ಗುವಾಹಟಿ: ಕಳೆದ ತಿಂಗಳು ಸಿಂಗಾಪುರದಲ್ಲಿ ನಿಧನರಾಗಿದ್ದ ಜುಬೀನ್ ಗರ್ಗ್ (Zubeen Garg) ಸಾವಿನ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ತನಿಖೆಯಲ್ಲಿ ಮತ್ತೊಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ಇದೀಗ ಐದನೇ ಆರೋಪಿಯ ಬಂಧನವಾಗಿದ್ದು, ಅಸ್ಸಾಂ ಪೊಲೀಸ್ ಇಲಾಖೆಯ ಡಿಎಸ್‌ಪಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗರ್ಗ್ ಸೋದರಸಂಬಂಧಿ ಸಂದೀಪನ್ ಗರ್ಗ್(Sandipan Garg) ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಜುಬೀನ್ ಗರ್ಗ್ ಸಿಂಗಾಪುರದ ಯಾಟ್ ಪಾರ್ಟಿಯಲ್ಲಿ ಮೃತಪಟ್ಟ ವೇಳೆ ಸಂದೀಪನ್ ಅವರೊಂದಿಗೆ ಇದ್ದರು ಎನ್ನಲಾಗಿದೆ.
ತನಿಖೆ ನಡೆಸುತ್ತಿರುವ ಸಿಐಡಿಯ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತಾಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, “ಸಂದೀಪನ್ ಗರ್ಗ್ ಅವರನ್ನು ಕಳೆದ ಕೆಲವು ದಿನಗಳಿಂದ ತನಿಖೆಗೆ ಒಳಪಡಿಸಿದ್ದು, ವಿಚಾರಣೆಯ ಮುಂದಿನ ಹಂತವಾಗಿ ಸಂದೀಪನ್ ಗರ್ಗ್ ಅವರನ್ನು ಬಂಧಿಸಿದ್ದೇವೆ. ಈ ಸಂಬಂಧ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಮೊದಲು, ಪ್ರಕರಣದಲ್ಲಿ ಭಾಗಿಯಾದ ಆರೋಪದ ಕೇಳಿ ಬಂದ ಹಿನ್ನಲೆ ಅಸ್ಸಾಂ ಪೊಲೀಸರು ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್ ಆಯೋಜಕರಾದ ಶ್ಯಾಮಕಾನು ಮಹಾಂತಾ, ಡ್ರಮ್ಮರ್ ಶೇಖರ್ ಜ್ಯೋತಿ ಗೋಸ್ವಾಮಿ, ಗಾಯಕಿ ಅಮೃತಪ್ರಭಾ ಮಹಾಂತ ಹಾಗೂ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಕೊಲೆ ಆರೋಪದಡಿ ತನಿಖೆಯನ್ನು ನಡೆಸುತ್ತಿದ್ದಾರೆ.
ತನಿಖೆಯಲ್ಲಿ ಶೇಖರ್ ಜ್ಯೋತಿ ಗೋಸ್ವಾಮಿ ಅವರು, ಸಿಂಗಾಪುರದ ಪಾರ್ಟಿಯಲ್ಲಿ ಜುಬೀನ್ ಗರ್ಗ್ ಅವರಿಗೆ ಮ್ಯಾನೇಜರ್ ಮತ್ತು ಫೆಸ್ಟಿವಲ್ ಆಯೋಜಕರು ಸೇರಿ ವಿಷಪ್ರಾಶನ ಮಾಡಿದ್ದರೆಂದು ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಈ ಸುದ್ದಿಯನ್ನು ಓದಿ; Nobel Prize 2025: ಈ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟ- ಯಾರ್ಯಾರ ಹೆಸರು ಪಟ್ಟಿಯಲ್ಲಿದೆ?
ಇನ್ನು ಈಗಾಗಲೇ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದ
ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಮತ್ತು ಇವೆಂಟ್ ಆಯೋಜಕ ಶ್ಯಾಮಕಾನು ಮಹಾಂತಾ ವಿರುದ್ಧ ಇದೀಗ ಕೊಲೆ ಆರೋಪ (ಸೆಕ್ಷನ್ 103) ದಾಖಲು ಮಾಡಲಾಗಿದೆ.
ಸದ್ಯ ಜುಬೀನ್ ಗರ್ಗ್ ಅವರ ಸಾವಿನ ಪ್ರಕರಣವನ್ನು ತನಿಖೆ ಮಾಡಲು ಅಸ್ಸಾಂ ಪೊಲೀಸರು ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಸಿಐಡಿ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತಾ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸುತ್ತಿದೆ. ಗುವಾಹಟಿಯಲ್ಲಿ ನಡೆದ ಎರಡನೇ ಮರಣೋತ್ತರ ಪರೀಕ್ಷೆಯ ವರದಿ ನಿರೀಕ್ಷೆಯಲ್ಲಿದ್ದು, ದೆಹಲಿಯ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾದ ವಿಸೆರಾ ವರದಿ ಬಂದ ನಂತರ ಅಂತಿಮ ವರದಿ ಲಭ್ಯವಾಗಲಿದೆ.
ಇದರ ಜತೆಗೆ ಭಾರತ ಸರ್ಕಾರವು ಸಿಂಗಾಪುರದೊಂದಿಗೆ ಮಾಡಿಕೊಂಡಿರುವ ಪರಸ್ಪರ ಕಾನೂನು ಸಹಾಯ ಒಪ್ಪಂದ (ಎಂಎಲ್‌ಎಟಿ) ಅಡಿ ಸಹಕಾರ ಕೋರಿದ್ದು, ಅಲ್ಲಿನ ಅಧಿಕಾರಿಗಳ ಅನುಮೋದನೆ ಸಿಕ್ಕ ತಕ್ಷಣ ಸಾಕ್ಷ್ಯ ಸಂಗ್ರಹಕ್ಕಾಗಿ ಅಸ್ಸಾಂ ಪೊಲೀಸ್ ತಂಡ ಸಿಂಗಾಪುರಕ್ಕೆ ಪ್ರಯಾಣಿಸಲಿದೆ.