ಜೈಪುರ: ಹುಲಿಯೆಂದರೆ ಎಲ್ಲರೂ ಬೆಚ್ಚಿಬೀಳುತ್ತಾರೆ.ಆದರೆ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿರುವ ರಾಜಸ್ಥಾನದ ಅತಿದೊಡ್ಡ ಹುಲಿ ಮೀಸಲು ಪ್ರದೇಶವಾದ ರಣಥಂಬೋರ್ ಹುಲಿ ಮೀಸಲು ಪ್ರದೇಶದಿಂದ ಎರಡು ಆಘಾತಕಾರಿ ವಿಡಿಯೊಗಳು ವೈರಲ್(Viral Video) ಆಗಿವೆ. ಅದರಲ್ಲಿ ಒಬ್ಬ ವ್ಯಕ್ತಿ ಹುಲಿಯ ಮರಿಗಳೊಂದಿಗೆ ಆಟವಾಡುವುದು ಕಂಡುಬಂದರೆ, ಎರಡನೇ ವಿಡಿಯೊದಲ್ಲಿ ಯುವಕನೊಬ್ಬ ರೀಲ್ ಮಾಡಲು ಹುಲಿಯ ಹತ್ತಿರ ಹೋಗಲು ಪ್ರಯತ್ನಿಸಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ, ದೌಲಾದ ದೇವಪುರ ಅಣೆಕಟ್ಟು ಪ್ರದೇಶದ ಬಳಿ ಮೂರು ನವಜಾತ ಹುಲಿ ಮರಿಗಳು ಕಾಂಕ್ರೀಟ್ ಪೈಪ್‌ನಲ್ಲಿ ಕುಳಿತಿದ್ದು, ಒಬ್ಬ ವ್ಯಕ್ತಿ ಅವುಗಳಲ್ಲಿ ಒಂದನ್ನು ಕೈಗಳಿಂದ ಮುಟ್ಟಿ ಮುದ್ದಿಸಿರುವುದು ರೆಕಾರ್ಡ್ ಆಗಿದೆ. ಎರಡನೇ ವಿಡಿಯೊದಲ್ಲಿ, ಯುವಕನೊಬ್ಬ ನೀರು ಕುಡಿಯುತ್ತಿರುವ ಹುಲಿಯ ಹತ್ತಿರ ಹೋಗಿ ರೀಲ್ ಮಾಡಲು ಪ್ರಯತ್ನಿಸಿದ್ದಾನೆ. ಆ ವೇಳೆ ಆ ಪ್ರದೇಶದ ಸುತ್ತಮುತ್ತ ಯಾವುದೇ ಅಧಿಕಾರಿಗಳು ಕಾಣಲಿಲ್ಲ. ಇದು ಪ್ರಮುಖ ಹುಲಿ ಅಭಯಾರಣ್ಯದ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ ನೋಡಿ...
ವಿಡಿಯೊ ವೈರಲ್ ಆದ ಬಳಿಕ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 27 (ಅಭಯಾರಣ್ಯಕ್ಕೆ ಪ್ರವೇಶ ನಿರ್ಬಂಧ), 50 (ಪ್ರವೇಶ, ಶೋಧ ಮತ್ತು ಬಂಧನ ಅಧಿಕಾರ) ಮತ್ತು 51 (ದಂಡ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಮತ್ತು ಆ ವ್ಯಕ್ತಿಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗೂ ಈ ವ್ಯಕ್ತಿ ಮೂರು ಮರಿಗಳ ಹತ್ತಿರ ಹೇಗೆ ಬಂದನೆಂದು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ರಣಥಂಬೋರ್ 70 ಹುಲಿಗಳಿಗೆ ನೆಲೆಯಾಗಿದೆ. ಈ ಪ್ರದೇಶದಲ್ಲಿ ಹುಲಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಹೀಗಾಗಿ ಅಧಿಕಾರಿಗಳು ಸಂದರ್ಶಕರು ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ. ಕಳೆದ ತಿಂಗಳು, ರಣಥಂಬೋರ್ ರಾಷ್ಟ್ರೀಯ ಉದ್ಯಾನವನದೊಳಗಿನ ದೇವಾಲಯಕ್ಕೆ ಭೇಟಿ ನೀಡಿದ ಏಳು ವರ್ಷದ ಕಾರ್ತಿಕ್ ಸುಮನ್ ಎಂಬ ಬಾಲಕನನ್ನು ಅವನ ಅಜ್ಜಿ ಮತ್ತು ಚಿಕ್ಕಪ್ಪ ನೋಡುನೋಡುತ್ತಿದ್ದಂತೆ ಹುಲಿಯೊಂದು ಅವನನ್ನು ಹೊತ್ತೊಯ್ದಿತು. ಬಾಲಕನ ಅಜ್ಜಿ ತಾನು ತನ್ನ ಮೊಮ್ಮಗನ ಕೈಯನ್ನು ಹಿಡಿದಿದ್ದಾಗ, ಹುಲಿ ಪೊದೆಯಿಂದ ಹಾರಿ, ಮಗುವಿನ ಕುತ್ತಿಗೆಯನ್ನು ಕಚ್ಚಿ, ಪೊದೆಯೊಳಗೆ ಎಳೆದುಕೊಂಡು ಹೋಯಿತು ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ:Viral Video: ವಯಸ್ಸು ಆರಾದ್ರೂ ಈ ಹುಡುಗನ ಫಿಟ್‌ನೆಸ್ ಕ್ರೇಜ್ ನೋಡಿ
ಈ ವಾರದ ಆರಂಭದಲ್ಲಿ, ನರಭಕ್ಷಕ ಹುಲಿಯೊಂದನ್ನು ರಣಥಂಬೋರ್‌ನ ಹೋಟೆಲ್‌ನೊಳಗೆ ಸೆರೆಹಿಡಿಯಲಾಗಿತ್ತು. ಪ್ರವಾಸಿಗರಿಗಾಗಿ ಮೀಸಲಾದ ಕುಟೀರದ ಹಿಂದೆ ಅಡಗಿಕೊಂಡು ಹೊಂಚು ಹಾಕುತ್ತಿದ್ದ ಹುಲಿಯನ್ನು ಹಿಡಿದು ನಂತರ ಅದನ್ನು ರಾಷ್ಟ್ರೀಯ ಉದ್ಯಾನವನದ ಒಳಗಿನ ಆವರಣದಲ್ಲಿ ಬಿಡಲಾಗಿತ್ತು.