Yogi Adityanath: ಸಂಭಾಲ್‌ನಲ್ಲಿ ನಡೆದ ಗಲಭೆ ಹಿಂದೂಗಳ ವಿರುದ್ಧ ನಡೆದ ಸಂಚು- ತನಿಖೆಯಿಂದ ಬಹಿರಂಗ
2024ರಲ್ಲಿ ಸಂಭಾಲ್ ನಲ್ಲಿ ನಡೆದ ಗಲಭೆಯ ಕುರಿತು ಗುರುವಾರ ನ್ಯಾಯಾಂಗ ಆಯೋಗವು ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಪಟ್ಟಣದಲ್ಲಿ ಗಲಭೆಗೆ ಸಂಚು ರೂಪಿಸಿರುವುದನ್ನು ದೃಢಪಡಿಸಿದೆ. ಇದು ಹಿಂದೂಗಳ ವಿರುದ್ಧ ನಡೆದಿರುವ ಬಹುದೊಡ್ಡ ಷಡ್ಯಂತ್ರ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

-

ಪ್ರತಾಪಗಢ: ಉತ್ತರ ಪ್ರದೇಶದ (UttarPradesh) ಸಂಭಾಲ್‌ನಲ್ಲಿ ಗಲಭೆಗೆ (Sambhal riots) ಸಂಚು ರೂಪಿಸಲಾಗಿತ್ತು. ಈ ಕುರಿತು ನ್ಯಾಯಾಂಗ ಸಮಿತಿಯ ವರದಿ ದೃಢಪಡಿಸಿದೆ. 2024 ರ ನವೆಂಬರ್ ನಲ್ಲಿ ಇಲ್ಲಿ ಹಿಂದೂಗಳ (Hindu) ವಿರುದ್ಧ ಬಹುದೊಡ್ಡ ಸಂಚು ರೂಪಿಸಲಾಗಿತ್ತು. ಇದರಲ್ಲಿ ಮೂಲಭೂತವಾದಿ ಗುಂಪುಗಳು ಮತ್ತು ಹೊರಗಿನ ದಂಗೆಕೋರರ ಕೈವಾಡವಿತ್ತು ಎಂಬುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ತಿಳಿಸಿದ್ದಾರೆ. ನ್ಯಾಯಾಂಗದ ಮೂವರು ಸದಸ್ಯರ ಸಮಿತಿಯನ್ನು ಗುರುವಾರ ಭೇಟಿ ಮಾಡಿದ ಬಳಿಕ ಯೋಗಿ ಅವರು ಇದನ್ನು ಸ್ಪಷ್ಟಪಡಿಸಿದ್ದಾರೆ.
ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದ ಆದಿತ್ಯನಾಥ್, ಸಂಭಾಲ್ ಘಟನೆಯ ಕುರಿತು ಗುರುವಾರ ನ್ಯಾಯಾಂಗ ಆಯೋಗವು ತನ್ನ ವರದಿಯನ್ನು ಸಲ್ಲಿಸಿತು. 2024ರ ಗಲಭೆಯ ಸಂಚಿನ ಬಗ್ಗೆ ಇದು ಬಹಿರಂಗಪಡಿಸಿದೆ ಎಂದು ಹೇಳಿದರು.
ಸಂಭಾಲ್ ಹಿಂಸಾಚಾರದ ಕುರಿತಾದ ನ್ಯಾಯಾಂಗ ಆಯೋಗದ ವರದಿಯು ಪಟ್ಟಣದಲ್ಲಿ ಗಲಭೆಗೆ ಸಂಚು ರೂಪಿಸಿರುವುದನ್ನು ದೃಢಪಡಿಸಿದೆ. ಈಗ ರಾಜ್ಯವು ತೃಪ್ತಿಯತ್ತ ಸಾಗುತ್ತಿದೆ. ಅಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲ ಎಂದರು.
2024ರ ನವೆಂಬರ್ ನಲ್ಲಿ ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನೇತೃತ್ವದಲ್ಲಿ ಮಸೀದಿಯ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ಶಾಹಿ ಜಾಮಾ ಮಸೀದಿ ಬಳಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ನ್ಯಾಯಾಂಗ ಸಮಿತಿ ತನ್ನ ವರದಿಯನ್ನು ಸಲ್ಲಿಸಿತು. ಈ ಗಲಭೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದು ದೃಢಪಟ್ಟಿದೆ. ಈ ಹಿಂಸಾಚಾರವು ಸಂಭಾಲ್‌ನಲ್ಲಿ ಹಿಂದೂಗಳನ್ನು ಗುರಿಯಾಗಿಸಿತ್ತು. ಇದರಲ್ಲಿ ಮೂಲಭೂತವಾದಿ ಗುಂಪುಗಳು ಮತ್ತು ಹೊರಗಿನ ದಂಗೆಕೋರರ ಪಾತ್ರವಿರುವುದು ದೃಢಪಟ್ಟಿದೆ ಎಂದು ಹೇಳಿದರು.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಿ ಅವರ ಜನಸಂಖ್ಯೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸಿತ್ತು ಎಂದು ಆರೋಪಿಸಿದ ಅವರು, ಹಿಂದುಗಳ ಮೇಲೆ ಅವರು ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದ್ದರು. ಗಲಭೆಗಳ ಮೂಲಕ ಪ್ರದೇಶಗಳನ್ನು ಹಿಂದೂ ಮುಕ್ತಗೊಳಿಸುತ್ತಿದ್ದರು ಎಂದು ಆರೋಪಿಸಿದರು.
ಇಂದು ಡಬಲ್-ಎಂಜಿನ್ ಸರ್ಕಾರ ಜಾರಿಯಲ್ಲಿದೆ. ಅದು ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲು ಬಿಡುವುದಿಲ್ಲ. ಇದಕ್ಕೆ ಪ್ರಯತ್ನಿಸುವವರು ಪಲಾಯನ ಮಾಡಬೇಕಾಗಬಹುದು. ಯಾಕೆಂದರೆ ಪ್ರತಿಯೊಬ್ಬ ನಾಗರಿಕನು ಈಗ ಯಾವುದೇ ತಾರತಮ್ಯವಿಲ್ಲದೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾನೆ ಎಂದು ತಿಳಿಸಿದರು.
ಅಂದು ಏನಾಗಿತ್ತು?
ಕಳೆದ ವರ್ಷ ನವೆಂಬರ್ 19 ರಂದು ಶಾಹಿ ಜಾಮಾ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಹಿಂದೂ ಅರ್ಜಿದಾರರು ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಬಳಿಕ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿತ್ತು. ಎರಡನೇ ಸಮೀಕ್ಷೆಯು ಈ ಪ್ರದೇಶದಲ್ಲಿ ಗಲಭೆಯನ್ನು ಉಂಟು ಮಾಡಿತು. ಇದರಿಂದ ನಾಲ್ವರು ಸಾವನ್ನಪ್ಪಿದರು, 29 ಪೊಲೀಸರು ಗಾಯಗೊಂಡರು.
ಹಿಂದೂಗಳ ಮೇಲೆ ನಿರಂತರ ದಾಳಿ
1947 ರಿಂದ ಪ್ರತಿ ಗಲಭೆಯಲ್ಲೂ ಹಿಂದೂಗಳನ್ನೇ ಗುರಿ ಮಾಡಲಾಗುತ್ತದೆ. ಸಂಭಾಲ್‌ನಲ್ಲಿ ಭುಗಿಲೆದ್ದ ಸಂಘರ್ಷವೂ ಇದೇ ರೀತಿಯ ಸಂಚಾಗಿತ್ತು. ಸಂಭಾಲ್‌ನಲ್ಲಿ ಆಗಿರುವ ಜನಸಂಖ್ಯಾ ಬದಲಾವಣೆಯೇ ಇದನ್ನು ಸ್ಪಷ್ಟ ಪಡಿಸುತ್ತದೆ. ಸ್ವಾತಂತ್ರ್ಯದ ಸಮಯದಲ್ಲಿ ಇಲ್ಲಿ ಶೇ. 45ರಷ್ಟು ಇದ್ದ ಹಿಂದೂಗಳ ಸಂಖ್ಯೆ ಈಗ ಇಲ್ಲಿ ಶೇ. 15ಕ್ಕೆ ಇಳಿಕೆಯಾಗಿದೆ. ಮುಸ್ಲಿಮರ ಸಂಖ್ಯೆ ಪ್ರಸ್ತುತ ಇಲ್ಲಿ ಶೇ. 85ರಷ್ಟಿದೆ ಎನ್ನುತ್ತದೆ ಅಂಕಿ ಅಂಶಗಳು.
ಮೂಲಗಳ ಪ್ರಕಾರ ಸಂಭಾಲ್‌ನಲ್ಲಿ ನಡೆದ 1953ರ ಶಿಯಾ-ಸುನ್ನಿ ಘರ್ಷಣೆ, 1956, 1959ರಲ್ಲಿ ನಡೆದ ಗಲಭೆಗಳು, 1962 ರಲ್ಲಿ ಜನಸಂಘದ ಶಾಸಕ ಮಹೇಶ್ ಗುಪ್ತಾ ಅವರ ಕೊಲೆಯ ಬಳಿಕ ಆದ ಘರ್ಷಣೆ, 1966 ಮತ್ತು 1976 ರಲ್ಲಿ ಮಸೀದಿ ಸಮಿತಿ ವಿವಾದ ಮತ್ತು ಮೌಲ್ವಿಯ ಹತ್ಯೆಯ ಬಳಿಕ ದೇವಾಲಯಗಳ ಮೇಲೆ ನಡೆದ ದಾಳಿ ಇಲ್ಲಿನ ಜನಸಂಖ್ಯಾ ಬದಲಾವಣೆಗೆ ಮುಖ್ಯ ಕಾರಣ ಎನ್ನುತ್ತದೆ ಆಡಳಿತ ಪಕ್ಷ.
ಈ ಸುದ್ದಿಯನ್ನೂ ಓದಿ: Physical Assault: ಯುವತಿ ಪಕ್ಕ ಕುಳಿತು ಹಸ್ತಮೈಥುನ ಮಾಡಿಕೊಂಡ ಕಾಮುಕನಿಗೆ ಬಿತ್ತು ಗೂಸಾ! ವಿಡಿಯೋ ವೈರಲ್
ಬಿಹಾರದಲ್ಲಿ ಇತ್ತೀಚೆಗೆ ನಡೆದ ಇಂಡಿಯಾ ಬ್ಲಾಕ್ ರಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯನ್ನು ಗುರಿಯಾಗಿಸಿಕೊಂಡು ಮಾಡಲಾದ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಉಲ್ಲೇಖಿಸಿದ ಆದಿತ್ಯನಾಥ್, ಇಂತಹ ಹೇಳಿಕೆಗಳು ವಿರೋಧ ಪಕ್ಷದ ಹತಾಶೆಯನ್ನು ಪ್ರತಿಬಿಂಬಿಸುತ್ತವೆ. ಈ ಮಟ್ಟಕ್ಕೆ ಇಳಿಯುವ ಜನರು ರಾಜಕೀಯದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ ಎಂದಿದ್ದಾರೆ.