Readers Colony: ಬದುಕಲು ಪ್ರೇರಣೆ
ನಮ್ಮೊಳಗಿನ ಮೌನವನ್ನು ಆಲಿಸುವುದನ್ನು ಈ ಲೇಖನ ಕಲಿಸುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಜೀವನದ ಸಂಕಷ್ಟಗಳನ್ನು ಕಂಡು ಮರುಗುತ್ತೇವೆ; ಆದರೆ ‘ಗಾಯಗಳೇ ಬೆಳಕು ಪ್ರವೇಶಿ ಸುವ ದ್ವಾರಗಳು’ ಎಂಬ ರೂಮಿಯವರ ಮಾರ್ಮಿಕ ಮಾತುಗಳು ಕಷ್ಟಗಳನ್ನು ಕಾರಾತ್ಮಕವಾಗಿ ಸ್ವೀಕರಿಸುವ ದಾರಿಯನ್ನು ತೋರಿಸಿವೆ
-
ಹರೀಶ್ ಕೇರ ಅವರ ‘ಕಾಡುದಾರಿ’ ಅಂಕಣದಲ್ಲಿ (ಮಾ.5) ಜಲಾಲುದ್ದೀನ್ ರೂಮಿಯವರ ದಿವ್ಯ ಚಿಂತನೆಗಳನ್ನು ಅಕ್ಷರ ರೂಪಕ್ಕಿಳಿಸಿದ ರೀತಿ ಅದ್ಭುತ. ಈ ಬರಹ ಕೇವಲ ಓದಲಿಕ್ಕಲ್ಲ, ಅಂತರಾಳದಲ್ಲಿ ಇಳಿಸಿಕೊಂಡು ಬದುಕಲು ಪ್ರೇರಣೆಯಂತಿದೆ. ನಮ್ಮೊಳಗಿನ ಮೌನವನ್ನು ಆಲಿಸುವುದನ್ನು ಈ ಲೇಖನ ಕಲಿಸುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಜೀವನದ ಸಂಕಷ್ಟಗಳನ್ನು ಕಂಡು ಮರುಗುತ್ತೇವೆ; ಆದರೆ ‘ಗಾಯಗಳೇ ಬೆಳಕು ಪ್ರವೇಶಿಸುವ ದ್ವಾರಗಳು’ ಎಂಬ ರೂಮಿಯವರ ಮಾರ್ಮಿಕ ಮಾತುಗಳು ಕಷ್ಟಗಳನ್ನು ಕಾರಾತ್ಮಕವಾಗಿ ಸ್ವೀಕರಿಸುವ ದಾರಿಯನ್ನು ತೋರಿಸಿವೆ.
ಇದನ್ನೂ ಓದಿ: Harish Kera Column: ಗಾಯದ ಬಿರುಕಿಲ್ಲದೆ ಬೆಳಕು ಒಳನುಸುಳುವುದು ಹೇಗೆ!
‘ನಾನು ಕ್ರೈಸ್ತನಲ್ಲ, ಯಹೂದಿಯಲ್ಲ, ಮುಸ್ಲಿಮ ನಲ್ಲ...’ ಎಂಬ ಸಾಲುಗಳು ಇಂದಿನ ಕಾಲಘಟ್ಟಕ್ಕೆ ಸಂಜೀವಿನಿಯಿದ್ದಂತೆ. ಯಾವುದೇ ಗಡಿಗಳಿಲ್ಲದೆ ಪ್ರೀತಿಯನ್ನೇ ಉಸಿರಾಡುವ ಮನುಷ್ಯನಾಗಿ ಬದುಕುವುದು ಹೇಗೆ ಎಂಬ ಆತ್ಮಶೋಧನೆಗೆ ಈ ಲೇಖನ ದಾರಿ ಮಾಡಿಕೊಟ್ಟಿದೆ. ದೈನಂದಿನ ಜಂಜಾಟಗಳ ನಡುವೆ ಕಳೆದುಹೋಗಿರುವ ’ನಮ್ಮನ್ನೇ’ ನಮಗೆ ಹುಡುಕಿ ಕೊಡುವ ದಿವ್ಯ ದಾರಿದೀಪದಂತಿರುವ ಈ ಬರಹಕ್ಕಾಗಿ ಹಾಗೂ ಸುಂದರವಾಗಿ ರುವ ರೂಮಿಯವರ ತತ್ವಜ್ಞಾನವನ್ನು ಇಷ್ಟು ಆಪ್ತವಾಗಿ ಕಟ್ಟಿಕೊಟ್ಟಿದ್ದಕ್ಕೆ ಪತ್ರಿಕೆಗೆ ಮತ್ತು ಹರೀಶ್ ಕೇರ ಅವರಿಗೆ ಅಭಿನಂದನೆಗಳು.
- ಹೊಸ್ಮನೆ ಮುತ್ತು, ಬೆಂಗಳೂರು
ಹೀಗೊಂದು ಸ್ಪೂರ್ತಿ ಡಾ.ಆನಂದಿಬಾಯಿ ಜೋಶಿ ಎಂಬ ಭಾರತದ ಮೊದಲ ಮಹಿಳಾ ವೈದ್ಯಕೀಯ ಪದವೀಧರೆಯ ಕುರಿತು ‘ಒಂದೊಳ್ಳೆ ಮಾತು’ ಅಂಕಣದಲ್ಲಿ ರೂಪಾ ಗುರುರಾಜ್ ಅವರು ಅಪರೂಪದ ಮಾಹಿತಿಯನ್ನು ನೀಡಿದ್ದಾರೆ. ಆನಂದಿಬಾಯಿ ಅವರು ಕೇವಲ 21 ವಯಸ್ಸಿಗೇ ತಮ್ಮ ಭುವಿಯ ಪ್ರಯಾಣವನ್ನು ಮುಗಿಸಿ (1865-1887), ಅಷ್ಟರಲ್ಲೇ ಅಸಂಖ್ಯ ದೈಹಿಕ, ಕೌಟುಂಬಿಕ ಕಷ್ಟಗಳ ಮಧ್ಯೆ ನಲುಗಿ, ಸಣ್ಣ ವಯಸ್ಸಿನಲ್ಲೇ ಮದುವೆ-ಮಗು ಅಂತ ಗೋಳಾಡಿ, ಹೆತ್ತ ಗಂಡುಮಗುವನ್ನು ಕಳೆದುಕೊಂಡರೂ ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಉತ್ಕಟ ಹಂಬಲದಿಂದ ವಿದೇಶಕ್ಕೆ ಹೋಗಿ ಅಭ್ಯಸಿಸಿ, ಮುಂದೆ ಭಾರತದ ಮೊದಲ ವೈದ್ಯೆ ಎಂಬ ಉಪಾಧಿ ಪಡೆದದ್ದು ನಿಜಕ್ಕೂ ಹೆಮ್ಮೆ ಹಾಗೂ ಅಭಿಮಾನದ ಸಂಗತಿ.
ಇದನ್ನೂ ಓದಿ: Roopa Gururaj Column: ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಧೀಮಂತ ಮಹಿಳೆ: ಡಾ.ಅನಂದಿಬಾಯಿ ಜೋಶಿ
ಆನಂದಿಬಾಯಿ ಜೋಶಿ ಅವರ ಈ ಸಕಲ ಸಾಧನೆಯ ಹಿಂದೆ ಅವರ ಪತಿ ಗೋಪಾಲರಾವ್ ಅವರ ಸಂಪೂರ್ಣ ಸಹಕಾರ ಇರುವುದು ಕೂಡ ಅಷ್ಟೇ ಸ್ತುತ್ಯರ್ಹ. ನಮ್ಮ ಪ್ರತಿನಿತ್ಯದ ಸಣ್ಣ ಸಣ್ಣ ಸಂಗತಿಗಳನ್ನೇ ಅತಿ ದೊಡ್ಡದಾಗಿ ಬಿಂಬಿಸಿಕೊಂಡು, ‘ಇಡೀ ಬದುಕೇ ಒಂದು ಶಾಪ’ ಅನ್ನೋ ಭಾವನೆಯನ್ನು ಹೊಂದಿರುವವರಿಗೆ ಡಾ. ಆನಂದಿಬಾಯಿ ಜೋಶಿ ಅವರು ನಿಜಕ್ಕೂ ಒಬ್ಬ ಮಾದರಿ ವ್ಯಕ್ತಿ.
ಕಷ್ಟಗಳ ಸುರಿಮಳೆಯೇ ಆಗುತ್ತಿದ್ದರೂ, ದೇವರು ನೀಡಿದ ಅಲ್ಪಾಯುಷ್ಯದಲ್ಲೇ ಸಾಧನೆ ಮಾಡಿ, ಉಳಿದವರ ಬದುಕಿಗೆ ಆನಂದ ತುಂಬಿ ನಿರ್ಗಮಿಸಿದ ಅವರು ಪ್ರಾತಃಸ್ಮರಣೀಯರು. ಅತ್ಯಂತ ಯೋಗ್ಯ ವ್ಯಕ್ತಿತ್ವದ ಪರಿಚಯ, ದರ್ಶನ ಮಾಡಿಸಿದ ಅಂಕಣಕಾರ್ತಿಗೆ ಮತ್ತು ಅದನ್ನು ಪ್ರಕಟಿಸಿದ ಪತ್ರಿಕೆಗೆ ಧನ್ಯವಾದಗಳು.
- ಲಕ್ಷ್ಮೀಕಾಂತ ಪಾಟೀಲ, ಮೈಸೂರು
ಏಕಿಂಥ ಇಬ್ಬಂದಿತನ?
ಮಧ್ಯಪ್ರಾಚ್ಯ ವಲಯದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ನಮ್ಮ ರಾಜ್ಯದ ಹಾಗೂ ಕೇಂದ್ರದ ಕೆಲವು ನಾಯಕರ ಹೇಳಿಕೆಗಳು ಅಸಂಬದ್ಧ ಹಾಗೂ ಏಕಮುಖವಾಗಿವೆ. ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿ ನೂರಾರು ಇಸ್ರೇಲಿಗರನ್ನು ಕೊಂದಾಗ ಮತ್ತು ಸೆರೆಯಾಳಾಗಿ ಹಿಡಿದಿಟ್ಟುಕೊಂಡಾಗ ತುಟಿಪಿಟಿಕ್ ಅನ್ನದ ಇದೇ ನಾಯಕರುಗಳು, ಈಗ ಇರಾನ್ ನಾಯಕ ಸತ್ತಾಗ ಎಲ್ಲಿಲ್ಲದ ಕಾಳಜಿಯನ್ನು ತೋರಿಸುತ್ತಿದ್ದಾರೆ.
ಪಾಕಿಸ್ತಾನ-ಪ್ರೇರಿತ ಪಾಪಿಗಳು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಕೊಂದಾಗ ಇವರುಗಳ ಬಾಯಿ ಬಂದಾಗಿತ್ತು. ಇರಾನಿನ ನಾಯಕ ಸತ್ತಿದ್ದಕ್ಕೆ ಅಲ್ಲಿಯ ನಾಗರಿಕರೇ ಸಂಭ್ರಮ ಪಡುತ್ತಿರುವಾಗ ನಮ್ಮ ಕೆಲ ನಾಯಕರು ವಿಷಾದವನ್ನು ವ್ಯಕ್ತಪಡಿಸುತ್ತಿರುವುದು ಅವರ ಇಬ್ಬಂದಿತನದ ಅನಾವರಣವಲ್ಲದೆ ಮತ್ತೇನು? ಈ ನಾಯಕರ ಹೇಳಿಕೆಗಳು ಅವರ ಪಕ್ಷಕ್ಕೂ, ನಮ್ಮ ದೇಶಕ್ಕೂ ಒಳ್ಳೆಯದಲ್ಲ. ಇಂಥ ನಾಯಕರು ಇನ್ನಾದರೂ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಲಿ.
- ದಾವಣಗೆರೆ ಮುಕುಂದ, ಬೆಂಗಳೂರು
ನಮ್ಮ ಸಿದ್ಧತೆ-ಬದ್ಧತೆ
ಅಮೆರಿಕವು ತನ್ನ ಲಾಭಕ್ಕಾಗಿ ಅನ್ಯದೇಶಗಳ ಮಧ್ಯೆ ಘರ್ಷಣೆಗಳನ್ನು ಹುಟ್ಟುಹಾಕುವುದು, ತನ್ನ ಮಾತು ಕೇಳದ ದೇಶಗಳ ಮೇಲೆ ದಾಳಿ ನಡೆಸುವುದು, ತನ್ನ ಭದ್ರತೆಯ ಕಾರಣ ಒಡ್ಡಿ ಇಸ್ರೇಲ್ ನೆರೆಹೊರೆಯ ರಾಷ್ಟ್ರಗಳ ಮೇಲೆ ಭೀಕರವಾಗಿ ದಾಳಿ ಮಾಡುವುದು ಇವೆಲ್ಲ ಹೊಸತೇನಲ್ಲ. ಪ್ರಸ್ತುತ ಘೋರ ಯುದ್ಧವಾಗಿ ಪರಿಣಮಿಸಿರುವ ಈ ನಡೆಯು ಈಗ ಭಾರತದ ಕಾಲಬುಡಕ್ಕೆ, ಅಂದರೆ ಹಿಂದೂ ಮಹಾಸಾಗರದವರೆಗೂ ವಿಸ್ತರಿಸಿದೆ.
ಭಾರತವೀಗ ತನ್ನ ಭೌತಿಕ ಮತ್ತು ಆರ್ಥಿಕ ಭದ್ರತೆಗಾಗಿ ಗಟ್ಟಿ ಕ್ರಮಗಳನ್ನು ಕೈಗೊಳ್ಳ ಬೇಕಾಗಿದೆ. ಆಳುವ ಪಕ್ಷವು ಈ ನಿಟ್ಟಿನಲ್ಲಿ ತಜ್ಞರೊಡನೆ ಸಮಾಲೋಚಿಸಿ ಮುಂದುವರಿಯಬೇಕು. ವಿರೋಧ ಪಕ್ಷಗಳ ಮೇಲೆ ವಿವಿಧ ಪ್ರಹಾರಗಳನ್ನು ನಿಲ್ಲಿಸಿ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಿರೋಧ ಪಕ್ಷಗಳು ಆಳುವ ಪಕ್ಷದ ಟೀಕೆಯನ್ನು ಕೈಬಿಟ್ಟು ಈ ದಿಸೆಯಲ್ಲಿ ಸಹಕರಿಸಬೇಕು. ಬರಲಿರುವ ಚುನಾವಣೆಗಳು ಈ ನಡೆಗಳಿಗೆ ಅಡ್ಡಿಯಾಗಬಾರದು.ಅಮೆರಿಕವು ದಾಳಿಗೆ ಭಾರತದ ನೆಲೆಗಳನ್ನು ಬಳಸಿ ಕೊಳ್ಳುತ್ತಿದೆ ಎಂಬ ಸುಳ್ಳುಸುದ್ದಿಯ ಕುಚೋದ್ಯವೂ ನಡೆದಿರುವಾಗ ಜನರು ಪ್ರಚೋ ದಿತರಾಗದೆ ವಿವೇಕ-ವಿಮರ್ಶೆ-ತಾಳ್ಮೆಯನ್ನು ಹೊಂದಿರಬೇಕು.
- ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
ಒಳ್ಳೆಯ ಬರಹ
ಡಾ.ಮೈತ್ರಿ ಭಟ್ ಅವರು ‘ಮಾತಿನ ಮಂಟಪ’ ಅಂಕಣವನ್ನು (ಮಾ.5) ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಮಾತು ನನ್ನನ್ನು -ಷ್‌ಬ್ಯಾಕ್‌ಗೆ ಕರೆದೊಯ್ದಿತು. ನನ್ನ 3 ವರ್ಷದ ಮಗಳೊಂದಿಗೆ ವರೂರು ಮೈಸೂರಿಗೆ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಪ್ರತಿ ಊರಲ್ಲಿ ರೈಲು ನಿಂತಾಗಲೂ ಚುರುಮುರಿ, ಸೀಬೆಕಾಯಿ, ಹುರಿದ ಕಡ್ಲೆಬೀಜ ಹೀಗೆ ಒಂದಲ್ಲಾ ಒಂದು ತಿನಿಸು ಮಾರಲು ಬರುತ್ತಿತ್ತು, ಅವೆಲ್ಲವನ್ನೂ ಮಗಳಿಗೆ ಕೊಡಿಸಿಯೂ ಆಗಿತ್ತು.
ಇದನ್ನೂ ಓದಿ: Dr Maithri Bhat Column: ಮಾತನ್ನು ಆಡುವ ಮುನ್ನ ಇರಲಿ ಒಂದಿಷ್ಟು ಎಚ್ಚರ !
ಚನ್ನಪಟ್ಟಣ ದಾಟಿದ ನಂತರ, ಮದ್ದೂರು ವಡೆ ಮಾರಲು ಬಂದ ಹುಡುಗನ ವೇಷಭೂಷಣ ನೋಡಿ, ತಿನಿಸನ್ನು ಕೊಡಿಸಲು ನನಗೆ ಮನಸ್ಸಾಗಲಿಲ್ಲ. ಆದರೆ ‘ಬೇಕೇ ಬೇಕು’ ಎಂದು ಹಠ ಹಿಡಿದ ಮಗಳಿಗೆ, “ಅದನ್ನು ಕಳಪೆ ಎಣ್ಣೆಯಲ್ಲಿ ಕರಿದಿರುತ್ತಾರೆ, ತಿಂದರೆ ಜ್ವರ ಬರಬಹುದು, ಬೇಡ" ಎಂದೆ. ಪಕ್ಕದ ಬೋಗಿಗೆ ಹೋಗಿ ಮರಳಿದ ಆ ಹುಡುಗನನ್ನು ನನ್ನ ಮಗಳು, “ಇದನ್ನು ಕಳಪೆ ಎಣ್ಣೆಯಲ್ಲಿ ಕರಿದಿದ್ದಾ?" ಎಂದು ಕೇಳಿಯೇಬಿಟ್ಟಳು.
ಆತ ಏನೂ ಉತ್ತರಿಸದೆ ಮುಂದೆ ಹೋದ. ಆ ಕ್ಷಣಕ್ಕೆ ನನ್ನ ಮಗಳ ಮುಗ್ಧತೆಗೆ ನಗು ಬಂದರೂ ನಂತರದಲ್ಲಿ, ‘ಅವಳ ಬಳಿ ನಾನು ಹಾಗೆ ಹೇಳಬಾರದಿತ್ತು’ ಅಂತ ನನ್ನನ್ನೇ ಬೈದುಕೊಂಡೆ. ಮದ್ದೂರು ವಡೆ ಮಾರಲು ಬಂದಿದ್ದ ಆ ಹುಡುಗನ ಮನಸ್ಸಿಗೆ ಆ ಕ್ಷಣದಲ್ಲಿ ಎಷ್ಟು ನೋವಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡರೆ ಇಂದಿಗೂ ಖೇದವಾಗುತ್ತದೆ.
- ಶೈಲಜಾ ವಾಸುಕಿ, ಬೆಂಗಳೂರು