ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಅಂತ್ಯ; ಯುಮ್ನಮ್ ಖೇಮಚಂದ್ ಸಿಂಗ್ ನೂತನ ಸಿಎಂ

Yumnam Khemchand Singh: ಮಣಿಪುರದಲ್ಲಿ ಸುಮಾರು 1 ವರ್ಷದ ರಾಷ್ಟ್ರಪತಿ ಆಡಳಿತ ಅಂತ್ಯವಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಯುಮ್ನಮ್ ಖೇಮಚಂದ್ ಸಿಂಗ್ ಆಯ್ಕೆಯಾಗಿದ್ದಾರೆ. ಬಿರೇನ್ ಸಿಂಗ್ ಅವರ ರಾಜೀನಾಮೆ ಮತ್ತು ಜನಾಂಗೀಯ ಹಿಂಸಾಚಾರದ ಬಳಿಕ ಮಣಿಪುರದಲ್ಲಿ ಕಳೆದ ವರ್ಷ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.

ಯುಮ್ನಮ್ ಖೇಮಚಂದ್ ಸಿಂಗ್ (ಸಂಗ್ರಹ ಚಿತ್ರ)

ಇಂಫಾಲ, ಪೆ. 3: ಮಣಿಪುರದಲ್ಲಿ ಸುಮಾರು 1 ವರ್ಷದ ರಾಷ್ಟ್ರಪತಿ ಆಡಳಿತ ಅಂತ್ಯವಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಯುಮ್ನಮ್ ಖೇಮಚಂದ್ ಸಿಂಗ್ (Yumnam Khemchand Singh) ಆಯ್ಕೆಯಾಗಿದ್ದಾರೆ. ಬಿರೇನ್ ಸಿಂಗ್ ಅವರ ರಾಜೀನಾಮೆ ಮತ್ತು ಜನಾಂಗೀಯ ಹಿಂಸಾಚಾರದ ಬಳಿಕ ಮಣಿಪುರದಲ್ಲಿ ಕಳೆದ ವರ್ಷ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಇದೀಗ 62 ವರ್ಷದ ಯುಮ್ನಮ್ ಖೇಮಚಂದ್ ಸಿಂಗ್ ಈಶಾನ್ಯ ರಾಜ್ಯದಲ್ಲಿ ಬಿಜೆಪಿಯ 2ನೇ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಬಿಜೆಪಿ ಶಾಸಕರ ಒಂದು ಗುಂಪು ದೆಹಲಿಗೆ ತೆರಳಿ ಅಮಿತ್‌ ಶಾ ಸೇರಿದಂತೆ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಮಣಿಪುರ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಯುಮ್ನಮ್ ಖೇಮಚಂದ್ ಸಿಂಗ್ ಅವರನ್ನು ಆಯ್ಕೆ ಮಾಡಿತು.

ಬಿಜೆಪಿ ಶಾಸಕ ಥೋಕ್‌ಚೋಮ್ ರಾಧೇಶ್ಯಾಮ್ ಸಿಂಗ್ ಪ್ರತಿಕ್ರಿಯಿಸಿ, "ಸರ್ಕಾರ ರಚನೆ ಬಗ್ಗೆ ಹಿಂದಿನಿಂದಲೂ ಬೇಡಿಕೆ ಇಟ್ಟಿದ್ದೆವು. ಅಂತಿಮವಾಗಿ ಈ ಹೆಜ್ಜೆ ಇಟ್ಟಿದ್ದಕ್ಕಾಗಿ ಕೇಂದ್ರ ನಾಯಕತ್ವಕ್ಕೆ ಧನ್ಯವಾದ ಹೇಳುತ್ತೇನೆ" ಎಂದು ಹೇಳಿದರು.

"ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಕೇಂದ್ರ ನಾಯಕತ್ವದ ಮಾರ್ಗದರ್ಶನ ಮತ್ತು ಯುಮ್ನಾಮ್ ಖೇಮ್‌ಚಂದ್ ಅವರ ನೇತೃತ್ವದಲ್ಲಿ ಹೊಸ ಸಚಿವಾಲಯವು ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸಲಿದೆ" ಎಂದು ಅವರು ತಿಳಿಸಿದರು. ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ 2025ರ ಫೆಬ್ರವರಿ 13ರಂದು ರಾಷ್ಟ್ರಪತಿ ಆಡಳಿತ ಹೇರಲಾಯಿತು.

ಮಣಿಪುರ ಮುಖ್ಯಮಂತ್ರಿಯಾಗಿ ಯುಮ್ನಮ್ ಖೇಮಚಂದ್ ಸಿಂಗ್ ಆಯ್ಕೆ:



ಮೂಲಗಳ ಪ್ರಕಾರ, ಸರ್ಕಾರ ರಚನೆಯ ಪ್ರಕ್ರಿಯೆಯು ಮುಂಬರುವ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಈ ವಾರದಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಪಕ್ಷದ ಮೂಲಗಳ ಪ್ರಕಾರ, ಮುಂದಿನ ಸರ್ಕಾರದಲ್ಲಿ ಬಿರೇನ್ ಸಿಂಗ್ ಅವರಿಗೆ ಪ್ರಮುಖ ಸಚಿವ ಸ್ಥಾನ ಅಥವಾ ಉಪಮುಖ್ಯಮಂತ್ರಿ ಹುದ್ದೆ ಸಿಗುವ ಸಾಧ್ಯತೆ ಇದೆ. ಹೊಸ ಸರ್ಕಾರವು ಕುಕಿಗಳು ಸೇರಿದಂತೆ ಪ್ರಬಲ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಬಿರೇನ್‌ ಸಿಂಗ್‌ 2025ರ ಫೆಬ್ರವರಿ 9ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಮಣಿಪುರ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ರಾಜೀನಾಮೆ

ಜನಾಂಗೀಯ ಹಿಂಸಾಚಾರ

ಮಣಿಪುರದಲ್ಲಿ 2023ರ ಮೇಯಲ್ಲಿ ಆರಂಭವಾದ ಹಿಂಸಾಚಾರವು 250ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈಟಿ ಸಮುದಾಯ ಬೇಡಿಕೆ ಮುಂದಿಟ್ಟ ಬಳಿಕ ಬುಡಕಟ್ಟು ಸಮುದಾಯ ಕುಕಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂಸಾಚಾರ ಭುಗಿಲೆದ್ದಿತ್ತು. ಮಣಿಪುರದ ಜನಸಂಖ್ಯೆಯ ಶೇ. 53ರಷ್ಟಿರುವ ಮೈಟಿ ಸಮುದಾಯದವರು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಆದಿವಾಸಿಗಳು ಮಣಿಪುರ ಜನಸಂಖ್ಯೆಯ ಶೇ. 40ರಷ್ಟಿದ್ದಾರೆ ಮತ್ತು ಮುಖ್ಯವಾಗಿ ಬೆಟ್ಟಗಳಲ್ಲಿ ವಾಸಿಸುತ್ತಿದ್ದಾರೆ. 2024ರ ಡಿ. 31ರಂದು ಬಿರೇನ್‌ ಸಿಂಗ್‌ ರಾಜ್ಯದ ಜನತೆಯ ಕ್ಷಮೆ ಕೋರಿದ್ದರು. ಜನಾಂಗೀಯ ಘರ್ಷಣೆಯಿಂದಾಗಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಂಭವಿಸಿದ ದುರದೃಷ್ಟಕರ ಬೆಳವಣಿಗೆಗಳಿಗೆ ಮುಖ್ಯಮಂತ್ರಿ ಅವರು “ನನ್ನನ್ನು ಕ್ಷಮಿಸಿ” ಎಂದು ಹೇಳಿದ್ದರು.