Baahubali reunion: ಬಾಹುಬಲಿಗೆ ದಶಕದ ಸಂಭ್ರಮ- ಮತ್ತೆ ಗುಡ್ನ್ಯೂಸ್ ಕೊಟ್ಟ ರಾಜಮೌಳಿ
ತೆಲುಗಿನ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸಕ್ಸಸ್ ನೀಡಿತ್ತು. ನಟಿ ಅನುಷ್ಕಾ ಶೆಟ್ಟಿ, ತಮನ್ನಾ, ನಟ ಪ್ರಭಾಸ್ ಸೇರಿದಂತೆ ಅನೇಕ ಸಿನಿಮಾ ತಾರೆಯರಿಗೆ ಈ ಸಿನಿಮಾ ಅವರ ವೃತ್ತಿ ಬದುಕಲ್ಲಿಯೇ ದೊಡ್ಡ ಟರ್ನಿಂಗ್ ಪಾಂಯ್ಟ್ ಆಗಿತ್ತು. 2015ರಲ್ಲಿ ತೆರೆಕಂಡ ಈ ಸಿನಿಮಾಕ್ಕೆ ಇದೀಗ 10 ವರ್ಷದ ಸಂಭ್ರಮವಾಗಿದೆ. ನಿರ್ದೇಶಕ ರಾಜಮೌಳಿ ಅವರು ಬಾಹುಬಲಿ ಚಿತ್ರತಂಡದ ಜೊತೆಗೆ ದಶಕದ ಸಂಭ್ರಮ ಕಳೆದಿದ್ದಾರೆ. ಸದ್ಯ ಈ ಕುರಿತಾದ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.



ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬಾಹುಬಲಿ ದಿ ಬಿಗಿನಿಂಗ್ ಸಿನಿಮಾ 2015ರ ಜುಲೈ 10ರಂದು ಬಿಡುಗಡೆಯಾಗಿತ್ತು. ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡಿತ್ತು. ಅಷ್ಟೆ ಅಲ್ಲದೆ ಹಾಲಿವುಡ್ ನಲ್ಲಿ ಚಿರಪರಿಚಿತವಾದ ಸರಣಿ ಸಿನಿಮಾಗಳು ಭಾರತದಲ್ಲಿ ಬಾಹುಬಲಿ ಸಿನಿಮಾ ಮೂಲಕ ಪರಿಚಯಿಸಲ್ಪಟ್ಟು ಭಾಗ ಒಂದು ಮತ್ತು ಭಾಗ ಎರಡು ತೆರೆ ಮೇಲೆ ಬಂದು ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯೂ ಸಹ ಲಭಿಸಿದೆ. ನಿರ್ದೇಶಕ ರಾಜಮೌಳಿ ಫಿಲ್ಮ್ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ಬಾಹುಬಲಿ ಚಿತ್ರದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯು ಮಹಾ ಪುನರ್ಮಿಲನ ಎಂದು ಕೆಲವು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ನಟ ಪ್ರಭಾಸ್, ರಾಣಾ ದಗ್ಗುಬಾಟಿ, ಎಸ್ಎಸ್ ರಾಜಮೌಳಿ ಮತ್ತು ಚಿತ್ರದ ಸಂಗೀತ ನಿರ್ದೇಶಕಿ ಎಂಎಂ ಕೀರವಾಣಿ, ಹಿರಿಯ ನಟಿ ರಮ್ಯಾ ಕೃಷ್ಣ ದಶಕದ ಸಂಭ್ರಮದಲ್ಲಿ ಜೊತೆಯಾಗಿದ್ದಾರೆ..

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟ ಪ್ರಭಾಸ್ , ರಾಣಾ , ರಾಜಮೌಳಿ ಎಲ್ಲರೂ ಜೊತೆಯಾಗಿ ನಿಂತು ಸಿನಿಮಾದ ಫೇಮಸ್ ಡೈಲಾಗ್ ಬೋರ್ಡ್ ಹಿಡಿದುಕೊಂಡು ಫೋಟೊಗೆ ಪೋಸ್ ನೀಡಿದ್ದಾರೆ. ಹೇ.. ಸಾ.. ರುದ್ರಾಸಾ.., ಇದಿ ನಾ ಮಾಟಾ, ನಾ ಮಾಟೇ ಶಾಸನ ಇತರ ಪ್ರಮುಖ ಡೈಲಾಗ್ ಬೋರ್ಡ್ ಹಿಡಿದು ನಿಂತಿದ್ದು ಕಂಡು ದಶಕ ಪೂರೈಸಿದ್ದ ಚಿತ್ರತಂಡಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ..

ವೈರಲ್ ಆದ ಇನ್ನೊಂದು ಫೋಟೋದಲ್ಲಿ ನಟ ರಾಣ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರು ಜೊತೆಯಾಗಿ ಕುಳಿತುಕೊಂಡು ನಿರ್ದೇಶಕ ರಾಜಮೌಳಿ ಅವರ ಬಳಿ ಸಂಭಾಷಣೆ ಮಾಡುತ್ತಿದ್ದ ಫೋಟೊವನ್ನು ಕಾಣಬಹುದು. ಬಾಹುಬಲಿ ಎರಡು ಭಾಗದಲ್ಲಿ ಬಲ್ಲಾಳದೇವ ಪಾತ್ರದಲ್ಲಿ ನಟ ರಾಣಾ ಅಭಿನಯಿಸಿದ್ದಾರೆ.

ಸಿನಿಮಾ ದಶಕ ಪೂರೈಸಿದ್ದು ಬಾಹುಬಲಿ ಸಿನಿಮಾದ ಎರಡು ಭಾಗಗಳನ್ನು ಸಂಯೋಜಿತ ಆವೃತ್ತಿ ಬಿಡುಗಡೆ ಮಾಡಲು ನಿರ್ದೇಶಕ ರಾಜಮೌಳಿ ಅವರು ನಿರ್ಧಾರ ಕೈಗೊಂಡಿದ್ದಾರೆ. ಬಾಹುಬಲಿ ಎರಡು ಭಾಗಗಳನ್ನು ಜೊತೆಯಾಗಿ ಸೇರಿಸಿ ಒಟ್ಟಿಗೆ ಬಾಹುಬಲಿ ದಿ ಎಪಿಕ್ ಹೆಸರಿನಲ್ಲಿ ಒಂದೇ ಸಿನಿಮಾ ಜಾರಿಗೆತರಲು ಚಿತ್ರತಂಡ ತೀರ್ಮಾನಿಸಿದೆ. ಸುಮಾರು 5ಗಂಟೆ 27ನಿಮಿಷದ ಈ ಸಿನಿಮಾಕ್ಕೆ ಕೆಲವು ಎಡಿಟಿಂಗ್ ಕೆಲಸ ಕೂಡ ಮಾಡಲಾಗುತ್ತದೆಯಂತೆ. ಇದೇ ಅಕ್ಟೋಬರ್ 31 ರಂದು ಈ ಸಿನಿಮಾ ಮತ್ತೆ ತೆರೆಕಾಣುವ ಸಾಧ್ಯತೆ ಇದೆ.