ʼʼನಿಧಾನಗತಿಯ ಅಭಿವೃದ್ಧಿಗೆ ಕಾಂಗ್ರೆಸ್ ಬೆಳವಣಿಗೆ ದರ ಎಂಬ ಹೆಸರಿಡಬೇಕುʼʼ: ಪ್ರಧಾನಿ ನರೇಂದ್ರ ಮೋದಿ ಹೊಸ ವ್ಯಾಖ್ಯಾನ
Narendra Modi: ʼʼಜನರ ಸೇವೆ ಮಾಡುವುದೇ ನನ್ನ ಉದ್ದೇಶʼʼ ಎಂದು ದೇಶದ ನಿರಂತರ ಅತೀ ದೀರ್ಘಾವಧಿಯ ಪ್ರಧಾನಿ ಎನ್ನುವ ದಾಖಲೆ ಬರೆದ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಭಾರತ್ ಮಂಟಪ್‌ನಲ್ಲಿ ನಡೆದ ಎನ್‌ಡಿಎ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ದೆಹಲಿ, ಜೂ. 10: ದೇಶದ ನಿರಂತರ ಅತೀ ದೀರ್ಘಾವಧಿಯ ಪ್ರಧಾನಿ ಎನ್ನುವ ದಾಖಲೆ ಬರೆದ ನರೇಂದ್ರ ಮೋದಿ (Narendra Modi) ದೆಹಲಿಯ ಭಾರತ್ ಮಂಟಪ್‌ನಲ್ಲಿ ನಡೆದ ಎನ್‌ಡಿಎ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಇದು ತಮ್ಮ ಪಾಲಿನ ಸೌಭಾಗ್ಯ ಎಂದು ಬಣ್ಣಿಸಿದರು. ʼʼಜನರ ಸೇವೆ ಮಾಡುವುದೇ ನನ್ನ ಉದ್ದೇಶʼʼ ಎಂದು ಪುನರುಚ್ಚರಿಸಿದ ಅವರು, ಈ ರೀತಿಯ ಮೈಲಿಗಲ್ಲು ಸಾಧಿಸಬಹುದು ಎನ್ನುವುದನ್ನು ಊಹಿಸಿಯೂ ಇರಲಿಲ್ಲ ಎಂದರು. ಇದು ಸಾಧ್ಯವಾಗಿದ್ದಕ್ಕೆ ಮೈತ್ರಿಕೂಟದ ನಾಯಕರಿಗೆ ಧನ್ಯವಾದ ಅರ್ಪಿಸಿದರು. ʼʼನೀವೆಲ್ಲ ಸೇರಿ ಈ ದಿನವನ್ನು ಸ್ಮರಣೀಯವಾಗಿಸಿದ್ದೀರಿ. ಇದಕ್ಕಾಗಿ ನಾನು ಕೃತಜ್ಞʼʼ ಎಂದು ಭಾವುಕರಾದರು.
ತಮ್ಮ ರಾಜಕೀಯ ಜೀವನವನ್ನು ನೆನಪಿಸಿಕೊಂಡ ಮೋದಿ, ಸಾಕಷ್ಟು, ಟೀಕೆ, ಅಡೆ-ತಡೆ ದಾಟಿ ಮುನ್ನುಗ್ಗುತ್ತಿರುವುದಾಗಿ ತಿಳಿಸಿದರು. 'ʼಚರೇವೇತಿ, ಚರೇವೇತಿ' (ಮುನ್ನುಗ್ಗಿ) ಎಂಬ ಮಂತ್ರವನ್ನು ಜಪಿಸುತ್ತ ಸಾಗುತ್ತಿದ್ದೇನೆ. ಈ ರಾಜಕೀಯ ಪ್ರಯಾಣದಲ್ಲಿ ಹಲವು ಏರಿಳಿತಗಳನ್ನು ಕಂಡ ನಾನು, ಒಂದು ದಿನ ಈ ಮೈಲಿಗಲ್ಲು ತಲುಪುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ" ಎಂದು ಹೇಳಿದರು.
ನರೇಂದ್ರ ಮೋದಿ ಮಾತು:
"ಚುನಾಯಿತ ಪ್ರಧಾನಿಯಾಗಿ ದೀರ್ಘಾವಧಿಯವರೆಗೆ ನಿರಂತರವಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಅತ್ಯುನ್ನತ ಸೌಭಾಗ್ಯ" ಎಂಬುದಾಗಿ ಅವರು ತಿಳಿಸಿದರು. ʼʼನಮ್ಮ ಯೋಜನೆಗಳು ದೇಶದ ಪ್ರತಿ ನಾಗರಿಕನಿಗೂ ತಲುಪುತ್ತಿದೆ. 2014ರಲ್ಲಿ ಎನ್‌ಡಿಎ ಗೆಲ್ಲುತ್ತಿದ್ದಂತೆ ನವಯುಗ ಆರಂಭವಾಯ್ತು. ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ದೇಶ ಈಗ ನಕ್ಸಲ್ ಮುಕ್ತವಾಗಿದೆʼʼ ಎಂದರು.
ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ; ಮೋದಿ ಸಾಧನೆಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅಭಿನಂದನೆ
ಭಾರತದ ನಿಧಾನಗತಿಯ ಬೆಳವಣಿಗೆಯನ್ನು ʼಹಿಂದೂ ಬೆಳವಣಿಗೆಯ ದರʼ ಎಂದು ತಪ್ಪಾಗಿ ಹಣೆಪಟ್ಟಿ ಕಟ್ಟಲಾಗಿತ್ತು. ಇದರ ಬದಲಿಗೆ ಕಾಂಗ್ರೆಸ್ ಬೆಳವಣಿಗೆ ದರ ಎಂದು ಕರೆಯಬೇಕಿತ್ತು ಎಂಬುದಾಗಿ ಮೋದಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರಗಳು ಅನೇಕ ವರ್ಷಗಳ ನೀತಿ ಮತ್ತು ಆಡಳಿತ ವೈಫಲ್ಯಗಳ ಮೂಲಕ ದೇಶವನ್ನು ಅಸಹಾಯಕತೆ, ದುಃಖ ಮತ್ತು ಕೀಳರಿಮೆಗೆ ತಳ್ಳಿವೆ ಎಂದು ಆರೋಪಿಸಿದರು.
ಎನ್‌ಡಿಎ ಸರ್ಕಾರದ ಅತಿದೊಡ್ಡ ಸಾಧನೆಗಳಲ್ಲಿ ಒಂದು ದೇಶವನ್ನು ಕಾಂಗ್ರೆಸ್ ಆಡಳಿತದ ಪರಂಪರೆಯಿಂದ ಮುಕ್ತಗೊಳಿಸಿರುವುದು ಎಂದು ಬಣ್ಣಿಸಿದರು. "ಎನ್‌ಡಿಎಯ 12 ವರ್ಷಗಳ ಅಧಿಕಾರದ ಪ್ರಮುಖ ಯಶಸ್ಸು ಎಂದರೆ ಅದು ದೇಶವು ಕಾಂಗ್ರೆಸ್‌ನ ವಿಷವರ್ತುಲದಿಂದ ಮುಕ್ತವಾಗಿರುವುದು. ಭಾರತದಲ್ಲಿ ಅಭಿವೃದ್ಧಿ ನಿಧಾನವಾಗಿ ನಡೆಯುತ್ತದೆ, ತ್ವರಿತ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ದೇಶದ ಜನತೆ ಭಾವಿಸುವಂತೆ ಕಾಂಗ್ರೆಸ್ ಮಾಡಿತ್ತು. ಬಹಳ ಜಾಣತನದಿಂದ ನಿಧಾನಗತಿಯ ಅಭಿವೃದ್ಧಿಗೆ 'ಹಿಂದೂ ಬೆಳವಣಿಗೆ ದರʼ ಎಂಬ ಹೆಸರನ್ನಿಡಲಾಯಿತುʼʼ ಎಂದು ಟೀಕಿಸಿದರು.
ಮೂರು ಬಾರಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ: ರಾಜಕೀಯ ಜರ್ನಿಯ ಝಲಕ್ ಇಲ್ಲಿದೆ
12 ವರ್ಷ ಪೂರೈಸಿದ ಮೋದಿ ಸರ್ಕಾರ
ಇದೀಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ 12 ವರ್ಷ ಪೂರೈಸಿದ್ದು, ಮೊದಲ ಪ್ರಧಾನಿ ಜವಹರಲಾಲ್ ನೆಹರು ದಾಖಲೆ ಪುಡಿ ಪುಡಿಯಾಗಿದೆ. ನರೇಂದ್ರ ಮೋದಿ ಜೂನ್ 10ರಂದು ಪ್ರಧಾನಿಯಾಗಿ ಸತತ 4,399 ದಿನಗಳನ್ನು ಪೂರೈಸಿದ್ದಾರೆ. ಈ ಮೊದಲು ಪ್ರಧಾನಿಯಾಗಿ ಜವಹರಲಾಲ್ ನೆಹರು 4,399 ದಿನಗಳ ನಿರಂತರ ಆಡಳಿತ ನಡೆಸಿದ್ದರು. ಇನ್ನು ಗುಜರಾತ್ ಮುಖ್ಯಮಂತ್ರಿ ಆಗಿ 13 ವರ್ಷಗಳ ಆಡಳಿತ ಸೇರಿಸಿದರೆ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ 9 ಸಾವಿರ ದಿನಗಳನ್ನು ದಾಟಿದ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ.