Chikkaballapur News: ಕನ್ನಡ ಭಾಷೆ ಹಾಗೂ ಸಾಹಿತ್ಯದ ಒಳಗೊಳ್ಳುವ ಗುಣ ಮನುಕುಲಕ್ಕೆ ಮಾದರಿ
ಕನ್ನಡ ನೆಲದಲ್ಲಿ ಬಾಳಿ ಬದುಕಿರುವ ಕ್ರಿಶ್ಚಿಯನ್ ಗುರುಗಳು ಆಂಗ್ಲ ಅಧಿಕಾರಿಗಳು ಸಹ ಕನ್ನಡ ಕಲಿತು ಕೃತಿಗಳನ್ನು ರಚಿಸಿದ್ದಾರೆಂದರೆ ನಾವೇಕೆ ಕನ್ನಡ ಕಲಿಯಬಾರದು, ಕನ್ನಡವೆಂಬ ಮಾತೃ ಸ್ವರೂಪದ ಭೂನಾದಿಯ ಬೇರುಗಳ ಮೇಲೆ ಅಗತ್ಯವಿದ್ದರೆ ಬೇರೆ ಭಾಷೆಗಳನ್ನು ಕಲಿಯಬಹುದು ಎಂದು ಅಭಿಪ್ರಾಯಪಟ್ಟರು.
-
Ashok Nayak
Nov 1, 2025 11:24 PM
ಚಿಕ್ಕಬಳ್ಳಾಪುರ: ಮಾನವ ಜಾತಿ ತಾನೊಂದೇ ವಲಂ ಎಂಬ ವಿಶ್ವಮಾನವ ಭಾವನೆಯನ್ನು ವ್ಯಕ್ತ ಗೊಳಿಸಿರುವ ಕನ್ನಡ ಭಾಷೆ ಹಾಗೂ ಸಾಹಿತ್ಯವು ಸರ್ವರನ್ನು ಒಳಗೊಳ್ಳುವ ಉದಾತ್ತ ಗುಣ ಅಂತರ್ಗತಗೊಳಿಸಿ ಕನ್ನಡ ಮತ್ತು ಕನ್ನಡಿಗರನ್ನ ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿದೆ, ಆದರೆ ಯಾವುದೇ ಕಾರಣಕ್ಕೂ ಕನ್ನಡದ ಒಳಗೊಳ್ಳುವ ಗುಣ ಮೂಲ ಕನ್ನಡಿಗರನ್ನು, ದಯನೀಯ ಸ್ಥಿತಿಯಲ್ಲಿರುವ ಕನ್ನಡಿಗರನ್ನು ಹೊರ ನೂಕುವಂತ ವಿಪರ್ಯಾಸವನ್ನು ತನ್ದೊಡ್ಡಬಾರದು ಎಂದು ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ ಕೋಡಿ ರಂಗಪ್ಪ ಅಭಿಪ್ರಾಯಪಟ್ಟರು.
ಪೆರೆಸಂದ್ರದ ಶಾಂತ ಶಿಕ್ಷಣ ಸಂಸ್ಥೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವು ಬಹುತ್ವದಲ್ಲಿ ಒಂದು ಪುಟ್ಟ ಜಗತ್ತು ಎನಿಸಿದೆ ಕರ್ನಾಟಕವನ್ನು ಅಖಂಡ ಭಾರತದಲ್ಲಿ ಒಂದು ಪುಟ್ಟ ಭಾರತವನ್ನುಬಹುದು ಇದಕ್ಕೆ ಮೂಲ ಗುಣ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಒಳಗೊಳ್ಳಿಸಿಕೊಳ್ಳುವ ಗುಣ .ಇದಕ್ಕೆ ಆಧಾರವೆಂದರೆ ಪ್ರಾಚೀನ ಕಾಲದಲ್ಲಿ ನಾಡನ್ನು ಆಳಿದ ರಾಜ ಮಹಾರಾಜರು ಅನುಭಾವಿಗಳು ಗುರು ಶರಣರು ಕವಿ ಲೇಖಕರು ಕನ್ನಡವನ್ನು ಜ್ಞಾನದಲ್ಲಿ, ಗುಣದಲ್ಲಿ ಅಭಿವ್ಯಕ್ತಿಯಲ್ಲಿ ಕಾಳಜಿಯಲ್ಲಿ ಸ್ಥಾವರವಾಗಿಸದೆ ಜಂಗಮವಾಗಿಸಿರುವುದೇ ಆಗಿದೆ, ಆದಿಕವಿ ಪಂಪನು ವಿಶ್ವ ಕುಟುಂಬದ ಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾನೆ. ಇದೇ ಆದರ್ಶವನ್ನು ಮುಂದುವರಿಸಿಕೊಂಡ ಬಂದ ಕುವೆಂಪು ಅವರು ಮನುಜ ಮತ ವಿಶ್ವ ಪಥ ಎಂಬ ವಿಶ್ವಮಾನವ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ್ದಾರೆ. ಈ ಚಿಂತನೆಗೆ ಪ್ರೇರಣೆಯೆಂದರೆ ಬಸವಾದಿ ಶರಣರು, ಕೀರ್ತನೆಕಾರರು, ಅನುಭಾವಿಗಳು ದಾಸರು ಮತ್ತು ನೆಲಮೂಲದ ಜನಪದೀಯರು ಆಗಿರುತ್ತಾರೆ ಎಂದರು.
ಒಳಗೊಳ್ಳುವಿಕೆಯ ಗುಣವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದಲ್ಲಿಯೂ ಸಮನ್ವಹಿಸಿರುವುದು ಅವರ ಭೂತ, ಭವಿಷ್ಯ ಮತ್ತು ವರ್ತಮಾನ ಕಾಲಗಳ ಸಾಟಿ ಇಲ್ಲ, ನಮ್ಮ ಸಂವಿಧಾನವು ಜನತೆಯ ಪಾಲನೆ ಶಿಕ್ಷಣ ಉದ್ಯೋಗ ದೇಶ ಕಟ್ಟುವ ಕಾರ್ಯವಿಧಾನಗಳನ್ನು ಒಳಗೊಳ್ಳುವ ಗುಣದಿಂದ ಎತ್ತಿ ಹಿಡಿದಿದೆ ಇದರಿಂದಾಗಿಯೇ ಸರ್ವರಿಗೆ ಸಮಪಾಲು ಸರ್ವರಿಗೆ ಸಮ ಬಾಳು ಸಿಗುತ್ತದೆ ಎಂಬ ಆಶಯವನ್ನು ಕಾಣಲಾಗಿದೆ.ಕನ್ನಡ ಸಾಹಿತ್ಯ ಗಂಗೆಯು ಆಯಾ ಕಾಲ ಧರ್ಮಗಳ ಸಮಾಜ ವ್ಯವಸ್ಥೆಗೆ ಸ್ಪಂದಿಸುತ್ತಾ ಮುಖಾಮುಖಿಯಾಗುತ್ತಾ ಆಳುವ ಪ್ರಜೆಗಳು ಹಾಗೂ ದಮನಿತರಿಗೆ ದಾರಿ ತೋರಿದೆ ನಮ್ಮ ಪ್ರಗತಿಪರ ಲೇಖಕರು ಕವಿಗಳು ವ್ಯವಸ್ಥೆಯ ಪರಿಮಿತಿಗಳನ್ನು ಗುರುತಿಸಿ ಜನಜಾಗ್ರತಿ ಮೂಡಿಸಿದ್ದಾರೆ.
ಕನ್ನಡದ ಕವಿಗಳು ಲೇಖಕರು ಮಾಧ್ಯಮಗಳು ಹಲವು ರೀತಿಯ ಮೌಲ್ಯಗಳನ್ನು ಜನತೆಗೆ ನೀಡಿ ದ್ದಾರೆ. ಅವರು ಬರೆದಿರುವ ಕೃತಿಗಳನ್ನು ನಾವೆಲ್ಲರೂ ಅಧ್ಯಯನ ಮಾಡಿ ಅರ್ಥ ಮಾಡಿ ಕೊಂಡರೆ ನಮ್ಮ ಬದುಕು ಹಸನಾಗುತ್ತದೆ, ನಾಡು ನುಡಿಯ ಉನ್ನತಿಯು ಕೂಡ ಆಗುತ್ತದೆ ನಾವು ಯಾವುದೇ ವೃತ್ತಿಯನ್ನು ಮಾಡಬಹುದು, ಆದರೆ ಪುಸ್ತಕ ಪ್ರೇಮ ಮತ್ತು ಅಧ್ಯಯನಶೀಲತೆ ನಿರಂತರ ಪಾಲಿಸ ಬೇಕು. ಇದರಿಂದಾಗಿ ನಮ್ಮ ವೃತ್ತಿಗೂ ಗೌರವ ಬರುತ್ತದೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಂತ ಶಿಕ್ಷಣ ಸಂಸ್ಥೆಗಳ ಡಾ. ನವೀನ್ ಸೈಮನ್ ಮಾತನಾಡಿ, ಕನ್ನಡ ನೆಲದಲ್ಲಿ ಬಾಳಿ ಬದುಕಿರುವ ಕ್ರಿಶ್ಚಿಯನ್ ಗುರುಗಳು ಆಂಗ್ಲ ಅಧಿಕಾರಿಗಳು ಸಹ ಕನ್ನಡ ಕಲಿತು ಕೃತಿಗಳನ್ನು ರಚಿಸಿದ್ದಾರೆಂದರೆ ನಾವೇಕೆ ಕನ್ನಡ ಕಲಿಯಬಾರದು, ಕನ್ನಡವೆಂಬ ಮಾತೃ ಸ್ವರೂಪದ ಭೂನಾದಿಯ ಬೇರುಗಳ ಮೇಲೆ ಅಗತ್ಯವಿದ್ದರೆ ಬೇರೆ ಭಾಷೆಗಳನ್ನು ಕಲಿಯಬಹುದು ಎಂದು ಅಭಿಪ್ರಾಯಪಟ್ಟರು.
ಶಾಂತ ಸಂಸ್ಥೆಯಲ್ಲಿ ಹಲವು ಆರೋಗ್ಯ ಹಾಗೂ ಅರೆ ವೈದ್ಯಕೀಯ ಶಿಕ್ಷಣ ವಿಭಾಗ ವಿಭಾಗಗಳಲ್ಲಿ ಕೇರಳ ತಮಿಳುನಾಡು ಆಂಧ್ರಪ್ರದೇಶ ತೆಲಂಗಾಣ ಕಾಶ್ಮೀರ ಚತ್ತೀಸ್ಗಡ್ ಹಾಗೂ ಕನ್ನಡ ವಿದ್ಯಾರ್ಥಿ ಗಳು ಓದುತ್ತಿದ್ದಾರೆ ಹಾಗೂ ಹಲವು ರಾಜ್ಯಗಳ ಬೋಧಕರು ಇಲ್ಲಿದ್ದಾರೆ ಎಂದು ಹೇಳಿದರು.
ಬೇರೆ ರಾಜ್ಯಗಳ ಬೋಧಕರಿಗೆ ಕನ್ನಡಿಗರ ಪರವಾಗಿ ಗೌರವ ಸನ್ಮಾನ ನಡೆಸಿ ನಾವೆಲ್ಲರೂ ಕೂಡಿ ಬಾಳಬೇಕು, ನಾವೆಲ್ಲರೂ ಒಂದೇ ನಾವು ಭಾರತೀಯರು ಹಾಗೂ ವಿಶ್ವಮಾನವರಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯೋತ್ಸವದ ಅಂಗವಾಗಿ ನಡೆಸಿದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಜಾನಪದ ಕಲಾವಿದರು ಬೊಂಬೆಗಳ ನೃತ್ಯ ವೀರಗಾಸೆ ನೃತ್ಯಗಾರರ ಹೆಜ್ಜೆಗೆ ಹೆಜ್ಜೆ ಹಾಕಿದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ನಾವೆಲ್ಲ ಒಂದೇ ತಾಯಿಯ ಮಕ್ಕಳೆಂದು ಕುಣಿದು ಕುಪ್ಪಳಿಸಿದರು. ಶಾಂತ ಸಂಸ್ಥೆಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳ ನೃತ್ಯಗಳು ಗಾಯನಗಳು ಮತ್ತು ವಿಚಾರ ವಿನಿಮಯ ಜನಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಫಾರ್ಮಸಿ ಪ್ರಾಂಶುಪಾಲ ಡಾ ಗೋಪಿನಾಥ್ ,ಶಾಂತಾ ವಿದ್ಯಾನಿಕೇತನ ಪ್ರಾಂಶು ಪಾಲ ಡಾ ಪ್ರಸಾದ್ ಅರೆವೈದ್ಯಕೀಯ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ ನರೇಶ್, ನರ್ಸಿಂಗ್ ಮುಖ್ಯಸ್ಥೆ ಪ್ರೊ ಡಯಾನ ಡಾ ಶಿಲ್ಪಾ ರಾಣಿ ,ರೇವತಿ ಪವಿತ್ರ ,ಆಡಳಿತ ಅಧಿಕಾರಿ ಕೆನೆತ್ ಹಾಲಿಡೇ ,ವಿತ್ತಾಧಿಕಾರಿ ಶರವಣ, ಅಧ್ಯಾಪಕರಾದ ರಂಗರಾಜನ್ , ಅಂಬಿಕ ಕಲ್ಯಾಣಿ , ವಿಜಯಲಕ್ಷ್ಮಿ , ಆಕಾಂಕ್ಷ ಬಸವರಾಜ್, ವೆಂಕಟೇಶ್ ,ಸುಧಾ ಕಲೀಮುಲ್ಲಾ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ , ಸಂದೇಶ್ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು