ನವೀನ್ ಸಾಗರ್ ಅವರು ತಮ್ಮ ‘ಪದಸಾಗರ’ ಅಂಕಣದಲ್ಲಿ (ಮಾ.24), ಚಿತ್ರರಂಗದಲ್ಲಿ ಕಾಣಬರುವ ಕೃತಿಚೌರ್ಯದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಚಿತ್ರರಂಗದಲ್ಲಿ ಈ ಹಿಂದೆ ಅಲ್ಪಪ್ರಮಾಣದಲ್ಲಿದ್ದ ‘ಕಥೆ ಕದಿಯುವ ಗೀಳು’ ಇತ್ತೀಚಿನ ದಿನಗಳಲ್ಲಿ ತಾರಕ ಕ್ಕೇರಿದೆ. ಉತ್ತಮ ಕಥೆಯ ಚಿತ್ರವೊಂದು ಬಹಳ ದಿನಗಳ ನಂತರವಾದರೂ ಬಂತಲ್ಲಾ ಎಂದು ಸಂತಸಪಡುವಷ್ಟರಲ್ಲಿ ಆ ಕಥೆಯ ನಿಜವಾದ ಕರ್ತೃ ಬೇರೆಯೇ ಆಗಿದ್ದ ಸಂಗತಿ ಚಿತ್ರರಸಿಕರಿಗೂ ಬೇಸರ ತರಿಸುವಂಥದ್ದು.
ಇದನ್ನೂ ಓದಿ: Naveen Sagar Column: ಕಥೆ ಹೇಳುವೇ ನನ್ನ ಕಥೆ ಹೇಳುವೆ...!!
‘ಲವ್ ಮಾಕ್‌ಟೈಲ್-3’ ಚಿತ್ರದ ಕಥೆಯು 1990ರಲ್ಲಿ ಬಿಡುಗಡೆಯಾಗಿದ್ದ ‘ಮತ್ತೆ ಹಾಡಿತು ಕೋಗಿಲೆ’ ಚಿತ್ರದ ಕಥೆಯನ್ನು ಹೋಲುವಂತಿದೆ ಎಂದು ಅಂಕಣಕಾರರು ತಿಳಿಸಿದ್ದಾರೆ; ಈ ಚಿತ್ರದ ನಿರ್ದೇಶಕರಾದ ಭಾರ್ಗವ ಅವರು ಈ ಕುರಿತಂತೆ ಸ್ಪಷ್ಟನೆ ನೀಡಿದರೆ ಒಳಿತು. ಕಿರುತೆರೆಯೂ ಇದಕ್ಕೆ ಹೊರತಾಗಿಲ್ಲ, ಅಲ್ಲಂತೂ ಕೇಳುವವರೇ ಇಲ್ಲ. ಎಲ್ಲವನ್ನೂ ‘ಸ್ವರಚಿತ’ ಎಂದೇ ಪ್ರತಿಪಾದಿಸಿ ವಾದ ಮಾಡುತ್ತಾರೆ. ಹೀಗಾಗಿ ಸೃಜನಶೀಲ ಲೇಖಕರು ಮೂಲೆಗುಂಪಾಗುತ್ತಿದ್ದಾರೆ. ಇದು ತುಂಬಾ ದುರದೃಷ್ಟಕರ.
- ರಾ. ರಾಮಾರಾಧ್ಯ, ಮೈಸೂರು
ಶಿಕ್ಷಕರದು ಇದೆಂಥಾ ಪಾಡು?
ರಮಾನಂದ ಶರ್ಮಾ ಅವರ ‘ಅನ್ಯ ಚಟುವಟಿಕೆಗಳಿಗೆ ಶಿಕ್ಷಕರ ಬಳಕೆಯಾಗದಿರಲಿ’ ಎಂಬ ಕಳಕಳಿ ಭರಿತ ಲೇಖನ (ಮಾ.24) ಮನಮುಟ್ಟುವಂತಿತ್ತು. ಶಿಕ್ಷಕರನ್ನು ಬೋಧಕೇತರ ಕೆಲಸ ಗಳಿಗೆ ನಿಯೋಜಿಸುವ ಬಗ್ಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಅಸಮಾಧಾನ ವ್ಯಕ್ತಪಡಿಸಿರುವ ಉಲ್ಲೇಖವೂ ಈ ಬರಹದಲ್ಲಿದೆ. ಶಿಕ್ಷಕರನ್ನು ಬೋಧಕೇತರ ಕೆಲಸಗಳಿಗೆ ನಿಯೋಜಿಸುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟು ಗಳ ತೀರ್ಪುಗಳು ಹೇಳಿರುವುದನ್ನು ಈ ಸಂದರ್ಭ ದಲ್ಲಿ ಗಮನಿಸಬೇಕು.
ಇದನ್ನೂ ಓದಿ: Ramanand Sharma Column: ಮಕ್ಕಳಿರಲವ್ವ ಮನೆ ತುಂಬಾ ಎನ್ನುತ್ತಿರುವ ನಾಯ್ಡುಗಾರು
ಇವುಗಳ ಒಟ್ಟಾರೆ ಸಾರಾಂಶವೇನೆಂದರೆ, ಚುನಾವಣೆ, ಜನಗಣತಿ, ವಿಪತ್ಕಾಲದಲ್ಲಿನ ಪರಿಹಾರ ಕಾರ್ಯಗಳ ಹೊರತಾಗಿ ಶಿಕ್ಷಕರನ್ನು ಬೇರಾವ ಕೆಲಸಗಳಿಗೂ ನಿಯೋಜಿಸು ವಂತಿಲ್ಲ; ಚುನಾವಣೆಗೆ ಸಂಬಂಽಸಿ ದಂತೆ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ, ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸುವ ವೇಳೆಯಲ್ಲೂ ಬೇರೆ ಸಿಬ್ಬಂದಿವರ್ಗ ಲಭ್ಯ ವಿಲ್ಲದಿದ್ದಾಗ ಮಾತ್ರ ಶಿಕ್ಷಕರನ್ನು ನಿಯೋಜಿಸಬಹುದು ಎಂಬ ಚುನಾವಣಾ ಆಯೋಗದ ಆದೇಶವನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಹೀಗಿರುವಾಗ, ಬೀದಿನಾಯಿ ಸಂಬಂಧಿತ ಸಮಸ್ಯೆಗಳ ಅವಲೋಕನಕ್ಕೂ ಶಿಕ್ಷಕರೇ ಬೇಕು ಎನ್ನುವ ಸ್ಥಿತಿಯು, ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಬಗ್ಗೆ ಇರುವ ತಾತ್ಸಾರಕ್ಕೆ ಕೈದೀವಿಗೆ ಹಿಡಿದಂತಿದೆ. ಶಿಕ್ಷಕರು ಶಿಕ್ಷಕರಾಗಷ್ಟೇ ಇರಬೇಕು ತಾನೇ?!
- ಸಾಮಗ ದತ್ತಾತ್ರಿ, ಬೆಂಗಳೂರು
ಬೀದಿನಾಯಿ ಸಮಸ್ಯೆ
ಶಿಕ್ಷಕರನ್ನು ಬೋಧಕೇತರ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುತ್ತಿರುವ ನಡೆಯನ್ನು ರಮಾನಂದ ಶರ್ಮ ಅವರು ಚೆನ್ನಾಗಿ ವಿಶ್ಲೇಷಿಸಿದ್ದಾರೆ. ದಶಕಗಳಿಂದಲೂ ಶಿಕ್ಷಕರ ಕ್ಷೇತ್ರ ದಿಂದಲೇ ಚುನಾಯಿಲ್ಪಡುತ್ತಿರುವ ವಿಧಾನ ಪರಿಸತ್ ಸಭಾಪತಿ ಬಸವರಾಜ ಹೊರಟ್ಟಿ ಯವರು ಈ ನಡೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವುದು ಶ್ಲಾಘನೀಯ. ನಮ್ಮ ಆಳುಗ ವ್ಯವಸ್ಥೆಯು ಬೀದಿನಾಯಿಗಳಿಗೆ ಬಿರಿಯಾನಿ ಒದಗಿಸುವ ಯೋಜನೆ ಹಾಕಿಕೊಂಡಿರುವುದು ಕೆಲ ದಿನಗಳ ಹಿಂದೆ ವರದಿಯಾಗಿತ್ತು; ಇದರ ಸಮರ್ಪಕ ಜಾರಿಗೂ ಮಾನವ ಸಂಪನ್ಮೂಲ ಬೇಕೇ ಬೇಕು.
ಹಾಗಂತ, ಶಿಕ್ಷಕರು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ತಯಾರಿ ಮತ್ತು ವಿತರಣೆ ಯಲ್ಲಿ ಪಳಗಿದ್ದಾರೆ ಎಂಬ ನೆಪವನ್ನು ಮುಂದು ಮಾಡಿಕೊಂಡು, ಬೀದಿನಾಯಿಗಳಿಗೆ ಬಿರಿಯಾನಿ ತಿನ್ನಿಸುವ ಕೆಲಸಕ್ಕೂ ಶಿಕ್ಷಕರನ್ನು ಹಚ್ಚದಿದ್ದರೆ ಸಾಕು!
ಈ ನಡುವೆ ಬ್ಯಾಂಕ್ ಸಿಬ್ಬಂದಿಗಳನ್ನೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ; ಮುಂದೆ ಅವರನ್ನೂ ಮತ್ತಷ್ಟು ‘ಬ್ಯಾಂಕಿಂಗೇತರ’ ಕಾರ್ಯಗಳಿಗೆ ಬಳಸಿಕೊಳ್ಳುವ ದಿನ ಬರಬಹುದೇ? ಗೊತ್ತಿಲ್ಲ!!
- ದಾವಣಗೆರೆ ಮುಕುಂದ, ಬೆಂಗಳೂರು