Belagavi Stabbing Case: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ಐವರಿಗೆ ಚಾಕು ಇರಿತ; ಉದ್ವಿಗ್ನ ಸ್ಥಿತಿ
Kannada Rajyotsava in Belagavi: ಬೆಳಗಾವಿ ನಗರದ ಸದಾಶಿವನಗರದ ಚೆನ್ನಮ್ಮ ವೃತ್ತದ ಬಳಿ ಶನಿವಾರ ರಾತ್ರಿ ಘಟನೆ ನಡೆದಿದೆ. ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ.
-
Prabhakara R
Nov 1, 2025 10:53 PM
ಬೆಳಗಾವಿ, ನವೆಂಬರ್ 01: ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ಐವರಿಗೆ ಚಾಕು ಇರಿದಿರುವ ಘಟನೆ (Belagavi Stabbing Case) ನಗರದ ಸದಾಶಿವನಗರದ ಚೆನ್ನಮ್ಮ ವೃತ್ತದ ಬಳಿ ಶನಿವಾರ ರಾತ್ರಿ ನಡೆದಿದೆ. ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದು, ಮೂವರು ಗಾಯಾಳುಗಳನ್ನು ಬಿಮ್ಸ್ ಆಸ್ಪತ್ರೆಗೆ ಮತ್ತು ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಭುವನೇಶ್ವರಿ ಮೂರ್ತಿ ಮೆರವಣಿಗೆ ಮಾಡುವಾಗ ಯುವಕರು ನೃತ್ಯ ಮಾಡುತ್ತಿದ್ದರು. ಏಕಾಏಕಿ ಗುಂಪಿಗೆ ನುಗ್ಗಿದ ಕೆಲವರು ಜನಸಂದಣಿಯಲ್ಲೇ ಚಾಕುವಿನಿಂದ ಚುಚ್ಚಿದ್ದಾರೆ. ಯುವಕರು ನೆಲಕ್ಕೆ ಬಿದ್ದು ರಕ್ತಸ್ರಾವದಿಂದ ಒದ್ದಾಡುತ್ತಿದ್ದಂತೆಯೇ ಸ್ಥಳದಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಗಾಯಗೊಂಡವರನ್ನು ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್ ವಿನಾಯಕ ಹಾಗೂ ನರ್ಜೀ ಪಠಾಣ್ ಎಂದು ಗುರುತಿಸಲಾಗಿದೆ. ಚಾಕು ಇರಿತದಿಂದ ತಲೆ, ಹೊಟ್ಟೆ, ಬೆನ್ನು ಸೇರಿ ವಿವಿಧ ಭಾಗಗಳಿಗೆ ಗಾಯಗಳಾಗಿವೆ. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ತೆರಳಿ ಪರಿಶೀಲಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಭೂಷಣ ಭೊರಸೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Self Harming: ಅರ್ಚಕರ ಕುಟುಂಬ ಸಾಮೂಹಿಕ ಆತ್ಮಹತ್ಯೆ ಯತ್ನ, ಇಬ್ಬರ ಸಾವು, ಇನ್ನಿಬ್ಬರು ಗಂಭೀರ
ಎಂಇಎಸ್ ಮುಖಂಡರ ಜತೆ ಸೆಲ್ಫಿ ತೆಗೆದುಕೊಂಡ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮ: ಗೃಹ ಸಚಿವ ಪರಮೇಶ್ವರ್
ತುಮಕೂರು, ನ.1: ಬೆಳಗಾವಿಯಲ್ಲಿ ಎಂಇಎಸ್ ಮುಖಂಡರ ಜತೆಗೆ ಸೆಲ್ಫಿ ತೆಗೆದುಕೊಂಡ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸೆಲ್ಫಿ ತೆಗೆದುಕೊಂಡ ಮಾತ್ರಕ್ಕೆ ಕನ್ನಡ ವಿರೋಧಿ ಮನಸ್ಥಿತಿ ಹೊಂದಿದ್ದಾರೆ ಎಂದು ಭಾವಿಸಲಾಗದು. ಕನ್ನಡ ನಾಡಿನ ಬದ್ಧತೆ, ತತ್ವಕ್ಕೆ ವಿರುದ್ಧವಾಗಿ ಹೋಗುವ ಯಾವುದೇ ಅಧಿಕಾರಿ, ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಕನ್ನಡ ನಾಡು, ನೆಲ, ಜಲ, ಭಾಷೆ ರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದಲಿತರ ಸಮಾವೇಶಕ್ಕೆ ಹೈಕಮಾಂಡ್ ತಡೆ ಹಾಕಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದಲಿತರ ಸಮಾವೇಶಕ್ಕೆ ಯಾರೂ ಬ್ರೇಕ್ ಹಾಕಿಲ್ಲ. ಆಗುವ ಸಮಯದಲ್ಲಿ ಆಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಏನಿದು ಪ್ರಕರಣ?
ಕನ್ನಡ ರಾಜ್ಯೋತ್ಸವದಂದು ಕಪ್ಪು ಬಟ್ಟೆ ಧರಿಸಿ ಕರಾಳ ದಿನಾಚರಣೆ ಆಚರಿಸಲು ಬಂದಿದ್ದ ಎಂಇಎಸ್ ಮುಖಂಡರ ಜತೆ ಮಾಳ ಮಾರುತಿ ಠಾಣೆಯ ಸಿಪಿಐ ಜಾಕೀರ್ ಪಾಷಾ ಕಾಲಿಮಿರ್ಚಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದರು.
ಬೆಳಗಾವಿಯ ಸಂಭಾಜಿ ಉದ್ಯಾನವನದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಕರಾಳ ದಿನ ಆಚರಣೆಗಾಗಿ ನಾಡ ದ್ರೋಹಿ ಎಂಇಎಸ್ ಮುಖಂಡ ಶುಭಂ ಶೆಳಕೆ ಹಾಗೂ ಸಹಚರರು ಬಂದಿದ್ದರು. ಈ ವೇಳೆ ಅವರ ಜತೆ ಸಿಪಿಐ ಸೆಲ್ಫಿ ತೆಗೆದುಕೊಂಡಿದ್ದರು. ಸಿಪಿಐ ನಡೆ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಹಿಂದೆ ಶುಭಂ ಸೆಳಕೆ ವಿರುದ್ಧ ಭಾಷಾ ಸಾಮರಸ್ಯ ಕೆಡಿಸುವ ವಿವಾದಾತ್ಮಕ ಹೇಳಿಕೆ, ಶಾಂತಿ ಭಂಗ ಪಡಿಸಿದ ಹಿನ್ನೆಲೆಯಲ್ಲಿ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕರಾಳ ದಿನ ಆಚರಣೆಗೆ ಅನುಮತಿ ಇಲ್ಲ. ಆದರೂ ಲಿಲೇ ಮೈದಾನದಲ್ಲಿ ಕರಾಳ ದಿನ ಆಚರಿಸಲು ಎಂಇಎಸ್ ಪುಂಡರು ಮುಂದಾಗಿದ್ದಾರೆ.