Major Stampedes This Year: ಕರ್ನಾಟಕ, ಆಂಧ್ರ ಪ್ರದೇಶ, ಉತ್ತರ ಪ್ರದೇಶ; ಈ ವರ್ಷ ದೇಶದಲ್ಲಿ ಸಂಭವಿಸಿದ ಪ್ರಮುಖ ಕಾಲ್ತುಳಿತ ದುರಂತಗಳಿವು
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ದೇವಸ್ಥಾನದಲ್ಲಿ ನವೆಂಬರ್ 1ರಂದು ನಡೆದ ಕಾಲ್ತುಳಿತ ದುರಂತ 12 ಮಂದಿಯ ಸಾವಿಗೆ ಕಾರಣವಾಗಿದೆ. ಏಕಾದಶಿ ಹಿನ್ನೆಲೆಯಲ್ಲಿ ಅದಿಕ ಸಂಖ್ಯೆಯಲ್ಲಿ ಭಕ್ತರು ಸೇರಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ದೇವಸ್ಥಾನದ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪೂಜಾ ಸಾಮಗ್ರಿ, ಚಪ್ಪಲಿ, ಮೃತ ಕುಟುಂಬಗಳ ಆಕ್ರಂದನ, ಗಾಯಗೊಂಡವರ ಕಣ್ಣೀರು ದುರಂತದ ಚಿತ್ರಣವನ್ನು ಸಾರಿ ಹೇಳುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕ ಗಣ್ಯರು ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಈ ವರ್ಷ ಇದು ಸೇರಿ ಅನೇಕ ಕಾಲ್ತುಳಿತ ದುರಂತ ಸಂಭವಿಸಿದೆ. ಆ ಕುರಿತಾದ ವಿವರ ಇಲ್ಲಿದೆ:
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದ ವೆಂಕಟೇಶ್ವರ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ. -
Ramesh B
Nov 1, 2025 5:16 PM
ಕರೂರು, ತಮಿಳುನಾಡು (ಸೆಪ್ಟೆಂಬರ್ 27)
ತಮಿಳುನಾಡಿನ ಕರೂರಿನಲ್ಲಿ ಸೆಪ್ಟೆಂಬರ್ 27ರಂದು ನಟ, ತಮಿಳಗ ವೆಟ್ರಿ ಕಝಗಂ (TVK) ಅಧ್ಯಕ್ಷ ವಿಜಯ್ ನಡೆದಿದ್ದ ಚುನಾವಣಾ ರ್ಯಾಲಿಯಲ್ಲಿ ಉಂಟಾದ ನೂಕುನುಗ್ಗಲು ಕನಿಷ್ಠ 40 ಮಂದಿಯ ಜೀವವನ್ನು ಕಸಿದುಕೊಂಡಿತ್ತು. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಗಲ ಕಿರಿದಾದ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲಿ ಜನ ಸೇರಿದ್ದು, ವಿಜಯ್ ತಡವಾಗಿ ಆಗಮಿಸಿದ್ದರಿಂದ ಜನ ಒಮ್ಮೆಲೆ ಅವರನ್ನು ನೋಡಲು ಧಾವಿಸಿದ್ದು ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಬೆಂಗಳೂರು, ಕರ್ನಾಟಕ (ಜೂನ್ 4)
ಐಪಿಎಲ್ ಆರಂಭವಾದ ಬರೋಬ್ಬರಿ 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಿರೀಟ ತನ್ನದಾಗಿಸಿಕೊಂಡಿದ್ದು, ಇದರ ವಿಜಯೋತ್ಸವದಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 11 ಮಂದಿ ಅಸುನೀಗಿದ್ದರು. ಆರ್ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ನೂರಾರು ಅಭಿಮಾನಿಗಳು ನರೆದಿದ್ದಾಗ ಕಾಲ್ತುಳಿತ ಸಂಭವಿಸಿತ್ತು.
ಗೋವಾ (ಮೇ 3)
ಉತ್ತರ ಗೋವಾದ ಶಿರ್ಗಾಂವ್ ಗ್ರಾಮದಲ್ಲಿ ಮೇ 3ರಂದು ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 6 ಜನರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದರು. ಶಿರ್ಗಾಂವ್ ದೇವಾಲಯದ ವಾರ್ಷಿಕ ಜಾತ್ರೆಗಾಗಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಸೇರಿದ್ದ ವೇಳೆ ಈ ದುರಂತ ಸಂಭವಿಸಿತ್ತು.
ದೆಹಲಿ (ಫೆಬ್ರವರಿ 15)
ಫೆಬ್ರವರಿ 15ರಂದು ದೆಹಲಿಯ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದಿಂದ 18 ಮಂದಿ ಉಸಿರು ಚೆಲ್ಲಿದ್ದರು. ಮೃತರ ಪೈಕಿ 5 ಮಕ್ಕಳೂ ಸೇರಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳುವ ರೈಲಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಕಾಯುತ್ತಿದ್ದಾಗ ಕಾಲ್ತುಳಿತ ಉಂಟಾಗಿತ್ತು.
ಪ್ರಯಾಗ್ರಾಜ್, ಉತ್ತರ ಪ್ರದೇಶ (ಜನವರಿ 29)
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದ ವೇಳೆ, ಜನವರಿ 29ರಂದು ಕಾಲ್ತುಳಿತ ಉಂಟಾಗಿ 30 ಮಂದಿ ಮೃತಪಟ್ಟಿದ್ದರು. ಮೌನಿ ಅಮಾವಾಸ್ಯೆ ಪ್ರಯುಕ್ತ ಅಮೃತ ಸ್ನಾನ ಮಾಡಲು ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 60 ಮಂದಿ ಗಾಯಗೊಂಡಿದ್ದರು.