ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita William: ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ?: ಸುನೀತಾ ವಿಲಿಯಮ್ಸ್‌ ನೀಡಿದ ಉತ್ತರವೇನು ಗೊತ್ತಾ?

ಬಾಹ್ಯಾಕಾಶದಿಂದ ಭೂಮಿಗೆ ಹಿಂದಿರುಗಿ ಬಂದ ಮೇಲೆ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿರುವ ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ ಎಂಬ ಪ್ರಶ್ನೆಗೆ ಬಹಳ ಅಧ್ಬುತವಾಗಿ ಉತ್ತರ ನೀಡಿದ್ದು, ಅಲ್ಲಿ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಆ ಕುರಿತಾದ ಮಾಹಿತಿ ಇಲ್ಲಿದೆ.

ಸ್ಪೇಸ್ ಇಂದ ಭಾರತ ಹೇಗೆ ಕಾಣಿಸುತ್ತಿತ್ತು? ಸುನೀತಾ ವಿಲಿಯಮ್ಸ್ ಹೇಳಿದ್ದೇನು?

ಸುನೀತಾ ವಿಲಿಯಮ್ಸ್‌

Profile Sushmitha Jain Apr 1, 2025 10:14 AM

ವಾಷಿಂಗ್ಟನ್:‌ ಸುಮಾರು 41 ವರ್ಷಗಳ ಹಿಂದೆ ಅಂದರೆ, 1984 ಏಪ್ರಿಲ್‌ 3ರಂದು ಅಂದಿನ ಸೋವಿಯತ್‌ ಒಕ್ಕೂಟದ ಗಗನನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾ ಅವರನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಭೂಮಿಯಿಂದಲೇ ಮಾತನಾಡಿಸಿದ್ದರು. ಈ ವೇಳೆ, ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ರಾಕೇಶ್‌ ಶರ್ಮಾ, "ಸಾರೆ ಜಹಾನ್ ಸೆ ಅಚ್ಚಾ, ಹಿಂದೂಸ್ತಾನ್‌ ಹಮಾರಾ" ಎಂದು ಹೇಳಿದ್ದು, ಇಂದಿಗೂ ಹಚ್ಚಹಸುರಾಗಿಯೇ ಉಳಿದಿದೆ. ಈಗ ಭಾರತೀಯ(India) ಮೂಲದ ಸುನೀತಾ ವಿಲಿಯಮ್ಸ್‌(Sunita Williams) ಬರೋಬ್ಬರಿ 286 ದಿನಗಳ ಬಾಹ್ಯಾಕಾಶ(Space) ವಾಸದಿಂದ ಕಳೆದ ತಿಂಗಳು ಭೂಮಿಗೆ ಮರಳಿದ್ದು, ಮೊತ್ತ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಭಾರತವು ಬಾಹ್ಯಾಕಾಶ(How Did India Look From Space)ದಿಂದ ಹೇಗೆ ಕಾಣುತ್ತದೆ ಎಂದು ಕೇಳಿದಾಗ ಅವರು ನೀಡಿದ ಉತ್ತರ ನಿಜಕ್ಕೂ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಕ್ಷಣವಾಗಿದೆ.

"ಅದ್ಭುತ… ಭಾರತ ಅದ್ಭುತವಾಗಿದೆ. ನಾವು ಪ್ರತಿ ಬಾರಿ ಹಿಮಾಲಯದ ಮೇಲೆ ಹಾದು ಹೋದಾಗ, ನನ್ನ ಸಹ ಗಗನಯಾತ್ರಿ ಬುಚ್ ವಿಲ್ಮೋರ್, ಕೆಲವು ಕುತೂಹಲಕಾರಿಯಾದ ಚಿತ್ರಗಳನ್ನು ತೆಗೆದಿದ್ದಾರೆ. ಅವುಗಳು ಅದ್ಭುತವಾಗಿವೆ" ಎಂದು ಸುನೀತಾ ವಿಲಿಯಮ್ಸ್ ಹೇಳಿದರು.

ಮನೆಯಲ್ಲಿಯೇ ಇರುವ ಅನುಭವ

"ನೀವು ಗುಜರಾತ್ ಮತ್ತು ಮುಂಬೈಗೆ ಕಡೆಗೆ ಸಾಗಿದರೆ ಮೀನುಗಾರರ ದೋಣಿಗಳು ನಿಮ್ಮ ಕಣ್ಣಮುಂದೆ ಕಾಣಿಸುತ್ತವೆ. ಅದು ದೀಪಸ್ಥಂಬದಿಂದ ಮೂಡಿಬಂದ ಬೆಳಕಿನಂತೆ ಕಾಣುತ್ತದೆ. ಭಾರತದಾದ್ಯಂತ, ದೊಡ್ಡ ನಗರಗಳಿಂದ ಸಣ್ಣ ನಗರಗಳ ನಡುವೆ ಕಂಡು ಬರುವ ಬೆಳಕಿನ ವ್ಯತ್ಯಾಸಗಳು ಹಾಗೂ ರಾತ್ರಿ ಮತ್ತು ಹಗಲಿನ ವೇಳೆಯಲ್ಲಿ ಹಿಮಾಲಯದಲ್ಲಿ ಕಂಡು ಬರುವ ಬೆಳವಣಿಗೆಗಳು ನಿಜಕ್ಕೂ ಅದ್ಭುತ. ಪಶ್ಚಿಮದಲ್ಲಿ ಮೀನುಗಾರಿಕಾ ದೋಣಿಗಳಿಂದ ಹಿಡಿದು ಉತ್ತರದ ಭವ್ಯ ಹಿಮಾಲಯದವರೆಗೆ ನೋಡಿದಾಗ, ನಾನು ಮನೆಯಲ್ಲಿ ಇಲ್ಲದಿದ್ದರೂ, ಮನೆಯಲ್ಲಿಯೇ ಇರುವ ಅನುಭವವಾಯಿತು” ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಓದಿ: Sunita Williams: ಹ್ಯಾಟ್ಸ್‌ ಆಫ್‌ ಟು ಯೂ ಸುನಿತಾ- ಗಗನತಾರೆಯ ಬಗ್ಗೆ ಇಲ್ಲಿದೆ ರೋಚಕ ಸಂಗತಿ!

ಮಹತ್ವಾಕಾಂಕ್ಷೆಯ ಆಕ್ಸಿಯಮ್‌ ಮಿಷನ್:‌

ಇದೇ ವರ್ಷ ಭಾರತೀಯ ಗಗನಯಾತ್ರಿ ಸುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಯಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿರುವ ಆಕ್ಸಿಯಮ್‌ ಮಿಷನ್‌ ಕುರಿತು ಸುನೀತಾ ವಿಲಿಯಮ್ಸ್‌ ಭಾರಿ ಉತ್ಸುಕರಾಗಿದ್ದಾರೆ. “ಇದು ಅತ್ಯುತ್ತಮ ವಿಚಾರವಾಗಿದೆ. ಭಾರತಕ್ಕೆ ಒಬ್ಬ ತವರಿನ ನಾಯಕ ಸಿಗಲಿದ್ದಾನೆ. ಭಾರತೀಯರೊಬ್ಬರ ದೃಷ್ಟಿಕೋನದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎಷ್ಟು ಅದ್ಭುತವಾಗಿದೆ ಎಂದ ವರ್ಣನೆಯೂ ಸಿಗಲಿದೆ. ಒಂದು ಹಂತದಲ್ಲಿ ನಾನು ಭಾರತಕ್ಕೆ ಭೇಟಿ ಕೊಟ್ಟು ನಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶ ಸಿಗಲಿದೆ ಎಂದು ಭಾವಿಸುತ್ತೇನೆ. ಏಕೆಂದರೆ, ಭಾರತ ಅದ್ಭುತವಾದ ಪ್ರಜಾಪ್ರಭುತ್ವವನ್ನು ಹೊಂದಿರುವ ಒಂದು ದೊಡ್ಡ ದೇಶ. ಬಾಹ್ಯಾಕಾಶದಲ್ಲಿ ಹೆಜ್ಜೆಯಿಡಲು ಅವರು ಮಾಡುತ್ತಿರುವ ಪ್ರಯತ್ನಗಳ ಭಾಗವಾಗಲು ಮತ್ತು ಅವರಿಗೆ ಸಹಕರಿಸಲು ನಾನು ಇಷ್ಟಪಡುತ್ತೇನೆ” ಎಂದು ಸುನೀತಾ ಹೇಳಿದರು.

ಇನ್ನು, ಅವರ ಸಹ ಗಗನಯಾತ್ರಿ ಬುಚ್‌ ವಿಲ್ಮೋರ್‌ ಅವರನ್ನು ಖಂಡಿತವಾಗಿಯೂ ಭಾರತಕ್ಕೆ ಕರೆ ತರುತ್ತೇನೆ, ಅಲ್ಲಿ ಅವರಿಗೆ ಮಸಾಲೆಯುಕ್ತ ಆಹಾರ ತಿನ್ನಿಸುತ್ತೇನೆ ಎಂದು ಸುನೀತಾ ಮುಗುಳ್ನಕ್ಕರು.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಜೂನ್‌ನಲ್ಲಿ ಎಂಟು ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಪ್ರೊಪಲ್ಷನ್ ಸಮಸ್ಯೆಗಳಿಂದಾಗಿ, ಬಾಹ್ಯಾಕಾಶ ನೌಕೆಯು ಹಿಂತಿರುಗಿದ ಕಾರಣ, ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿಯೇ ಸಿಲುಕಿಕೊಂಡರು. ಅಂತಿಮವಾಗಿ ಮಾರ್ಚ್ 19 ರಂದು ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಇಬ್ಬರೂ ಭೂಮಿಗೆ ಮರಳಿದರು.