Michael Jackson Death Anniversary: ಸಂಗೀತ ಕ್ಷೇತ್ರದ ಮಾಂತ್ರಿಕ ಪಾಪ್ ದೊರೆ ಮೈಕೆಲ್ ಜಾಕ್ಸನ್ ಬಗ್ಗೆ ನಿಮಗೆಷ್ಟು ಗೊತ್ತು?
ಒಂದು ಕಾಲದಲ್ಲಿ ವಿಶ್ವವೇ ಕುಣಿದು ಕುಪ್ಪಳಿಸುವಂತೆ ಮಾಡಿದ್ದ ಪಾಪ್ ಸಂಗೀತ ಕ್ಷೇತ್ರದ ರಾಜ ಮೈಕೆಲ್ ಜಾಕ್ಸನ್ (Michael Jackson) ಹೃದಯಾಘಾತದಿಂದ ನಿಧನವಾಗಿ ಇಂದಿಗೆ ಹದಿನಾರು ವರ್ಷ. ಆದರೂ ಅವರ ನೆನಪು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಹಚ್ಚಹಸುರಾಗಿದೆ. ಪಾಪ್ ಸಂಗೀತ, ಬ್ರೇಕ್ ಡ್ಯಾನ್ಸ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ ಮೈಕಲ್ ಜ್ಯಾಕ್ಸನ್ ಎಮ್. ಜೆ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ.



ಮೈಕಲ್ ಜಾಕ್ಸನ್ ನಿಧನವಾಗಿ ದಶಕಗಳೇ ಕಳೆದರೂ ಇಂದಿಗೂ ಪ್ರಪಂಚದಾದ್ಯಂತ ಇರುವ ಅವರ ಅಭಿಮಾನಿಗಳು ಶೋಕ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವದ ಶ್ರೇಷ್ಠ ಮನೋರಂಜಕರಲ್ಲಿ ಒಬ್ಬರಾಗಿದ್ದ ಜಾಕ್ಸನ್ 2009ರ ಜೂನ್ 25ರಂದು ತಮ್ಮ ಲಾಸ್ ಏಂಜಲೀಸ್ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೈಕಲ್ ಜಾಕ್ಸನ್ ಸಾವಿಗೂ ಮುನ್ನ ಲಂಡನ್ನಲ್ಲಿ ನಡೆಯಲಿದ್ದ ಸಂಗೀತ ಕಚೇರಿ ಸರಣಿಗೆ ತಯಾರಿ ನಡೆಸುತ್ತಿದ್ದರು. ಆದರೆ ಅವರ ಸಾವಿನ ಕಾರಣದಿಂದ ಕಾರ್ಯಕ್ರಮ ರದ್ದುಗೊಂಡಿತ್ತು. ಅವರ ಸಾವು ಜಾಗತಿಕ ಮನೋರಂಜನಾ ಉದ್ಯಮವನ್ನು ಬಹುದೊಡ್ಡ ಆಘಾತವನ್ನು ಉಂಟು ಮಾಡಿತ್ತು.

ಮೈಕಲ್ ಜಾಕ್ಸನ್ ನಿಧನರಾಗಿ ಹದಿನಾರು ವರ್ಷಗಳ ಅನಂತರವೂ 'ಪಾಪ್ ರಾಜ' ಎಂಬ ಖ್ಯಾತಿ ಅವರದ್ದೇ ಆಗಿದೆ. ವಿಶ್ವಾದ್ಯಂತ ಅವರ ಸುಮಾರು 750 ಮಿಲಿಯನ್ ಆಲ್ಬಮ್ ಮಾರಾಟವಾಗಿದ್ದು ಇದು ಸಂಗೀತ, ನೃತ್ಯ ಮತ್ತು ಪಾಪ್ ಸಂಸ್ಕೃತಿಯ ಮೇಲೆ ಅವರ ಪ್ರಭಾವವನ್ನು ಎತ್ತಿ ತೋರಿಸಿದೆ.

ಮೈಕೆಲ್ ಜಾಕ್ಸನ್ ಸಾವಿಗೆ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯ ಕಾನ್ರಾಡ್ ಮುರ್ರೆ ಕಾರಣ ಎನ್ನಲಾಗುತ್ತದೆ. ಮೈಕಲ್ ಗೆ ನಿದ್ರಿಸಲು ಹೆಚ್ಚಿನ ಪ್ರಮಾಣದಲ್ಲಿ ನಿದ್ದೆ ಔಷಧ ನೀಡಿರುವುದು ಕಾರಣ ಎನ್ನಲಾಗಿದೆ. ಅವರು ಔಷಧ ನೀಡಿದ ಕೆಲವೇ ನಿಮಿಷಗಳ ಅನಂತರ ಮೈಕಲ್ ಉಸಿರು ಚೆಲ್ಲಿದರು. ಕೂಡಲೇ ಅವರಿಗೆ ತುರ್ತು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಅವರ ಸಾವಿನ ಎರಡು ಗಂಟೆಗಳ ಬಳಿಕ ನಿಧನದ ಸುದ್ದಿಯನ್ನು ಘೋಷಿಸಲಾಯಿತು.

ಮೈಕೆಲ್ ಜಾಕ್ಸನ್ ಸಾವಿಗೆ ಕಾರಣರಾದ ಡಾ. ಮುರ್ರೆ ಅವರಿಗೆ 2011ರಲ್ಲಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು. ತಮ್ಮ ವಿಚಾರಣೆಯ ಸಮಯದಲ್ಲಿ ಮೈಕಲ್ ಸಾವಿನ ಕೊನೆಯ ಕ್ಷಣಗಳ ಬಗ್ಗೆ ಡಾ. ಮುರ್ರೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಜಾಕ್ಸನ್ ಸಾಯುವ ಮುನ್ನ 'ಹಾಲು' ಕೇಳಿದ್ದರು. ಇದು ಮತ್ತು ಬರಿಸುವ ಪ್ರೊಪೋಫೋಲ್ ಆಗಿದೆ. ದಯವಿಟ್ಟು ನನಗೆ ಸ್ವಲ್ಪ ಹಾಲು ಕೊಡಿ. ಯಾಕೆಂದರೆ ಅದು ನನಗೆ ನಿಜವಾಗಿಯೂ ನಿದ್ದೆ ಮಾಡಲು ಸಹಾಯ ಮಾಡುತ್ತದೆ ಎಂದು ನನಗೆ ತಿಳಿದಿದೆ. ನನಗೆ ನಿದ್ದೆ ಬರುವಂತೆ ಮಾಡಿ. ನಾನು ಯಾವ ಸಮಯದಲ್ಲಿ ಎದ್ದೇಳುತ್ತೇನೆ ಎಂಬುದು ಮುಖ್ಯವಲ್ಲ ಎಂದು ಮೈಕಲ್ ಹೇಳಿರುವುದಾಗಿ ವೈದ್ಯರು ತಿಳಿಸಿದ್ದರು.

ಮೈಕೆಲ್ ಜಾಕ್ಸನ್ ಅಮೆರಿಕದ ಖ್ಯಾತ ಗಾಯಕಿಯಾಗಿದ್ದ ಎಲ್ವಿಸ್ ಪ್ರಿಸ್ಲೆಯವರ ಪುತ್ರಿ ಲಿಸಾಮೇರಿ ಪ್ರಿಸ್ಲೆ ಅವರನ್ನು ಮದುವೆಯಾಗಿ ಮೂರು ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಬಳಿಕ ಡೆಬ್ಬಿ ರೋವೆ ಎಂಬವರನ್ನು ವಿವಾಹವಾಗಿ ಅವರೊಂದಿಗೂ ಮೂರು ವರ್ಷ ಸಂಸಾರ ನಡೆಸಿದ್ದಾರೆ. ಇವರಿಗೆ ಪ್ರಿನ್ಸ್ ಮತ್ತು ಪ್ಯಾರಿಸ್ ಕ್ಯಾಥರಿನ್ ಎಂಬ ಮಕ್ಕಳಿದ್ದು, ಇವರನ್ನು ರೋವೆ ಅವರು ಜಾಕ್ಸನ್ ಸುಪರ್ದಿಗೆ ಒಪ್ಪಿಸಿದ್ದರು. ಜ್ಯಾಕ್ಸನ್ ಅವರ ತಾಯಿ ಆ ಮಕ್ಕಳ ಜವಾಬ್ದಾರಿ ಹೊತ್ತುಕೊಂಡರು.

150 ವರ್ಷ ಬದುಕಬೇಕೆಂದು ಆಸೆ ಪಟ್ಟು ಅದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದ ಮೈಕೆಲ್ ಜಾಕ್ಸನ್ ಸಾಯುವಾಗ ಅವರ ವಯಸ್ಸು ಕೇವಲ 50. ಅವರ ಕೊನೆಯ ಬಾರಿಗೆ ಕೋಳಿ ಮಾಂಸದೊಂದಿಗೆ ಪಾಲಕ್ ಸಲಾಡ್ ಸೇವಿಸಿದ್ದರು. ಇದು ಅವರ ಸಾವಿಗೆ ಮುನ್ನ ಸಂಜೆ ಸೇವಿಸಿದ ಹಗುರವಾದ, ಆರೋಗ್ಯಕರ ಊಟವಾಗಿತ್ತು.

ಮೈಕೆಲ್ ಜಾಕ್ಸನ್ ಅವರ ಸುಪ್ರಸಿದ್ಧ 10 ಆಲ್ಬಮ್ಗಳಲ್ಲಿ ಥ್ರಿಲ್ಲರ್ ಜಾಗತಿಕವಾಗಿ 70 ಮಿಲಿಯನ್ ಪ್ರತಿ ಮಾರಾಟವಾಗಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಉಳಿದಂತೆ ಬ್ಯಾಡ್, ಆಫ್ ದಿ ವಾಲ್, ಹಿಸ್ಟರಿ, ಇನ್ವಿನ್ಸಿಬಲ್, ಮ್ಯೂಸಿಕ್ ಅಂಡ್ ಮಿ, ಫಾರೆವರ್ ಮೈಕೆಲ್, ಗಾಟ್ ಟು ಬಿ ದೇರ್, ದಿಸ್ ಈಸ್ ಇಟ್ ಸೇರಿವೆ.

ಮೈಕೆಲ್ ಜಾಕ್ಸನ್ ಅವರ ಪ್ರಸಿದ್ಧ 10 ಹಾಡುಗಳಲ್ಲಿ ಥ್ರಿಲ್ಲರ್ ಆಲ್ಬಮ್ ನ ಬಿಲ್ಲಿ ಜೀನ್, ಬೀಟ್ ಇಟ್ ಮೊದಲ ಸ್ಥಾನದಲ್ಲಿದೆ. ಉಳಿದಂತೆ ರಾಕ್ ವಿತ್ ಯು, 1988ರಲ್ಲಿ ಗ್ರ್ಯಾಮಿ ಪ್ರಶಸ್ತಿ ತಂದುಕೊಟ್ಟ ಬ್ಯಾಡ್ ಆಲ್ಬಮ್ ನ ದಿ ವೇ ಯು ಮೇಕ್ ಮಿ ಫೀಲ್, ಅವರ ಸಾವಿನ ಬಳಿಕ ಯುಕೆಯಲ್ಲಿ ಹೆಚ್ಚು ಬೇಡಿಕೆ ಪಡೆದ ಹಾಡು ಮ್ಯಾನ್ ಇನ್ ದಿ ಮಿರರ್, ಬ್ಲಾಕ್ ಆರ್ ವೈಟ್, 1985 ರಲ್ಲಿ ಬರೆದಿರುವ ಸ್ಮೂತ್ ಕ್ರಿಮಿನಲ್, ನಟ ಕ್ರಿಸ್ ಟಕರ್ ಮತ್ತು ಹಾಲಿವುಡ್ ಐಕಾನ್ ಮರ್ಲಾನ್ ಬ್ರಾಂಡೊ ಅವರೊಂದಿಗೆ ನಟಿಸಿರುವ ಯು ರಾಕ್ ಮೈ ವರ್ಲ್ಡ್, ಸಾಯುವ ಹಿಂದಿನ ದಿನ ಅಭ್ಯಾಸ ಮಾಡಿದ್ದ ಅರ್ಥ್ ಸಾಂಗ್, ಬ್ಯಾಡ್ ಪ್ರಮುಖವಾಗಿದೆ.