ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Readers Colony: ಇವರಿಗೇಕೆ ಭಾರತ ರತ್ನವಿಲ್ಲ?

‘ಭಾರತ ರತ್ನ’ ಪ್ರಶಸ್ತಿ ವಿಷಯ ತಿಳಿದೇ ಇದೆ. ಯಾವುದೇ ಒಂದು ಕ್ಷೇತ್ರದಲ್ಲಿ ಅಭೂತ ಪೂರ್ವ ಸೇವೆ ಅಥವಾ ಸಾಧನೆ ಮಾಡಿದವರಿಗೆ ಸಲ್ಲುವ ಗೌರವ ಇದು. ಇದು ಪ್ರಾರಂಭವಾಗಿದ್ದು 1954ರಲ್ಲಿ. ಇಲ್ಲಿಯ ತನಕ 53 ಜನರಿಗೆ ಈ ಗೌರವ ನೀಡಲಾಗಿದೆ. ಅವುಗಳಲ್ಲಿ 35- 38 ರಾಜಕಾರಣಿಗಳಿಗೆ, 6-7 ಸಿನಿಮಾ ನಟ-ನಟಿಯರಿಗೆ, ಸಂಗೀತಗಾರರಿಗೆ, ವಿಜ್ಞಾನಿಗಳಿಗೆ, ಸಮಾಜ ಸೇವಕರಿಗೆ, ಕ್ರಿಕೆಟಿಗರಿಗೆ. ಆದರೆ ಕೇವಲ ಒಂದೇ ಒಂದು ಪ್ರಶಸ್ತಿ ಉದ್ಯಮಿಗೆ ಸಂದಿದೆ ಅದು ಜೆಆರ್‌ಡಿ ಟಾಟಾ ಅವರಿಗೆ !!

ಓದುಗರ ಓಣಿ

ಈಗ ಕೆಲ ದಿನಗಳ ಹಿಂದಷ್ಟೇ ಹರಿದಾಡಿದ ಸಾಮಾಜಿಕ ಜಾಲತಾಣದ ಸುದ್ದಿ, ನಿಜಕ್ಕೂ ಆಶ್ಚರ್ಯ ಕಾರಕವಷ್ಟೇ ಅಲ್ಲ,ಆಘಾತಕಾರಿಯೂ ಹೌದು.

‘ಭಾರತ ರತ್ನ’ ಪ್ರಶಸ್ತಿ ವಿಷಯ ತಿಳಿದೇ ಇದೆ. ಯಾವುದೇ ಒಂದು ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆ ಅಥವಾ ಸಾಧನೆ ಮಾಡಿದವರಿಗೆ ಸಲ್ಲುವ ಗೌರವ ಇದು. ಇದು ಪ್ರಾರಂಭವಾಗಿದ್ದು 1954ರಲ್ಲಿ. ಇಲ್ಲಿಯ ತನಕ 53 ಜನರಿಗೆ ಈ ಗೌರವ ನೀಡಲಾಗಿದೆ. ಅವುಗಳಲ್ಲಿ 35- 38 ರಾಜಕಾರಣಿಗಳಿಗೆ, 6-7 ಸಿನಿಮಾ ನಟ-ನಟಿಯರಿಗೆ, ಸಂಗೀತಗಾರರಿಗೆ, ವಿಜ್ಞಾನಿಗಳಿಗೆ, ಸಮಾಜ ಸೇವಕರಿಗೆ, ಕ್ರಿಕೆಟಿಗರಿಗೆ. ಆದರೆ ಕೇವಲ ಒಂದೇ ಒಂದು ಪ್ರಶಸ್ತಿ ಉದ್ಯಮಿಗೆ ಸಂದಿದೆ ಅದು ಜೆಆರ್‌ಡಿ ಟಾಟಾ ಅವರಿಗೆ !!

ಇದೆಂತಹ ವಿಪರ್ಯಾಸ ಅಂತ ಅನಿಸುತ್ತಿಲ್ಲವೆ ? ದೇಶದ ಆರ್ಥಿಕ ಬುನಾದಿ, ಉದ್ಯೋಗಸೃಷ್ಟಿ, ಅವಕಾಶಗಳನ್ನು ಕಲ್ಪಿಸಿದ, 6 ಮಿಲಿಯನ್ ಉದ್ಯೋಗ, ಶೇ.6ರ ಜಿಡಿಪಿ, 250 ಬಿಲಿಯನ್ ಡಾಲರ್ ಆದಾಯ ತಂದ ಕೇವಲ ಬೆಂಗಳೂರು ಒಂದರ ಮೂವರು ಉದ್ಯಮಿಗಳಿಗೆ ಇನ್ನೂ ಈ ಪ್ರಶಸ್ತಿ ಲಭಿಸಿಲ್ಲ. ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಕಂಪನಿಗಳ ಕೊಡುಗೆಯನ್ನು ಯಾರಾದರೂ ನಿರ್ಲಕ್ಷ ಮಾಡಲು ಸಾಧ್ಯವೆ ? ಇಷ್ಟಾದರೂ, ಈ ಪ್ರಶಸ್ತಿ ಕಮಿಟಿಗೆ ಇವರಾರೂ ಕಣ್ಣಿಗೆ ಬೀಳಲಿಲ್ಲವೇಕೆ ? ಅದೇ, ಕೇವಲ ಮತ ಬ್ಯಾಂಕ್ ಹೆಚ್ಚಿಸಿ, ಅಧಿಕಾರ ಗಿಟ್ಟಿಸಿಕೊಂಡು, ತಮ್ಮ ಆದಾಯ ಹೆಚ್ಚಿಸಿಕೊಂಡ ರಾಜಕಾರಣಿಗಳಿಗೆ ಇಷ್ಟೊಂದು ಮಹತ್ವದ ಪ್ರಶಸ್ತಿ ಕೊಟ್ಟಿರುವ ಉದ್ದೇಶ ಯಾರಿಗಾದರೂ ಅರ್ಥವಾದೀತೆ ? ಉದ್ಯಮಿ ಅಂದರೆ ಕೇವಲ ಹಣ ಸಂಪಾದಿಸುವವ ಎಂಬ ತಪ್ಪು ಕಲ್ಪನೆ ನಮ್ಮವರದ್ದಾಗಿದೆ.

ಇದನ್ನೂ ಓದಿ: Readers Colony: ಮುಖ್ಯ ರಸ್ತೆಗೆ ಕಾಯಕಲ್ಪ ಬೇಕಾಗಿದೆ!

ಅವರಿಂದ ರಾಜ್ಯಕ್ಕೆ, ದೇಶಕ್ಕೆ ಏನೆಲ್ಲ ಕೊಡುಗೆ ಸಲ್ಲುತ್ತಿದೆ ಎಂಬುದು ಗಣನೆಗೇ ಬಾರದಿರುವುದು ನಿಜಕ್ಕೂ ಬೇಸರದ ಸಂಗತಿ. ಕೇವಲ ಬೆಂಗಳೂರು ಅಥವಾ ಕರ್ನಾಟಕವೊಂದನ್ನೇ ತೆಗೆದುಕೊಂಡರೆ, ನಾರಾಯಣ ಮೂರ್ತಿ, ಸುಧಾ ಮೂರ್ತಿ, ಅಜಿತ್ ಪ್ರೇಮ್ ಜೀ, ಎಫ್.ಸಿ.ಕೊಹ್ಲಿ ಇವರುಗಳ ಯೋಗ ದಾನವನ್ನು ಅನುಲಕ್ಷಿಸಿ ಅವರಿಗೂ ‘ಭಾರತ ರತ್ನ’ ಸಿಗುವಂತಾದರೆ, ಪ್ರಶಸ್ತಿಯ ಮೌಲ್ಯವೂ ವೃದ್ಧಿ ಆದೀತು. ‌

ನಮ್ಮಲ್ಲಿ ಅದೆಷ್ಟೋ ಉದ್ಯಮಿಗಳು, ತಮಗಾಗಿಯಷ್ಟೇ ಇರದೆ, ರಾಜ್ಯದ/ ದೇಶದ ಅಭ್ಯದಯದ ಬಗ್ಗೂ ವಿಚಾರಿಸುತ್ತಿರುವಾಗ, ಅಂಥವರ ಶ್ರಮ, ಕೊಡುಗೆಯನ್ನೂ ಪರಿಗಣಿಸಲೇ ಬೇಕಲ್ಲವೆ ? 1954ರಿಂದ ಇಲ್ಲಿಯ ತನಕ ಕೇವಲ ಒಬ್ಬ ಉದ್ಯಮಿಗೆ ನೀಡಿದ್ದು ವ್ಯವಸ್ಥೆಯ ಅಣಕು ಅಂತಲೂ ಅನಿಸುತ್ತಿದೆ. ಪ್ರಶಸ್ತಿ ಆಯ್ಕೆ ಸಮಿತಿ ಇನ್ನು ಮುಂದಾದರೂ, ಉದ್ಯಮ ಕ್ಷೇತ್ರಕ್ಕೂ ಇಂತಹ ಪ್ರಶಸ್ತಿ ಕೊಡುವಂತಾಗಿ, ಅವರ ಮನೋಬಲ ಹೆಚ್ಚಿಸುವಂತಾಗಲಿ!

-ಶಂಕರನಾರಾಯಣ ಭಟ್, ಮಾಡಗೇರಿ, ಹೊನ್ನಾವರ

ಸಿಎಂ ಸಲಹೆ ಸೂಕ್ತವಾದದ್ದು!

ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಬೀದರದಲ್ಲಿ ಶನಿವಾರದಂದು ಉದ್ಘಾಟನೆಗೊಂಡ ರಾಜ್ಯ ಮಟ್ಟದ ಪತ್ರಕರ್ತರ ಸಮೇಳನ ಉದ್ಘಾಟಿಸಿ ಮಾತನಾಡುತ್ತಾ ಊಹಾ ಪತ್ರಿಕೋದ್ಯಮ ಅಪಾಯ ಕಾರಿಯಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯಮಂತ್ರಿಗಳ ಸಲಹೆ ಉಪಯುಕ್ತವಾದುದು. ಏಕೆಂದರೆ, ಇತ್ತಿಚಿನ ದಿನಗಳಲ್ಲಿ ಪ್ರಿಂಟ್ ಹಾಗೂ ದೃಶ್ಯ ಮಾಧ್ಯಮಗಳು ಕೆಲವು ಕ್ಷುಲ್ಲಕ ಸುದ್ದಿಗಳನ್ನು ದಿನವಿಡೀ ಬಿತ್ತರಿಸುವ ಮಾಧ್ಯಮಗಳು ಅದರ ಅಡ್ಡ ಪರಿಣಾಮದ ಬಗ್ಗೆಯೂ ಯೋಚನೆ ಮಾಡುವುದು ಅವಶ್ಯ.

ಮಾಧ್ಯಮಗಳು ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂಥ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಸಾಮಾನ್ಯವಾಗುತ್ತಿರುವುದು ವಿಷಾದದ ಸಂಗತಿ. ಸದಾಕಾಲ ಸಮಾಜ ದ ಒಳಿತಿಗಾಗಿ ಮಾಧ್ಯಮಗಳು ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂಥ ಸುದ್ದಿಗಳನ್ನು ಪ್ರಕಟಿಸಿ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡಬಾರದು ಎಂಬ ಮುಖ್ಯಮಂತ್ರಿಗಳ ಸಲಹೆ ಉಪಯುಕ್ತವಾದುದು.

-ವಿ.ಜಿ.ಇನಾಮದಾರ.ಸಾ:ಸಾರವಾಡ.

ಒರಟುಸೂತ್ರಗಳ ಅರ್ಥಾನರ್ಥಗಳು

ಕಳೆದ ವಾರವಷ್ಟೇ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮೇಲಿನ ಸ್ಥಾನಗಳನ್ನು ಗಳಿಸಿವೆ. ಈ ಜಿಗಳು ಸತತವಾಗಿ ಪರೀಕ್ಷೆಗಳಲ್ಲಿ ಒಳ್ಳೆಯ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಿರುವುದರಿಂದ ವಿದ್ಯಾವಂತರ ಬುದ್ಧಿವಂತರ ಜಿಲ್ಲೆಗಳೆಂದು ಹೆಸರು ಪಡೆದಿವೆ. ಅದು ಸರಿಯೇ.

ಆದರೆ ಬೇರೆ ಎರಡು ಮಾನದಂಡಗಳನ್ನು ಇಟ್ಟುಕೊಂಡು ನೋಡಿದರೆ ಹೇಗೆ ತೋರುತ್ತದೆ ಗಮನಿಸೋಣ:

  1. ಭಾರತದ ಸರ್ವೋನ್ನತ ಪ್ರಶಸ್ತಿ ಭಾರತ ರತ್ನ. ಕರ್ನಾಟಕದ ಮೂವರಿಗೆ ಈ ಪ್ರಶಸ್ತಿ ಬಂದಿದೆ: ವಿಶ್ವೇಶ್ವರಯ್ಯ, ಭೀಮಸೇನ್ ಜೋಶಿ, ಮತ್ತು ಸಿಎನ್‌ಆರ್ ರಾವ್ ಇವರಲ್ಲಿ ಯಾರೂ ಕರಾವಳಿಯವರಲ್ಲ!
  2. ಅಂತೆಯೇ, ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ದೇಶದಲ್ಲಿ ಸರ್ಕಾರದಿಂದ ಸಲ್ಲುವ ಸರ್ವೋತ್ಕೃಷ್ಟ ಗೌರವವೆಂದರೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್. ಅದು ಇದುವರೆಗೂ ಕನ್ನಡದ ಹತ್ತು ಜನ ಸಾಹಿತಿಗಳಿಗೆ ಲಭಿಸಿದೆ: ಬೇಂದ್ರೆ, ಮಾಸ್ತಿ, ಕುವೆಂಪು, ಕಾರಂತ, ಗೋಕಾಕ, ಪುತಿನ, ಕೆ ಎಸ್ ನರಸಿಂಹ ಸ್ವಾಮಿ, ಅನಂತಮೂರ್ತಿ, ಭೈರಪ್ಪ, ಮತ್ತು ಕಂಬಾರ. ಇವರಲ್ಲಿ ಕಾರಂತ ರೊಬ್ಬರೆ ಕರಾವಳಿಯವರು. ‌ಪಿಯುಸಿ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಬುದ್ಧಿವಂತರ ಜಿಲ್ಲೆಗಳೆಂದರೆ, ಮೇಲೆ ಹೇಳಿದ ಬೇರೆ ಎರಡು ಮಾನದಂಡ ಗಳಿಂದ ನೋಡಿದರೆ ಅವುಗಳನ್ನು ಆ ಸ್ಥಾನದಿಂದ ಇಳಿಸಬೇಕಾಗುತ್ತದೆ!

ಬೆಂಗಳೂರು ಮೈಸೂರುಗಳನ್ನು ಅಲ್ಲಿ ಕೂರಿಸಬೇಕಾಗುತ್ತದೆ. ವಿಷಯ ಇಷ್ಟೇ: ನಾವು ನಿತ್ಯ ವ್ಯವಹಾರದಲ್ಲಿ ಅಗಾಗ ಸಿಗುವ ಮಾಹಿತಿಗಳ ಆಧಾರದ ಮೇಲೆ ಆಯಾ ಹೊತ್ತಿಗೆ ತೋಚಿದಂತೆ ನಮ್ಮ ರಾಗದ್ವೇಷಗಳನ್ನೂ ಕೊಂಚ ಬೆರೆಸಿ ಹತ್ತಾರು ಒರಟುಸೂತ್ರಗಳನ್ನು (heuristics) ರಚಿಸಿ ಕೊಳ್ಳುತ್ತಿರುತ್ತೇವೆ.

ಲೋಕವನ್ನು ಸ್ವಲ್ಪಮಟ್ಟಿಗಾದರೂ ಅರ್ಥಮಾಡಿಕೊಳ್ಳಲು ಈ ಸೂತ್ರಗಳು ಒದಗಿಬರುತ್ತವೆ. ಅದರ ಜೊತೆಗೆ, ಇಂತಹ ಕೆಲವು ಒರಟುಸೂತ್ರಗಳಿಗೆ ಸುತ್ತಲ ಜನರ ಒಪ್ಪಿಗೆಯೂ ಸಿಕ್ಕಿಬಿಡುತ್ತದೆ. ಆಗ ನಾವು ದುಡುಕಿ ನಮ್ಮ ಒರಟುಸೂತ್ರಗಳೇ ಪರಮ ಸಿದ್ಧಾಂತಗಳು ಎಂದು ಭ್ರಾಂತರಾಗಿ ಬಿಡುತ್ತೇವೆ.

ಆ ಭ್ರಾಂತಿ ಆ ಸೂತ್ರಗಳನ್ನು ಪುನಃ ಪರಿಶೀಲಿಸಲು ಬಿಡುವುದೇ ಇಲ್ಲ ಅನೇಕ ವೇಳೆ. ಹಿಂದೆ ಹೇಳಿದ ಹಾಗೆ ಈ ಸೂತ್ರಗಳ ರಚನೆಯಲ್ಲಿ ನಿಜವಾದ ಮಾಹಿತಿಗಳ ಜೊತೆ ಒಂದಷ್ಟು ರಾಗದ್ವೇಷಗಳೂ ಬೆರೆತುಕೊಂಡು ಬಿಟ್ಟಿರುತ್ತವೆ. ಒರಟುಸೂತ್ರಗಳ ಪುನಃ ಪರಿಶೀಲನೆ ನಡೆಯದಿದ್ದಾಗ ಆ ರಾಗದ್ವೇಷ ಗಳೂ ಸಿದ್ಧಾಂತದ ಹೆಸರಿನಲ್ಲಿ ಸತ್ಯದ ಹೆಸರಿನಲ್ಲಿ ನಮ್ಮನ್ನು ಆಡಿಸುತ್ತಿರುತ್ತವೆ.

ಹಾಗಾಗಿ ಒರಟುಸೂತ್ರಗಳನ್ನು ಬಳಸುವಾಗ ಅವುಗಳ ವ್ಯವಹಾರ ಸೌಲಭ್ಯದ ಜೊತೆ ಅವುಗಳಲ್ಲಿರ‌ ಬಹುದಾದ ಭ್ರಾಂತಿಗಳ ಬಗ್ಗೆಯೂ ನಮ್ಮ ಗಮನ ಇರಬೇಕು. ಈ ಗಮನ ಇಲ್ಲದಿರುವುದರಿಂದಲೇ ಅನೇಕ ಅತಿವಾದಗಳು ಹುಟ್ಟುವುದು. ಅತಿವಾದಗಳಿಂದಲೇ ಲೋಕದ ಶಾಂತಿ ಕೆಡುವುದು.

-ಜಿ.ಎಲ್.ಕೃಷ್ಣ, ಬೆಂಗಳೂರು