Pravasi Prapancha: ಕನ್ನಡ ಮಾಧ್ಯಮ ಲೋಕದಲ್ಲೇ ಮೊದಲ ಪ್ರಯತ್ನ; ʻಪ್ರವಾಸಿ ಪ್ರಪಂಚʼ ಲೋಕಾರ್ಪಣೆ
ಪ್ರವಾಸಿ ಪ್ರಪಂಚ ವಾರಕ್ಕೊಮ್ಮೆ ಪ್ರತಿ ಶನಿವಾರ ಪ್ರಕಟವಾಗಲಿದೆ. ಬ್ರಾಡ್ ಶೀಟ್ ಆಕಾರದಲ್ಲಿ ಕನಿಷ್ಠ 16 ಪುಟಗಳೊಂದಿಗೆ ಮುದ್ರಣ ಆವೃತ್ತಿ ಬರಲಿದ್ದು, ರಾಜ್ಯ-ದೇಶ-ವಿದೇಶಗಳ ಪ್ರವಾಸಿ ತಾಣಗಳ ಸೊಗಸಾದ ಸಚಿತ್ರ ಪರಿಚಯ, ಅಲ್ಲಿಗೆ ತಲುಪುವ ಬಗೆ, ಪ್ರವಾಸಿಗರ ಅನುಭವ, ಕಡಿಮೆ ಬಜೆಟ್ನ ಟೂರ್ ಪ್ಲಾನಿಂಗ್, ಉತ್ತಮ ವಸತಿ ವ್ಯವಸ್ಥೆ ಇತ್ಯಾದಿಗಳನ್ನೆಲ್ಲ ಒಳಗೊಳ್ಳಲಿದೆ.



ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಎಫ್ ಕೆ ಕೆ ಸಿ ಐ ಸಭಾಂಗಣ ಕೇಪೇಗೌಡ ರಸ್ತೆ ಬೆಂಗಳೂರು ಇಲ್ಲಿ ಆಯೋಜಿಸಲಾಗಿದ್ದ ಪ್ರವಾಸ ಪ್ರವಾಸೋದ್ಯಮ ಮತ್ತು ಅತಿಥಿ ಕ್ಷೇತ್ರಕ್ಕೆ ಮೀಸಲಾದ ಕನ್ನಡದ ಪ್ರಪ್ರಥಮ ಏಕೈಕ ವಿನೂತನ ಪತ್ರಿಕೆಯ ವತಿಯಿಂದ ಪ್ರವಾಸಿ ಪ್ರಪಂಚ ವನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನಾ ದೇಶಗಳ ಪ್ರವಾಸ ಮಾಡುವ ಮೂಲಕ ಸಹಿಷ್ಣುತೆ ಮತ್ತು ಮನುಷ್ಯ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ವಿಶ್ವವಾಣಿ ಮಾಧ್ಯಮ ಸಂಸ್ಥೆ FKCCI ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಪ್ರವಾಸಿ ಪ್ರಪಂಚ" ವಾರ ಪತ್ರಿಕೆಯನ್ನು ಜನಾರ್ಪಣೆಗೊಳಿಸಿ ಮಾತನಾಡಿದರು. ವಿಶ್ವೇಶ್ವರ ಭಟ್ ಅವರು ಸಾಹಸ ಪ್ರವೃತ್ತಿ ಉಳ್ಳವರು. ಈ ಪ್ರವೃತ್ತಿ ಇದ್ದರೇನೇ ಸಾಧನೆ ಮಾಡಲು ಸಾಧ್ಯ. ಪ್ರವಾಸಿತಾಣಗಳಿಗೆ ಹೋಗುವುದು ಎಂದರೆ ಆ ಭಾಗದ ಪರಿಸರ, ಜನ ಸಂಸ್ಕೃತಿ, ಜೀವನ ವಿಧಾನ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವುದಾಗಿದೆ. ಆ ಮೂಲಕ ಮನುಷ್ಯ ಪ್ರೀತಿಯನ್ನು ಹೆಚ್ಚಿಸಿಕೊಳ್ಳುವುದಾಗಿದೆ, ಪರಸ್ಪರರ ಸಂಸ್ಕೃತಿ ಬಗ್ಗೆ ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವುದಾಗಿದೆ ಎಂದರು.

ವಿಶ್ವೇಶ್ವರ ಭಟ್ಟರು ವಿಶ್ವ ಪರ್ಯಟಣೆ ಮೂಲಕ ತಮ್ಮ ಬದುಕನ್ನು ಸಾರ್ಥಕ ಮಾಡಿಕೊಂಡಿದ್ದಾರೆ. ವಿಶ್ವೇಶ್ವರ ಭಟ್ ಸಂಪಾದಕತ್ವದ ವಿಶ್ವವಾಣಿಯನ್ನು ನಾನೇ ಲೋಕಾರ್ಪಣೆ ಮಾಡಿದ್ದೆ. ಈಗ ಪ್ರವಾಸಿ ಪ್ರಪಂಚವನ್ನೂ ನಾನೇ ಲೋಕಾರ್ಪಣೆಗೊಳಿಸಿದ್ದೇನೆ. ನಾನು ವಿಶ್ವವಾಣಿಯನ್ನೂ ತಪ್ಪದೆ ನೋಡಿದ್ದೇನೆ ಎಂದರು. ವಿಶ್ವೇಶ್ವರ ಭಟ್ಟರು 97 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರು ಹಲವು ಪತ್ರಿಕೆಗಳನ್ನೂ ಬೆಳೆಸಿದ್ದಾರೆ. ನಿಮ್ಮ ಪ್ರವಾಸದ ಅನುಭವ ಪ್ರವಾಸಿ ಪ್ರಪಂಚ ಪತ್ರಿಕೆಗೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿಶ್ವವಾಣಿ ವ್ಯವಸ್ಥಾಪಕ ನಾಗಾರ್ಜುನ ಎಂ. ಸ್ವಾಗತಿಸಿದರು. ವಿಶ್ವವಾಣಿ ಸಂಪಾದಕ ನವೀನ್ ಸಾಗರ್ ಧನ್ಯವಾದ ಸಮರ್ಪಿಸಿದರು. ಈಗಾಗಲೇ ಪ್ರವಾಸಿ ಪ್ರಪಂಚದ ಟೈಟಲ್ ಅನ್ನು ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ಮಾಜಿ ಸಚಿವೆ, ಹಿರಿಯ ನಟಿ ಜಯಮಾಲಾ, ನಟ ವಸಿಷ್ಠ ಸಿಂಹ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.

ಪ್ರವಾಸಿ ಪ್ರಪಂಚ ವಾರಕ್ಕೊಮ್ಮೆ ಪ್ರತಿ ಶನಿವಾರ ಪ್ರಕಟವಾಗಲಿದೆ. ಬ್ರಾಡ್ ಶೀಟ್ ಆಕಾರದಲ್ಲಿ ಕನಿಷ್ಠ 16 ಪುಟಗಳೊಂದಿಗೆ ಮುದ್ರಣ ಆವೃತ್ತಿ ಬರಲಿದ್ದು, ರಾಜ್ಯ-ದೇಶ-ವಿದೇಶಗಳ ಪ್ರವಾಸಿ ತಾಣಗಳ ಸೊಗಸಾದ ಸಚಿತ್ರ ಪರಿಚಯ, ಅಲ್ಲಿಗೆ ತಲುಪುವ ಬಗೆ, ಪ್ರವಾಸಿಗರ ಅನುಭವ, ಕಡಿಮೆ ಬಜೆಟ್ನ ಟೂರ್ ಪ್ಲಾನಿಂಗ್, ಉತ್ತಮ ವಸತಿ ವ್ಯವಸ್ಥೆ ಇತ್ಯಾದಿಗಳನ್ನೆಲ್ಲ ಒಳಗೊಳ್ಳಲಿದೆ.