ಈ ಜಗತ್ತು ಅತ್ಯಂತ ವಿಚಿತ್ರ ಮತ್ತು ವಿಶಾಲವಾದದ್ದು. ಇಲ್ಲಿ, ಎಲ್ಲವೂ ಎಲ್ಲರಿಗೂ ಒಳಿತೇ ಅಥವಾ ಕೆಡುಕೇ ಆಗಿರಬೇಕೆಂದೇನಿಲ್ಲ. ಆದರೊಂದು ಕೆಲ ವಸ್ತುಗಳು ಸಾಮಾನ್ಯವಾಗಿ ಮನುಷ್ಯರಿಗೆ ಒಳ್ಳೆಯದು ಅಂದುಕೊಂಡಿದ್ದು, ಪ್ರಾಣಿಗಳ ಜೀವವನ್ನೇ ತೆಗೆಯುವಂತವೂ ಇವೆ.
ಆಯುರ್ವೇದದಲ್ಲಿ, ಜೇನು ತುಪ್ಪವನ್ನು ಅಮೃತ ಅಂತಲೇ ಪರಿಗಣಿಸುತ್ತಾರೆ. ಆದರೆ ಅಚ್ಚರಿಯ ಸಂಗತಿ ಅಂದರೆ, ಅದೇ ಜೇನನ್ನು ನೆಕ್ಕಿದರೆ ನಾಯಿ ಸಾಯುತ್ತದೆ. ದೇಸೀ ಹಸು ವಿನ ತುಪ್ಪ ಬಹಳಷ್ಟು ಔಷಧಿ ಗುಣಗಳನ್ನು ಹೊಂದಿದೆ. ಆದರೆ ಸದಾ ಕೊಳಕನ್ನೇ ತಿನ್ನುವ ನೊಣ ಇದೇ ತುಪ್ಪದ ರುಚಿ ನೋಡಲು ಬಯಸಿದರೆ, ನೋವಿನಿಂದ ವಿಲಾ-ವಿಲಾ ಒದ್ದಾಡಿ ಕೊಂಡು ಸಾಯುತ್ತದೆ.
ಕಲ್ಲುಸಕ್ಕರೆ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿರುತ್ತದೆ. ಆದರೇನು ಕತ್ತೆ ಅದರ ಸವಿ ಸವಿದರೆ ಸ್ವಲ್ಪೇ ಸಮಯದಲ್ಲಿ ಅದರ ಜೀವವೇ ಹಾರಿ ಹೋಗುತ್ತದೆ. ಬೇವಿನಕಾಯಿ ಬಲಿತು ಮಾಗಿದಾಗ, ಅನೇಕ ರೋಗಗಳನ್ನು ಸೋಲಿಸುವ ಶಕ್ತಿ ಹೊಂದಿರುತ್ತದೆ. ಆದರೆ ಅದನ್ನೇ ಒಂದು ಕಾಗೆ ತಿಂದರೆ ಅದರ ಸಾವು ಖಚಿತ!
ಇದನ್ನೂ ಓದಿ: Readers Colony: ಬದುಕಲು ಪ್ರೇರಣೆ
ಇದೇ ಅಲ್ಲವೇ ಈ ಭೂಮಿಯ ಮೇಲಿನ ವಿಸ್ಮಯ! ಇದು ನಮ್ಮ ಬದುಕಿನಲ್ಲೂ ಕಾಣಲು ಸಿಗುತ್ತದೆ. ಒಬ್ಬ, ತನ್ನ ದೇಶದ ಹಿತದೃಷ್ಟಿಯೊಂದನ್ನೇ ಮುಂದಿಟ್ಟುಕೊಂಡು, ಕೆಲ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ. ಇದು ರಾಷ್ಟ್ರದ ಹಿತದೃಷ್ಟಿಯಿಂದ ಅಥವಾ ಆರೋಗ್ಯಕ್ಕೆ ಬೇಕೇಬೇಕಾಗುತ್ತದೆ. ಆದರೇನು, ಅದೇ ಕ್ರಿಯೆ ಕೆಲವರಿಗೆ ವಿಷದಂತೆ ಕಾಣುತ್ತದೆ.
ಹಾಗಂತ ಜೇನಿನ, ತುಪ್ಪದ, ಕಲ್ಲುಸಕ್ಕರೆಯಲ್ಲಿರುವ ಒಳ್ಳೆಯ ಅಂಶಕ್ಕೆ ಎಂದಾದರೂ ಧಕ್ಕೆ ಬರಲಾರದು. ಹೇಳುವವರು ತಮಗೆ ತೋಚಿದ್ದನ್ನು, ತಮ್ಮ ಅನುಕೂಲಕ್ಕೆ ಹೊಂದುವ ರೀತಿ ಅರ್ಥೈಸಿದರೂ, ಅಂತಿಮ ಪರಿಣಾಮ ಬಂದಾಗ ಅವುಗಳ ನಿಜವಾದ ಗುಣ ಅಥವಾ ಶಕ್ತಿಯ ಪರಿಚಯವಾಗೇ ಆಗುತ್ತದೆ.
ಅವಶ್ಯವಿರುವುದು ತಾಳ್ಮೆ, ಸಹನೆ. ನಮ್ಮ ನಾಯಕರ ಉದ್ದೇಶ, ಗುರಿ, ಧೋರಣೆಗಳೆಲ್ಲ ಪಾರದರ್ಶಕವಾಗಿzಗ, ಯಾರು ಏನು ಹೇಳುತ್ತಾರೆ ಎಂಬುದು ನಗಣ್ಯ. ಕೆಲವರಿಗೆ ಇದೊಂದು ರೀತಿ ಸಂತೋಷಪಟ್ಟುಕೊಳ್ಳುವ ಮಾರ್ಗ. ಹಾಗಂತ ಅವರಿಗೂ ಜೇನಿನ, ತುಪ್ಪದ ಉತ್ತಮ ಗುಣಗಳ ಪರಿಚಯ ಇಲ್ಲವೆಂತಲೂ ಅಲ್ಲ. ಆದರೂ ಅದೇಕೋ ತೀಟೆ ತೀರಿಸಿಕೊಳ್ಳುವ ಬಯಕೆ. ಅದು ಎಂದೂ ಫಲಕಾರಿ ಆಗದು ಎಂಬುದೂ ಅಷ್ಟೇ ಸತ್ಯ. ಆದರೂ, ಬದುಕು, ಜೀವನ, ಸಮಾಜ ಅಂದ ಮೇಲೆ ಇವೆಲ್ಲ ಇರಲೇಬೇಕು !
- ಶಂಕರನಾರಾಯಣ ಭಟ್, ಹೊನ್ನಾವರ