Biren Singh: ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ
ಜನಾಂಗೀಯ ಗಲಭೆ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಸುದ್ದಿಯಾಗಿದ್ದ ಮಣಿಪುರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಬಿರೇನ್ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ರಾಜಭವನದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಹಸ್ತಾಂತರಿಸಿದ್ದಾರೆ.
![ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ](https://cdn-vishwavani-prod.hindverse.com/media/original_images/Biren_Singh_1.jpg)
ಬಿರೇನ್ ಸಿಂಗ್ .
![Profile](https://vishwavani.news/static/img/user.png)
ಇಂಫಾಲ: ಜನಾಂಗೀಯ ಗಲಭೆ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಸುದ್ದಿಯಾಗಿದ್ದ ಮಣಿಪುರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ (Manipur chief minister)
ಎನ್.ಬಿರೇನ್ ಸಿಂಗ್ (Biren Singh) ರಾಜೀನಾಮೆ ನೀಡಿದ್ದಾರೆ. "ಮಣಿಪುರದ ಜನತೆಗೆ ಸೇವೆ ಸಲ್ಲಿಸಲು ಸಾಧ್ಯವಾಗಿದ್ದಕ್ಕೆ ಹೆಮ್ಮೆ ಇದೆ" ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ರಾಜಭವನದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಹಸ್ತಾಂತರಿಸಿದ್ದಾರೆ.
ರಾಜೀನಾಮೆ ಸಲ್ಲಿಸುವ ವೇಳೆ ಅವರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷೆ ಎ.ಶಾರದಾ, ಬಿಜೆಪಿ ಉಸ್ತುವಾರಿ ಸಂಬಿತ್ ಪಾತ್ರಾ ಮತ್ತು 19 ಶಾಸಕರು ಇದ್ದರು ಎಂದು ಮೂಲಗಳು ತಿಳಿಸಿವೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದು ಸುಮಾರು 2 ವರ್ಷಗಳ ನಂತರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.
#WATCH | Manipur CM N Biren Singh hands over the letter of resignation from the post of Chief Minister to Governor Ajay Kumar Bhalla at the Raj Bhavan in Imphal. pic.twitter.com/xCoiQUsmgQ
— ANI (@ANI) February 9, 2025
ಬಿರೇನ್ ಸಿಂಗ್ ಹೇಳಿದ್ದೇನು?
"ಪ್ರತಿಯೊಬ್ಬ ಮಣಿಪುರ ಪ್ರಜೆಯ ಹಿತಾಸಕ್ತಿಯನ್ನು ಕಾಪಾಡಲು ಸಮಯೋಚಿತ ಕ್ರಮಗಳು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ವಿವಿಧ ಯೋಜನೆಗಳ ಅನುಷ್ಠಾನಗೊಳಿಸಿದ ಕೇಂದ್ರ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ" ಎಂದು ಬಿರೇನ್ ಸಿಂಗ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಸಂಘರ್ಷ ಪೀಡಿತ ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ತಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸಿಂಗ್ ಪ್ರತಿಪಾದಿಸಿದ ಒಂದು ದಿನದ ನಂತರ ರಾಜೀನಾಮೆ ಬಂದಿದೆ.
ಜನಾಂಗೀಯ ಹಿಂಸಾಚಾರ
ಮಣಿಪುರದಲ್ಲಿ 2023ರ ಮೇಯಲ್ಲಿ ಆರಂಭವಾದ ಹಿಂಸಾಚಾರವು 250ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈಟಿ ಸಮುದಾಯ ಬೇಡಿಕೆ ಮುಂದಿಟ್ಟ ಬಳಿಕ ಬುಡಕಟ್ಟು ಸಮುದಾಯ ಕುಕಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂಸಾಚಾರ ಭುಗಿಲೆದ್ದಿತ್ತು. ಮಣಿಪುರದ ಜನಸಂಖ್ಯೆಯ ಶೇ. 53ರಷ್ಟಿರುವ ಮೈಟಿ ಸಮುದಾಯದವರು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಆದಿವಾಸಿಗಳು ಮಣಿಪುರ ಜನಸಂಖ್ಯೆಯ ಶೇ. 40ರಷ್ಟಿದ್ದಾರೆ ಮತ್ತು ಮುಖ್ಯವಾಗಿ ಬೆಟ್ಟಗಳಲ್ಲಿ ವಾಸಿಸುತ್ತಿದ್ದಾರೆ.
ಕ್ಷಮೆಯಾಚಿಸಿದ್ದ ಸಿಎಂ
2024ರ ಡಿ. 31ರಂದು ಬಿರೇನ್ ಸಿಂಗ್ ರಾಜ್ಯದ ಜನತೆಯ ಕ್ಷಮೆ ಕೋರಿದ್ದರು. ಜನಾಂಗೀಯ ಘರ್ಷಣೆಯಿಂದಾಗಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಂಭವಿಸಿದ ದುರದೃಷ್ಟಕರ ಬೆಳವಣಿಗೆಗಳಿಗೆ ಮುಖ್ಯಮಂತ್ರಿ ಅವರು “ನನ್ನನ್ನು ಕ್ಷಮಿಸಿ” ಎಂದು ಹೇಳಿದ್ದರು. ಈ ವರ್ಷವು ಆಶಾದಾಯಕದೊಂದಿಗೆ ಕೊನೆಗೊಳ್ಳುತ್ತದೆ ಮತ್ತು 2025ರಲ್ಲಿ ರಾಜ್ಯವು ಸಹಜ ಸ್ಥಿತಿಗೆ ಮರಳುತ್ತದೆ ಎಂದು ಆಶಿಸಿತ್ತೇನೆ ಎಂಬುದಾಗಿ ಹೇಳಿದ್ದರು.
ನನ್ನನ್ನು ಕ್ಷಮಿಸಿ: ಬಿರೇನ್ ಸಿಂಗ್
"ಈ ಇಡೀ ವರ್ಷ ಅತ್ಯಂತ ದುರದೃಷ್ಟದಿಂದ ಕೂಡಿತ್ತು. 2023ರ ಮೇ 3ರಿಂದ ಇಂದಿನವರೆಗೆ ಏನಾಗುತ್ತಿದೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಮಣಿಪುರದ ಹಿಂಸಾಚಾರದಿಂದಾಗಿ ನನಗೆ ತುಂಬಾ ನೋವಾಗಿದೆ. ನಾನು ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ. ಅನೇಕ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಇನ್ನು ಹಲವರು ತಮ್ಮ ಮನೆಗಳನ್ನು ತೊರೆದಿದ್ದಾರೆ. ನನಗೆ ವಿಷಾದವಿದೆ, ನಾನು ಕ್ಷಮೆ ಯಾಚಿಸುತ್ತೇನೆ. ಆದರೆ ಈಗ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಶಾಂತಿಯತ್ತ ಹೆಜ್ಜೆ ಇಟ್ಟಿದ್ದೇವೆ ಎಂದು ನಾನು ಭಾವಿಸುತ್ತೇನೆ. 2025ರ ವೇಳೆಗೆ ರಾಜ್ಯವು ಮತ್ತೆ ಸಹಜ ಸ್ಥಿತಿಗೆ ಮರಳುವ ವಿಶ್ವಾಸವಿದೆ” ಎಂದು ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.