ, ಕಾರಣವೇ ಇಲ್ಲದೆ ತೂಕ ಇಳಿಯುತ್ತಿದ್ದರೆ, ಸುಸ್ತು-ಆಯಾಸಗಳು ಕಾಡಿಸುತ್ತಿದ್ದರೆ, ಎಲ್ಲಿಂದಲಾದರೂ ರಕ್ರಸ್ರಾವ ಆಗುತ್ತಿದ್ದರೆ, ಗುಣವಾಗದ ಅನೀಮಿಯ- ಇಂಥ ಯಾವುದೇ ಲಕ್ಷಣಗಳು ಗೋಚರಿಸಿದರೂ ವೈದ್ಯರಲ್ಲಿ ಹೋಗಬೇಕು.
ಈ ಸುದ್ದಿಯನ್ನೂ ಓದಿ: Health Tips :ಆತುರಾತುರವಾಗಿ ತಿನ್ನುತ್ತೀರಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಎಚ್ಚರ ವಹಿಸಿ!
ತಡೆಯಲು ಸಾಧ್ಯ
ದೋಷಯುಕ್ತ ಜೀವನಶೈಲಿಯನ್ನು ಬದಲಾಯಿಸಿಕೊಂಡರೆ ಶೇ. ೪೦ರಷ್ಟು ಕ್ಯಾನ್ಸರ್‌ಗಳನ್ನು ತಡೆಯಬಹುದು. ತಂಬಾಕು, ಧೂಮಪಾನ ಮತ್ತು ಮದ್ಯ ಸೇವನೆಯಂಥ ಚಟಗಳನ್ನು, ಸಂಸ್ಕರಿತ ಆಹಾರಗಳನ್ನು ತ್ಯಜಿಸಿದರೆ ಬಾಯಿ, ಗಂಟಲು, ಶ್ವಾಸನಾಳ, ಜೀರ್ಣಾಂಗಗಳ ಸುರಕ್ಷತೆಯಲ್ಲಿ ಒಂದು ಹೆಜ್ಜೆ ಮುಂದಿರಿಸಿದಂತೆ. ವೈರಸ್ ಸೋಂಕಿನಿಂದ ಬರುವ ಸರ್ವೈಕಲ್ ಕ್ಯಾನ್ಸರ್ ತಡೆಗೆ ಬಾಲಕಿಯರಿಗೆ ಲಸಿಕೆ ನೀಡುವುದು ಪರಿಣಾಮಕಾರಿ. ಹೀಗೆ ಹಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಯಲು ಸಾಧ್ಯವಿದೆ. ಆದರೆ ಆನುವಂಶಿಕ ಕಾರಣಗಳಿದ್ದಾಗ ಮಾತ್ರ ಈ ಬಗ್ಗೆ ಎಚ್ಚರಿಕೆ ವಹಿಸಲೇಬೇಕು. ಇದಲ್ಲದೆ, ಹಲವರು ರೀತಿಯ ರಾಸಾಯನಿಕಗಳಿಗೆ, ವಿಕಿರಣಗಳಿಗೆ ಒಡ್ಡಿಕೊಂಡಾಗ, ಟ್ಯೂಮರ್ ಉಂಟುಮಾಡುವ ವೈರಸ್‌ಗಳ ಸೋಂಕಿನಿಂದ- ಹೀಗೆ ಹಲವಾರು ಕಾರಣಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ನಮ್ಮ ಬಗೆಗಿನ ಕಾಳಜಿಯನ್ನು ಕಡೆಗಣಿಸಿದರೆ ನಮ್ಮ ಆರೋಗ್ಯವನ್ನೂ ಕಡೆಗಣಿಸಿದಂತೆ ಎಂಬುದು ತಿಳಿದಿರಲಿ.