Bengaluru Rains: ಭಾರಿ ಮಳೆಗೆ ಬೆಂಗಳೂರಿನ ಹಲವು ಬಡಾವಣೆಗಳಿಗೆ ಜಲ ದಿಗ್ಬಂಧನ; ಬೋಟ್ಗಳಲ್ಲಿ ಜನರ ಸ್ಥಳಾಂತರ
Bengaluru Rains: ಬೆಂಗಳೂರಿನ ವಸಂತ ನಗರ, ವಿಧಾನ ಸೌಧ, ಶಿವಾಜಿನಗರ, ರಾಜಭವನ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಬಿಟಿಎಂ ಲೇಔಟ್, ಚಿಕ್ಕಪೇಟೆ, ಟೌನ್ಹಾಲ್ ಸೇರಿ ವಿವಿಧೆಡೆ ಭಾರಿ ಮಳೆಯಾಗಿದ್ದು, ಪ್ರಮುಖ ರಸ್ತೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತವಾಗಿದೆ.

ಬೆಂಗಳೂರಿನ ಸಾಯಿ ಲೇಔಟ್ ಜಲಾವೃತವಾಗಿರುವುದರಿಂದ ಬೋಟ್ನಲ್ಲಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ. (ಚಿತ್ರಗಳು: ಸುಧಾಕರ್ ದೇವರಾಜ್, ವಿಶ್ವವಾಣಿ)


ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬೆಂಗಳೂರಿನ ಹಲವು ಬಡಾವಣೆಗಳು, ಪ್ರಮುಖ ರಸ್ತೆಗಳು ಜಲಾವೃತವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಒಂದೇ ದಿನ 132 ಮಿ. ಮೀ. ನಷ್ಟು ಮಳೆಯಾಗಿದ್ದು, ಹಲವೆಡೆ ಸಾಕಷ್ಟು ಅವಾಂತರಗಳು ಸಂಭವಿಸಿವೆ.

ಬೆಂಗಳೂರಿನ ವಸಂತ ನಗರ, ವಿಧಾನ ಸೌಧ, ಶಿವಾಜಿನಗರ, ರಾಜಭವನ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಬಿಟಿಎಂ ಲೇಔಟ್, ಚಿಕ್ಕಪೇಟೆ, ಟೌನ್ಹಾಲ್, ರಾಜಭವನ, ಕಬ್ಬನ್ಪಾರ್ಕ್, ಸಾಯಿ ಲೇಔಟ್, ಬಿಟಿಎಂ ಲೇಔಟ್, ಎಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್ ಸೇರಿ ಹಲವೆಡೆ ಸೋಮವಾರ ಸಂಜೆ ಕೂಡ ಭಾರಿ ಮಳೆಯಾಗಿದ್ದು, ಪ್ರಮುಖ ರಸ್ತೆಗಳು ಜಲಾವೃತವಾಗಿ ಸವಾರರು ಪರದಾಡುವಂತಾಗಿದೆ.

ಸಾಯಿ ಲೇಔಟ್ ಸಂಪೂರ್ಣ ಜಲಾವೃತವಾಗಿದ್ದರಿಂದ ಮನೆಗಳಿಂದ ಜನರು ಹೊರಬರಲಾಗದೆ ಪರದಾಡುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ, ಅಗ್ನಿಶಾಮಕ ದಳ, ಎಸ್ಡಿಆರ್ಎಫ್ ಸಿಬ್ಬಂದಿ, ರಬ್ಬರ್ ಬೋಟ್ ಹಾಗೂ ಟ್ರ್ಯಾಕ್ಟರ್ಗಳ ಮೂಲಕ ಜನರನ್ನು ಸ್ಥಳಾಂತರ ಮಾಡುತ್ತಿದ್ದಾರೆ.

ಸಾಯಿ ಲೇಔಟ್, ಬಿಟಿಎಂ ಲೇಔಟ್, ಎಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್ನಲ್ಲಿ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ನೀರು ನಿಂತಿರುವುದರಿಂದ ವಾಹನಗಳು ಅರ್ಧದಷ್ಟು ಮುಳುಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ಕಳೆದ 48 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಕೆಂಗೇರಿಯಲ್ಲಿ ಅತಿ ಹೆಚ್ಚು 132 ಮಿ.ಮೀ. ಮಳೆಯಾಗಿದ್ದು, ನಂತರ ಉತ್ತರ ಬೆಂಗಳೂರಿನ ವಡೇರಹಳ್ಳಿಯಲ್ಲಿ 131.5 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ಮೇಲ್ವಿಚಾರಣಾ ಕೋಶ ವರದಿ ಮಾಡಿದೆ. ಇತರ ಹಲವಾರು ಪ್ರದೇಶಗಳಲ್ಲಿ ರಾತ್ರಿಯಿಡೀ 100 ಮಿಮೀ ಮಳೆಯಾಗಿದೆ.

ಭಾರೀ ಪ್ರಮಾಣದ ನೀರು ರಸ್ತೆಗಳಲ್ಲಿ ನಿಂತಿರುವುದರಿಂದ ಹಲವೆಡೆ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಇನ್ನು ಬಿರುಗಾಳಿ ಮಳೆ ಅನೇಕ ಕಡೆ ಮರಗಳು ನೆಲಕ್ಕುರುಳಿ ಅವಾಂತರ ಸೃಷ್ಟಿಯಾಗಿದೆ. ಇನ್ನು ನಗರದ ಹೊರಮಾವು ಬಳಿಯ ಸಾಯಿ ಲೇಔಟ್ ಪ್ರದೇಶ ಜಲಾವೃತವಾಗಿರುವುದರಿಂದ ಸ್ಥಳೀಯ ಶಾಸಕ ಬೈರತಿ ಬಸವರಾಜ್ ಸೋಮವಾರ ಬೆಳಗ್ಗೆ ಜೆಸಿಬಿಯಲ್ಲಿ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಅದೇ ರೀತಿ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಮಳೆ ನೀರು ನಿಂತಿರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಲು ಸಂಚಾರ ಪೊಲೀಸರು ಸೂಚಿಸಿದ್ದಾರೆ. ಇನ್ನು ಕಸ್ತೂರಿನಗರ 2ನೇ ಮುಖ್ಯರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ಸದಾನಂದನಗರ - ಬೈಯಪ್ಪನಹಳ್ಳಿ ಮೆಟ್ರೋ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿದೆ.

ಸಿಂಗಯ್ಯನಪಾಳ್ಯ ಬಳಿ ಮಳೆ ನೀರು ನಿಂತಿರುವುದರಿಂದ ಲೌರಿ ಕಡೆಗೆ ನಿಧಾನಗತಿಯ ಸಂಚಾರವಿದೆ. ಗುರುದ್ವಾರ ಬಳಿ ಮಳೆ ನೀರು ನಿಂತಿರುವುದರಿಂದ ಕಿಂಗ್ಸ್ಟನ್ ಕಡೆಗೆ ಸಂಚಾರಕ್ಕೆ ಅಡಚಣೆಯಾಗಿದೆ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾರಿ ಮಳೆ ಬಿದ್ದಿರುವುದರಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆ ಜಲಾವೃತವಾಗಿದ್ದು, ಹೊರ ವರ್ತಲ ರಸ್ತೆಯಲ್ಲಿ ಎಚ್ಎಸ್ಆರ್ ಕಡೆಗೆ ಹೋಗುವ ಮತ್ತು ಜಯದೇವ ಕಡೆಗೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ಹೀಗಾಗಿ ಬೆಂಗಳೂರು ಸೇರಿ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೇ 20ರವರೆಗೆ, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೇ 19 ರಿಂದ ಮೇ 22, ಹಾಗೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮೇ 20 ರಿಂದ 22 ರವರೆಗೆ ಅತಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ.

ಮುಂದಿನ 4 ದಿನಗಳವರೆಗೆ ಕರ್ನಾಟಕದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆ ಅಥವಾ ಬಿರುಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30°C ಮತ್ತು 20°C ಇರಲಿದೆ.

ಮೇ 20ರಂದು ಕೂಡ ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ವಿಜಯಪುರ ಜಿಲ್ಲೆ, ಬೀದರ್, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಹಾಸನ, ಕೊಡಗು, ಮೈಸೂರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇದೆ.

ಮೇ 21ರಂದು ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ವಿಜಯಪುರ, ಬೀದರ್, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.

ಮೇ 22ರಂದು ಕರಾವಳಿಯ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಗದಗ, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.