ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Readers Colony: ಸಂಬಳ ವಸೂಲಿ ಮಾಡಿ

ಅಧಿವೇಶನಕ್ಕೆ ತಗಲುವ ವೆಚ್ಚ ಸಾರ್ವಜನಿಕರ ತೆರಿಗೆಯ ಹಣ. ಹಾಗಾಗಿ ಎಲ್ಲಾ 224 ಶಾಸಕರ ಈ ಆಗ ತಿಂಗಳ ಸಂಬಳ, ಭತ್ಯೆ, ಸೌಲಭ್ಯಗಳನ್ನು ಸಂಪೂರ್ಣ ಮುಟ್ಟುಗೋಲು ಹಾಕಿಕೊಳ್ಳಬೇಕು. ಸರಕಾರದ ಹಣ ಜನರ ಹಣ, ಹಾಗಾಗಿ ಈ ಬಗ್ಗೆ ಸ್ಪೀಕರ್ ಅಥವಾ ರಾಜ್ಯಪಾಲರು ಸೂಕ್ತ ಆದೇಶ ನೀಡುವ ಮೂಲಕ ಅಧಿವೇಶನದ ವೆಚ್ಚವನ್ನು ಈ ಅಪ್ರಬುದ್ಧ ಶಾಸಕರಿಂದಲೇ ವಸೂಲಿ ಮಾಡಬೇಕು.

ಓದುಗರ ಓಣಿ

ನಾವೇ ಆಯ್ಕೆ ಮಾಡಿರುವ ನಮ್ಮನ್ನಾಳುತ್ತಿರುವ ಈ ನಮ್ಮ ಶಾಸಕರು ಈ ಮುಂಗಾರು ಅಧಿವೇಶನ ದಲ್ಲಿ ಕೇವಲ ಅವರವರ ಪಕ್ಷದ ಹೈಕಮಾಂಡ್ ನಾಯಕರ ಗಮನ ಸೆಳೆಯುವ ಮತ್ತು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿzರೆಯೇ ಹೊರತು ನಾಡಿನ ಜನರ ಹಿತಕಾಯುವ, ಬರಗಾಲ ನಿರ್ವಹಣೆ, ಕಲಬೆರಕೆ ಆಹಾರ ನಿಯಂತ್ರಣ, ಬೆಲೆ ಏರಿಕೆ ನಿಯಂತ್ರಣ, ನಿರುದ್ಯೋಗ ನಿವಾರಣೆ, ಖಾಲಿ ಇರುವ 4 ಲಕ್ಷ ಹುದ್ದೆಗಳ ಭರ್ತಿಯ ಬಗ್ಗೆ, ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಬಗ್ಗೆ, ರೈತರ ಸಮಸ್ಯೆಗಳ ಬಗ್ಗೆ, ನೇಮಕಾತಿ ಪರೀಕ್ಷೆ ಅಕ್ರಮ ತಡೆಗಟ್ಟುವ ಬಗ್ಗೆ, ಅಕ್ರಮ ವಲಸಿಗರನ್ನು ಹೊರಹಾಕುವ ಬಗ್ಗೆ, ಕ್ರೈಂ ನಿಯಂತ್ರಣ ಮಾಡುವ ಬಗ್ಗೆ.... ಹೀಗೆ ಇನ್ನೂ ಅನೇಕಾನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸದೇ, ಕೇವಲ ರಾಜಕೀಯ ಪ್ರೇರಿತ ಟೀಕೆ ಪ್ರತಿಟೀಕೆ ಪರಸ್ಪರ ಬೈದಾಟ ಬೀದಿಜಗಳಗಳ ಮುಳುಗಿದ್ದಾರೆ.

ತಮ್ಮ ಸರಕಾರದ ಎಲ್ಲಾ ನಡೆಯನ್ನೂ ಸಮರ್ಥಿಸಿಕೊಳ್ಳುವ ಆಡಳಿತ ಪಕ್ಷದ ಸಚಿವರು ಶಾಸಕರು, ಅಂತೆಯೇ ಎಲ್ಲವನ್ನೂ ಸಾರಾಸಗಟಾಗಿ ವಿರೋಧಿಸಲೇಬೇಕೆಂದು ಗಲಭೆ ಗದ್ದಲ ಕೂಗಾಟ ಚೀರಾಟ ಮಾಡುವ ವಿರೋಧಪಕ್ಷದ ಶಾಸಕರು, ಇವರ ಈ ಕಪಟನಾಟಕ ನೋಡಿ ಜನರು ಹೇಸಿಗೆ ಪಡುತ್ತಿದ್ದಾರೆ.

ಇದನ್ನೂ ಓದಿ: Readers Colony: ಸಂವಿಧಾನಕ್ಕೆ ಅಪಚಾರ

ಇವರಿಂದ ಜನರಿಗೆ ಯಾವುದೇ ಉಪಯೋಗಕ್ಕಿಂತಲೂ ಅನಾನುಕೂಲ ಅಪವ್ಯಯವೇ ಆಗುತ್ತಿದೆ. ಈ ಅಧಿವೇಶನಕ್ಕೆ ತಗಲುವ ವೆಚ್ಚ ಸಾರ್ವಜನಿಕರ ತೆರಿಗೆಯ ಹಣ. ಹಾಗಾಗಿ ಎಲ್ಲಾ 224 ಶಾಸಕರ ಈ ಆಗ ತಿಂಗಳ ಸಂಬಳ, ಭತ್ಯೆ, ಸೌಲಭ್ಯಗಳನ್ನು ಸಂಪೂರ್ಣ ಮುಟ್ಟುಗೋಲು ಹಾಕಿಕೊಳ್ಳಬೇಕು. ಸರಕಾರದ ಹಣ ಜನರ ಹಣ, ಹಾಗಾಗಿ ಈ ಬಗ್ಗೆ ಸ್ಪೀಕರ್ ಅಥವಾ ರಾಜ್ಯಪಾಲರು ಸೂಕ್ತ ಆದೇಶ ನೀಡುವ ಮೂಲಕ ಅಧಿವೇಶನದ ವೆಚ್ಚವನ್ನು ಈ ಅಪ್ರಬುದ್ಧ ಶಾಸಕರಿಂದಲೇ ವಸೂಲಿ ಮಾಡಬೇಕು.

- ಎಸ್.ಎನ್ ರಮೇಶ್, ಮಂಡ್ಯ

ಕವಿಗೋಷ್ಠಿಯ ಗೌರವ

ಈ ವರ್ಷದ ನಾಡ ಹಬ್ಬ ದಸರಾದಲ್ಲಿ ನಡೆಯುವ ಕವಿಗೋಷ್ಠಿಗೆ, ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಪ್ರಧಾನ ಕವಿಗೋಷ್ಠಿ, ಯುವ ಕವಿಗೋಷ್ಠಿ, ಚಿಗುರು ಕವಿಗೋಷ್ಠಿ, ಹಾಸ್ಯ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ ಮತ್ತು ಜಾನಪದ ಕವಿಗೋಷ್ಠಿ ಹೀಗೆ ಹಲವಾರು ನಡೆಯುತ್ತದೆ. ಇದು ನಾಲ್ಕೈದು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ ಪ್ರಧಾನ ಕವಿಗೋಷ್ಠಿ ಮತ್ತು ಜಾನಪದ ಕವಿಗೋಷ್ಠಿ ಬಿಟ್ಟರೆ ಯಾವ ಕವಿಗೋಷ್ಠಿಯಲ್ಲೂ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತದೆ.

ಕೆಲವು ಕವಿಗೋಷ್ಠಿಯಲ್ಲಿ ವೇದಿಕೆ ಮೇಲೆ 20 ಜನರಿದ್ದರೆ, ವೇದಿಕೆಯ ಮುಂಭಾಗ ಅದಕ್ಕಿಂತಲೂ ಕಡಿಮೆ ಪ್ರೇಕ್ಷಕರಿರುತ್ತಾರೆ. ಯಾರ ಹಿತವನ್ನು ಕಾಪಾಡಲು ಈ ರೀತಿಯ ಕವಿಗೋಷ್ಠಿಗಳನ್ನು ಆಯೋಜಿಸುತ್ತಾರೋ ದೇವರೇ ಬಲ್ಲ. ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಂತೆ ಪ್ರಧಾನ ಕವಿಗೋಷ್ಠಿ ಮಾತ್ರ ಜಗನ್ಮೋಹನ ಅರಮನೆಯಲ್ಲಿ ನಡೆಯಲಿ. ಆಗ ಮಾತ್ರ ಕವಿಗಳಿಗೆ ಮತ್ತು ಕವಿಗೋಷ್ಠಿಗೆ ಹೆಚ್ಚಿನ ಗೌರವ ಇರುತ್ತದೆ.

- ಬೂಕನಕೆರೆ ವಿಜೇಂದ್ರ, ಮೈಸೂರು

ನೇರನಡೆಯ ಜನಸೇವಕ

ಚಿರಸ್ಮರಣೆ ಅಂಕಣದಲ್ಲಿ ತುರುವೇಕೆರೆ ಪ್ರಸಾದ್ ಅವರು ಈಗಷ್ಟೇ ನಮ್ಮನ್ನಗಲಿದ ಮಾಜಿ ಶಿಕ್ಷಣ ಮಂತ್ರಿ ಬಿ ಸಿ ನಾಗೇಶ್ ಕುರಿತು ಬರೆದಿದ್ದಾರೆ. ನಮ್ಮಲ್ಲಿ ಮಂತ್ರಿ ಎಂದರೆ ಮನದಲ್ಲಿ ಇಂದು ಮೂಡುವ ಚಿತ್ರವೇ ಬೇರೆ. ಅದೊಂದು ಬಹು ದೊಡ್ಡ ಸ್ಥಾನ, ಹಿಂದೆ ಮುಂದೆ ಬಹುಪರಾಕ್ ಹೇಳುವ ಮಂದಿ, ತನ್ನನ್ನು ಆರಿಸಿ ಕಳಿಸಿದ ಜನರಿಂದ ಅಂತರ ಕಾಯ್ದುಕೊಳ್ಳುವ ದುರ್ನಡೆ. ಆದರೆ, ಬಿ ಸಿ ನಾಗೇಶ್ ಅವರು ಶಿಕ್ಷಣ ಸಚಿವನಾಗಿ ಕ್ಷೇತ್ರದ ಜನರ ಜೊತೆ, ಸಿಬ್ಬಂದಿಯ ಬಳಿ ಅತ್ಯಂತ ಸಾಮಾನ್ಯನಂತೆ ಬೆರೆಯುತ್ತಿದ್ದರು ಅಂತ ತಿಳಿಯಿತು. ಹಣ- ದರ್ಪದ ಮೇಲೆ ನಿಂತಿರುವ ರಾಜಕೀಯ ದ ಬಗ್ಗೆ ಅವರಿಗಿರುವ ಬೇಸರ, ಅದರಲ್ಲಿ ಸುಧಾರಣೆ ತರಬೇಕೆಂಬ ಅವರ ಉತ್ಕಟ ಇಚ್ಛೆ, ಚುನಾವಣೆ- ಶಿಕ್ಷಣ- ಅಧಿಕಾರ ಇವುಗಳಲ್ಲಿ ಪಾರದರ್ಶಕತೆ ಇರಬೇಕೆಂಬ ಅವರ ಅಭಿಪ್ರಾಯ, ಸರಳ ಸಹಜ ಅವರ ನಿತ್ಯ ಬದುಕು, ಇವೆ ಗೊತ್ತಾಗಿ ನಮ್ಮ ರಾಜ್ಯ ಒಬ್ಬ ಶ್ರೇಷ್ಠ ಸಮಾಜ ಸುಧಾರಕನನ್ನು ಕಳೆದುಕೊಂಡಿದೆ ಅಂತ ಖೇದವಾಯಿತು. ಬಹುಕೃತ ವೇಷಗಳಿಲ್ಲದ ನೇರನಡೆಯ ಜನಸೇವಕ ಎಂಬ ಉಪಾಧಿ ದಿವಂಗತ ನಾಗೇಶ್ ಅವರಿಗೆ ಅತ್ಯಂತ ಸೂಕ್ತ.

- ಲಕ್ಷ್ಮೀಕಾಂತ ಪಾಟೀಲ, ಮೈಸೂರು