ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Readers Colony: ಟೈಟಲ್ ಕಾರ್ಡ್: ಮತ್ತೆ ಆರಂಭ?

ಬೆಂಬಲಿಗರ ಒತ್ತಾಯ ಎಂಬ ಸಬೂಬು. ಉಪ ಮುಖ್ಯಮಂತ್ರಿ ಆಗುವ ಹೆಬ್ಬಯಕೆ. ಯಾರಿಗೂ ಪೈಸೆಯಷ್ಟೂ ಲಾಭ ವಿಲ್ಲದ ಸ್ಪೀಕರ್ ಹುದ್ದೆ ಬೇಡ. ಹಾಗೂ ಹೀಗೂ ಮೊದಲ ಪಟ್ಟಿಯ ಒಂದಷ್ಟು ಜನರ ಆಯ್ಕೆಯಾದ ನಂತರ ಮುಖ್ಯಮಂತ್ರಿಯೊಂದಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿದ ಕ್ಷಣವೇ ಉತ್ತಮ ಖಾತೆಗಾಗಿ ಹೋರಾಟ.

ಓದುಗರ ಓಣಿ

ನೀ ಕೊಡೆ ನಾ ಬಿಡೆ ಕೊಸರಾಟದಲ್ಲಿ ಅಂತೂ ಇಂತೂ ಅನಿವಾರ್ಯತೆಗೆ ತಲೆಬಾಗಿ ಸಿದ್ದರಾಮಯ್ಯನವರು, ಪಟ್ಟು ಬಿಡದ ತ್ರಿವಿಕ್ರಮ ಡಿಕೆಶಿಯವರಿಗೆ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟುಕೊಟ್ಟಿದ್ದಾರೆ. ಹೈಕಮಾಂಡ್ ಕೂಡ ನಿಟ್ಟುಸಿರುಬಿಟ್ಟಿದೆ. ಆದರೆ, ಇನ್ನೊಂದೆಡೆ ರೆಸಾರ್ಟ್ ರಾಜಕೀಯ ನಡೆಯದೇ ಹೋದರೂ ಗುಪ್ತ ಚಟುವಟಿಕೆಗಳು ಅವಿರತವಾಗಿ ಸಾಗಿವೆ. ಎಲ್ಲ ಶಾಸಕರೂ ಮೇಲ್ನೋಟಕ್ಕೆ ತ್ಯಾಗಿ, ಒಳಗೊಳಗೆ ಸಚಿವ ಪಟ್ಟಕ್ಕೆ ಟವೆಲ್!

ಅನುಯಾಯಿಗಳನ್ನು ಛೂ ಬಿಟ್ಟು ಪರೇಡ್ ನಡೆಸಿ ಸಚಿವ ಪದವಿಗೆ ತಮ್ಮನ್ನೇ ಪರಿಶೀಲಿಸಲು ಒತ್ತಾಯ! ವ್ಯಕ್ತಿಯ ಸಾಮರ್ಥ್ಯ, ದಕ್ಷತೆಗಿಂತಲೂ ತಮ್ಮ ಸಮುದಾಯ, ಜಾತಿ, ಪಂಗಡಗಳದ್ದೇ ಹೆಗ್ಗಳಿಕೆ. ತಮಗೆ ಆಕಾಂಕ್ಷೆಯಿಲ್ಲ. ಬೆಂಬಲಿಗರ ಒತ್ತಾಯ ಎಂಬ ಸಬೂಬು. ಉಪ ಮುಖ್ಯಮಂತ್ರಿ ಆಗುವ ಹೆಬ್ಬಯಕೆ. ಯಾರಿಗೂ ಪೈಸೆಯಷ್ಟೂ ಲಾಭ ವಿಲ್ಲದ ಸ್ಪೀಕರ್ ಹುದ್ದೆ ಬೇಡ. ಹಾಗೂ ಹೀಗೂ ಮೊದಲ ಪಟ್ಟಿಯ ಒಂದಷ್ಟು ಜನರ ಆಯ್ಕೆಯಾದ ನಂತರ ಮುಖ್ಯಮಂತ್ರಿಯೊಂದಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿದ ಕ್ಷಣವೇ ಉತ್ತಮ ಖಾತೆಗಾಗಿ ಹೋರಾಟ.

ಇದನ್ನೂ ಓದಿ: Readers Colony: ಬೆಂಗಳೂರಿನ ಅಂದಗೆಡಿಸುವವರು

ಕಮಾಯಿ ಜಾಸ್ತಿ ಇರುವ ಖಾತೆಗೆ ಬಿಡ್. ಎಲ್ಲ ಸಚಿವರ ಆಯ್ಕೆ ಮುಗಿದ ನಂತರ ಸನ್ಮಾನ ಗಳ, ಹಾರ ತುರಾಯಿಗಳ ಮೆರವಣಿಗೆ. ಈಗ ಹೊಸ ಸಚಿವರಿಗೆ ಸರಕಾರಿ ಮನೆಗಳ ವಿತರಣೆ ಯ ಸಮಯ. ನನಗದೇ ಬೇಕು. ನನಗಿದೇ ಬೇಕು ಕಲರವ, ಕಲಹ. ಹೊಸ ಕಾರುಗಳ ವಿತರಣೆ.

ನಿಗಮಗಳು, ಸಮಿತಿಗಳಿಗೆ ತಮಗೆ ಬೇಕಾದವರನ್ನು ತಂದು ತಮ್ಮ ಪಕ್ಕ ಕೂರಿಸುವಿಕೆ. ಅಷ್ಟರಲ್ಲಾಗಲೇ ಇನ್ನಾರು ತಿಂಗಳು ಮುಗಿದಿರುತ್ತದೆ. ರಾಜ್ಯದ ಹಣಕಾಸು ಪರಿಸ್ಥಿತಿ, ಯೋಜನೆಗಳು, ಮಾಡಬೇಕಾದ ಕೆಲಸಗಳಿಗೆ ಉಳಿದ 18 ತಿಂಗಳು ಸಾಕೇ? ಇವರ ಇಷ್ಟೆಲ್ಲ ರಾಜಕೀಯ ಆಟಕ್ಕೇ ಕೋಟಿಗಟ್ಟಲೆ ಹಣ ವ್ಯಯವಾದರೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಎಲ್ಲಿ ಸ್ವಾಮಿ? ಈ ಪ್ರಶ್ನೆ ಕೇಳುವ ಹಕ್ಕು ನಮಗಿದೆ. ಏಕೆಂದರೆ ಹಲವು ಕಷ್ಟಗಳ ನಡುವೆ ಕೈಗೊಂದು ಕಾಲಿಗೊಂದು ಎಂದು ಸರಕಾರ ವಿಧಿಸಿರುವ ತೆರಿಗೆಗಳನ್ನು ನಿಯತ್ತಿನಿಂದ ಪಾವತಿಸುತ್ತಿರುವ ಬಡಪಾಯಿ ತೆರಿಗೆದಾರ ನಾನು!

- ಕೆ. ಶ್ರೀನಿವಾಸರಾವ್, ಹರಪನಹಳ್ಳಿ

ಐಪಿಎಲ್: ಆರ್‌ಸಿಬಿ ಗೆಲುವು

ಆರ್‌ಸಿಬಿ ಮತ್ತೊಮ್ಮೆ ಜಯಭೇರಿ ಹೊಡೆದಿದೆ. ಅಷ್ಟೇ ಅಲ್ಲ, ಕರ್ನಾಟಕದ ಗಲ್ಲಿ-ಗಲ್ಲಿ ಯಲ್ಲಿ ಸಂಭ್ರಮಾಚರಣೆ! ಐಪಿಎಲ್ ಶುರುವಾದಾಗಿನಿಂದ ‘ಈ ಬಾರಿ ಆರ್‌ಸಿಬಿ’ ಸ್ಲೋಗನ್ ಮೊಳಗತ್ತಲೇ ಇದೆ. ಕರ್ನಾಟಕದ ತುಂಬೆಲ್ಲ ಅದೇನು ಉತ್ಸಾಹ, ಸಂತೋಷ! ವಿಷಯ ಅದಲ್ಲವೇ ಅಲ್ಲ. ಇಷ್ಟೊಂದು ದೊಡ್ಡ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ ಪಡೆಯುವು ದೆಂದರೆ ಸಣ್ಣ ವಿಷಯ ಅಲ್ಲವೇ ಅಲ್ಲ. ಅದಕ್ಕಾಗಿ ಈ ಸಂಭ್ರಮ. ಆದರೆ, ರಾಯಲ್ ಚಾಲೇಂಜರ್ಸ್ ಬೆಂಗಳೂರಿನಲ್ಲಿ, ಬೆಂಗಳೂರಿನ ಅಥವಾ ಕರ್ನಾಟಕದ ಎಷ್ಟು ಆಟಗಾರರು ಇದ್ದಾರೆ ಎಂಬುದನ್ನು ಅರಿತಾಗ, ನಿರಾಶೆ ಹುಟ್ಟುತ್ತದೆ.

ಹೆಸರಿಗಷ್ಟೇ ಬೆಂಗಳೂರು. ಈ ಆಟಗಾರರೆಲ್ಲ ಹರಾಜಿನಲ್ಲಿ ಬಿಕ್ರಿ ಆದವರು. ಈ ಪ್ರಕ್ರಿಯೆ ಯಲ್ಲಿ ಯಾವ ರಾಜ್ಯದ ಆಟಗಾರರು ಇನ್ನಾರ ತೆಕ್ಕೆ ಸೇರುತ್ತಾರೆಂಬುದು ನಿರ್ಣಯವಾಗು ವುದೂ ಅವರೆಷ್ಟು ಮೊತ್ತಕ್ಕೆ ಮಾರಾಟವಾಗಿದ್ದಾರೆ ಎಂಬುದನ್ನು ಅವಲಂಬಿಸಿರುವಾಗ, ಇನ್ನಾವ ಕ್ಲೇಮ್ ಕೆಲಸಕ್ಕೇ ಬರದು. ಹೀಗಾಗಿ ಬೆಂಗಳೂರು ತಂಡದ ಮಾಲಿಕ, ಇಲ್ಲಿಯ ಆಟಗಾರರಿಗೆ ಹೆಚ್ಚು ಮೊತ್ತ ಕೊಡಲು ಸಿದ್ಧನಾಗದ್ದರಿಂದ ಎಲ್ಲೇ ಹಂಚಿ ಹೋಗಿದ್ದರೂ, ತಂಡ ಮಾತ್ರ ಬೆಂಗಳೂರು ಹೆಸರು ಉಳಿಸಿಕೊಂಡಿದೆ.

ಇನ್ನೂ ಚೋದ್ಯ ಅಂದರೆ, ಐಪಿಎಲ್ ಪ್ರಾರಂಭವಾದಾಗ, ಕಿಂಗ್ ಫಿಶರ್ ಮಾಲಿಕ ಮಲ್ಯ, ತನ್ನ ಕಂಪನಿಯ ಹೆಸರು ‘ರಾಯಲ್ ಚಾಲೆಂಜರ್ಸ್’ ಎಂದು ಇಟ್ಟಿದ್ದ. ಆದರೆ, ದುರದೃಷ್ಟ, ಈಗ ಆ ವ್ಯಕ್ತಿಯೇ ತಲೆ ಮರೆಸಿಕೊಂಡು ವಿದೇಶದಲ್ಲಿ ವಾಸವಾಗಿದ್ದಾನೆ. ಆದರೂ ಹೆಸರು ಅದೇ ಇದೆ. ಆಟದಲ್ಲಿ ಗೆದ್ದಾಗ ಸಂತೋಷಪಡುವುದೂ ಸಹಜ. ಆದರೆ, ನಮ್ಮವರೇ ಇಲ್ಲದ ನಮ್ಮ ತಂಡ ಗೆದ್ದಾಗ ಇಷ್ಟೊಂದು ಬೀಗುವುದು ಸರಿಯೇ? ಇದಕ್ಕೆ ಪರಿಹಾರ ಮುಂದಿನ ದಿನಗಳಲ್ಲಿ ಸಿಗಬಹುದೇ?

- ಶಂಕರನಾರಾಯಣ ಭಟ್, ಮಾಡಗೇರಿ, ಹೊನ್ನಾವರ

ಯುವ ಜನರಿಗೆ ಸಿಗಲಿ ಆದ್ಯತೆ

ಬುಧವಾರ ರಚನೆ ಆಗಲಿರುವ ಡಿಕೆ ಶಿವಕುಮಾರ್ ನೇತೃತ್ವದ ನೂತನ ಮಂತ್ರಿ ಮಂಡಲ ದಲ್ಲಿ ಯುವ ಪಡೆ ಒಳಗೊಂಡ ಸಂಪುಟಕ್ಕೆ ಪ್ರಾಮುಖ್ಯತೆಯ ಅವಕಾಶ ಕಲ್ಪಿಸಬೇಕಿದೆ. ಯಾವುದೇ ಸರಕಾರಿ ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ಭ್ರಷ್ಟಾಚಾರ ರಹಿತ, ಸಾರ್ವ ಜನಿಕರಿಗೆ ಸದಾ ಸ್ಪಂದಿಸುವ ನಿಷ್ಠೆ, ಬದ್ಧತೆ ತೋರುವ ಗುಣ ಇರುವ ಯುವ ಉತ್ಸಾಹಿ ಹೊಸ ಮುಖಗಳಿಗೆ ಮಣೆ ಹಾಕಬೇಕಿದೆ. ಕಳೆದ ಮೂರು ವರ್ಷಗಳ ಸಿದ್ದರಾಮಯ್ಯ ಅವಧಿ ಯಲ್ಲಿ ಬಹುತೇಕರು 60 ವರ್ಷ ಮೀರಿದವರೆ ಸಚಿವರಾಗಿದ್ದರು ಇದು ಉಳಿದ ಎರಡು ವರ್ಷಕ್ಕೂ ಪುನರಾವರ್ತನೆ ಆಗಬಾರದು. ಏಕೆಂದರೆ, ಇವರುಗಳಿಂದ ಹೆಚ್ಚಿನ ಗುಣಮಟ್ಟದ ಕಾರ್ಯಕ್ಷಮತೆ ಬಯಸಲು ಅಸಾಧ್ಯ. ಸಾರ್ವವಜನಿಕರ ಸಮಸ್ಯೆಗಳನ್ನು ಕುಂತ ನಿಂತ ಪರಿಹರಿಸುವ ಮೂಲಕ ಅತ್ಯಂತ ಹೆಚ್ಚು ಉತ್ಸಾಹಿಯಾಗಿ ಜನರ ನಡುವೆ ಬೆರೆಯುವ ಸರಳತೆಯಿಂದ ಆಲಿಸುವ ರಾಜ್ಯಾದ್ಯಂತ ಪಾದರಸದಂತೆ ಜನರ ಸಮಸ್ಯೆ ಗಳನ್ನು ಆಲಿಸುವ ಯುವ ಉತ್ಸಾಹಿ ನಾಯಕರು ಸಚಿವರಾಗಬೇಕು. ಸದ್ಯ, ನೆರೆಯ, ತಮಿಳುನಾಡಿನಲ್ಲಿ ನೂತನ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಟಿವಿಕೆ ನೇತೃತ್ವದ ಮಂತ್ರಿ ಮಂಡಲ ಯುವ ಪಡೆ ಒಳಗೊಂಡ ಸಂಪುಟ ಶೈಲಿಯ ಸರಕಾರದ ಕಾರ್ಯ ವೈಖರಿಯ ಶೈಲಿ ಇಡೀ ದೇಶಕ್ಕೆ ಮಾದರಿ ಆಗಿ ಯುವ ಜನರ ಆಶೋತ್ತರಗಳಿಗೆ ಕಾರ್ಯ ನಿರ್ವಹಿಸುತ್ತಿದೆ.

ಬಹುತೇಕರು 40 ವರ್ಷ ವಯಸ್ಸಿನ ಒಳಗಿನವರಾಗಿದ್ದು ನಿಜಕ್ಕೂ ಇದು ಶ್ಲಾಘನೀಯ. ಜನರ ನಡುವಿನ ಕೊಂಡಿಯಾಗಿ ಸಮಸ್ಯೆಗಳನ್ನು ಪರಿಹರಿಸುವ ಹಗಲಿರುಳು ಕೆಲಸ ಮಾಡುವ ಯುವ ಶಾಸಕರನ್ನು ಗುರುತಿಸಿ ಸಚಿವರಾಗಿ ಮಾಡಿದರೆ ರಾಜ್ಯದ್ಯಂತ ಇನ್ನಷ್ಟು ಜನಪರ ಕೆಲಸ ಕಾರ್ಯಗಳನ್ನು ಮಾಡಲು ಪ್ರಯೋಜನವಾಗಲಿದೆ. ಸಚಿವ ಸ್ಥಾನ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಕಿರಿಯ ಶಾಸಕರುಗಳಿಗೆ ಆದ್ಯತೆ ಸಿಗಲಿ.

- ಅನಿಲ್ ಕುಮಾರ್, ನಂಜನಗೂಡು

ಬ್ರಹ್ಮಾನಂದಂ ಪುಸ್ತಕ ನಿರೀಕ್ಷೆ

ಈ ವಾರದ ವಿಶ್ವವಾಣಿ ವಿರಾಮ ಪುರವಣಿ ಕೈಗೆತ್ತಿಕೊಳ್ಳುತ್ತಿದ್ದಂತೆ ಕಣ್ಣಿಗೆ ಬಿದ್ದಿದ್ದು ವಿಶ್ವೇಶ್ವರ ಭಟ್ಟರ ಬ್ರಹ್ಮಾನಂದಂ ಪುಸ್ತಕದ ಆಯ್ದ ಭಾಗ ‘ಅಳುವ ಕಡಲೊಳು ತೇಲಿ ಬಂದ ನಗೆಯ ಹಾಯಿ ದೋಣಿ’. ಕಳೆದೊಂದು ವಾರದಿಂದ ವಿಶ್ವವಾಣಿ ಪತ್ರಿಕೆಯಲ್ಲಿ ‘ನಾನು ನಿಮ್ಮ ಬ್ರಹ್ಮಾನಂದಂ’ ಪುಸ್ತಕದ ಬಗೆಗಿನ ಪ್ರಚಾರ ಕುತೂಹಲ ಕೆರಳಿಸಿತ್ತು. ಭಟ್ಟರು ಹೇಗೆ ಅನುವಾದಿಸಿದ್ದಾರೋ? ಅನುವಾದಕ್ಕೆ ಸೂಕ್ತ ಆಯ್ಕೆ ಅಂತ ತೀರ್ಮಾನಿಸಿ ಎತ್ತಿಕೊಳ್ಳುವಾಗ ಮೂಲ ಕೃತಿ ಓದುಗರಲ್ಲಿ ಆಸಕ್ತಿ ಹುಟ್ಟಿಸಿಕೊಂಡು ಓದಲು ಪ್ರೇರೇಪಿಸುತ್ತದೆ ಮತ್ತೆ ಅಪಾರ ಓದುಗರನ್ನು ಆಕರ್ಷಿಸುವಷ್ಟು ಹೂರಣ ಈ ಕತೆಯಲ್ಲಿದೆ ಎನ್ನುವ ತೀರ್ಮಾನಕ್ಕೆ ಬಂದು ಭಟ್ಟರು ಅನುವಾದಕ್ಕೆ ಎತ್ತಿಕೊಂಡಿದ್ದಾರೆ ಮತ್ತು ಭಟ್ಟರ ಆಯ್ಕೆ ಯಾವತ್ತೂ ತೂಕ ದ್ದಾಗಿರುತ್ತದೆ ಅನ್ನುವ ಕುತೂಹಲದಿಂದಲೇ ಲೇಖನ ಓದಲು ಶುರುವಿಟ್ಟರೆ ಕೊನೆಯ ಪದದವರೆಗೂ ಬಿಡದೇ ಓದಿಸಿಕೊಂಡು ಹೋಯಿತು. ಇಷ್ಟೊಂದು ಬಿಡವಿಲ್ಲದ ಕೆಲಸಗಳ ನಡುವೆ ಭಟ್ಟರು ಜಿತದಲ್ಲಿ ಕುಳಿತು ಅನುವಾದ ಮಾಡಿದುದರ ಬಗ್ಗೆ ಅಸೂಯೆ, ಹೊಟ್ಟೆ ಕಿಚ್ಚಿಗಿಂತ ಹೆಚ್ಚಾಗಿ ಮೆಚ್ಚುಗೆ ತೂಕ ಜಾಸ್ತಿ ಆಗಿ ಈ ನಾಲ್ಕು ಸಾಲುಗಳು.

- ರಾಘವೇಂದ್ರ ಎಸ್. ಮೈಸೂರು