Ramanand Sharma Column: ಮಕ್ಕಳಿರಲವ್ವ ಮನೆ ತುಂಬಾ ಎನ್ನುತ್ತಿರುವ ನಾಯ್ಡುಗಾರು
‘ದುಡಿಯುವುದಕ್ಕೆ ಕೈಗಳಿಲ್ಲ’ ಎಂಬಂತೆ ಆಗುತ್ತಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದರು. ‘ಉತ್ಸಾಹದಿಂದ ದುಡಿಯಬಲ್ಲ ಯುವಜನರ ಸಂಖ್ಯೆ ಕಡಿಮೆಯಾಗುವುದು ರಾಜ್ಯದ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಮಾರಕ; ನಮ್ಮ ರಾಜ್ಯದ ಲೋಕಸಭಾ ಸ್ಥಾನಗಳ ಕುಸಿತಕ್ಕೂ ಅದು ಕಾರಣವಾಗಬಹುದು’ ಎಂದಿದ್ದರು ನಾಯ್ಡು.
-
ವಿಶ್ಲೇಷಣೆ
ರಮಾನಂದ ಶರ್ಮಾ
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ, ಹೆಚ್ಚಿನ ಜನಸಂಖ್ಯಾ ಕುಸಿತ ಕಾಣಬರುತ್ತಿರುವ ಆಂಧ್ರಪ್ರದೇಶದಲ್ಲಿ, ಎರಡನೇ ಅಥವಾ ಅದಕ್ಕೂ ಹೆಚ್ಚಿನ ಮಗು ಹುಟ್ಟುವ ಸಮಯದಲ್ಲಿ ಹೆತ್ತವರಿಗೆ ರಾಜ್ಯ ಸರಕಾರದಿಂದ ನೆರವು ಸಿಗಲಿದೆ. ಅಂದರೆ, ಜನಸಂಖ್ಯಾ ನಿರ್ವಹಣಾ ಯೋಜನೆಯ ‘ಪೋಷಣ ಶಿಕ್ಷಾ ಸುರಕ್ಷಾ’ ಪ್ಯಾಕೇಜ್ ಅಡಿಯಲ್ಲಿ ಸರಕಾರವು ಪ್ರತಿ ಮಗುವಿಗೆ 25000 ರುಪಾಯಿ ನೆರವು ನೀಡಲಿದೆ.
ಮೂರನೇ ಮಗು ಹುಟ್ಟಿದರೆ ಐದು ವರ್ಷದವರೆಗೆ ಪ್ರತಿ ತಿಂಗಳೂ 1000 ರು. ನ್ಯೂಟ್ರಿಷನ್ ಸಹಾಯಧನ, 18 ವರ್ಷದವರೆಗೆ ಸಾರ್ವಜನಿಕ ಮತ್ತು ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುವುದು. ಐವಿಎಫ್ ಮೂಲಕ ಮಗುವನ್ನು ಪಡೆಯಲು ಮುಂದಾಗುವವರಿಗೂ ಸಹಾಯಧನವನ್ನು ನೀಡಲಾಗುವುದು.
ಇಷ್ಟು ಮಾತ್ರವಲ್ಲದೆ, ಮೂರು ಮಕ್ಕಳನ್ನು ಹೊಂದಿರುವ ಸರಕಾರಿ ನೌಕರರಿಗೆ ನಿವೃತ್ತಿ ವಯಸ್ಸು ಸಮೀಪಿಸುತ್ತಿದ್ದರೆ, ಅವರಿಗೆ 15 ದಿನಗಳ ಯೋಗಕ್ಷೇಮ ರಜೆ ಮತ್ತು 50000 ರು. ನಗದನ್ನು ನೀಡಲಾಗುವುದು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸುವುದರ ಮೇಲೆ ಈವರೆಗೆ ನಿರ್ಬಂಧವನ್ನು ಹೇರಲಾ ಗಿತ್ತು; ಆದರೆ ಅದು ಈಗ ತೆರವುಗೊಳ್ಳಲಿದೆ. ಪ್ರಸಕ್ತ ವರ್ಷದ ಏಪ್ರಿಲ್ 1ರಿಂದ ಈ ಯೋಜನೆ ಯು ಶುರುವಾಗಲಿದ್ದು, ಈ ಹಿಂದೆ ಜಾರಿಯಲ್ಲಿದ್ದ ಸಂತಾನಶಕ್ತಿಹರಣ ಅಥವಾ ಮಿತಕುಟುಂಬ ಯೋಜನೆಯಂಥ ಕಾರ್ಯಕ್ರಮಗಳನ್ನು ನಿಲ್ಲಿಸಲಾಗುವುದು ಎಂದು ತಿಳಿದು ಬಂದಿದೆ.
ಇದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ‘ದಿಢೀರ್’ ಅಂತ ತೆಗೆದುಕೊಂಡ ನಿರ್ಣಯವಲ್ಲ; ರಾಜ್ಯದ ಜನಸಂಖ್ಯೆಯ ಪ್ರಮಾಣ ಕಡಿಮೆಯಾಗು ತ್ತಿರುವುದರ ಬಗ್ಗೆ ಅವರು ವರ್ಷಗಳ ಹಿಂದೆಯೇ ಎಚ್ಚರಿಸಿದ್ದರು.
ಇದನ್ನೂ ಓದಿ: Ramanand Sharma Column: ಸ್ಮಾರ್ಟ್ʼಫೋನ್ ಬಳಕೆಯ ನಿಯಂತ್ರಣ ಕಾರ್ಯಸಾಧ್ಯವೇ ?
‘ದುಡಿಯುವುದಕ್ಕೆ ಕೈಗಳಿಲ್ಲ’ ಎಂಬಂತೆ ಆಗುತ್ತಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದರು. ‘ಉತ್ಸಾಹದಿಂದ ದುಡಿಯಬಲ್ಲ ಯುವಜನರ ಸಂಖ್ಯೆ ಕಡಿಮೆಯಾಗುವುದು ರಾಜ್ಯದ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಮಾರಕ; ನಮ್ಮ ರಾಜ್ಯದ ಲೋಕಸಭಾ ಸ್ಥಾನಗಳ ಕುಸಿತಕ್ಕೂ ಅದು ಕಾರಣವಾಗಬಹುದು’ ಎಂದಿದ್ದರು ನಾಯ್ಡು.
ಅವರ ಈ ಅಭಿಪ್ರಾಯವನ್ನು ಅಂದು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ‘ಇದು ಕೆಲಸವಿಲ್ಲದ ರಾಜಕಾರಣಿಯ ಅಪಲಾಪ’ ಎಂದು ಹಲವರು ಲೇವಡಿ ಮಾಡಿದ್ದರು. ಆದರೆ ನಾಯ್ಡು ಅವರು ರಾಜ್ಯದಲ್ಲಿನ ಜನಸಂಖ್ಯಾ ಕುಸಿತವನ್ನು, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿರುವ ‘ಏಜಿಂಗ್ ಕ್ರೈಸಿಸ್’ ಅಥವಾ ‘ವೃದ್ಧಾಪ್ಯದ ಬಿಕ್ಕಟ್ಟು’ ಎಂಬ ಪರಿಕಲ್ಪ ನೆಗೆ ಹೋಲಿಸಿ, ಮುಂದಿನ ದಿನಗಳಲ್ಲಿ ಇದು ‘ಹ್ಯೂಮನ್ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್’ನ ಕೊರತೆಗೆ ಕಾರಣವಾಗಬಹುದೆಂದು ಭವಿಷ್ಯ ನುಡಿದು ಗಂಭೀರವಾಗಿ ಎಚ್ಚರಿಸಿದ್ದರು ಕೂಡ.
ಐವತ್ತರ ದಶಕದವರೆಗೆ ಭಾರತದಲ್ಲಿ, ‘ಮಕ್ಕಳೇ ನಮ್ಮ ಆಸ್ತಿ, ಮನೆಯನ್ನು ನಡೆಸಿಕೊಂಡು ಹೋಗಲು ಮನೆಯಲ್ಲಿ ಮಕ್ಕಳು ಬೇಕು, ಮಕ್ಕಳು ಹೆಚ್ಚು ಇದ್ದಷ್ಟು ಬದುಕಿನಲ್ಲಿ ಸ್ಥಿರತೆ-ನೆಮ್ಮದಿ, ಭವಿಷ್ಯವು ಆಶಾದಾಯಕ’ ಎನ್ನುವ ಭಾವನೆಯಿತ್ತು.
‘ನಾವು ಕಷ್ಟಪಟ್ಟು ಗಳಿಸಿದ ಮತ್ತು ಉಳಿಸಿದ ಆಸ್ತಿಯು ನಮ್ಮ ನಂತರ ನಮ್ಮ ಸಂಸಾರದ ಕುಡಿಯ ಬಳಿಯಲ್ಲೇ ಇರಬೇಕೇ ವಿನಾ ಅನ್ಯರ ಪಾಲಾಗಬಾರದು’ ಎನ್ನುವುದು ಸಾರ್ವತ್ರಿಕ ಆಶಯವಾಗಿತ್ತು. ಸಂಸಾರದ ರಥವನ್ನು ನಡೆಸಿಕೊಂಡು ಹೋಗಲು ಮನೆಯಲ್ಲಿ ಕೂಡ ಜನರ ಅವಶ್ಯಕತೆಯಿತ್ತು.
‘ದುಡಿಯುವ ಕೈಗಳೇ ನಮ್ಮ ಆಸ್ತಿ ಮತ್ತು ಸಂಪತ್ತು; ಜನಸಂಖ್ಯೆ ಹೆಚ್ಚು ಇದ್ದಷ್ಟೂ ದೇಶ ಸುಭದ್ರ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು ಅಂದಿನ ಪ್ರಧಾನಿ ನೆಹರುರವರು. ಅಂದೆ ಲ್ಲಾ ಸ್ವಲ್ಪ ಕಷ್ಟವಾದರೂ ದುಡಿಯುವ ಕೈಗಳಿಗೆ ಕೆಲಸವೂ ದೊರಕುತ್ತಿತ್ತು; ದುಡಿದು ಬದುಕಲು ಮನೆಯಿಂದ ದೂರ ತೆರಳಬೇಕಾದ ಅನಿವಾರ್ಯತೆ ಅಷ್ಟಾಗಿ ಇರಲಿಲ್ಲ. ಪರಿಸ್ಥಿತಿ ಯಾವಾಗಲೂ ಒಂದೇ ತೆರನಾಗಿ ಇರುವುದಿಲ್ಲ.
ಬದಲಾವಣೆ ಎಂಬುದು ಬದುಕಿನ ನಿಯಮ ಮತ್ತು ಅನಿವಾರ್ಯತೆ ಕೂಡ. ದಿನಗಳು ಕಳೆದಂತೆ ದುಡಿಯುವ ಕೈಗಳು ಹೆಚ್ಚಾದರೂ, ಅವಕ್ಕೆ ಕೆಲಸವು ಮರೀಚಿಕೆಯಾಗ ತೊಡಗಿತು. ಹಾಗೆಯೇ, ಬೆಳೆಯುವ ಜನಸಂಖ್ಯೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕೂಡ ಸರಕಾರಕ್ಕೆ ಸವಾಲಾಯಿತು.
ನೂರು ಜನರಿಗಾಗಿ ರೂಪಿಸಿದ ಯೋಜನೆಯು ಜಾರಿಯಾಗುವ ಹೊತ್ತಿಗೆ ನೂರೈವತ್ತು ಫಲಾನುಭವಿಗಳು ಕೈಯನ್ನು ಮುಂದೊಡ್ಡುವಂಥ ಹತಾಶ ಪರಿಸ್ಥಿತಿ ಉದ್ಭವವಾಯಿತು. ಆಗ ಈ ಸಮಸ್ಯೆಯ ಆಳ-ಅಗಲವನ್ನು ವಿಸ್ತೃತವಾಗಿ ವಿಶ್ಲೇಷಿಸಿದ ಸರಕಾರವು, ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಭಾವಿಸಿ ‘ಕುಟುಂಬ ಯೋಜನೆ’ ಅಥವಾ ‘ಮಿತಸಂತಾನ’ ಕಾರ್ಯಕ್ರಮವನ್ನು 1952ರ ಮೊದಲನೇ ಪಂಚ ವಾರ್ಷಿಕ ಯೋಜನೆಯ ಅಡಿಯಲ್ಲಿ ಜಾರಿಗೆ ತಂದಿತು.
ವಾಸ್ತವವಾಗಿ, 1949ರಲ್ಲಿಯೇ Family Planning Association Of India ಹೆಸರಿನಲ್ಲಿ ಈ ಕಾರ್ಯಕ್ರಮವಿದ್ದರೂ, 1960-70ರ ದಶಕದಲ್ಲಿ ಮತ್ತು ತರುವಾಯದಲ್ಲಿ ಇದನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಯಿತು. ‘ಚಿಕ್ಕ ಕುಟುಂಬ, ಚೊಕ್ಕ ಕುಟುಂಬ’, ‘ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ’, ‘ಮಿತಸಂತಾನ ಸುಖಕ್ಕೆ ಸೋಪಾನ’ ಮುಂತಾದ ಆಕರ್ಷಕ-ಅರ್ಥಭರಿತ ಘೋಷವಾಕ್ಯಗಳೊಂದಿಗೆ ಕುಟುಂಬ ಯೋಜನೆಯನ್ನು ಸಮರೋಪಾದಿ ಯಲ್ಲಿ ಜಾರಿಗೊಳಿಸಲಾಯಿತು.
ಕ್ಲಿನಿಕಲ್ ಅಪ್ರೋಚ್, ಭರ್ಜರಿ ಪ್ರಚಾರ, ತಿಳಿವಳಿಕೆ ಮತ್ತು ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆಗಳ ಮೂಲಕ ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಯಿತು. ಕೆಲವು ಕಡೆ ಇದನ್ನು ಬಲವಂತವಾಗಿ ಮಾಡಲಾಯಿತು. 1975ರ ತುರ್ತು ಪರಿಸ್ಥಿತಿ ಸಮಯದಲ್ಲಿ ಸಂಜಯ ಗಾಂಧಿಯವರ ಆಣತಿಯಂತೆ ದೆಹಲಿಯ ‘ತುರ್ಕ್‌ಮನ್ ಗೇಟ್’ನ ‘ನಸ್‌ಬಂದಿ’ ಕಾರ್ಯಕ್ರಮದ ವೇಳೆ ನಡೆದ ಹಿಂಸಾಚಾರ ಕೂಡ ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಿದ್ದನ್ನು ಇಂದಿಗೂ ಹಲವರು ನೆನಪಿಸಿಕೊಳ್ಳುತ್ತಾರೆ.
ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಪಕ್ಷವು ಸೋಲಲು ಈ ‘ನಸ್‌ಬಂದಿ’ ಕಾರ್ಯಕ್ರಮವೇ ಕಾರಣವಾಗಿತ್ತು ಎಂದೂ ವಿಶ್ಲೇಷಿಸಲಾಗಿತ್ತು. ವಿಶೇಷವೆಂದರೆ ಇಂಥ ಕಾರ್ಯಕ್ರಮವನ್ನು ಜಾರಿಗೆ ತರುವಲ್ಲಿ ಜಗತ್ತಿನಲ್ಲಿ ಭಾರತವೇ ಮೊದಲಿಗನಾಗಿತ್ತು, ಹೀಗಾಗಿ ಈ ಕಾರ್ಯಕ್ರಮವನ್ನು ಜಗತ್ತು ಬೆಕ್ಕಸ ಬೆರಗಾಗಿ ನೋಡು ತ್ತಿತ್ತು.
ಹಲವರು ಈ ಕಾರ್ಯಕ್ರಮವನ್ನು ಲೇವಡಿ ಮಾಡುತ್ತಿರುವಂತೆ ಮತ್ತು ‘ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲವೇ?’ ಎನ್ನುತ್ತಿರುವಂತೆ, ದೇಶದ ವಿದ್ಯಾವಂತರು, ಸಮಾಜದ ಮೇಲ್ವರ್ಗದವರು, ಮಧ್ಯಮ ವರ್ಗದವರು ಈ ಪರಿಕಲ್ಪನೆಯ ಹಿಂದಿನ ಅರ್ಥವನ್ನು ಗ್ರಹಿಸಿ, ತ್ವರಿತವಾಗಿ ಅಳವಡಿಸಿಕೊಂಡು, ಯೋಜನೆಯ ಉದ್ದೇಶವನ್ನು ನಿರೀಕ್ಷೆಗೂ ಮೀರಿ ದೊಡ್ಡ ಪ್ರಮಾಣದಲ್ಲಿ ಸಾರ್ಥಕಗೊಳಿಸಿದರು.
ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಸಮಾಜದ ಕೆಲವು ವರ್ಗದವರು ಇದರ ಬಗೆಗೆ ಅಷ್ಟಾಗಿ ಒಲವು ತೋರದೆ, ‘ಮಕ್ಕಳು ದೇವರಿತ್ತ ಕೊಡುಗೆ, ಅದನ್ನು ತಡೆಯಬಾರದು’ ಎಂಬ ಓಬಿರಾಯನ ಕಾಲದ ಮಾತಿಗೆ ಕಟ್ಟುಬಿದ್ದು, ಮಿತಸಂತಾನದ ಪರಿಕಲ್ಪನೆಗೆ ಮುಖ ಸಿಂಡರಿಸಿದರು.
ಜನಸಂಖ್ಯಾ ನಿಯಂತ್ರಣದ ಈ ಧ್ಯೇಯೋದ್ದೇಶವು ಕಾಲಕ್ರಮೇಣ ‘ಕುಟುಂಬಕ್ಕೆ ಒಂದೇ ಮಗು’ ಎಂಬ ಆಶಯದವರೆಗೆ ಬಂದು ನಿಂತಿರುವುದು ಒಂದು ದುರಂತ. ಇದು ಜನಸಂಖ್ಯೆ ಯನ್ನು ನಿರೀಕ್ಷೆಗೂ ಮೀರಿ ತಗ್ಗಿಸಿದೆ/ನಿಯಂತ್ರಿಸಿದೆ; ಪರಿಣಾಮವಾಗಿ ಇಂದು ‘ದುಡಿಯಲು ಕೈಗಳಿಲ್ಲ’ ಎನ್ನುವ ಹಂತಕ್ಕೆ ಅದು ಬಂದು ಮುಟ್ಟಿದೆ.
‘ವೈಟ್ ಕಾಲರ್’ ಮತ್ತು ‘ಬ್ಲೂ ಕಾಲರ್’ ಉದ್ಯೋಗಗಳಲ್ಲಿ ಈ ಕೊರತೆ ಎದ್ದುಕಾಣದಿದ್ದರೂ, ಕೆಳಸ್ತರದ ಉದ್ಯೋಗಗಳಲ್ಲಿ ಇದು ದಿನನಿತ್ಯದ ನೋವಾಗಿದೆ. ಇನ್ನು, ಒಂದು ಕಾಲಕ್ಕೆ ತುಂಬಾ ಸಾಮಾನ್ಯವಾಗಿದ್ದ 8-10 ಅಂಕಣದ ದೊಡ್ಡ ಮನೆಗಳು ಕಾಲಗರ್ಭ ಸೇರುತ್ತಿವೆ. ಇದರರ್ಥ, ಅಷ್ಟು ದೊಡ್ಡ ಮನೆಗಳನ್ನು ಕಟ್ಟಿಸುವ ಆರ್ಥಿಕ ಶಕ್ತಿ ಜನರಲ್ಲಿ ಇಲ್ಲವೆಂದಲ್ಲ; ಮನೆಯಲ್ಲಿ ಉಳಿಯಲು ಅಷ್ಟು ಜನರು ಇಲ್ಲದಿರುವುದು ಇದಕ್ಕೊಂದು ಕಾರಣ.
ಜತೆಗೆ, ಅಷ್ಟು ದೊಡ್ಡ ಮನೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಮನೆಯಲ್ಲಿ ಜನರಿಲ್ಲ ಮತ್ತು ಆಳುಕಾಳುಗಳು ದೊರಕುವುದಿಲ್ಲ. ಹಳ್ಳಿಗಳಲ್ಲಿ, ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ತುಂಡುಭೂಮಿಗಳೇ ಹೆಚ್ಚು; ಇದನ್ನು ನೋಡಿಕೊಂಡು ಬೆಳೆ ಬೆಳೆಯುವುದಕ್ಕೂ ಜನರಿಲ್ಲ, ಕೂಲಿಗಳಿಲ್ಲ ಎನ್ನುವಂಥ ಪರಿಸ್ಥಿತಿಯಿದೆ.
ಇರುವ ಕೂಲಿಗಳು ಕೇಳಿದ್ದೇ ಸಂಬಳ! ಕುಟುಂಬದಲ್ಲಿದ್ದ ಒಂದಿಬ್ಬರು ಮಕ್ಕಳು ಜೀವನೋ ಪಾಯಕ್ಕೆಂದು ಹೊರಗೆಲ್ಲೋ (ದೇಶ-ವಿದೇಶಕ್ಕೆ) ಹೋಗಿರುತ್ತಿದ್ದು, ಪಾಳಿಯ ಮೇಲೆ ಎಂಬಂತೆ ಮನೆಗೆ ಬಂದು ಪಾಲಕರನ್ನು ನೋಡಿಕೊಂಡು ಹೋಗುತ್ತಾರೆ. ಬಹುತೇಕ ಮನೆಗಳು ವೃದ್ಧಾಶ್ರಮಗಳಾಗಿವೆ. ಆ ಹಿರಿಯರ ನಂತರ ಮುಂದೇನು? ಆ ತುಂಡು ಭೂಮಿಯ ಕಥೆಯೇನು? ಇಂಥ ಉತ್ತರವಿಲ್ಲದ ಪ್ರಶ್ನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕೂಲಿಗಳ ಕೊರತೆಯಿಂದಾಗಿ ಕೃಷಿ ಮಾಡಲಾಗದೇ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸಲು ಪ್ರಯತ್ನಗಳು ನಡೆಯುತ್ತಿವೆ.
ಸಂಘಟಿತ ವಲಯದಲ್ಲಿ ಪರಿಸ್ಥಿತಿ ಅಷ್ಟು ಬಿಗಡಾಯಿಸದಿದ್ದರೂ, ಅಸಂಘಟಿತ ವಲಯ ದಲ್ಲಿ ಬಿಡಿಕೆಲಸಗಳಿಗೆ ಜನರೇ ದೊರಕುತ್ತಿಲ್ಲ ಎಂಬ ಅಳಲು ಮುಗಿಲು ಮುಟ್ಟಿದೆ. ಪ್ಲಂಬಿಂಗ್/ಸ್ಯಾನಿಟರಿ, ಇಲೆಕ್ಟ್ರಿಕಲ್, ಗಾರ್ಡನಿಂಗ್, ಪೇಂಟಿಂಗ್, ಕಾರ್ಪೆಂಟರಿ, ಕಟ್ಟಡ ನಿರ್ಮಾಣದಂಥ ಕೆಲಸಗಳಿಗೆ ಕಾರ್ಮಿಕರೇ ಸಿಗುತ್ತಿಲ್ಲ.
ಮಿತಕುಟುಂಬ ಕಾರ್ಯಕ್ರಮದ ಪರಿಣಾಮ ದೇಶದೆಲ್ಲೆಡೆ ಆಗಿದ್ದರೂ, ಹೆಚ್ಚು ಸುಶಿಕ್ಷಿತ ಪ್ರದೇಶ ಎನ್ನಲಾಗುವ ದಕ್ಷಿಣ ಭಾರತದಲ್ಲಿ ಇದರ ಪರಿಣಾಮ ಗಣನೀಯವಾಗಿದೆ. ಹೀಗಾಗಿಯೇ, ದುಡಿಯುವ ಕೈಗಳು ಉತ್ತರದ ರಾಜ್ಯಗಳಿಂದ ದಕ್ಷಿಣದ ರಾಜ್ಯಗಳಿಗೆ ದಾಂಗುಡಿ ಇಡುತ್ತಿವೆ ಎಂಬ ಮಾತಿನಲ್ಲಿ ಸತ್ಯವಿಲ್ಲದಿಲ್ಲ.
ಕರೋನಾ ಪಿಡುಗಿನ ಸಮಯದಲ್ಲಿ ಈ ವಲಸಿಗರು ತಂತಮ್ಮ ರಾಜ್ಯಗಳಿಗೆ ಮರಳಿದಾಗ, ರಸ್ತೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳು ಬಹುತೇಕ ನಿಂತು ಹೋಗಿದ್ದುಂಟು. ‘ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾದಾಗ, ಕಡಿಮೆ ಜನಸಂಖ್ಯಾ ಬೆಳವಣಿಗೆ ಇರುವ ದಕ್ಷಿಣ ಭಾರತವು ಗಮನಾರ್ಹ ಪ್ರಮಾಣದಲ್ಲಿ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ’ ಎಂಬ ಚಂದ್ರಬಾಬು ನಾಯ್ಡು ಅವರ ಅಭಿಪ್ರಾಯದಲ್ಲಿ ತೂಕವಿರುವಂತೆ ಕಾಣುತ್ತದೆ.
ಹಳ್ಳಿಗಳು ನಿರ್ಜನವಾಗಿವೆ, ಎಲ್ಲೆಡೆ ಮನೆಗಳು ಖಾಲಿಯಿವೆ. ನಗರಗಳ ಚಿಕ್ಕ ಚಿಕ್ಕ ಫ್ಲ್ಯಾಟ್ ಗಳಲ್ಲಿ ಬದುಕಿನ ಮುಸ್ಸಂಜೆಯಲ್ಲಿರುವ ಹಿರಿಯರು ದಿನದೂಡುತ್ತಿದ್ದಾರೆ, ಇಂದು ಮನೆಗಳಲ್ಲಿ ಮಕ್ಕಳ ಕೇಕೆಗಿಂತ ಗಂಡ-ಹೆಂಡತಿಯ ದನಿಗಳೇ ಹೆಚ್ಚು ಕೇಳುತ್ತಿವೆ. ಜನಸಂಖ್ಯೆ ಏಕೆ ಬೆಳೆಯುತ್ತಿಲ್ಲ ಎನ್ನುವುದರ ಹಿಂದಿನ ಕಾರಣವನ್ನು ಹುಡುಕಿದಾಗ ದೊರಕುವ ಉತ್ತರ ವು ಆಶ್ಚರ್ಯಕರ ಎನಿಸಬಹುದು, ಆದರೆ ಅದು ಸತ್ಯ. ಹಳ್ಳಿಯಲ್ಲಿದ್ದವರಿಗೆ, ಕೃಷಿಕರಿಗೆ ಮತ್ತು ಪೌರೋಹಿತ್ಯ ಮಾಡುವವರಿಗೆ ಮದುವೆಯು ಮರೀಚಿಕೆಯಾಗುತ್ತಿದೆ ಎಂಬುದು ಇತ್ತೀಚಿನ ಒಂದು ದೊಡ್ಡ ಸಾಮಾಜಿಕ ಸಮಸ್ಯೆ; ಇವರನ್ನು ಮದುವೆ ಯಾಗುವವರಿಗೆ ಸರಕಾರ ಪ್ರೋತ್ಸಾಹಿಸಬೇಕೆಂಬ ಮಾತು ಕೇಳಿಬರುತ್ತಿದೆ.
ಮದುವೆಯ ಜಂಜಾಟವೇ ಬೇಡ ಎನ್ನುವ ಎಷ್ಟೋ ಜನ ಯುವಕ-ಯುವತಿಯರು 40 ವರ್ಷ ದಾಟಿದರೂ ಹಸೆಮಣೆ ಏರುತ್ತಿಲ್ಲ. ಇನ್ನು, ‘ನಮಗೆ ಮಕ್ಕಳು ಬೇಡವೇ ಬೇಡ’ ಎನ್ನುವ ದಂಪತಿಗಳೂ ಸಾಕಷ್ಟಿದ್ದಾರಂತೆ. ಮಕ್ಕಳು ಬೇಕೆನ್ನುವವರು ದುಬಾರಿ ದಿನಮಾನ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಇಚ್ಛಿಸುತ್ತಿಲ್ಲ.
ಇದಕ್ಕೂ ಮಿಗಿಲಾಗಿ, ‘ಮದುವೆ-ಸಂಸಾರ-ಮಕ್ಕಳು-ಮರಿ’ ಎಂಬ ಜಂಜಾಟಕ್ಕೆ ಸಲಾಂ ಹೊಡೆದು ‘ಸಹಜೀವನ’ಕ್ಕೆ (ಲಿವಿಂಗ್ ಟುಗೆದರ್‌ಗೆ) ಮೊರೆಹೋಗುವವರೇನೂ ಕಮ್ಮಿಯಿಲ್ಲ. ಮದುವೆಯೇ ಇಲ್ಲದಿದ್ದರೆ ಅಥವಾ ವಿಳಂಬವಾದರೆ ಜನಸಂಖ್ಯೆ ವೃದ್ಧಿಯಾದೀತೇ? ಹಿಂದೆಲ್ಲಾ, ಗಂಡುಮಗು ಹುಟ್ಟುವವರೆಗೆ ಮಕ್ಕಳನ್ನು ಹೆರುತ್ತಿದ್ದರು; ‘ಅಗಳು ಬರುತ್ತದೆ ಅಂತ ತಿಳಿ ಕುಡಿಯುತ್ತಾರೆ’ ಎಂಬುದಾಗಿ ಇಂಥವರನ್ನು ಲೇವಡಿ ಮಾಡಲಾಗುತ್ತಿತ್ತು.
ಆದರೀಗ, ‘ಗಂಡಾಗಲಿ ಹೆಣ್ಣಾಗಲಿ, ಒಂದೇ ಮಗುವಿರಲಿ’ ಎನ್ನುವ ಕಾಲ ಬಂದಿದೆ. ಸಾಲ ದೆಂಬಂತೆ, ಯುವಜನರು ದೇಶದ ಒಂದಿಷ್ಟು ಅವ್ಯವಸ್ಥೆಗಳಿಗೆ ಬೇಸತ್ತು, ಸಹನೀಯ ವಾಗಿರುವ ಆರ್ಥಿಕ ಮತ್ತು ಸಾಮಾಜಿಕ ಜೀವನವನ್ನು ಅರಸುತ್ತಾ ದೇಶ ಬಿಟ್ಟು ಹೋಗು ತ್ತಿದ್ದಾರೆ.
ವರದಿಯೊಂದು ಹೇಳುವಂತೆ, ಸರಾಸರಿ 2 ಲಕ್ಷ ಜನರು ಪ್ರತಿವರ್ಷ ದೇಶಬಿಟ್ಟು ಹೊರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಕುಟುಂಬ ಯೋಜನೆ ಎಂಬ ಕಾರ್ಯಕ್ರಮವನ್ನು 1960-70ರ ದಶಕದಲ್ಲಿ ರೂಪಿಸಿದವರು, ಅದು ಇಂಥ ತಿರುವನ್ನು ಪಡೆಯುತ್ತದೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲವೇನೋ? ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕಾಲ ಚಕ್ರ ಹೇಗೆ ತಿರುಗುತ್ತದೆ ಎಂಬುದು ಅರಿವಾಗುವುದರ ಜತೆಗೆ, ‘ಮಕ್ಕಳಿರಲವ್ವ ಮನೆ ತುಂಬಾ’ ಎಂಬ ಜಾನಪದ ಗೀತೆಯೂ ನೆನಪಾಗುತ್ತದೆ....
(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)