ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Readers Colony: ಇದು ‘ಟಿವಿ’ ರಾಮಾಯಣ!

ನಮಗೆ ಯಾವುದೂ ಹೊಂದಾಣಿಕೆಯೇ ಆಗುವುದಿಲ್ಲ ಅಂತಾದರೆ, ನಾವು ನೋಡಬೇಕಾದ ವಾರ್ತೆ ಯಾವುದು? ಯಾವುದನ್ನು ನೋಡಬೇಕೆಂದು ನಾವು ಟಿವಿಯ ವಾರ್ತೆಯನ್ನು ಹಚ್ಚಿದ್ದು? ಎನ್ನು ವುದೇ ಕೊನೆಗೂ ನಿರ್ಣಯವಾಗುವುದಿಲ್ಲ. ಹೀಗಾಗಿ ವಾರ್ತೆಯ ಸಹವಾಸವೇ ಬೇಡ ಅಂತ ಹೆಂಗಸರು ನೋಡುವ ಧಾರಾವಾಹಿಗೆ ಬಂದರೆ, ಅದು ಒಂದು ತಿಂಗಳ ಹಿಂದೊಮ್ಮೆ ಹೀಗೆಯೇ ಬೇಜಾರು ಬಂದಾಗ ಹಚ್ಚಿದಾಗ ಇದ್ದ ಅದೇ ಜಾಗದಲ್ಲೇ, ಅಲ್ಲಿಯೇ ಕಥೆ ಬಿದ್ದಿರುತ್ತದೆ.

ಓದುಗರ ಓಣಿ

ಟಿವಿಯ ಮುಂದೆ ಕುಳಿತ ನಮ್ಮಂಥವರು ವಾರ್ತೆಗಳ ಚಾನಲ್ ಅನ್ನು ಆನ್ ಮಾಡುತ್ತೇವೆ. ಈಗ ಬಹುತೇಕ ಖಾಸಗಿ ಚಾನಲ್‌ಗಳೇ. ಪ್ರತಿಯೊಂದು ಚಾನಲ್‌ನವರೂ, ತಮಗೆ ದಕ್ಕಿದ ವಾರ್ತೆಗಳ ಸಾರಾಸಾರವನ್ನು ವಿವೇಚನೆ ಮಾಡದೆ, ‘ನಾ ಮುಂದು, ತಾ ಮುಂದು’ ಅಂತ ಜಿದ್ದಿಗೆ ಬಿದ್ದವರಂತೆ ಅರೆಬೆಂದ ಸಂಗತಿಗಳನ್ನೇ ಬಿತ್ತರಿಸಿಬಿಡುತ್ತಾರೆ. ಒಂದೊಂದರಲ್ಲಿ ಒಂದೊಂದು ರೀತಿಯ ವಿಶ್ಲೇಷಣೆ ಮುಂದುವರಿಯುತ್ತದೆ.

ಪ್ರತಿ ಚಾನಲ್‌ನವರೂ ‘ಗುಂಪುಚರ್ಚೆ’ ಅಂತ ಹೇಳಿ ನಾಲ್ಕೈದು ಮಂದಿ ‘ತಥಾಕಥಿತ’ ಪರಿಣತರನ್ನು ತಂದು ಕೂರಿಸಿ ವಾಗ್ವಾದಕ್ಕೆ ಶುರುಹಚ್ಚಿಕೊಂಡಿರುತ್ತಾರೆ. ಇಂಥ ಚರ್ಚೆಯಲ್ಲಿ ಒಬ್ಬನ ಮಾತಿಗೆ ಪೂರ್ಣವಿರಾಮ ಬೀಳುವ ಮೊದಲೇ ಇನ್ನೊಬ್ಬ ಏರುದನಿಯಲ್ಲಿ ಖಂಡಿಸುತ್ತಾನೆ. ಇವನು ‘ಒಂದು ನಿಮಿಷ’ ಅಂತ ಸಮಯ ಕೇಳುವುದು, ಅಷ್ಟರಲ್ಲೇ ಇನ್ನೊಬ್ಬ ದನಿಯೆತ್ತುವುದು ಹೀಗೆ ಯಾವ ವಿಚಾರವೂ ಸ್ಪಷ್ಟವಾಗುವುದಿಲ್ಲ. ಈ ನಡುವೆ ‘ಆಂಕರ್’ ಎತ್ತುವ ಪ್ರಶ್ನೆ ಯಾರ ಗಮನಕ್ಕೂ ಬರುವುದಿಲ್ಲ!

ಆಗ, ಟಿವಿ ಮುಂದೆ ಕುಳಿತವರು ಬೇರೆ ಚಾನಲ್‌ಗೆ ಹಾರುತ್ತಾರೆ. ಅಲ್ಲಿ ಧರ್ಮಸ್ಥಳದ ಬುರುಡೆ ವಿಚಾರ, ಉತ್ಖನನ, ಮುಸುಕುಧಾರಿಯ ನಿರ್ದೇಶನದ ವಿಚಾರವನ್ನು ಹಿಡಿದು ಜಗಿಯುತ್ತಿರುತ್ತಾರೆ. ಅದು ಬೇಜಾರಾಗಿ ಮತ್ತೊಂದು ಚಾನಲ್‌ಗೆ ಬದಲಿಸಿದರೆ, ‘ದರ್ಶನ್-ರೇಣುಕಾಸ್ವಾಮಿ’ ಕಥೆಯ ಇಂಚಿಂಚೂ ಮಾಹಿತಿ ಕೊಡಲು ತೊಡಗಿರುತ್ತಾರೆ.

ಅದು ಬೇಡ ಅಂತ ಮತ್ತೊಂದಕ್ಕೆ ಹೋದರೆ, ಅಲ್ಲಿ ಬಿಸಿಬಿಸಿ ವೈರಲ್ ಸುದ್ದಿ, ಆಕ್ಸಿಡೆಂಟ್‌ಗಳು, ಇರಿಟೇಟಿಂಗ್ ವಿಡಿಯೋಗಳು. ಇದರ ಸಹವಾಸವೇ ಬೇಡ ಅಂತ ಬೇರೆಡೆ ನೋಡಿದರೆ, ಯಾರದೋ ಸಿನಿಮಾದವರ ಡಿವೋರ್ಸ್ ಸುದ್ದಿ, ಮತ್ತಾವುದೋ ಕೊಲೆ, ಅದು ಹೇಗಾಯಿತು ಯಾಕಾಯಿತು ಅಂತ ಅದರ ಹಿಂದೆಬಿದ್ದು ತಲೆಚಿಟ್ಟು ಹಿಡಿಸುತ್ತಾರೆ.

ಇದನ್ನೂ ಓದಿ: Roopa Gururaj Column: ಭೀಮನ ಅಹಂಕಾರ ಅಡಗಿಸಿದ ಆಂಜನೇಯ

ಮತ್ತೊಂದು ಚಾನಲ್‌ಗೆ ಜಿಗಿದರೆ, ಅಲ್ಲಿ ಮಂತ್ರಿ-ಮಹೋದಯರು ಪ್ರತಿಪಕ್ಷವನ್ನೂ, ಪ್ರತಿಪಕ್ಷ ದವರು ಆಡಳಿತಾರೂಢ ಸರಕಾರ ಮತ್ತು ಶಾಸಕರನ್ನೂ ತರಾಟೆಗೆ ತೆಗೆದುಕೊಳ್ಳುವ ಮತ್ತದೇ ರೇಜಿಗೆ ಹುಟ್ಟಿಸುವ ಸಂಗತಿ. ಇದೂ ಬೇಡ ಅಂತ ಮೊದಲಿನ ಚಾನಲ್‌ಗೆ ಹೋದರೆ, ಸಾಕಷ್ಟು ಹಿಂದೆ ಶುರು ವಾಗಿದ್ದ ಡಿಬೇಟ್ ಮುಂದುವರಿದಿದ್ದು ಗದ್ದಲ ತಾರಕಕ್ಕೇರಿರುತ್ತದೆ.

ನಮಗೆ ಯಾವುದೂ ಹೊಂದಾಣಿಕೆಯೇ ಆಗುವುದಿಲ್ಲ ಅಂತಾದರೆ, ನಾವು ನೋಡಬೇಕಾದ ವಾರ್ತೆ ಯಾವುದು? ಯಾವುದನ್ನು ನೋಡಬೇಕೆಂದು ನಾವು ಟಿವಿಯ ವಾರ್ತೆಯನ್ನು ಹಚ್ಚಿದ್ದು? ಎನ್ನು ವುದೇ ಕೊನೆಗೂ ನಿರ್ಣಯವಾಗುವುದಿಲ್ಲ. ಹೀಗಾಗಿ ವಾರ್ತೆಯ ಸಹವಾಸವೇ ಬೇಡ ಅಂತ ಹೆಂಗಸರು ನೋಡುವ ಧಾರಾವಾಹಿಗೆ ಬಂದರೆ, ಅದು ಒಂದು ತಿಂಗಳ ಹಿಂದೊಮ್ಮೆ ಹೀಗೆಯೇ ಬೇಜಾರು ಬಂದಾಗ ಹಚ್ಚಿದಾಗ ಇದ್ದ ಅದೇ ಜಾಗದಲ್ಲೇ, ಅಲ್ಲಿಯೇ ಕಥೆ ಬಿದ್ದಿರುತ್ತದೆ.

ಸೊಸೆಗೆ ಅತ್ತೆಯೋ, ಅತ್ತಿಗೆಗೆ ಮೈದುನನೋ ತೋರುತ್ತಿರುವ ಹುಳುಕು ಬುದ್ಧಿಯ ಕಥೆಯದು! ಇಡೀ ಮನೆಯಲ್ಲಿ ಯಾರಿಗೂ ಗೊತ್ತಾಗದೇ ನಡೆವ ಕರಾಮತ್ತಿನ ಅದೇ ಧಾರಾವಾಹಿ ನಡೆಯುತ್ತಲೇ ಇರುತ್ತದೆ, ಈ ಧಾರಾವಾಹಿಗಳು ಎಲ್ಲಾ ಚಾನಲ್‌ಗಳಲ್ಲೂ ಅದೇ ರೂಪದ ಕಥೆಯಿಂದ ಕೂಡಿರು ತ್ತವೆ. ತಲೆ ಚಿಟ್ಟುಹಿಡಿದು ಟಿವಿ ಬಂದ್ ಮಾಡಿದರೆ, ಮನೆಯ ಮತ್ತೊಬ್ಬ ಸದಸ್ಯರು ನಾವು ಅದುವರೆಗೂ ಮಾಡಿದ ಕೆಲಸವನ್ನೇ ಪುನರಾವರ್ತನೆ ಮಾಡುತ್ತಿರುತ್ತಾರೆ!

ಇನ್ನು ಟಿವಿಯಲ್ಲಿ ಸಿನಿಮಾವನ್ನು ಹಚ್ಚೋಣವೆಂದರೆ, ಇಡೀ ಮನೆಯ ಸದಸ್ಯರು ಸಾಮೂಹಿಕ ವಾಗಿ ಒಂದನ್ನೇ ಮೆಚ್ಚಲಾರರು. ಅದೂ ಹಳೆಯ ಕಾಲದಂತೆ ಈಗ ಸಿನಿಮಾವನ್ನು ನೋಡುವವರೇ ವಿರಳ. ಕ್ರೀಡೆ ಅಂದರೆ ಕ್ರಿಕೆಟ್ ಮಾತ್ರ, ಅದೂ ಒನ್‌ಡೇ ಅಥವಾ ಟಿ-ಟ್ವೆಂಟಿ ಇರಬೇಕು. ಅದೂ ಲೈವ್ ಇರಬೇಕು, ಒಂದೊಮ್ಮೆ ಇರದಿದ್ದರೆ ಮತ್ತೆ ಮೊಬೈಲ್ ಹಿಡಿದು ಕುಳಿತುಕೊಳ್ಳದೇ ವಿಧಿಯಿಲ್ಲ.

ಕೊನೆಗೆ, 56 ಇಂಚಿನ ದೊಡ್ಡ ಟಿವಿ ಇದ್ದುಕೊಂಡೂ, ಅದನ್ನು ಬಂದ್ ಮಾಡಿಟ್ಟು ಅದರ ಖಾಲಿ ಪರದೆಯನ್ನೇ ನೋಡಿದಾಗ ಸಿಗುವ ಖುಷಿಯು, ಟಿವಿಯನ್ನು ಆನ್ ಮಾಡಿಟ್ಟಾಗ ಸಿಗುವುದಿಲ್ಲ ಎಂಬ ಪರಮಸತ್ಯದ ಅರಿವಾಗುವಷ್ಟರ ಹೊತ್ತಿಗೆ ಸಾಕಷ್ಟು ಸಮಯದ ಅಪವ್ಯಯ ಆಗಿರುತ್ತದೆ! ಎಂಬಲ್ಲಿಗೆ ಆಧುನಿಕ ‘ಟಿವಿ’ ರಾಮಾಯಣ ಸಮಾಪ್ತಿಯಾದುದು...!

- ನಿತ್ಯಾನಂದ ಹೆಗಡೆ, ಮುರೂರು