Sunita Williams: ಹ್ಯಾಟ್ಸ್ ಆಫ್ ಟು ಯೂ ಸುನಿತಾ- ಗಗನತಾರೆಯ ಬಗ್ಗೆ ಇಲ್ಲಿದೆ ರೋಚಕ ಸಂಗತಿ!
Sunita Williams: ಸುಮಾರು 17 ಗಂಟೆಗಳ ಕಾಲ ಕ್ಯಾಪ್ಸೂಲ್‌ನಲ್ಲಿ ಕುಳಿತಲ್ಲೇ ಅಲ್ಲಾಡದಂತೆ ಕುಳಿತು ಅಷ್ಟು ದೂರದಿಂದ ಮರಳಿ ಭೂಮಿಗೆ ಬಂದಿರುವ ಸುನಿತಾಗೆ ಸದ್ಯಕ್ಕಂತೂ ಭೂಮಿಯ ಮೇಲೆ ಸಹಜವಾಗಿ ಓಡಾಡುವ ಸ್ಥಿತಿಯಲ್ಲಿಲ್ಲ. ಇನ್ನೂ 45 ದಿನಗಳ ಕಾಲ ಅವರು ಹ್ಯೂಸ್ಟನ್‌ನ ರಿಹ್ಯಾಬಿಲಿಟೇಶನ್ ಸೆಂಟರ್‌ನಲ್ಲಿದ್ದುಕೊಂಡು, ಸ್ಪೇಸ್ ವಾಕ್ ಮಾಡಿ ಅಭ್ಯಾಸವಾದ ತಮ್ಮ ಕಾಲುಗಳಿಗೆ ಭೂಮಿಯ ಮೇಲೆ ನಡೆಯುವುದನ್ನು ಕಲಿಸಿಕೊಡಬೇಕಿದೆ. ಇವೆಲ್ಲವನ್ನೂ ದಾಟಿ ಮನುಕುಲದ ಒಳಿತಿಗಾಗಿ ತಮ್ಮನ್ನು ತೆತ್ತುಕೊಳ್ಳುವ ಸುನಿತಾ ಥರದವರು ಗ್ರೇಟ್ ಅಂತಲೇ ಹೇಳಬೇಕು.


- ಹರೀಶ್ ಕೇರ
ನವದೆಹಲಿ: ಬರೋಬ್ಬರಿ 286 ದಿನಗಳ ಕಾಲ ಭೂಮಿಯಿಂದ 400 ಕಿಲೋಮೀಟರ್ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದ ಸುನಿತಾ ವಿಲಿಯಮ್ಸ್ (Sunita Williams)ತಮ್ಮ ನವಮಾಸಗಳ ಅಂತರಿಕ್ಷ ವಾಸವನ್ನು ಮುಗಿಸಿ ಭೂಮಿಗೆ ಮರಳಿದ್ದಾರೆ. ಅವರ ಜೊತೆಗೆ ಇನ್ನೂ ಮೂವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ಡ್ರಾಗನ್ ಕ್ಯಾಪ್ಸೂಲ್ ಅಮೆರಿಕದ ಫ್ಲೋರಿಡಾ ಕೊಲ್ಲಿಯಲ್ಲಿ ಸಮುದ್ರಕ್ಕೆ ಇಳಿದಿದ್ದು, ಅದರ ಸತ್ತಲೂ ಡಾಲ್ಫಿನ್‌ಗಳು ಡ್ಯಾನ್ಸ್ ಮಾಡ್ತಾ ಈ ಹೆಮ್ಮೆಯ ಬಾಹ್ಯಾಕಾಶ ಯಾತ್ರಿಗಳನ್ನು ಸ್ವಾಗತಿಸಿವೆ. ಸುಮಾರು 17 ಗಂಟೆಗಳ ಕಾಲ ಕ್ಯಾಪ್ಸೂಲ್‌ನಲ್ಲಿ ಕುಳಿತಲ್ಲೇ ಅಲ್ಲಾಡದಂತೆ ಕುಳಿತು ಅಷ್ಟು ದೂರದಿಂದ ಮರಳಿ ಭೂಮಿಗೆ ಬಂದಿರುವ ಸುನಿತಾಗೆ ಸದ್ಯಕ್ಕಂತೂ ಭೂಮಿಯ ಮೇಲೆ ಸಹಜವಾಗಿ ಓಡಾಡುವ ಸ್ಥಿತಿಯಲ್ಲಿಲ್ಲ. ಇನ್ನೂ 45 ದಿನಗಳ ಕಾಲ ಅವರು ಹ್ಯೂಸ್ಟನ್‌ನ ರಿಹ್ಯಾಬಿಲಿಟೇಶನ್ ಸೆಂಟರ್‌ನಲ್ಲಿದ್ದುಕೊಂಡು, ಸ್ಪೇಸ್ ವಾಕ್ ಮಾಡಿ ಅಭ್ಯಾಸವಾದ ತಮ್ಮ ಕಾಲುಗಳಿಗೆ ಭೂಮಿಯ ಮೇಲೆ ನಡೆಯುವುದನ್ನು ಕಲಿಸಿಕೊಡಬೇಕಿದೆ. ಅವರ ರಕ್ತನಾಳಗಳು, ಹೃದಯ, ಮೆದುಳು ಎಲ್ಲವೂ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗಿದೆ. ಇದು ಸುನಿತಾಗೆ ಮರುಜನ್ಮ ಅಂತಲೇ ಹೇಳಬಹುದು.
ಸುನಿತಾ ಮತ್ತೆ ತಮ್ಮ ಕುಟುಂಬವನ್ನು ಸೇರಿಕೊಳ್ಳೋದಕ್ಕೆ ಮೊದಲು ಹಲವಾರು ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತೆ. ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯುವುದು ಗಗನಯಾತ್ರಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅವರ ಸ್ನಾಯುಗಳು ದುರ್ಬಲವಾಗಿರುತ್ತವೆ. ಬಾಹ್ಯಾಕಾಶದಲ್ಲಿ ಕಡಿಮೆ ಗುರುತ್ವಾಕರ್ಷಣ ಶಕ್ತಿ ಇರುವುದರಿಂದ ತಿಂಗಳಿಗೆ ಸರಿಸುಮಾರು 1- 2% ರಷ್ಟು ಸ್ನಾಯು ಸಾಂದ್ರತೆ ನಷ್ಟವಾಗುತ್ತದೆ. ಈ ನಷ್ಟವನ್ನು ಸರಿಪಡಿಸಲು ನುರಿತ ವೈದ್ಯರು ಇವರ ಮೇಲೆ ನಿಗಾ ಇಡಲಿದ್ದಾರೆ. ಬಾಹ್ಯಾಕಾಶದಲ್ಲಿ ಹೃದಯವು ಗುರುತ್ವಾಕರ್ಷಣೆಯ ವಿರುದ್ಧ ರಕ್ತವನ್ನು ಪಂಪ್ ಮಾಡುವ ಅಗತ್ಯವಿಲ್ಲದ ಕಾರಣ ಕಡಿಮೆ ಕೆಲಸ ಮಾಡುತ್ತದೆ. ರಕ್ತದ ಪರಿಚಲನೆ ಕೂಡ ಸರಾಗವಾಗುವುದಿಲ್ಲ. ಇದರಿಂದಾಗಿ ಅವರ ಮುಖ ಊದಿಕೊಂಡಿರುತ್ತದೆ ಹಾಗೂ ಕೈಕಾಲುಗಳು ಸಣ್ಣದಾಗಿರುತ್ತದೆ. ತಲೆಯಲ್ಲಿ ದ್ರವಗಳು ಸಂಗ್ರಹವಾಗುತ್ತವೆ. ಭೂಮಿಗೆ ಬಂದಾಗ ಇವೆಲ್ಲವೂ ಮೊದಲಿನ ಸ್ಥಿತಿಗೆ ಬರಬೇಕಾಗುತ್ತದೆ. ಅನೇಕ ಗಗನಯಾತ್ರಿಗಳು ತಲೆಯಲ್ಲಿ ದ್ರವದ ಶೇಖರಣೆಯಿಂದಾಗಿ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಸ್ಪೇಸ್‌ಫ್ಲೈಟ್-ಅಸೋಸಿಯೇಟೆಡ್ ನ್ಯೂರೋ-ಆಕ್ಯುಲರ್ ಸಿಂಡ್ರೋಮ್ (SANS) ಎಂದು ಕರೆಯಲ್ಪಡುವ ಸ್ಥಿತಿಯಿಂದಾಗಿ ದೃಷ್ಟಿ ಮಂದವಾಗಬಹುದು ಮತ್ತು ಶಾಶ್ವತವಾಗಿ ಕನ್ನಡಕ ಧರಿಸಬೇಕಾಗಬಹುದು. ಇನ್ನು ಇವರ ಚರ್ಮ ಮೃದುವಾಗುತ್ತದೆ ಮತ್ತು ಹೆಚ್ಚು ಸೂಕ್ಷ್ಮವಾಗುತ್ತದೆ. ಮಾನಸಿಕ ಮತ್ತು ಭಾವನಾತ್ಮಕ ಸವಾಲುಗಳು ಸಹ ಇರುತ್ತವೆ. ಇವೆಲ್ಲವನ್ನೂ ಸುನಿತಾ ಜೀವಮಾನ ಪೂರ್ತಿ ಎದುರಿಸುತ್ತಲೇ ಇರಬೇಕಾಗುತ್ತದೆ. ಇವೆಲ್ಲವನ್ನೂ ದಾಟಿ ಮನುಕುಲದ ಒಳಿತಿಗಾಗಿ ತಮ್ಮನ್ನು ತೆತ್ತುಕೊಳ್ಳುವ ಸುನಿತಾ ಥರದವರು ಗ್ರೇಟ್ ಅಂತಲೇ ಹೇಳಬೇಕು.
ಅಂದ ಹಾಗೆ, ಸುನಿತಾ ವಿಲಿಯಮ್ಸ್ 9 ತಿಂಗಳ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿ ಏನ್ ಮಾಡ್ತಾ ಇದ್ರು? ಅಷ್ಟೊಂದು ಕಾಲ ಅಲ್ಲಿ ಮಾಡೋಕೆ ಏನಿರುತ್ತೆ ಅಂತ ನೀವು ಕೇಳಬಹುದು. ಅವರೇನೂ ಅಲ್ಲಿ ಸುಮ್ಮನೆ ಕೂತುಕೊಂಡು ಆಕಾಶ ನೋಡೋಕಾಗಲ್ಲ. ಅಲ್ಲಿ ಅವರಿಗೆ ಬಾಹ್ಯಾಕಾಶ ಕೇಂದ್ರದ ನಿರ್ವಹಣೆಯ ಹೊಣೆಯನ್ನು ವಹಿಸಿರುತ್ತಾರೆ. ಫುಟ್ಬಾಲ್ ಮೈದಾನದ ಗಾತ್ರದಲ್ಲಿರುವ ಈ ನಿಲ್ದಾಣಕ್ಕೆ ನಿರಂತರ ನಿರ್ವಹಣೆ ಅಗತ್ಯ. ಶುಚಿಯಾಗಿ ಇಟ್ಟುಕೋಬೇಕು. ಅಲ್ಲೆಲ್ಲೂ ಹೀಲಿಯಂ ಲೀಕ್ ಆಗದ ಹಾಗೆ, ಎಲ್ಲೂ ಒಳಗಿನ ಒತ್ತಡದ ವಾತಾವರಣ ಬದಲಾಗದ ಹಾಗೆ ನೋಡ್ಕೋಬೇಕು. ಅಲ್ಲಿರುವ ಹಳೆಯ ಉಪಕರಣಗಳನ್ನು ಬದಲಾಯಿಸಬೇಕು. ಇವೆಲ್ಲವನ್ನೂ ಮಾಡೋದಲ್ಲದೆ ಸುನಿತಾ ವಿಲಿಯಮ್ಸ್ 9 ತಿಂಗಳಲ್ಲಿ ಹಲವು ವೈಜ್ಞಾನಿಕ ಪ್ರಯೋಗಗಳಲ್ಲಿ ಸಕ್ರಿಯರಾಗಿದ್ದರು. ನಾಸಾ ನೀಡಿರುವ ಮಾಹಿತಿ ಪ್ರಕಾರ, ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡ 900 ಗಂಟೆಗಳ ಸಂಶೋಧನೆ ಪೂರ್ಣಗೊಳಿಸಿದೆ. 150ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿ ಹೊಸ ದಾಖಲೆ ಬರೆದಿದೆ. ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ಕಳೆದ ಮಹಿಳೆ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಬಾಹ್ಯಾಕಾಶ ನಿಲ್ದಾಣದ ಹೊರಗೆ 62 ಗಂಟೆ 9 ನಿಮಿಷಗಳನ್ನು ಕಳೆದಿದ್ದಾರೆ. 9 ಬಾರಿ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಗುರುತ್ವಾಕರ್ಷಣೆಯು ಬಾಹ್ಯಾಕಾಶದಲ್ಲಿನ Fluid systems ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಸಂಶೋಧನೆ ಮಾಡಿದ್ದಾರೆ. ಬಾಹ್ಯಾಕಾಶದಲ್ಲಿ ವಾಟರ್ ರಿಕವರಿ ಮತ್ತು Fuel cellಗಳ ಹೊಸ ರಿಯಾಕ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಂಶೋಧನೆ ನಡೆಸಿದ್ದಾರೆ. ಜೈವಿಕ ಪೌಷ್ಟಿಕಾಂಶ (Biological nutrition) ಪ್ರಾಜೆಕ್ಟ್ನಲ್ಲಿ ಬ್ಯಾಕ್ಟಿರಿಯಾ ಬಳಸಿಕೊಂಡು ಪೋಷಕಾಂಶಗಳನ್ನು ಉತ್ಪಾದಿಸುವ ವಿಧಾನಗಳನ್ನು ಅಧ್ಯಯನ ಮಾಡಿದ್ದಾರೆ. ಗಗನಯಾತ್ರಿಗಳಿಗೆ ತಾಜಾ ಪೋಷಕಾಂಶಗಳನ್ನು ಒದಗಿಸೋದು ಹೇಗೆ ಅನ್ನೋದು ಈ ಯೋಜನೆಯ ಗುರಿ. ಇದನ್ನೆಲ್ಲ ಮಾಡ್ತಾ ಸುನಿತಾ ಅಷ್ಟೊಂದು ಕಾಲವನ್ನು ಪ್ರೊಡಕ್ಟಿವ್ ಆಗಿ ಅಲ್ಲಿ ಕಳೆದಿದ್ದಾರೆ.
ಈ ಸುದ್ದಿಯನ್ನೂ ಓದಿ: PM Narendra Modi: ವೆಲ್‌ಕಮ್... ಭೂಮಿ ನಿಮ್ಮನ್ನು ಮಿಸ್ ಮಾಡ್ಕೊಂಡಿತು; ಸುನಿತಾಗೆ ಪ್ರಧಾನಿ ಮೋದಿ ಹೃದಯಸ್ಪರ್ಶಿ ಸ್ವಾಗತ
8ದಿನಗಳ ಬಾಹ್ಯಾಕಾಶ ಯಾನ 9 ತಿಂಗಳಾಗಿದ್ದು ಹೇಗೆ?
ಹಾಗೆ ನೋಡಿದರೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕಳೆದ ವರ್ಷ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಪ್ರಯಾಣದ ಉದ್ದೇಶ ಅಲ್ಲಿ ಕೇವಲ 8 ದಿನಗಳು ಇರೋದಾಗಿತ್ತು. ಆದರೆ ಸ್ಟಾರ್‌ಲೈನರ್ ನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದ ಕಾರಣದಿಂದಾಗಿ, ಈ ಇಬ್ಬರೂ ಗಗನಯಾತ್ರಿಗಳು ಐಎಸ್‌ಎಸ್‌ನಲ್ಲೇ 9 ತಿಂಗಳ ದೀರ್ಘ ಕಾಲ ಉಳಿಯುವಂತಾಯಿತು. ಈ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವುದು ನಾಸಾಗೆ ಸವಾಲಿನ ವಿಷಯವಾಗಿತ್ತು. ಇದರ ನಡುವೆ ರಾಜಕೀಯ ಕೂಡ ತಲೆ ತೂರಿಸಿತು ಅಂತಾರೆ. ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಜೋ ಬೈಡನ್ ಅವರ ಮೇಲೆ ಈ ವಿಷಯದ ಕುರಿತು ಆರೋಪ ಕೇಳಿ ಬಂದಿದೆ. ಬೈಡೆನ್ ಅವರು ಒಂದು ಮಾತು ಎಲಾನ್ ಮಸ್ಕ್ ಅವರಿಗೆ ಹೇಳಿದ್ದರೆ ಈ ಮೊದಲೇ ಮಸ್ಕ್ ಅವರ ಸ್ಪೇಸ್‌ಎಕ್ಸ್ ಕಂಪನಿಯ ನೌಕೆ ಅಲ್ಲಿಗೆ ಹೋಗಿ ಸುನಿತಾ ಅವರನ್ನು ಕರೆತರುತ್ತಿತ್ತು. ಆದ್ರೆ ಡೊನಾಲ್ಡ್ ಟ್ರಂಪ್ ಅವರ ಆಪ್ತರಾಗಿದ್ದರಿಂದ ಎಲಾನ್ ಮಸ್ಕ್‌ಗೂ ಬೈಡನ್ ಅವರಿಗೂ ತಿಕ್ಕಾಟ ಸೃಷ್ಟಿಯಾಗಿದ್ದಲ್ಲದೆ, ಗಗನಯಾತ್ರಿಗಳು ಅಲ್ಲಿಯೇ ಉಳಿಯಬೇಕಾಯಿತು. ಹಾಗಂತ ಎಲಾನ್ ಮಸ್ಕ್ ಅವರು ಕೂಡ ಆರೋಪಿಸಿದ್ದಾರೆ. ಸದ್ಯ ಸುನಿತಾ ಭೂಮಿಗೆ ಬಂದ್ರು ಅನ್ನೋದೇ ನಮಗೆ ಸಮಾಧಾನದ ವಿಷಯ.
ಸುನಿತಾ ಹಿನ್ನೆಲೆ ಏನು?
ಸುನಿತಾ ವಿಲಿಯಮ್ಸ್ ಅಮೆರಿಕದ ಪ್ರಜೆ ಹಾಗೂ ನಾಸಾದ ಗಗನಯಾತ್ರಿ ಆಗಿದ್ರೂ ಅವರನ್ನು ಭಾರತೀಯರು ಭಾವನಾತ್ಮಕವಾಗಿ ನಮ್ಮವರು ಅಂತ್ಲೇ ನೋಡ್ತಾರೆ. ಸುನಿತಾ ಕೂಡ ತಮ್ಮೊಳಗೊಬ್ಬ ಹಿಂದೂ ಹಾಗೂ ಇಂಡಿಯನ್ ಇರುವುದನ್ನು ಒಪ್ಪಿಕೊಳ್ತಾರೆ. ಸುನಿತಾ ವಿಲಿಯಮ್ಸ್ ಸೆಪ್ಟೆಂಬರ್ 19, 1965 ರಂದು ಓಹಿಯೋದ ಯೂಕ್ಲಿಡ್‌ನಲ್ಲಿ ಜನಿಸಿದರು. ಅವರ ತಂದೆ ಡಾ. ದೀಪಕ್ ಪಾಂಡ್ಯ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಜುಲಾಸನ್ ಗ್ರಾಮದ ನಿವಾಸಿ. ಅವರು 1957ರಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ ಪಾಂಡ್ಯ ಅಲ್ಲಿ ಉರ್ಸುಲಿನ್ ಬೋನಿ ಅವರನ್ನು ವಿವಾಹವಾದರು. ಕಲ್ಪನಾ ಚಾವ್ಲಾ ನಂತರ, ನಾಸಾ ಮೂಲಕ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತ ಮೂಲದ ಮಹಿಳೆ ಸುನಿತಾ. ಇದು ಸುನಿತಾ ಅವರ ಮೂರನೇ ಬಾಹ್ಯಾಕಾಶ ಪ್ರಯಾಣವಾಗಿದ್ದು, ಇದಕ್ಕೂ ಮೊದಲು ಅವರು 2006 ಮತ್ತು 2012ರಲ್ಲಿ ಹೋಗಿದ್ದಾರೆ. ಸುನಿತಾಗೆ ಈಗ 59 ವರ್ಷ. ʻಬಾಹ್ಯಾಕಾಶವೇ ನನ್ನ ಮನೆʼ ಅನ್ನುವ ಸುನಿತಾ, 2006ರಿಂದ ಐಎಸ್‌ಎಸ್‌ಗೆ ಹೋಗಿ ಬರುತ್ತಿದ್ದಾರೆ. ನಾಸಾಗೆ ಸೇರುವ ಮೊದಲು ಅಮೆರಿಕದ ನೌಕಾದಳದಲ್ಲಿದ್ದ ಯೋಧೆ ಆಕೆ. ಅವರು ಇದುವರೆಗೂ ಸ್ಪೇಸ್‌ನಲ್ಲಿ ಕಳೆದ ಕಾಲ 606 ದಿನ. ಅತಿ ಹೆಚ್ಚು ಸ್ಪೇಸ್‌ವಾಕ್ ಮಾಡಿದ (50 ಗಂಟೆ 40 ನಿಮಿಷ) ಮಹಿಳೆ ಎಂಬ ದಾಖಲೆ ಇವರ ಹೆಸರಿನಲ್ಲಿದೆ. 2007ರಲ್ಲಿ ಬೋಸ್ಟನ್ ಮ್ಯಾರಥಾನ್ ನಡೆದಾಗ, ಅದು ಭೂಮಿಯ ಮೇಲೆ ನಡೆದಷ್ಟೂ ದೂರ ಐಎಸ್‌ಎಸ್‌ನಲ್ಲಿ ತಾನೂ ಓಡಿ ಸ್ಪೇಸ್ ಮ್ಯಾರಥಾನ್ ಮಾಡಿದ ಏಕೈಕ ವ್ಯಕ್ತಿ ಎಂಬ ದಾಖಲೆ ಬರೆದಳು. ಇವೆಲ್ಲ ಆಕೆ ಎಷ್ಟು ಟಫ್ ವ್ಯಕ್ತಿ ಎಂಬುದನ್ನು ನಮಗೆ ಗೊತ್ತು ಮಾಡಿಸುತ್ತವೆ. ಸುನಿತಾ ಆಚರಿಸುವುದು ಹಿಂದೂ ಧರ್ಮವನ್ನು. 2006ರಲ್ಲಿ ಅವರು ಬಾಹ್ಯಾಕಾಶ ಕೇಂದ್ರಕ್ಕೆ ಹೋಗುವಾಗ ಭಗವದ್ಗೀತೆಯ ಒಂದು ಪ್ರತಿಯನ್ನು ತಮ್ಮ ಜೊತೆಗೆ ಒಯ್ದರು. 2012ರಲ್ಲಿ ಹೋದಾಗ ʼಓಂʼ ಚಿಹ್ನೆ ಮತ್ತು ಉಪನಿಷತ್‌ಗಳ ಪ್ರತಿಯನ್ನು ತೆಗೆದುಕೊಂಡು ಹೋದರು. ಸಮೋಸಾ ಅವರಿಗೆ ಇಷ್ಟವಾದ ಆಹಾರ, ಅದನ್ನೂ ಅವರು ಐಎಸ್‌ಎಸ್‌ಗೆ ಕೊಂಡೊಯ್ದಿದ್ದಾರೆ. 2007ರಲ್ಲಿ ಭಾರತಕ್ಕೆ ಬಂದುಹೋದಾಗ ಗುಜರಾತಿನಲ್ಲಿರುವ ತಮ್ಮ ಪೂರ್ವಜರ ಗ್ರಾಮವಾದ ಜುಲಾಸನ್‌ಗೆ ಮತ್ತು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಇವೆಲ್ಲವೂ ಆಕೆಯಲ್ಲಿರುವ ಭಾರತೀಯತೆಯನ್ನು ಎತ್ತಿ ಹಿಡೀತವೆ.
ಸುನಿತಾ ಬಾಹ್ಯಾಕಾಶ ಕೇಂದ್ರದಲ್ಲಿ ಏನನ್ನು ಸೇವಿಸ್ತಿದ್ರು?
ಸುನಿತಾ ಬಾಹ್ಯಾಕಾಶ ಕೇಂದ್ರದಲ್ಲಿ ಏನನ್ನು ಸೇವಿಸ್ತಾ ಇದ್ರು, ಅವರ ಶೌಚ ಮೊದಲಾದ ಕ್ರಿಯೆಗಳು ಹೇಗಿರ್ತಾ ಇದ್ದವು ಅನ್ನೋದು ಕೂಡ ಸ್ವಾರಸ್ಯಕರವಾದ ವಿಷಯ. ಭೂಮಿಯಿಂದ ನಿಗದಿತವಾಗಿ ಪ್ಯಾಕೇಜ್ಡ್ ಆಹಾರವನ್ನು ಐಎಸ್‌ಎಸ್‌ಗೆ ಕಳುಹಿಸಿಕೊಡಲಾಗುತ್ತದೆ. ಎಲ್ಲವೂ ಒಣಗಿಸಿದ, ಫ್ರೀಜ್ ಮಾಡಿದ ಆಹಾರಗಳು. ಇವುಗಳನ್ನು ಪ್ಲಾಸ್ಟಿಕ್, ಕ್ಯಾನ್, ಜಿಪ್‌ಲಾಕ್ ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಸರಿಯಾಗಿ ಪ್ಯಾಕ್ ಮಾಡದೇ ಇದ್ದರೆ ಆಹಾರ ಹಾಗೇ ತೇಲುತ್ತದೆ. ಗಗನಯಾತ್ರಿಗಳು ದಿನಕ್ಕೆ ಮೂರು ಬಾರಿ ಆಹಾರ ಸೇವಿಸ್ತಾರೆ. ಪಿಜ್ಜಾ, ರೈಸ್, ಚಿಕನ್ ಫ್ರೈ, ಸೀಗಡಿ, ಟ್ಯೂನಾ, ಮೊಟ್ಟೆ, ಬೀಜಗಳು, ಗ್ರಾನೋಲಾ ಬಾರ್, ಕುಕೀಸ್, ಕ್ಯಾಂಡಿ, ಒಣಹಣ್ಣುಗಳು, ಕಾಫಿ, ಚಹಾ, ಆಪಲ್ ಸೈಡರ್, ಕಿತ್ತಳೆ, ನಿಂಬೆ ಜ್ಯೂಸ್, ಬೇಕನ್ ಸ್ಯಾಂಡ್‌ವಿಚ್‌ಗಳು, ಚೀಸ್‌ಬರ್ಗರ್ ಮುಂತಾದ ಆಹಾರ ಸೇವಿಸ್ತಾರೆ. ನೀರನ್ನು ಕೂಡ ಪೊಟ್ಟಣಗಳಲ್ಲಿ ತುಂಬಿ ಕಳಿಸ್ತಾರೆ. ನೀರು ಕುಡಿಯುವಾಗ ಅದು ಹೊರಗೆ ಚೆಲ್ಲದಂತೆ ಜಾಗರೂಕರಾಗಿರುತ್ತಾರೆ. ಚೆಲ್ಲಿದರೆ ಅದು ಜೆಲ್ಲಿಯಂತೆ ವಾತಾವರಣದಲ್ಲಿ ಹಾಗೇ ತೇಲಾಡುತ್ತಾ ಇರುತ್ತದೆ. ಇನ್ನು ವಿಸರ್ಜನೆ ಮಾಡುವ ವಿಷಯದಲ್ಲಂತೂ ತುಂಬಾ ಎಚ್ಚರವಾಗಿರ್ತಾರೆ. ಓಪನ್ ಆಗಿ ಮಲ- ಮೂತ್ರ ವಿಸರ್ಜಿಸುವಂತೆಯೇ ಇಲ್ಲ. ತಮ್ಮ ದೇಹದ ವಿಸರ್ಜನಾಂಗಗಳಿಗೆ ಸಕ್ಷನ್ ಪೈಪ್ ಅಥವಾ ಹೀರುಗೊಳವೆಗಳನ್ನು ಕಟ್ಟಿಕೊಂಡು ಅವರು ಆ ಕೆಲಸ ಮುಗಿಸಬೇಕು. ಇವರ ಮೂತ್ರ ಮತ್ತೆ ರಿಸೈಕಲ್ ಆಗಿ ಕುಡಿಯುವ ನೀರಾಗಿ ಮತ್ತೆ ಇವರ ಬಳಿಯೇ ಬರುತ್ತೆ. ಹೀಗೇ ಈ ನೀರು ರಿಸೈಕಲ್ ಆಗುತ್ತಲೇ ಇರುತ್ತದೆ. ಇತರ ಘನ ತ್ಯಾಜ್ಯಗಳನ್ನು ಪ್ಯಾಕ್ ಮಾಡಿ ಭೂಮಿಗೆ ಕಳಿಸಲಾಗುತ್ತದೆ. ಇದೊಂದು ಕಠಿಣವಾದ ವ್ರತವೇ ಆಗಿದ್ದು, ಅದನ್ನು ಸುನಿತಾ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹೀಗೆ ಬಾಹ್ಯಾಕಾಶವನ್ನು ಗೆದ್ದು ಬಂದಿರುವ ಭಾರತದ ಹೆಮ್ಮೆಯ ಮಗಳು ಸುನಿತಾ, ತಮ್ಮ ಮುಂದಿರುವ 45 ದಿನಗಳ ಸಣ್ಣ ಅಜ್ಞಾತವಾಸವನ್ನು ಮುಗಿಸಿ ಬರಲಿ ಅಂತ ಜನ ಹಾರೈಸ್ತಾ ಇದಾರೆ. ಜೊತೆಗೆ, ಭಾರತಕ್ಕೆ ಕೂಡ ಬರಲಿ ಅನ್ನೋದು ಭಾರತೀಯರ ಹಾರೈಕೆಯಾಗಿದೆ.