NAVIKA 2025: ಫ್ಲೋರಿಡಾದಲ್ಲಿ ಅದ್ಧೂರಿಯಾಗಿ ನೆರವೇರಿದ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ
NAVIKA Global Kannadiga Summit: ಆ.29ರಿಂದ ಮೂರು ದಿನಗಳ ಕಾಲ ನಡೆದ ನಾವಿಕ ಸಮಾವೇಶದಲ್ಲಿ ಸಂಗೀತ ರಸ ಸಂಜೆ, ಕವಿ ಗೋಷ್ಠಿ, ನಾಟಕ, ನೃತ್ಯ ಪ್ರದರ್ಶನ, ಜಾನಪದ ಕಲೆ, ನಾಟಕ, ಕಥೆ ಹೇಳುವುದು, ಕಿರು ನಾಟಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

-


ಅಮೆರಿಕದ ಫ್ಲೋರಿಡಾದ ಟಂಪಾ ನಗರದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ (NAVIKA 2025) ಅದ್ಧೂರಿಯಾಗಿ ನೆರವೇರಿದೆ. ಆ.29ರಿಂದ ಮೂರು ದಿನಗಳ ಕಾಲ ಸಂಗೀತ ರಸ ಸಂಜೆ, ಕವಿ ಗೋಷ್ಠಿ, ನಾಟಕ, ನೃತ್ಯ ಪ್ರದರ್ಶನ, ಜಾನಪದ ಕಲೆ, ನಾಟಕ, ಕಥೆ ಹೇಳುವುದು, ಕಿರು ನಾಟಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಸಾವಿರಾರು ಅನಿವಾಸಿ ಕನ್ನಡಿಗರು ಭಾಗವಹಿಸಿ, ಸಂಭ್ರಮಿಸಿದರು.

ಶುಕ್ರವಾರ ಗಣೇಶನ ಪೂಜೆಯೊಂದಿಗೆ ಪ್ರಾರಂಭವಾಗಿ All OK ಸಂಗೀತ ಕಾರ್ಯಕ್ರಮದ ಯಶಸ್ವಿಯೇ ಮುಂದಿನ 2 ದಿನಗಳ ಕಾರ್ಯಕ್ರಮಗಳು ಸಮಾವೇಶದ ಯಶಸ್ಸಿಗೆ ನಾಂದಿಯಾಯಿತು. ಶನಿವಾರದಿಂದ ಎರಡೆರಡು ವೇದಿಕೆ ಮೇಲೆ ನಿರಂತರ ಕಾರ್ಯಕ್ರಮಗಳು ಜರುಗಿದವು. ಸಮಾವೇಶದಲ್ಲಿ ಭಾಗವಹಿಸಿದ ಕನ್ನಡಿಗರು ಗುಂಪು ಗುಂಪಾಗಿ ತಮ್ಮ ತಮ್ಮ ಸಂಘದ ಬಾವುಟಗಳೊಂದಿಗೆ ಹಾಡು, ಕುಣಿತಗಳಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಅಭೂತಪೂರ್ವ ಯಶಸ್ಸಿಗೆ ಕಾರಣರಾದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಉದ್ಘಾಟನಾ ಮಾಡುವುದರೊಂದಿಗೆ, ಅನಿವಾಸಿ ಕನ್ನಡಿಗರ ಕನ್ನಡ ಪ್ರೀತಿ, ಕನ್ನಡ ಸಂಸ್ಕೃತಿಯನ್ನು ಸಂಭ್ರಮಿಸುವ ರೀತಿ ಕಂಡು ಬೆರಗಾದರು. ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡಿಗೆಯನ್ನು ಮೆಚ್ಚಿದರು. ಒಂದು ಮಂಟಪದಲ್ಲಿ 'ಕನ್ನಡೋತ್ಸವ', 'ಕ್ಷೀರಾಮೃತ' 'ನಾವಿಕ ಪೇಜೆಂಟ್' ದಂತಹ ಹಲವಾರು ಕಾರ್ಯಕ್ರಮಗಳೊಂದಿಗೆ ಮೆರುಗು ಕೊಟ್ಟರೆ, ಇನ್ನೊಂದು ಮಂಟಪದಲ್ಲಿ ನಡೆದ 2 ಹಾಸ್ಯ ನಾಟಕಗಳು ವೀಕ್ಷಕರನ್ನು ರಂಜಿಸಿತ್ತು. ನಾಟಕ ಕ್ಷೇತ್ರದ ದಿಗ್ಗಜರಾದ ಬಿ. ಸುರೇಶ್, ಸಿಹಿಕಹಿ ಚಂದ್ರು, ಶ್ರೀನಾಥ ವಸಿಷ್ಟ, ಸುಂದರ್ ವೀಣ ಹಾಗೂ ವೀಣ ಸುಂದರ್ ಅವರ ಅಭಿನಯ ವಿಕ್ಷಕರ ಮನಸ್ಸಿನಲ್ಲಿ ಇನ್ನೂ ಉಳಿದಿದೆ. ಸಂಜೆ ನಡೆದ 'ಮನೋ ಸಂಗೀತ' ಮನೋಮೂರ್ತಿಯವರ ಸಂಗೀತ ಕಾರ್ಯಕ್ರಮ ಕನ್ನಡಿಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ರಂಗದ ಮೇಲಿನ ಕಾರ್ಯಕ್ರಮವಲ್ಲದೆ, ಇತರೆ ಕೊಠಡಿಗಳಲ್ಲಿ ನಡೆದ ವಿಚಾರ ವೇದಿಕೆ ಕಾರ್ಯಕ್ರಮಗಳು ಬಹಳ ಯಶಸ್ಸನ್ನು ಕಂಡಿತ್ತು. ಔದ್ಯಮಿಕ ವಿಚಾರ ವಿನಿಮಯ, ಸಿಂಗಲ್ಸ್ ಮೀಟ್, 'ಮಹಿಳಾ ವೇದಿಕೆ' ಕಾರ್ಯಕ್ರಮಗಳು ಬಹಳಷ್ಟು ಜನರನ್ನು ಆಕರ್ಷಿಸಿತ್ತು.

ಇಡ್ಲಿ, ವಡೆ, ಸಾಂಬಾರು, ಸೋರೆಕಾಯಿಯ ಹಲ್ವ, ಬಿಸಿ ಬೇಳೆ ಬಾತಿನ ಊಟ, ರಾಗಿ ಮುದ್ದೆಯ ಊಟ ಕರ್ನಾಟಕವನ್ನು ಅಮೆರಿಕಕ್ಕೆ ತಂದತ್ತಿತ್ತು. ಭಾನುವಾರ ನಡೆದ ಕಾರ್ಯಕ್ರಮಗಳೂ ಸಹ ವೀಕ್ಷಕರನ್ನು ಇನ್ನೊಂದು ಲೋಕಕ್ಕೆ ಕರೆದೊಯ್ದಿತ್ತು. ಖ್ಯಾತ ಸಾಹಿತಿ ದಿ. ಡಾ. ಜಿ ಎಸ್ ಶಿವರುದ್ರಪ್ಪ ನವರ ನೆನಪಿನ ಸಾಹಿತ್ಯ ಕಾರ್ಯಕ್ರಮ ಅನಿವಾಸಿ ಕನ್ನಡ ಸಾಹಿತ್ಯಾಸಕ್ತರನ್ನು ಆಕರ್ಷಿಸಿತ್ತು.

ಕರ್ನಾಟಕದ ಹಬ್ಬಗಳನ್ನು ಬಿಂಬಿಸುವ ಫ್ಯಾಷನ್ ಶೋ, ಕ್ಯಾಲಿಪೋರ್ನಿಯಾದ ರಂಗಧ್ವನಿ ತಂಡದ 'ಅಂಧ ರಾಜ' ಹಾಸ್ಯ ನಾಟಕ ಜನರನ್ನು ರಂಜಿಸಿದರೆ, ದೇಹದ ಏನೇ ದೌರ್ಬಲ್ಯವಿದ್ದರೂ ಗುರಿಯೊಂದಿದ್ದರೆ ಸಾಧಿಸಬಹುದು ಎಂಬುದನ್ನು ಸಾರುವ 'ನಯನ' ನಾಟಕ, ಇಂದುಶ್ರೀ ಅವರ ಬೊಂಬೆಗಳೊಡನೆ ಮಾತು, ಹಾಸ್ಯಭರಿತ ಡಾ. ಯಶವಂತ ಸರ್ದೇಶ್ಪಾಂಡೆ ಅವರ 'ಅಮರ ಮಧುರ ಪ್ರೇಮ' ನಾಟಕ ಅನಿವಾಸಿ ಕನ್ನಡಿಗರಿಗೆ ಮತ್ತೊಂದು ಲೋಕಕ್ಕೆ ಎಳೆದೊಯದಿತ್ತು.

ತಾರಾಲೋಕದ ಪ್ರಣಯರಾಜ ಶ್ರೀನಾಥ್, ರಮೇಶ್ ಅರವಿಂದ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ರಕ್ಷಿತ್ ಶೆಟ್ಟಿ, ವಿನಯ್ ರಾಜಕುಮಾರ್ ಅವರೊಂದಿಗೆ ಡಾ. ಸುಚೇತನ್ ಹಾಗೂ ಅವರ ತಂಡ ನಡೆಸಿ ಕೊಟ್ಟ ಮನರಂಜನೆಯ ಕಾರ್ಯಕ್ರಮ ದಿನದ ಮುಖ್ಯಾಂಶವಾಗಿತ್ತು.

ಹಲವಾರು ಸ್ಪರ್ಧೆಗಳು ಸಮಾವೇಶದ ಮೂಲಕ ನಡೆದಿತ್ತು. ನಾವಿಕ ಕೋಗಿಲೆ, ಸಿಹಿ ಕಹಿ ಚಂದ್ರು ನಡೆಸಿಕೊಟ್ಟ ನಾವಿಕ Chef, ಸಾಹಿತ್ಯ ಕ್ವಿಜ್, ಕನ್ನಡ ಬರವಣಿಗೆ ಸ್ಪರ್ಧೆ, ಮಕ್ಕಳಿಗಾಗಿ ಕನ್ನಡದ ಭಾಷಣ, ಹಾಡು ಸ್ಪರ್ಧೆಗಳು ನಡೆಯಿತು.

ಇನ್ನು 2500ಕ್ಕೂ ಹೆಚ್ಚು ಕನ್ನಡಿಗರನ್ನು ಒಂದು ಕಡೆ ಸೇರಿಸಿ ಸಮಾವೇಶ ಯಶಸ್ಸುಗೊಳಿಸುವುದರಲ್ಲಿ ಹಲವಾರು ಕೈಗಳು ಕೆಲಸಮಾಡಿವೆ. ಸ್ವಯಂ ಸೇವಕರ ನಿಸ್ವಾರ್ಥ ಸೇವೆ ಎಲ್ಲಾ ಕೆಲಸಗಳನ್ನು ಸುಗಮಗೊಳಿಸಿತ್ತು. ನಾವಿಕ ಸಂಚಾಲಕರಾದ ಹರ್ಷಿತ್ ಗೌಡ, ನಾವಿಕ ಅಧ್ಯಕ್ಷ ಶಿವಕುಮಾರ್, ಸಂಸ್ಥೆಯ ಸ್ಥಾಪಕರಾದ ಡಾ. ಕೇಶವ ಬಾಬು, ಸುರೇಶ್ ರಾಮಚಂದ್ರ, ವಲ್ಲೀಶ ಶಾಸ್ತ್ರಿ ಮತ್ತಿತರ ಪ್ರಮುಖರು ಹಾಗೂ ದಾನಿಗಳು ಸಹಕಾರದೊಂದಿಗೆ ಮೂರು ದಿನಗಳ ಸಮಾವೇಶ ಯಶಸ್ವಿಯಾಗಿ ನೆರವೇರಿದೆ.
(ವರದಿ: ವಲ್ಲಿಶ ಶಾಸ್ತ್ರಿ)