ನವದೆಹಲಿ: ಸೆಪ್ಟೆಂಬರ್ 12 ರಿಂದ 13 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ 18 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಭಾಗವಹಿಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಗುರುವಾರ ದೃಢಪಡಿಸಿದೆ. ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದಕ್ಕೂ ಮೊದಲು ಕೊನೆಯ ಬಾರಿಗೆ ಅಕ್ಟೋಬರ್ 2019 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ತಮಿಳುನಾಡಿನ ಚೆನ್ನೈ ಬಳಿಯ ಮಾಮಲ್ಲಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ 2ನೇ ಅನೌಪಚಾರಿಕ ಶೃಂಗಸಭೆಯಲ್ಲಿ ಅವರು ಭಾಗವಹಿಸಿದ್ದರು.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಪ್ರಸ್ತುತ ಭಾರತ ಭೇಟಿಯು ರಾಜತಾಂತ್ರಿಕ ಹಾಗೂ ಜಾಗತಿಕ ರಾಜಕಾರಣದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಶನಿವಾರ ಶನಿವಾರ ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ದ್ವಿಪಕ್ಷೀಯ ಸಭೆ ನಡೆಸುವ ನಿರೀಕ್ಷೆಯಿದೆ . ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಪರಿಸ್ಥಿತಿ, ವ್ಯಾಪಕ ಗಡಿ ವಿವಾದ ಮತ್ತು ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸುವ ಕ್ರಮಗಳನ್ನು ಈ ಚರ್ಚೆಗಳು ಒಳಗೊಳ್ಳುವ ನಿರೀಕ್ಷೆಯಿದೆ.
2024 ರ ಗಡಿ ನಿಯಂತ್ರಣ ರೇಖೆಯ (LAC) ಒಪ್ಪಂದಗಳ ನಂತರ ನಡೆಯುತ್ತಿರುವ ಭೇಟಿಯಾದ್ದರಿಂದ, ಗಡಿಯಲ್ಲಿ ಸಂಪೂರ್ಣ ಶಾಂತಿ ಮರುಸ್ಥಾಪನೆ ಮತ್ತು ಉಭಯ ದೇಶಗಳ ಸೇನಾ ಸಂಬಂಧಗಳ ಸುಧಾರಣೆಗೆ ಇದು ಪ್ರಮುಖ ವೇದಿಕೆಯಾಗಲಿದೆ. ವ್ಯಾಪಾರ ಉದ್ದೇಶದಿಂದ ನೋಡುವುದಾದರೆ, ಗಡಿ ಘರ್ಷಣೆಯ ಬಳಿಕ ಭಾರತವು ಚೀನೀ ಹೂಡಿಕೆ ಹಾಗೂ ವೀಸಾಗಳ ಮೇಲೆ ಕಠಿಣ ನಿರ್ಬಂಧ ಹೇರಿತ್ತು. ಈ ಭೇಟಿಯಲ್ಲಿ ಚೀನಾದಿಂದ ತಂತ್ರಜ್ಞಾನ ಆಮದು, ಭಾರತೀಯ ಮಾರುಕಟ್ಟೆ ಪ್ರವೇಶ ಮತ್ತು ವಾಣಿಜ್ಯ ನಿರ್ಬಂಧಗಳನ್ನು ಸಡಿಲಗೊಳಿಸುವ ಕುರಿತು ಉಭಯ ದೇಶಗಳ ವಾಣಿಜ್ಯ ಸಚಿವರು ಮಾತುಕತೆ ನಡೆಸಲಿದ್ದಾರೆ.
ಬ್ರಿಕ್ಸ್ ಶೃಂಗಸಭೆ ವೇಳೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ರಧಾನಿ ನರೇಂದ್ರ ಮೋದಿ ಮಾತುಕತೆ
ಕ್ಸಿ ಜಿನ್‌ಪಿಂಗ್ ಅವರ ಭೇಟಿಗೆ ಕೆಲವೇ ದಿನಗಳ ಮೊದಲು (ಸೆಪ್ಟೆಂಬರ್ ಮೊದಲ ವಾರದಲ್ಲಿ), ಭಾರತ ಮತ್ತು ಚೀನಾದ ಉನ್ನತ ಸೇನಾ ಕಮಾಂಡರ್‌ಗಳು ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ (Eastern Sector) ವಿಶೇಷ ಸಭೆ ನಡೆಸಿ ಗಡಿ ಸ್ಥಿರತೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಪ್ರವಾಸದಲ್ಲಿ ಎರಡೂ ದೇಶಗಳ ನಾಯಕರು ಗಡಿಯಲ್ಲಿ ಮತ್ತೊಮ್ಮೆ ಹಿಂಸಾಚಾರ ನಡೆಯದಂತೆ ಶಾಶ್ವತ ರಕ್ಷಣಾ ವ್ಯವಸ್ಥೆ ರೂಪಿಸುವ ಕುರಿತು ಚರ್ಚಿಸಲಿದ್ದಾರೆ.